ರಾಮನ ಸ್ವರ್ಗಾರೋಹಣ

ರಾಮನ ಸ್ವರ್ಗಾರೋಹಣ

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ, ಕುಶಾವತಿ, ಲಕ್ಷ್ಮಣಾವತಿ, ಮಿಥಿಲೆ ಹೀಗೆ ಹಲವು ಸ್ಥಳಗಳ ಬಗ್ಗೆ ಟ್ವಿಟರಿನಲ್ಲಿ ಒಂದಷ್ಟು ಚಿಲಿಪಿಲಿಗುಟ್ಟಿಯೂ ಆಯ್ತು.

 

ಆಗಲೇ, ಹಿಂದೊಮ್ಮೆ ಇಲ್ಲೇ ಸಂಪದದಲ್ಲೇ ಇನ್ನಾವುದೋ ಬರಹಕ್ಕೆ ಹಾಕಿದ್ದ ರಾಮನ ಸ್ವರ್ಗಾರೋಹಣದ ಬಗ್ಗೆ ಟಿಪ್ಪಣಿಯೊಂದು ನೆನಪಾಗಿ, ಇಲ್ಲಿ ಮತ್ತೆ ಅದನ್ನು ಸ್ವಲ್ಪ ಹಿಗ್ಗಿಸಿ ಹಾಕ್ತಿದೀನಿ.

 

ರಾಮನ ಸ್ವರ್ಗಾರೋಹಣದ ಪ್ರಸಂಗ ಉತ್ತರಕಾಂಡದ ೧೦೦ ನೇ ಅಧ್ಯಾಯದಲ್ಲಿನ ಬರುತ್ತೆ. ಇದೇ ಉತ್ತರ ಕಾಂಡದ ಕೊನೆಯ ಅಧ್ಯಾಯ.

ಕೆಲವು ಶ್ಲೋಕಗಳ ಭಾವಾನುವಾದವನ್ನಿಲ್ಲಿ ಮಾಡಿರುವೆ.

 

ಮೊದಲಿಗೆ,

 

ತೆರಳಿ ಅರೆಯೋಜನ ದೂರ ಪಡುವಲ ಹರಿವಿನ ಹೊಳೆಯನ್ನು
ಸರಯುವನು ಆ ಪುಣ್ಯನದಿಯನನು ಕಂಡನಾ ರಘುನಂದನ

 

ಸಂಸ್ಕೃತ ಮೂಲ:

 

ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್ |
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ || (ಅಧ್ಯಾಯ ೧೦೦; ಶ್ಲೋಕ ೧)

 

ಬಳಿಕ,

 

ಸರಯೂ ನದಿ ನೀರನ್ನು ರಾಮ ಪಾದಗಳಿಂ ತಾ ಹೊಕ್ಕನು (?)

 

ಸಂಸ್ಕೃತ ಮೂಲ:

 

ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸಮುಪಚಕ್ರಮೇ|| (ಅಧ್ಯಾಯ ೧೦೦, ಶ್ಲೋಕ ೫)

 

ಮತ್ತೇನಾಯ್ತು?

 

ಆಗ ಪೂರ್ವಿಕರ ಮಾತೊಂದು ಕೇಳಿ ಬಂದಿತು ಮೇಲಿನಾಆಗಸದಿಂದ
"ಮಂಗಳವಾಗಲಿ ವಿಷ್ಣುವೆ ನಿನಗೆ! ನಿನ್ನೆಡೆಗೇ ಮರಳಿ ಬರುವುದರಿಂದ"!

 

ಸಂಸ್ಕೃತ ಮೂಲ:

 

ತತಃ ಪಿತಾಮಹೋ ವಾಣೀಮಂತರಿಕ್ಷಾದಭಾಷತ |
ಆಗಚ್ಚ ವಿಷ್ಣೋ ಭದ್ರಂ ತೇ ದಿಷ್ಟ್ಯಾ ಪ್ರಾಪ್ತೋಸಿ ರಾಘವ || (ಅಧ್ಯಾಯ ೧೦೦, ಶ್ಲೋಕ ೬)

 

ಆಕಾಶವಾಣಿ ಮತ್ತೆ ಮುಂದುವರೆಯಿತು:

"ದೈವರೂಪಿ ತಮ್ಮಂದಿರ ಜೊತೆ ನಿನ್ನ ನೆಲೆಗೇ ನೀ ಮರಳು
ಆಗಸದಷ್ಟು ಮಹಾ ತೇಜವ ವಿಷ್ಣು ರೂಪದಲೇ ನೀ ಹೊಂದು"

 

ಸಂಸ್ಕೃತ ಮೂಲ:

 

ಭ್ರಾತೃಭಿಃ ಸಹ ದೇವಾಭೈಃ ಪ್ರವಿಶಸ್ವ ಸ್ವಕಾಂ ತನುಮ್|
ವೈಷ್ಣವೀಂ ತಾಂ ಮಹಾತೇಜಸ್ತದಾಕಾಶಂ ಸನಾತನಂ ||(ಅಧ್ಯಾಯ ೧೦೦, ಶ್ಲೋಕ ೭)

 

ರಾಮ ಮತ್ತೇನು ಮಾಡುವನು?

 

ಹಿರೀಕರ ಮಾತನು ಕೇಳುತ ರಾಮನು, ಹಿರಿಯ ಅರಿವುಳ್ಳವನು
ಕಿರಿಯರೊಡನೆ ಶರೀರವಿದ್ದೇ ಆ ವಿಷ್ಣು ತೇಜದಲೊಂದುಗೂಡಿದನು

 

ಸಂಸ್ಕೃತ ಮೂಲ:

 

ಪಿತಾಮಹ ವಚಃ ಶ್ರುತ್ವಾ ವಿನಿಶ್ಚಿತ್ಯ ಮಹಾಮತಿಃ |
ವಿವೇಶ ವೈಷ್ಣವಂ ತೇಜಃ ಸಶರೀರಃ ಸಹಾನುಜಃ || (ಅಧ್ಯಾಯ ೧೦೦, ಶ್ಲೋಕ ೧೦)

 

ರಾಮಾಯಣದಂತಹ ನವರಸಭರಿತವಾದ ಕಥೆಯ ಕೊನೆ ಮಾತ್ರ ಉದ್ವೇಗರಹಿತವಾಗಿ ಇದೆ, ಮಾಸ್ತಿಯವರ ಕಥೆಗಳಲ್ಲಿ ಬರುವಂತೆ, ದೂರ ನಿಂತು ನೋಡುವ ನೋಡುಗನೋರ್ವ ಬರೆದ ಹಾಗೆ ಅನ್ನಿಸುತ್ತೆ ನನಗೆ. ನೀವೇನಂತೀರ?

 

-ಹಂಸಾನಂದಿ

 

ಕೊ: ಆಸಕ್ತರಿಗೆ ವಾಲ್ಮೀಕಿ ರಾಮಾಯಣದ ಪೂರ್ಣ ಪಾಠ ಇಲ್ಲಿದೆ: http://www.sanskritd...

Rating
No votes yet

Comments