ಯು ಮಿ ಔರ್ ಹಮ್

ಯು ಮಿ ಔರ್ ಹಮ್

ಮನೆ ಬಳಿ ಕುಳಿತಿದ್ದ ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಬೆಳಗ್ಗೆ ನಾಪತ್ತೆಯಾಗಿದ್ದಾರೆ. ಸುಮಾರು ೮೫ ವರ್ಷದ ವೃದ್ಧರ ಫೋಟೋದೊಂದಿಗೆ ಪೇಪರ್‌ನಲ್ಲಿ ಬಂದ ವರದಿಯನ್ನು ಓದಿದೆ. ಒಳ ಮನಸ್ಸು ಹೇಳಿತು- ಸೊಸೆ ಕಾಟ ತಪ್ಪಿಸಲು ಮನೆ ಬಿಟ್ಟು ಹೋಗಿರಬೇಕು. ಪಾಪ...

ಮುಂದಿನ ಪುಟದಲ್ಲಿ ಮತ್ತೊಂದು ಸುದ್ದಿ- ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ೭೦ ವಯಸ್ಸಿನ ವೃದ್ಧೆಯೊಬ್ಬರು ನಾಪತ್ತೆಯಾಗಿದ್ದಾರೆ. (ವೃದ್ಧೆ ಕಾಟ ತಪ್ಪಲು, ರೈಲು ಹತ್ತಿಸಿ ಮನೆಯವರು ಹಿಂದೆ ಬಂದಿರಬಹುದು -ಈಗಿನ ನಮ್ಮ ಯೋಚನೆ/ ತೀರ್ಮಾನಗಳೇ ಈ ತರಹ ಇರುತ್ತದೆ.)

ವರದಿಯ ಕೊನೆಯಲ್ಲಿ ಇವರು ಮರೆವು ಕಾಯಿಲೆಯಿಂದ ಬಳಲುತ್ತಿದ್ದರು ಎಂದಿತ್ತು.

೨ ವಾರ ಮೊದಲು ‘U me aur hum’ ಸಿನೆಮಾ ನೋಡಿದ್ದೆ. ಇದರಲ್ಲಿ ಕಾಜೋಲ್ ಮರೆವು ರೋಗದಿಂದ ಬಳಲುತ್ತಿದ್ದಳು. ಹೆಚ್ಚಿನ ಸಮಯ perfect ಇರುತ್ತಿದ್ದಳು. ಒಮ್ಮೆಲೆ ಎಲ್ಲಾ ಮರೆತು ಏನೂ ಅಂದರೆ ಏನೂ ಗೊತ್ತಿಲ್ಲದೇ ರಸ್ತೆ ಮಧ್ಯ ನಿಲ್ಲುತ್ತಿದ್ದಳು. ತನಗೆ ಎಲ್ಲಿ ಹೋಗಬೇಕು, ಎಲ್ಲಿಂದ ಬಂದೆ ಗೊತ್ತೇ ಇಲ್ಲ!
ತನ್ನ ಗಂಡ ಎದುರಿಗೆ ಬಂದರೂ ಅಪರಿಚಿತಳಂತೇ ಇರುತ್ತಿದ್ದಳು.

ಮಗುವನ್ನು ನೀರಿನ ತೊಟ್ಟಿಯಲ್ಲಿ ಸ್ನಾನಕ್ಕೆ ಕುಳ್ಳಿರಿಸಿ, ನೀರು ಬಿಡುವವರೆಗೆ ಸರಿ ಇದ್ದವಳು ನಂತರ ಏನೂ ಗೊತ್ತಿಲ್ಲದವಳಂತೆ ನಿಂತೇ ಇರುವಳು. ಅಬ್ಬಾ..

ಸಿನಿಮಾದಲ್ಲಿ ಆದ್ದರಿಂದ ಆಯ್ತು. ಹೀರೋ ರಕ್ಷಣೆಗೆ ಬಂದ.
ಕತೆ ಸುಖಾಂತ್ಯವಾಯಿತು.

ಇದೇ ‘ಅಲ್ಜೀಮರ್ಸ್ ಕಾಯಿಲೆ’-Alzheimer’s disease.

ಅಜಯ್ ದೇವಗನ್ ತನ್ನ ನಿರ್ಮಾಣದ ಸಿನಿಮಾಕ್ಕೆ ಈ ಕತೆ ಆಯ್ಕೆ ಮಾಡಿಕೊಂಡುದ್ದಕ್ಕೆ ಮೆಚ್ಚಬೇಕು.
ಬ್ಲಾಕ್, ತಾರೆ ಜಮೀನ್ ಪರ್, ಯು ಮಿ ಔರ್ ಹಮ್, ಸಿನಿಮಾಗಳು- ಒಂದೊಂದು ಕಾಯಿಲೆ ಬಗ್ಗೆ,- ಕಾಯಿಲೆಯಿಂದ ಬಳಲುವವರಿಗೆ ಅವರ ಮನೆಯವರು/ಸಮಾಜ ಯಾವ ರೀತಿ ಸಹಾಯ ಮಾಡಬೇಕು ಎಂಬ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಹೇಳಿದೆ.

ಈ ಅಲ್ಜೀಮರ್ಸ್ ಕಾಯಿಲೆ ಜಗತ್ತಿನಾದ್ಯಂತ ಅಂದಾಜು ೨೪ ಮಿಲಿಯದಷ್ಟು ಜನರನ್ನು ಬಾಧಿಸಿದೆ. ಸದ್ಯಕ್ಕೆ ಇದಕ್ಕೆ ಸರಿಯಾದ ಔಷಧಿಯೇ ಇಲ್ಲವಂತೆ.
ಹೆಚ್ಚಾಗಿ ಇದು ೬೫ ವರ್ಷ ಮೇಲ್ಪಟ್ಟವರಿಗೆ ಬಾಧಿಸುವುದು.
ಜಗತ್ತನ್ನೇ ತನ್ನ ಮುಷ್ಠಿಯಲ್ಲಿಟ್ಟ ಅಮೆರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್‌ನ್ನೇಬಳಲಿಸಿದ ವ್ಯಾಧಿಯಿದು.

ಬ್ಲಾಗ್‌ನ ಮೊದಲಲ್ಲಿ ವೃದ್ಧರ ಮನೆಯವರ ಬಗ್ಗೆ ಕೆಟ್ಟದ್ದಾಗಿ ಯೋಚಿಸಿದಕ್ಕೆ ಕ್ಷಮೆ ಇರಲಿ. ಅವರ ಮರೆವಿನ ಕಾಯಿಲೆ ಬೇಗನೆ ಗುಣವಾಗಲಿ.

-ಗಣೇಶ.

Rating
No votes yet

Comments