ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?

ರಮ್ಯಾ ಹೇಳಿದ್ದರಲ್ಲಿ ತಪ್ಪೇನಿದೆ?

ಪತ್ರಕರ್ತರು ಹಾಗೂ ಚಿತ್ರನಟಿ ರಮ್ಯಾ ನಡುವಿನ ಅಹಂ ವಿಷಯ ಹೊಸ ಜಗಳಕ್ಕೆ ಕಾರಣವಾಗಿದೆ.

ಘಟನೆ ನಡೆದಿದ್ದು ಭಾನುವಾರ. ಅದು ’ಜೊತೆಗಾರ’ ಚಿತ್ರದ ಸುದ್ದಿಗೋಷ್ಠಿ. ನಿರ್ಮಾಪಕ ಅಶ್ವಿನಿ ರಾಂ ಪ್ರಸಾದ್ ಚಿತ್ರದ ವಿವರಗಳನ್ನು ಹಂಚಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ’ಜೋಗಿ’ಯಂತಹ ಸೂಪರ್‌ಹಿಟ್ ಚಿತ್ರ ನೀಡಿದ ನಿರ್ಮಾಪಕ ಅವರು. ಹೀಗಾಗಿ, ಪತ್ರಕರ್ತರಲ್ಲಿ ಕುತೂಹಲವಿತ್ತು. ಇತ್ತೀಚೆಗೆ ಯಶಸ್ಸು ಕಾಣದೇ ಮಂಕಾಗಿರುವ ನಟ ಪ್ರೇಮ್‌ ಹಾಗೂ ಯಶಸ್ಸಿನಿಂದ ಕಂಗೊಳಿಸುತ್ತಿರುವ ನಟಿ ರಮ್ಯಾ ಜೋಡಿ ಇದ್ದ ಚಿತ್ರವಾಗಿದ್ದರಿಂದ, ಕುತೂಹಲ ಜೋರಾಗೇ ಇತ್ತು.

ಅದೇಕೋ ಗೊತ್ತಿಲ್ಲ, ’ಜೊತೆಗಾರ’ ಚಿತ್ರದ ಪ್ರಾರಂಭದಿಂದ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್‌ಗೆ ಸಮಸ್ಯೆಗಳ ಸರಮಾಲೆಯೇ. ಚಿತ್ರದಲ್ಲಿ ಪ್ರೇಮ್ ಕೇವಲ ಸಹನಟ ಎಂದು ರಾಂಪ್ರಸಾದ್ ಹೇಳಿದರು ಎಂದು ಪ್ರೇಮ್‌ ಕೆಂಡಾಮಂಡಲವಾಗಿದ್ದರು. ಚಿತ್ರದ ಯಾವುದೇ ಪ್ರೋಮೋಷನ್‌ಗೂ ಬರುವುದಿಲ್ಲ ಎಂದು ಮುನಿಸಿಕೊಂಡಿದ್ದರು. ಹೀಗಾಗಿ, ಪ್ರೇಮ್ ಹಾಗೂ ನಾಯಕಿ ರಮ್ಯಾ ಅನುಪಸ್ಥಿತಿಯಲ್ಲಿ ಒಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ರಾಮಪ್ರಸಾದ್, ಜೊತೆಗಾರ ಚಿತ್ರದ ಹೀರೋ ಮತ್ತು ಹೀರೋಯಿನ್ ರಮ್ಯಾ ಮಾತ್ರ ಎಂದು ಹೇಳುವ ಮೂಲಕ ಪ್ರೇಮ್‌ರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಮೇ ಹದಿನೈದರಂದು ತೆರೆ ಕಾಣಬೇಕಿದ್ದ ’ಜೊತೆಗಾರ’ ಚಿತ್ರ ಒಂದು ವಾರ ಮುಂದೆ ಹೋಗಿ ಮೇ.೨೨ ರಂದು ತೆರೆಗೆ ಬರುವುದಾಗಿ ಭಾವಿಸಲಾಗಿತ್ತು.

ಆದರೆ, ಚಿತ್ರತಂಡದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ ಬಿಡುಗಡೆ ಮತ್ತೆ ಮುಂದಕ್ಕೆ ಹೋಯಿತು. ಕೊನೆಗೂ ರಮ್ಯಾ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿದು ಇದೇ ಮೊದಲ ಬಾರಿ ನಿರ್ಮಾಪಕ ರಾಮಪ್ರಸಾದ್, ನಟ ಪ್ರೇಮ್ ಹಾಗೂ ರಮ್ಯಾ ಇಂದಿನ ಸುದ್ದಿಗೋಷ್ಠಿಗೆ ಆಗಮಿಸಬೇಕಿತ್ತು. ತಾನು ಬರುವುದು ಒಂದು ಗಂಟೆ ತಡವಾಗುತ್ತದೆ ಎಂದು ಸುದ್ದಿಗೋಷ್ಠಿಗೂ ಮುಂಚೆಯೇ ನಿರ್ಮಾಪಕ ರಾಮಪ್ರಸಾದ್‌ಗೆ ರಮ್ಯಾ ಹೇಳಿದ್ದರು. ಆದರೆ, ಈ ವಿಷಯ ತಿಳಿಸದ ರಾಮಪ್ರಸಾದ್ ರಮ್ಯಾ ಬರುವವರೆಗೆ ಸುದ್ದಿಗೋಷ್ಠಿ ಆರಂಭಿಸಲೇ ಇಲ್ಲ. ಅವರು ತಡವಾಗಿ ಬರ್ತಾರೆ ಎಂಬುದನ್ನೂ ತಿಳಿಸಲಿಲ್ಲ.

ಕಾಯುತ್ತ ಕೂತ ಪತ್ರಕರ್ತರ ಸಹನೆ ಮುಗಿದಿತ್ತು. ರಮ್ಯಾ ಬರುತ್ತಲೇ, ಕ್ಷಮೆ ಕೇಳಿ ಅಂತ ಮುಗಿಬಿದ್ದರು. ತಡವಾಗಿ ಬರುತ್ತೇನೆ ಎಂದು ಮುಂಚೆಯೇ ಹೇಳಿದ್ದೆ. ನೀವೆಲ್ಲ ಊಟ ಮಾಡುತ್ತಿರುತ್ತೀರಿ ಅಂತ ಭಾವಿಸಿದ್ದೆ. ತಪ್ಪೇ ಮಾಡದ ನಾನು ಕ್ಷಮೆ ಯಾಕೆ ಕೇಳಬೇಕು? ಎಂಬುದು ರಮ್ಯಾ ವಾದ.

ಆದರೆ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್‌ ಕಾಸರಗೋಡ್‌ ಸಹನೆ ಪೂರ್ತಿಯಾಗಿ ಕಳೆದುಕೊಂಡಿದ್ದರು. ಕ್ಷಮೆ ಕೇಳಲಿಲ್ಲ ಎಂಬುದು ಅವರನ್ನು ಕೆರಳಿಸಿತು. ರಮ್ಯಾಗೆ ಅವಳು, ಇವಳು ಎಂದೆಲ್ಲ ಕೂಗಾಡಲಾರಂಭಿಸಿದಾಗ, ರಮ್ಯಾ ಕೂಡ ಸಹನೆ ಕಳೆದುಕೊಂಡಳು. ಮೊದಲು ನೀವು ಸರಿಯಾಗಿ ಮಾತನಾಡಿ ಎಂದಳು. ಬಹುತೇಕ ಪತ್ರಕರ್ತರು ಸುಮ್ಮನೇ ಕೂತಿದ್ದರೂ, ಗಣೇಶ ಕಾಸರಗೋಡ್‌ ಮಾತ್ರ ವಾಗ್ದಾಳಿ ಮುಂದುವರಿಸಿದರು. ಕೆರಳಿದ ರಮ್ಯಾ, ನಿಮ್ಮನ್ನು ಬಾ ಅಂತ ಕರೆದಿದ್ದಿಲ್ಲ, ಹೋಗಬೇಕೆನ್ನಿಸಿದರೆ ಎದ್ದು ಹೋಗಿ ಎಂದು ಹೇಳಿಬಿಟ್ಟರು.

ಇಡೀ ವಿವಾದ ತೀವ್ರಗೊಂಡಿದ್ದು ಇಲ್ಲಿಂದ.

ಪತ್ರಕರ್ತರು ಸುದ್ದಿಗೋಷ್ಠಿ ಬಹಿಷ್ಕರಿಸಿದರು. ನಾನಿರೋದೆ ಹಾಗೆ, ಕ್ಷಮೆ ಕೇಳಲ್ಲ ಎಂದು ರಮ್ಯಾ ಕೂಡ ಹೊರನಡೆದರು.

ಇಡೀ ಘಟನೆಯನ್ನು ವಿಷ್ಲೇಶಿಸಿದರೆ, ಇದು ವೈಯಕ್ತಿಕ ಅಹಂನಿಂದ ಬೆಳೆದ ಘಟನೆ. ಗಣೇಶ್‌ ಕಾಸರಗೋಡ್‌ ಇಡೀ ಘಟನೆಯನ್ನು ತೀರಾ ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಂಡರು ಎಂದು ಅನಿಸುತ್ತದೆ. ಹಿಂದೆ ರಮ್ಯಾ ಜನ್ಮ ವೃತ್ತಾಂತ ಕೆಲ ಪತ್ರಿಕೆಗಳಲ್ಲಿ ಬರಲು ಗಣೇಶ ಕಾಸರಗೋಡ್‌ ಕಾರಣ ಎಂಬುದು ರಮ್ಯಾ ದೂರು. ಹೀಗಾಗಿ, ಕ್ಷಮೆ ಯಾಚಿಸಬೇಕೆಂಬ ಗಣೇಶ್‌ ಕಾಸರಗೋಡ್‌ ಅವರ ಬೇಡಿಕೆಗೆ ಅವರು ಒಪ್ಪಿಲ್ಲ. ಇದು ನಟಿಯ ಪೊಗರು ಎಂಬಂತೆ ಗಣೇಶ್‌ ಕೆರಳಿದ್ದಾರೆ. ವೈಯಕ್ತಿಕ ಮಟ್ಟದ ಈ ಜಗಳ ಸಾರ್ವತ್ರಿಕವಾಗಲು ಕಾರಣ ಇದು.

ಇದೊಂದೇ ಘಟನೆಯಲ್ಲ, ಇಂಥ ಹಲವಾರು ಸಂದರ್ಭಗಳಲ್ಲಿ ಪತ್ರಕರ್ತರು ಸುದ್ದಿಗೋಷ್ಠಿ ಬಹಿಷ್ಕರಿಸಿದ್ದಾರೆ. ವಿಶ್ಲೇಷಿಸಿ ನೋಡಿದರೆ, ವೈಯಕ್ತಿಕ ಅಹಂ ಇದಕ್ಕೆ ಕಾರಣ ಎಂಬುದು ಬಹುತೇಕ ಘಟನೆಗಳಲ್ಲಿ ಸ್ಪಷ್ಟ.

ಹಿರಿಯರಾದ ಗಣೇಶ ಕಾಸರಗೋಡ್‌ ತಾಳ್ಮೆ ಕಳೆದುಕೊಳ್ಳಬಾರದಿತ್ತು. ಇಡೀ ಘಟನೆಗೆ ಮುಖ್ಯ ಕಾರಣಕರ್ತ ಎಂದರೆ, ’ಜೊತೆಗಾರ’ ಸಿನಿಮಾ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್‌. ಕ್ಷಮೆ ಕೇಳಬೇಕಿದ್ದು ಅವರು. ಆದರೆ, ಸುಮ್ಮನೇ ಕೂಡುವ ಮೂಲಕ ರಮ್ಯಾ ಹಾಗೂ ಪತ್ರಕರ್ತರ ನಡುವೆ ವೈಮನಸ್ಯ ಬೆಳೆಯಲು ಅವರು ಕಾರಣರಾದರು.

ಪ್ರತಿಭಾವಂತರನ್ನು ಅಹಂ ಹಾಳು ಮಾಡೋದು ಹೀಗೆ.

- ಚಾಮರಾಜ ಸವಡಿ

Rating
No votes yet

Comments