ರಜನಿಕಾಂತ್‌

ರಜನಿಕಾಂತ್‌

ಕುಚೇಲನ್ .

ಇತ್ತೀಚಿಗೆ ಬಿಡುಗಡೆಯಾದ ತಮಿಳು ಸೂಪರ್ ಸ್ಟಾರ್‍ ರಜನಿಕಾಂತ್ ಅವರ ಮಹತ್ವಾಕಾಂಕ್ಷೆಯ ಚಲನಚಿತ್ರ. ವಿಶ್ವಾದ್ಯಂತ ಏಕಕಾಲದಲ್ಲಿ ಸುಮಾರು ೫೦೦ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಯಿತು. ಕರ್ನಾಟಕದಲ್ಲಿ ಕುಚೇಲನ್ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕ್ಷಮೆ ಯಾಚಿಸಿದ್ದರಿಂದ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಟ್ಟರು. ತೆಲುಗು ಭಾಷೆಯಲ್ಲೂ ಚಿತ್ರ ಡಬ್‌ ಆಗಿ ತೆರೆ ಕಂಡಿತು.

ಚಿತ್ರದಲ್ಲಿ ಸೂಪರ್ ಸ್ಟಾರ್‍ಗಿರುವಷ್ಟು ಜನಪ್ರಿಯತೆ. ತಮ್ಮ ನೆಚ್ಚಿನ ನಟನನ್ನು ಹತ್ತಿರದಿಂದ ಕಾಣಲು ಪರಿತಪಿಸುವ ಅಭಿಮಾನಿಗಳು. ಕೆಲವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಮತ್ತೆ ಕೆಲವರು ವಾಮಮಾರ್ಗದ ಮೂಲಕ ಸೂಪರ್ ಸ್ಟಾರ್ ನನ್ನು ಕಂಡು ಅವರೊಂದಿಗೆ ಫೋಟೋ ತೆಗೆಸಿಕೊಂಡು ಬೇರೆಯವರನ್ನು ತಬ್ಬಿಬ್ಬುಗೊಳಿಸುತ್ತಾರೆ. ಆದರೆ, ಸೂಪರ್ ಸ್ಟಾರ್ ಬಾಲ್ಯದ ಸ್ನೇಹಿತ ಬಾಲಕೃಷ್ಣ ತನ್ನ ಗೆಳೆಯನನ್ನು ಕಾಣಲು ಪ್ರಾಮಾಣಿಕ ಪ್ರಯತ್ನ ಮಾಡಿದರೂ ಹರಸಾಹಸಪಡಬೇಕಾಗುತ್ತದೆ. ಇದು ಕೇವಲ ಚಿತ್ರದಲ್ಲಿ ಬರುವ ಕಥೆ ಮಾತ್ರವಲ್ಲ. ತಮಿಳುನಾಡಿನಲ್ಲಿ ರಜನಿಕಾಂತ್ ಗಿರುವ ಪ್ರತಿಷ್ಠೆ. ಜನಪ್ರಿಯತೆಯನ್ನು ಬಿಂಬಿಸುತ್ತದೆ. ರಜನಿ ನಿಜ ಜೀವನದ ಕಥೆಯನ್ನಾಧರಿಸಿ ತೆಗೆದ ಚಿತ್ರವಾಗಿದೆ.

ಆದರೆ, ನಾನು ರಜನಿಕಾಂತ್ ಅವರ ಬಗ್ಗೆ ಅಂದುಕೊಂಡಿದ್ದೇ ಬೇರೆ. ೨೦೦೨ ಸೆಪ್ಟೆಂಬರ್‍ ತಿಂಗಳಿನಲ್ಲಿ ನಾನು ನನ್ನ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕಾಗಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸೇರ್ಪಡೆಯಾದೆ. ಆದರೆ, ಚೆನ್ನೈ ಮಹಾನಗರಿಯಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕಿಂತ ವಾಸಿಸುವುದೇ ದುಬಾರಿ. ವಿದ್ಯಾರ್ಥಿಗಳಿಗೆ ಓದಲು ಅನುಕೂಲವಿರುವಂತ ರೂಮ್ ಮನೆಗಳ ವಿಷಯ ದೂರದ ಮಾತು. ಮಾತೆತ್ತಿದರೆ ಸಂಧ್ಯಾ ಮ್ಯಾನ್ಷನ್, ರಾಯಲ್ ಮ್ಯಾನ್ಷನ್, ಸಂಗೀತ ಲಾಡ್ಜ್ ನದ್ದೇ ಸುದ್ದಿ.

ಪಂಚತಾರಾ ಶ್ರೇಣಿ ಹೊಂದಿರುವ ಮದರಾಸು ವಿಶ್ವವಿದ್ಯಾಲಯದ ಇಡೀ ಚೇಪಕ್, ಮರೀನಾ ಕ್ಯಾಂಪಸ್‌ ಗಿರುವುದು ಕೇವಲ ಎರಡೇ ಹಾಸ್ಟೆಲ್. ಅದರಲ್ಲೂ ಒಂದು ಬಾಯ್ಸ್ ಹಾಸ್ಟೆಲ್, ಇನ್ನೊಂದು ಗರ್ಲ್ಸ್ ಹಾಸ್ಟೆಲ್. ಬಾಯ್ಸ್ ಹಾಸ್ಟೆಲ್‌ನಲ್ಲಿರುವುದು ಕೇವಲ ೬೦ ಕೋಣೆಗಳು ಮಾತ್ರ.

ವಿವಿಯಲ್ಲಿ ನಾವು ಇಚ್ಛಿಸಿದ ಕೋರ್ಸ್ ಗೆ ಸುಲಭವಾಗಿ ಸೇರಿಕೊಳ್ಳಬಹುದು. ಆದರೆ, ಹಾಸ್ಟೆಲ್ ಸೀಟ್‌ ಪಡೆಯುವುದೆಂದರೆ ದುಸ್ಸಾಹಸ. ಅಲ್ಲದೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ಸೀಟ್ ಸಿಗುವುದೇ ಇಲ್ಲ ಎಂದು ನನ್ನ ಸೀನಿಯರ್‍ ಆಗಾಗ ಹೇಳ್ತಾ ಇದ್ರು. ಯಾವ ರಾಜಕಾರಣಿಯಿಂದ ಇನ್‌ಫ್ಲೂಯನ್ಸ್ ಮಾಡಿಸಿದ್ರೂ ಸೀಟ್ ಪಡೆಯಲು ಆಗುವುದಿಲ್ಲ ಅಂತ ಹೇಳ್ತಿದ್ರು.

ಹೀಗಿರುವಾಗ ಏನಾದರೂ ಮಾಡಿ ಇದೇ ಹಾಸ್ಟೆಲ್‌ನಲ್ಲಿ ಸೀಟ್ ಪಡೆದೇ ತೀರಬೇಕು ಎಂಬ ಛಲ ನನ್ನಲ್ಲಿ ಮೂಡಿತು. ಏಳಿ, ಎಚ್ಚರಗೊಳ್ಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸಂತ ವಿವೇಕಾನಂದರ ಕವಿವಾಣಿ ನನ್ನನ್ನು ಕಾಡಿತು. ಇಂತಹ ಸಂದರ್ಭದಲ್ಲಿ ನನಗೆ ಹೊಳೆದಿದ್ದು ಸೂಪರ್‍ ಸ್ಟಾರ್ ರಜನಿಕಾಂತ್. ರಜನಿಕಾಂತ್ ಹೇಗಿದ್ದರೂ ಕನ್ನಡಿಗರು. ನನಗೆ ಸಹಾಯ ಮಾಡಿಯೇ ಮಾಡ್ತರೆ ಎಂಬ ಅಗಾದ ವಿಶ್ವಾಸ ನನ್ನಲ್ಲಿತ್ತು. ಚೆನ್ನೈಗೆ ಹೋದ ಒಂದೇ ತಿಂಗಳಿನಲ್ಲಿ ಸ್ವಲ್ಪ ಹರುಕುಮುರುಕು ತಮಿಳು ಕಲಿತಿದ್ದೆ. ಅದೇ ತಮಿಳಿನ ಸಹಾಯದಿಂದ ಆಟೋ ಡ್ರೈವರ್‍ಗಳಿಂದ "ರಜನಿ ವೀಡ್‌ ಎಂಗೆ’ ಅಂತ ಕೇಳಿಕೊಂಡು ಹೇಗೋ ಹಾಗೆ ರಜನಿ ಅವರು ವಾಸಿಸುತ್ತಿರುವ ಪೋಯಾಸ್ ಗಾರ್ಡನ್ ತಲುಪಿದೆ. ಎಷ್ಟು ಉತ್ಸಾಹದಿಂದ ತೆರಳಿದ್ದ ನನಗೆ ಅಷ್ಟೆ ನಿರಾಸೆ ಕಾದಿತ್ತು. ರಜನಿ ಭೇಟಿಯಾಗಿ ನನ್ನಿಂದ ಇದು ಸಾಧ್ಯವಾಗದು ಅಂತ ಹೇಳಿದ್ದಕ್ಕಲ್ಲ. ರಜನಿಕಾಂತ್ ಆಸ್ಟ್ರೇಲಿಯಾದಲ್ಲಿದ್ದಾರೆ. ಅವರು ಬರುವುದು ಒಂದು ತಿಂಗಳಾಗುತ್ತೆ. ಅವರ ಮನೆಯ ಸೆಕ್ಯೂರಿಟಿಗಾರ್ಡ್‌ ಹೇಳುತ್ತಿದ್ದಂತೆ ನನ್ನ ಪ್ಲಾನ್ ಎಲ್ಲಾ ಉಲ್ಟಾ ಹೊಡೆಯಿತಲ್ಲಾ ಅಂದುಕೊಂಡು ನಿರಾಸೆಯಿಂದ ಹಿಂತಿರುಗುದೆ.

ಅದರೂ ಹಾಸ್ಟೆಲ್ ಪಡೆದೇ ಪಡೆಯಬೇಕು ಅನ್ನೋ ಛಲ ಮಾತ್ರ ಸ್ವಲ್ಪವೂ ಕುಂದಲಿಲ್ಲ. ರಜನಿಕಾಂತ್ ಮನೆಯ ಪಕ್ಕದಲ್ಲೇ ಇತ್ತು ಇನ್ನೊಬ್ಬ ಕನ್ನಡತಿಯ ಮನೆ. ಅದೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸರ್ಕಾರಿ ಬಂಗಲೆ[ಜಯ ಆಗ ಅಧಿಕಾರದಲ್ಲಿದ್ದರು] ಜಯಲಲಿತಾ ಅವರನ್ನು ಏಕೆ ಭೇಟಿ ಮಾಡಬಾರದು ಅನ್ನಿಸಿತು.

ಇದೆಲ್ಲದಕ್ಕೆ ಧೈರ್ಯ ಬರಲು ಕಾರಣ ಇಷ್ಟೆ. ನಾನೊಬ್ಬ ಕನ್ನಡಿಗ. ಕನ್ನಡಿಗರನ್ನು ಭೇಟಿ ಮಾಡಲಿಕ್ಕೆ ಭಯವೇಕೆ? ಹೊರರಾಜ್ಯದಲ್ಲಿ ನಮ್ಮವರು ಸಿಕ್ಕರೆ ಸಹಾಯ ಮಾಡಿಯೇ ಮಾಡುತ್ತಾರೆ ಎಂಬ ಅಛಲವಾದ ವಿಶ್ವಾಸ ನನ್ನಲ್ಲಿತ್ತು. ಅದರೆ, ಮುಖ್ಯಮಂತ್ರಿ ಜಯಲಲಿತಾ ಅವರನ್ನು ಮುಖತಃ ಭೇಟಿ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಅವರ ಆಪ್ತಸಹಾಯಕರನ್ನಷ್ಟೆ ಕಾಣಲು ಸಾಧ್ಯವಾಯಿತು. ಅವರಾದರೂ, ನಿಮ್ಮ ಸಮಸ್ಯೆ ಬಗ್ಗೆ ಪತ್ರ ಕೊಡಿ. ಅದನ್ನು ನಾವು ಅವರಿಗೆ ತಲುಪಿಸುತ್ತೇವೆ ಎಂದರು.

ಕುಚೇಲನ್ ಚಿತ್ರ ನೋಡಿದಾಗಿನಿಂದಲೂ ನನಗೆ ಕಾಡುತ್ತಿರುವುದು ರಜನಿಕಾಂತ್ ಅವರನ್ನು ಕಾಣಲು ಸಾಧ್ಯವಾಗುತ್ತಿತ್ತೇ. ಒಂದು ವೇಳೆ ಕಂಡರೂ ಅವರು ನನಗೆ ಸಹಾಯ ಮಾಡುತ್ತಿದ್ದರೇ ಎಂಬುದು. ರಜನಿ ಇತ್ತೀಚಿಗೆ ತಾವು ನೀಡಿದ್ದ ಹೇಳಿಕೆ ಬಗ್ಗೆ ಕ್ಷಮೆ ಕೇಳುವ ಬಗ್ಗೆ ಡಬಲ್ ಗೇಮ್ ಆಡಿದ್ದು ನೋಡಿದ್ರೆ ಇದು ಸಾಧ್ಯವಿಲ್ಲ ಅನ್ನಿಸುತ್ತಿದೆ. ಒಟ್ಟಿನಲ್ಲಿ ನನ್ನಲ್ಲಿದ್ದದ್ದು ಅವರು ಕನ್ನಡಿಗರು. ಇನ್ನೊಬ್ಬ ಕನ್ನಡಿಗನ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬ ಮುಗ್ಧ ಭಾವನೆ ನನ್ನಲ್ಲಿತ್ತು. ಇದುವರೆಗೂ ನನಗೆ ಗೊತ್ತಿರಲಿಲ್ಲ. ತಮ್ಮ ಹೊಟ್ಟೆಪಾಡಿಗಾಗಿ ನಾಡು, ನುಡಿ ಸಂಸ್ಕೃತಿಯನ್ನು ಮರೆಯುತ್ತಾರೆ ಎಂದು.

ಕೊನೆಗೆ ನನಗೆ ಹಾಸ್ಟೆಲ್ ಸಿಕ್ಕಿತು. ಆದರೆ, ಅದು ಯಾವ ಕನ್ನಡಿಗರಿಂದಲ್ಲ. ಅಪ್ಪಟ ತಮಿಳು ವ್ಯಕ್ತಿಯಿಂದ. ಮದರಾಸು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿದ್ದ ಕರುಣಾನಿಧಿ ಅವರಿಂದ[ಹಾಲಿ ಸಿಎಂ ಕರುಣಾನಿಧಿಯಲ್ಲ].

- ಲೋಕೇಶ್‌ಗೌಡ ಎಚ್‌.ಸಿ.

Rating
No votes yet

Comments