"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩)

"ಯೋಗ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೬ (೩)

ಈ ಸರಣಿಯ ಹಿಂದಿನ ಲೇಖನ ಭಾಗ -  ೬ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%AF%E0%B3%8B%E0%B2%97-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AC-%E0%B3%A8/17/04/2012/36420
============================================================================================
ಅನುಸರಿಸಬಹುದಾದ ಕೆಲವು ಸೂಚನೆಗಳು

    ಪತಂಜಲಿಯು ಯೋಗಾಸಕ್ತರಿಗೆ ಹಲವಾರು ಸಲಹೆ ಸೂಚನೆಗಳನ್ನು ಕೊಡುತ್ತಾನೆ; ಇದರಿಂದ ಯೋಗ ಮಾರ್ಗದಲ್ಲಿರುವ ಅಂತರಾಯಗಳನ್ನು ಹೋಗಲಾಡಿಸಿಕೊಂಡು ಹೆಚ್ಚಿನ ಏಕಾಗ್ರತೆಯನ್ನು ಗಳಿಸಿಕೊಂಡು ಅಂತಿಮವಾಗಿ ಸಮಾಧಿ ಅಥವಾ ತನ್ನ/ಆತ್ಮದ ಕುರಿತಾದ ಅಸಾಮಾನ್ಯ ಅನುಭವಡೆಗೆ ಸಾಗಬಹುದು. ಇವುಗಳಲ್ಲಿ ವೈರಾಗ್ಯ ಮತ್ತು ಅಭ್ಯಾಸಗಳು ಮೊದಲು ಬರುತ್ತವೆ. ಮೊದಲನೆಯದಾದ ವೈರಾಗ್ಯವು ಪ್ರಾಪಂಚಿಕತೆಯನ್ನು ತೊರೆಯುವುದು ಅಥವಾ ವಿಷಯ ವಸ್ತುಗಳ ಕಡೆಗೆ ಅನಾಸಕ್ತಿಯನ್ನು ಬೆಳೆಸಿಕೊಳ್ಳುವುದರೆಡೆಗೆ ಮನಸ್ಸನ್ನು ಕೊಂಡೊಯ್ದರೆ; ಅಭ್ಯಾಸ (ನಿರಂತರ ಪ್ರಯತ್ನ)ವು ದೇವರೆಡೆಗೆ ಅಥವಾ ಆತ್ಮನನ್ನು ತಿಳಿಯುವುದರೆಡೆಗೆ ಕೊಂಡೊಯ್ಯುತ್ತದೆ.  

    ಬೇರೆ ಕೆಲವು ಸೂಚನೆಗಳೆಂದರೆ: ಯಾರು ಸಂತೋಷದಿಂದ ಇರುತ್ತಾರೋ ಅವರ ಬಗ್ಗೆ ಮತ್ಸರ ತಳೆಯದೆ ಅವರೊಡನೆ ಸ್ನೇಹಭಾವ(ಮೈತ್ರಿ) ಇಟ್ಟುಕೊಳ್ಳುವುದು; ಕಷ್ಟಕಾರ್ಪಣ್ಯದಿಂದ ಬಳಲುವವರನ್ನು ಅನುಕಂಪದಿಂದ(ಕರುಣೆಯಿಂದ) ಕಾಣುವುದು; ಕ್ರಮಬದ್ಧ ಉಸಿರಾಟದಿಂದ ಪ್ರಾಣಶಕ್ತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು; ತನ್ನ ಹೃದಯ ಮಧ್ಯದಲ್ಲಿರುವ ಬೆಳಕಿನ ಮೇಲೆ ಧ್ಯಾನಿಸುವುದು; ಮಹಾತ್ಮರ ಮನಸ್ಸಿನ ಬಗೆಗೆ ಚಿಂತನೆ ಮಾಡುವುದು; ಉಚ್ಛಸ್ಥಿತಿಗೆ ಕೊಂಡೊಯ್ದ ಕನಸುಗಳೇನಾದರೂ ಬಿದ್ದಿದ್ದರೆ ಅವುಗಳನ್ನು ಮೇಲಿಂದ ಮೇಲೆ ಜ್ಞಾಪಿಸಿಕೊಳ್ಳುವುದು; ದೇವ-ದೇವತೆಗಳ ರೂಪಗಳ ಬಗ್ಗೆ ಅಥವಾ ಚಂದ್ರನಂತಹ ಗ್ರಹಗಳ ಬಗ್ಗೆ ಅಥವಾ ತನ್ನ ದೇಹದಲ್ಲಿರುವ ಮನೋಬಿಂದುಗಳ ಬಗ್ಗೆ ಎಡಬಿಡದೆ ಮನನ ಮಾಡುವುದು.

    ಮೇಲೆ ತಿಳಿಸಿದ ಎಲ್ಲಾ ವಿಧಾನಗಳು ಆಧ್ಯಾತ್ಮ ಪಿಪಾಸುಗಳಿಗೆ ಮನಃಶಾಂತಿಯನ್ನುಂಟು ಮಾಡುವುದಲ್ಲದೆ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಹಾಯಕವಾಗುತ್ತವೆ.

ಅಷ್ಟಾಂಗ ಅಥವಾ ಎಂಟು ಸೋಪಾನಗಳು

    ಪುರುಷ ಅಥವಾ ಜೀವಾತ್ಮನು(ಪ್ರತ್ಯೇಕ ಆತ್ಮನು) ಪ್ರಕೃತಿಯ ಉತ್ಪನ್ನವಾದ "ಮನೋದೈಹಿಕ ಸಂಕೀರ್ಣ"(ಮನಸ್ಸಿನಿಂದ ಕೂಡಿದ ದೇಹ)ದ ಜೊತೆಗೆ ಹೊಂದಿದ ಅತಿಯಾದ ಮಮತೆಯಿಂದಾಗಿ ಭಂದನಕ್ಕೊಳಗಾಗಿದ್ದಾನೆ. ಯೋಗದ ಗುರಿಯು ವಿಯೋಗ ಅಂದರೆ ಪ್ರಕೃತಿಯ ಪಾಶದಿಂದ ಪುರುಷನನ್ನು ಬಿಡುಗಡೆಗೊಳಿಸುದೇ ಆಗಿದೆ. ಈ ಮುಕ್ತಿಯು ವಿವೇಕಖ್ಯಾತಿಯಿಂದ ಬರುತ್ತದೆ. (ವಿವೇಕ=ಯುಕಾಯುಕ್ತ ವಿವೇಚನೆ ಮತ್ತು ಖ್ಯಾತಿ=ಜ್ಞಾನ).

    ಯೋಗಸೂತ್ರಗಳು ಹಂತ ಹಂತವಾಗಿ ಎಂಟು ಹೆಜ್ಜೆಗಳುಳ್ಳ ಶಿಕ್ಷಣ ಕ್ರಮವನ್ನು ಸೂಚಿಸುತ್ತದೆ. ಅವುಗಳೆಂದರೆ: ಯಮ (ನಿಗ್ರಹ), ನಿಯಮ (ಕಟ್ಟಳೆ), ಆಸನ (ಭಂಗಿ), ಪ್ರಾಣಾಯಾಮ (ಪ್ರಾಣಶಕ್ತಿಗಳ ನಿಯಂತ್ರಣ), ಪ್ರತ್ಯಾಹಾರ(ಹಿಂತೆಗೆದುಕೊಳ್ಳುವ ಪ್ರಕ್ರಿಯೆ), ಧಾರಣ(ಒಟ್ಟುಗೂಡಿಸುವಿಕೆ ಅಥವಾ ಕೇಂದ್ರೀಕರಿಸುವಿಕೆ), ಧ್ಯಾನ (ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ), ಮತ್ತು ಸಮಾಧಿ (ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ). ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ ಐದು ನಿಯಮಗಳನ್ನು 'ಬಹಿರಂಗ' (ಬಾಹ್ಯ) ಮತ್ತು ಕಡೆಯ ಮೂರನ್ನು 'ಅಂತರಂಗ' (ಒಳಗಿನ) ಸಾಧನೆಗಳೆನ್ನುತ್ತಾರೆ.

    ಅಹಿಂಸಾ (ನೋವುಂಟು ಮಾಡದೇ ಇರುವುದು), ಸತ್ಯ (ನಿಜವನ್ನು ನುಡಿಯುವುದು), ಅಸ್ತೇಯ (ಕಳ್ಳತನ ಮಾಡದೇ ಇರುವುದು), ಬ್ರಹ್ಮಚರ್ಯ(ಇಂದ್ರಿಯ ನಿಗ್ರಹ) ಮತ್ತು ಅಪರಿಗ್ರಹ (ದಾನವನ್ನು ಸ್ವೀಕರಿಸದೇ ಇರುವುದು) ಇವುಗಳು ಮೊದಲನೆಯ ಹಂತವಾದ ಯಮದ ನಿಯಮಾವಳಿಗಳು.

    ಎರಡನೇ ಹಂತವಾದ ನಿಯಮದಲ್ಲಿ ಶೌಚ(ಪರಿಶುದ್ಧತೆ), ಸಂತೋಷ(ತೃಪ್ತಿ), ತಪಸ್ಸು(ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು), ಸ್ವಾಧ್ಯಾಯ(ವೇದ ಶಾಸ್ತ್ರಗಳ ಪಾರಾಯಣ ಮತ್ತು ಓಂ ಮುಂತಾದ ಮಂತ್ರಗಳ ಪುನರುಚ್ಛಾರಣೆ ಮಾಡುವುದು), ಮತ್ತು ಈಶ್ವರಪ್ರಣಿಧಾನ(ದೇವರ ಮೇಲೆ ಭಕ್ತಿಯನ್ನಿರಿಸುವುದು).

    ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ ಎರಡನೆಯದಾದ ಸಂತೋಷವು ವೈಯ್ಯಕ್ತಿಕ ಪರಿಶುದ್ಧತೆಯನ್ನು ಉಂಟು ಮಾಡುತ್ತವೆ. ಇತರ ಮೂರು ನಿಯಮಗಳಾದ ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳನ್ನು ಒಟ್ಟುಗೂಡಿಸಿ, ಪತಂಜಲಿಯು ಅವುಗಳನ್ನು 'ಕ್ರಿಯಾಯೋಗ'ವೆಂದು ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.

    'ಆಸನ'ವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. 'ಪ್ರಾಣಾಯಾಮ'ವೆಂದರೆ ಕ್ರಮಬದ್ಧ ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಗ್ರಹಣೇಂದ್ರಿಯಗಳನ್ನು ಅಥವಾ ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ ಏಕೀಕರಣಗೊಳ್ಳುತ್ತವೆ; ಇದನ್ನೇ 'ಪ್ರತ್ಯಾಹಾರ'ವೆಂದು ಕರೆಯುತ್ತಾರೆ.

    ಮುಂದಿನ ಮೂರು ಹಂತಗಳಾದ 'ಧಾರಣ', 'ಧ್ಯಾನ' ಮತ್ತು 'ಸಮಾಧಿ'ಗಳು ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ. ಯಾವಾಗ ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರುವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು 'ಈಶ್ವರಪ್ರಣಿಧಾನ' ಅಥವಾ 'ಭಗವದ್ಭಕ್ತಿ'ಯಿಂದಲೂ ಲಭ್ಯವಾಗುತ್ತದೆ.

    ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ ಪತಂಜಲಿಯು ಅದನ್ನು 'ಸಂಯಮ'ವೆಂಬ ಶಬ್ದದಿಂದ ಕರೆದಿದ್ದಾನೆ. ಮತ್ತು ಈ ಸಂಯಮವು ಯಾವಗಲೂ ಒಂದೇ ಒಂದು ವಸ್ತುವಿನ ಮೇಲಿರಬೇಕು.

ಯೋಗಸಿದ್ಧಿಗಳು

    ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು  ಸತ್ಯಾನ್ವೇಷಕರ ಮನದಲ್ಲಿ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಉದಾಹರಣೆಗೆ ಯಾವ ಮನುಷ್ಯನು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾಗಿಸಿಕೊಂಡಿರುತ್ತಾನೋ ಅವನ ಬಳಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಯಾವ ವ್ಯಕ್ತಿಯಲ್ಲಿ ಸತ್ಯವು ಬೇರೂರಿರುತ್ತದೆಯೋ ಆ ವ್ಯಕಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).

    'ಸಂಯಮ'ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ್(ನೀರು) ಇವುಗಳ ಮೇಲಿನ 'ಸಂಯಮ'ದಿಂದ ಯೋಗಿಯು ಅಷ್ಟಸಿದ್ಧಿ ಅಥವಾ ಎಂಟು ವಿಧವಾದ ಶಕ್ತಿಯನ್ನು ಪಡೆಯುತ್ತಾನೆ; 'ಅಣಿಮಾ'(ಅಣುವಿನಷ್ಟು ಚಿಕ್ಕದಾಗುವಿಕೆ), 'ಮಹಿಮಾ'(ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಬೆಳೆಯುವುದು) ಮೊದಲಾದವು (ಯೋಗಸೂತ್ರ ೩.೪೪,೪೫). ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ(ಕಲ್ಪನೆಗೆ ಸಿಗದಂತಹ) ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು, ಹೀಗೆ ಮೊದಲಾದವು.

    ಆದರೆ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವನ್ನು ವಿವರಿಸಿದರೂ (ವಿಜ್ಞಾನದ ಭಾಗವಾಗಿರುವುದರಿಂದ ಅವುಗಳನ್ನು ವಿವರಿಸಿದ್ದಾನೆ); ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಏಕೆಂದರೆ ಇವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ 'ಕೈವಲ್ಯ' ಅಥವಾ 'ಮುಕ್ತಿ'ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ 'ಕೈವಲ್ಯ' ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ 'ಪ್ರಾರಬ್ಧ ಕರ್ಮ'(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು  ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.

ಸಮಾರೋಪ

    ಯೋಗದರ್ಶನವು ಕೇವಲ ಪ್ರಾಚೀನವಾದ ಪದ್ಧತಿ ಮಾತ್ರವಾಗಿರದೆ ಅನುಷ್ಠಾನಯೋಗ್ಯವೂ ಆಗಿದೆ. ವೇದಾಂತ ದರ್ಶನಗಳೂ ಕೂಡ ಅದರ ಸಾಧನಾ ಭಾಗಗಳನ್ನು ಒಪ್ಪಿಕೊಳ್ಳುತ್ತವೆ. ಆಧುನಿಕ ಮನಃಶಾಸ್ತ್ರಜ್ಞರು ಕೂಡ ಮನಸ್ಸಿನ ಸ್ವಾಸ್ಥ್ಯವನ್ನು ಮತ್ತೆ ಪಡೆಯುವಲ್ಲಿ ಮತ್ತು ಅದನ್ನು ಕಾಪಾಡಿಕೊಳ್ಳುವಲ್ಲಿ ಇದರ ಉಪಯುಕ್ತತೆಯ ಬಗ್ಗೆ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಯೋಗದ ವಿಧಾನ ಮತ್ತು ಕೌಶಲಗಳು ಪ್ರಪಂಚದಾದ್ಯಂತ ಇಂದು ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿವೆ. ಮೊದಲೆರಡು ನಿಯಮಾವಳಿಗಳಾದ ಯಮ ಮತ್ತು ನಿಯಮಗಳು ವ್ಯಕ್ತಿಗೆ ಒಳಿತುಂಟು ಮಾಡುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಾಯಕವೆನಿಸುತ್ತವೆ. ವಿವಿಧ ಆಸನಗಳು ಅಥವಾ ಚೆನ್ನಾಗಿ ಪ್ರಚಲಿತವಿರುವ ಯೋಗಾಸನಗಳು ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಮರಳಿ ಪಡೆಯಲು ಪೂರಕವಾಗಿವೆ. ಆದ್ದರಿಂದ ಯೋಗ ಪದ್ಧತಿಯು ನಿಧಾನವಾಗಿ ಸಾರ್ವಜನಿಕ ಮನ್ನಣೆಯನ್ನು ಗಳಿಸಿಕೊಳ್ಳುತ್ತಿದೆ.

============================================================================
      ಇದು ಸ್ವಾಮಿ ಹರ್ಷಾನಂದ ವಿರಚಿತ The six systems of Hindu Philosophy ಯಲ್ಲಿಯ Yoga Darshanaನದ ೫೩ ರಿಂದ ೫೮ನೆಯ ಪುಟದ ಅನುವಾದದ ಭಾಗ.


     ಈ ಸರಣಿಯ ಮುಂದಿನ ಲೇಖನ "ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ  ಭಾಗ - ೭ (೧)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿ:

http://sampada.net/blog/%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AD-%E0%B3%A7/24/04/2012/36497
===================================================================================

  ಚಿತ್ರಕೃಪೆ: ಗೂಗಲ್

http://t0.gstatic.com/images?q=tbn:ANd9GcRuvwdnmV_FDADa5qBrhPhZ0Yg3RxOkNIbRZ_MoDMxsHYjtbw3zsw
 

Rating
No votes yet

Comments