ರಾತ್ರಿಯ ಕತ್ತಲಿನಲ್ಲಿ...
ರೈಲ್ವೇ ಸ್ಟೇಷನ್ನಿನ ಹೊರಗಿನ ಬೀದಿಯೊಂದರಲ್ಲಿ ಬೀದಿ ದೀಪಗಳು ಕೊನೆಯಾದ ಮಾರು ದೂರದಲ್ಲಿ ಅವಳಿನ್ನೂ ಕಾಯುತ್ತಿದ್ದಾಳೆ. ಯಾರೂ ಕಸ್ಟಮರ್ ಬರದಿದ್ದರೂ ಅವನಂತೂ ಖಂಡಿತಾ ಬರುತ್ತಾನೆ ಎಂದು ಅವಳಿಗೂ ಅವಳೊಡನೆ ನಿಂತಿರುವ ನಾಲ್ಕೈದು ಹೆಣ್ಣುಗಳಿಗೂ ಅರಿವಿದೆ. ಆಗೊಮ್ಮೆ ಈಗೊಮ್ಮೆ ಪೋಲೀಸಿಗೂ ಉಚಿತವಾಗಿ ಸೇವೆಯನ್ನು ಒದಗಿಸುವುದರಿಂದ ರೈಡಿಂಗ್ ಭಯವಿಲ್ಲದೆ ಅವರ ದೇಹ ವ್ಯಾಪಾರ ನಡೆಯುತ್ತಿದೆ. ಅವರಿಗದು ಮತ್ತದೇ ರಾತ್ರಿ. ನಾಲ್ನೂರು ಐನೂರರ ವ್ಯಾಪಾರ, ಕೆಲವೊಮ್ಮೆ ಸಾವಿರ ದಾಟುವುದೂ ಉಂಟು. ಅವನು ಹೆಂಡತಿ ಮಲಗುವುದರ ನಿರೀಕ್ಷೆಯಲ್ಲಿದ್ದಾನೆ. ಮಲಗಿದ ಬಳಿಕ ಮೆಲ್ಲನೆ ಬಾಗಿಲು ತೆಗೆದು ಹೋದರೆ ಗೊರಕೆ ಹೊಡೆಯುವ ಹೆಂಡತಿಗೆ ರಾತ್ರಿ ಪರ ಸುಖ ಬಯಸುವ ಗಂಡನ ಪರಿವೇ ಇರುವುದಿಲ್ಲ. ಸಾಂಸಾರಿಕ ಜೀವನದಿಂದ ಬೇಸತ್ತು ಅವನು ಆ ಹೆಣ್ಣುಗಳ ಪ್ರತಿದಿನದ ಕಸ್ಟಮರ್ ಆಗಿದ್ದಾನೆ. ಬರಲಿಲ್ಲವೆಂದರೆ ಆ ರಾತ್ರಿ ಅವನಿಗೆ ಮನೆಯಲ್ಲೇ ಹೆಂಡತಿಯಿಂದ ಆತಿಥ್ಯ ಅಥವಾ ಹೆಂಡತಿ ಇನ್ನೂ ಮಲಗಿಲ್ಲ ಎಂದು ಆ ಹೆಣ್ಣುಗಳಿಗೆ ಗೊತ್ತಿದೆ.
ಬೀದಿಯ ಮಧ್ಯದಲ್ಲೇ ಬೈಕಿನ ಹಿಂದೆ ಫುಟ್’ಪಾತಿನಲ್ಲಿ ಅವಳನ್ನು ಚುಂಬಿಸುತ್ತಾ ಅವನು ಮತ್ತಷ್ಟು ಮುಂದುವರಿಯುತ್ತಿದ್ದಾನೆ. ಪ್ರೇಮವೆಂಬುದು ಮನಸ್ಸಿನ ಸಂಬಂಧ ಎಂಬ ಅವಳ ಕಲ್ಪನೆ ಅವನ ಅಭೀಪ್ಸೆಯೊಂದಿಗೆ ಕೊನೆಯಾಗುತ್ತಿದೆ. ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ನಿರೂಪಿಸಲು ಹೇಳಿದ ಆತನಿಗೆ ಆಕೆ ತನ್ನ ಮೈಯನ್ನು ಅರ್ಪಿಸುತ್ತಿದ್ದಾಳೆ, ಅವಳಿಗದು ಇಷ್ಟವೂ ಆಗುತ್ತಿದೆ. ಬೀದಿ ನಾಯಿಗಳು ಬೆಲೆವೆಣ್ಣುಗಳತ್ತ ಒಮ್ಮೆ ಬೊಗಳಿ ಓಡುತ್ತವೆ. ಒಬ್ಬ ಮಹಿಳೆಯನ್ನು ಕರೆದೊಯ್ಯಲು ಬಂದ ಮಾರುತಿ ೮೦೦ ವ್ಯಾಪಾರ ಕುದುರಿಸಿ ಒಂದು ಹೆಣ್ಣನ್ನು ಕರೆದೊಯ್ಯುತ್ತದೆ.
ತನ್ನ ಹೆಂಡತಿ ಅಳುತ್ತಿರುವುದನ್ನು ಕಂಡು ಆತ ಅವಳನ್ನು ಸಮಾಧಾನಿಸಲೂ ಆಗದೆ ಮನೆಯಿಂದ ಹೋಗಲೂ ಆಗದೆ ಸಂಕಟದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಅದರ ಮೇಲೆ ಹೆಂಡತಿಯ ಇಮೋಶನಲ್ ಡೈಲಾಗುಗಳು ಅವನನ್ನು ಕಟ್ಟಿ ಹಾಕುತ್ತಿವೆ. ತನ್ನ ನಾಲ್ಕು ವರ್ಷದ ಮಗಳಿಗಾಗಿಯಾದರೂ ಹೋಗಬೇಡಿ ಎಂದು ಹೇಳಿದ ಆಕೆ ಸಫಲವಾಗಿ ಆತನನ್ನು ತಕ್ಕ ಮಟ್ಟಿಗೆ ಮನೆಯಲ್ಲಿ ಬಂಧಿಸುತ್ತಾಳೆ. ಇನ್ನೊಂದು ತಿಂಗಳು ಆತ ಸಂಸಾರ ಹೆಂಡತಿ ಮಕ್ಕಳು ಎಂಬ ವಾತಾವರಣದಲ್ಲಿ ಸುಖ ಕಂಡುಕೊಳ್ಳಲು ಯತ್ನಿಸುತ್ತಾನೆ, ಮತ್ತೆ ಅವನ ಮನದಲ್ಲಿ ಪರ ಸ್ತ್ರೀಯರಿಗೆ ವ್ಯಾಮೋಹ ಉಂಟಾಗಿ ಅವನನ್ನು ಅವೇ ಬೆಲೆವೆಣ್ಣುಗಳ ಕಸ್ಟಮರ್ ಆಗಿ ಪರಿವರ್ತಿಸಲಿದೆ. ಮನಸ್ಸಿನ ಆಸೆಗಳನ್ನು ಅದುಮಿ ಆತ ಹೆಂಡತಿಗಾಗಿ ಮನೆಯಲ್ಲೇ ಉಳಿಯುತ್ತಾನೆ.
ಸ್ಟೇಷನ್ನಿನ ಎಕ್ಸಿಟ್ ಬಳಿ ಅವನಿನ್ನೂ ಕಾಯುತ್ತಿದ್ದಾನೆ, ಮನೆಯಿಂದ ಓಡಿ ಹೋಗೋಣ ಎಂಬ ಮಾತಿಗೆ ’ಆಯಿತು’ ಎಂದ ಹುಡುಗಿ ಇನ್ನೂ ಬಂದಿಲ್ಲ. ಅವನು ಚಿಂತಿತನಾಗಿದ್ದಾನೆ. ಕೊನೆಯ ಲೋಕಲ್ ಟ್ರೈನು ಬರುವ ಹೊತ್ತಾಯಿತು. ಅದರಲ್ಲಿ ಅವರು ಹೋದರೆ ಮುಂದಿನ ಸ್ಟೇಶನ್ನಿನಲ್ಲಿ ಇಳಿದುಕೊಂಡರೂ ಮುಂಬೈ ಎಂಬ ಮಹಾನ್ ಪಟ್ಟಣದಲ್ಲಿ ಸಿಕ್ಕಿ ಹಾಕಿಕೊಳ್ಳುವ ಪರಿಸ್ಥಿತಿ ಬರಲ್ಲ ಎಂಬುದು ಅವನ ಯೋಚನೆ. ಆದರೆ ಅವಳ ಮೊಬೈಲಿಗೆ ಹತ್ತಾರು ಸಲ ಯತ್ನಿಸಿದರೂ ಬರುತ್ತಿರುವ ’ಸ್ವಿಚ್ ಆಫ್’ ಮೆಸೇಜು ಅವನ ಚಿಂತೆಯನ್ನು ಹೆಚ್ಚಿಸುತ್ತಿದೆ. ಮತ್ತೆ ಅವಳ ಹಳೆಯ ಬಾಯ್ ಫ್ರೆಂಡ್ ಅವಳ ಬದುಕಿನಲ್ಲಿ ಬಂದನೋ ಅಥವಾ ಮನೆಯಿಂದ ಹೊರಡುವಾಗ ಸಿಕ್ಕಿ ಬಿದ್ದಳೋ ಮುಂತಾದ ಹತ್ತಾರು ಯೋಚನೆಗಳು ಅವನ ಮನಸ್ಸಿನಲ್ಲಿ ಹಾಯುತ್ತಿವೆ. ಲೋಕಲ್ಲಿನ ಸದ್ದು ಅವನ ಹೃದಯ ಬಡಿತಕ್ಕೂ ಕಡಿಮೆಯಾಗಿ ಲೋಕಲ್ಲು ಯಾವಾಗಲೋ ಹೋಗಿದ್ದು ಕೂಡ ಅವನಿಗೆ ಅರಿವಿಗೆ ಬಂದಿಲ್ಲ.
ಆರದ ಬೀದಿ ದೀಪಗಳು ಇನ್ನೂ ಯಾರೋ ಬರಬಹುದೆಂಬ ಆಕೆಯ ನಿರೀಕ್ಷೆಗೆ ಸಾಕ್ಷಿಯಾಗಿದೆ. ಅವಳಿಗೆ ಇನ್ನೂ ಕಸ್ಟಮರ್ ಬಂದಿಲ್ಲ. ರಾತ್ರಿ ಒಂದಾದರೂ ಅವಳು ಇನ್ನೂ ಕಾದಿದ್ದಾಳೆ. ಅವಳೊಡನೆ ನಿಂತಿರುವ ಹುಡುಗಿಯರು ಚರ ಚರ ಮಾತಾಡುತ್ತಿದ್ದಾರೆ. ಇವಳಿಗೆ ಅದೊಂದೂ ಇಷ್ಟವಾಗದೇ ರೈಲ್ವೇ ಸ್ಟೇಶನ್ನಿನ ಬಳಿ ಬರುತ್ತಾಳೆ. ಅಲ್ಲಿ ಅವನು ಟ್ರೆಕ್ಕಿಂಗ್ ಬ್ಯಾಗ್ ಹಿಡಿದುಕೊಂಡು ಯಾರಿಗೋ ಕಾಯುತ್ತಿರುವುದು ಇವಳ ಕಣ್ಣಿಗೆ ಬೀಳುತ್ತದೆ. ತಾನೂ ಓಡಿ ಬಂದು ತನ್ನವನು ಕೈ ಬಿಟ್ಟು ಹೋದದ್ದರ ನೆನಪು ಅವಳಿಗೆ ನೆನಪಾದರೂ ಯಾವುದೇ ಭಾವನೆ ಅವಳಿಗೆ ಮೂಡುವುದಿಲ್ಲ. ಅವಳು ಯಾವುದೇ ಅಳುಕಿಲ್ಲದೆ ಬರುತ್ತಾಳೆ.
ಬೈಕಿನ ಹಿಂದೆ ಅವರಿಬ್ಬರು ಇನ್ನೂ ಕುಳಿತಿದ್ದು ಅವನು ಅವಳನ್ನು ರಮಿಸಿ ಮದುವೆಯಾಗುವ ಭರವಸೆ ನೀಡುತ್ತಿರುತ್ತಾನೆ. ಇವಳು ಅದನ್ನು ನಂಬುತ್ತಾ ಮತ್ತೆ ಮೋಸ ಮಾಡದಿರಲು ಪ್ರಾಮಿಸ್ ತೆಗೆದುಕೊಳ್ಳುತ್ತಾಳೆ. ಕೊನೆಯ ಅವಕಾಶವನ್ನು ಉಪಯೋಗಿಸಿಕೊಂಡ ನೆಮ್ಮದಿ ಆತನಿಗೆ ಆಗುತ್ತಿದ್ದಂತೆ ಬೈಕ್ ಸ್ಟಾರ್ಟ್ ಆಗುತ್ತದೆ. ಬೈಕಿನಲ್ಲಿ ಹೋಗುತ್ತಾ ಅವಳು ಅವಳ ಮೊಬೈಲ್ ಸ್ವಿಚ್ ಆನ್ ಮಾಡಿ ’’ಇಫ್ ಪಾಸಿಬಲ್ ಫೊರ್ಗೆಟ್ ಮಿ!’’ ಎಂದು ಇವನ ಮೊಬೈಲಿಗೆ ಮೆಸೇಜು ಕಳುಹಿಸುತ್ತಾಳೆ. ಅಳಿದುಳಿದ ಸಂಬಂಧವನ್ನು ಬೆಸೆಯಲು ಮದುವೆಯಾಗೋಣ, ಅದಕ್ಕಾಗಿ ಮನೆ ಬಿಟ್ಟು ಹೋಗೋಣ ಎಂಬ ಅವನ ಮಾತನ್ನು ಲೇವಡಿ ಮಾಡಿದಂತೆ ಇವನಿಗನಿಸುತ್ತದೆ. ಅವನು ಅಲ್ಲೇ ಮೆಟ್ಟಿಲಿನ ಮೇಲೆ ಕುಸಿಯುತ್ತಾನೆ.
ಇವಳೂ ಬಂದು ಮೆಟ್ಟಿಲಿನಲ್ಲಿ ಕುಳಿತುಕೊಳ್ಳುತ್ತಾಳೆ. ಇವನಿಗೆ ಅತೀವ ಬೇಸರ, ಸಿಟ್ಟು ಒಟ್ಟಿಗೆ ಕಾಡುತ್ತಿರುತ್ತದೆ. ಪಕ್ಕದಲ್ಲಿ ಕುಳಿತವಳು ಬೆಲೆವೆಣ್ಣು ಎಂದು ಅವನಿಗೆ ಅರಿವಾಗಿ ಇದ್ದ ಸಿಟ್ಟನ್ನೆಲ್ಲವನ್ನೂ ಮರೆಯಲೇ ಎಂದೆನಿಸಿದರೂ ಆಗದೇ ಮತ್ತಷ್ಟು ನೋವು ಅನುಭವಿಸುತ್ತಾನೆ. ಹೆಣ್ಣೊಂದು ತಾನಾಗಿ ಒಲಿದು ಬಂದರೂ ಅನುಭಿಸಲಾಗದ ಅವನ ಪರಿಸ್ಥಿತಿ ಕಂಡು ಅವನಿಗೇ ಹೇಸಿಗೆಯಾಗುತ್ತದೆ. ಆದರೂ ಅವನು ಎದ್ದು ನಿಂತು ನಡೆಯುತ್ತಾನೆ, ಅವನಿಗೆ ಬದುಕಿನ ವ್ಯಂಗ್ಯಗಳು ಅರ್ಥವಾಗುತ್ತಿದ್ದರೆ ಮೊದಲ ಬಾರಿಗೆ ಅವಳಿಗೆ ರಾತ್ರಿಯ ನೀರವತೆ ಅರಿವಾಗುತ್ತಿದೆ. ಅವಳೂ ಅವನನ್ನು ಅನುಸರಿಸುತ್ತಾಳೆ. ಒಮ್ಮೆ ಹಿಂತಿರುಗಿ ನೋಡಿದರೆ ಸಾಕು, ಇನ್ನೂರು ಸಿಕ್ಕರೂ ಸರಿ ಎಂದು ಅವಳು ಯೋಚಿಸಿರುತ್ತಾಳೆ. ಇವನಿಗೆ ಭಯವಾಗಿ ಓಡುತ್ತಾನೆ, ನಾಯಿಗಳು ಬೊಗಳುತ್ತಾ ಅಟ್ಟಿಸಿಕೊಂಡು ಹೋಗುತ್ತವೆ.
Comments
ಉ: ರಾತ್ರಿಯ ಕತ್ತಲಿನಲ್ಲಿ...
In reply to ಉ: ರಾತ್ರಿಯ ಕತ್ತಲಿನಲ್ಲಿ... by kamath_kumble
ಉ: ರಾತ್ರಿಯ ಕತ್ತಲಿನಲ್ಲಿ...