'ರಾಮಾಯಣ'ದ ಆಟ ಆಡಿ...

'ರಾಮಾಯಣ'ದ ಆಟ ಆಡಿ...

ರಾಮಾಯಣ - ವರ್ಜಿನ್ ಕಾಮಿಕ್ಸ್
ಮಿಶ್ರಿಕೋಟಿಯವರು ಬರೆದಿರುವ ಪುಟ್ಟ ಬರಹ [:http://sampada.net/blog/shreekant_mishrikoti/22/08/2007/5475|ತಮಸಾ ನದೀ ತೀರದಲ್ಲಿ] ಓದಿ ನನಗೆ ಹಲವು ದಿನಗಳ ಹಿಂದೆ ಓದಿದ ಒಂದು ಸುದ್ದಿಯ ನೆನಪಾಯಿತು.

ರಾಮಾಯಣ ಈಗ MMO (Massively Multi-player Online game) ಆಗಿ ಹೊರಬರಲಿದೆಯಂತೆ. MMO ಎಂದರೆ ನೇರ ಅಂತರ್ಜಾಲದಲ್ಲಿ ಹಲವು ಆಟಗಾರರೊಂದಿಗೆ ಆಡಬಹುದಾದ ವಿಡಿಯೋ ಗೇಮ್. ಇದನ್ನು ಹೊರತರುತ್ತಿರುವುದು ಸೋನಿ ಕಂಪೆನಿಯಂತೆ.

ಮಿ. ಇಂಡಿಯ, ಬ್ಯಾಂಡಿಟ್ ಕ್ವೀನ್ ಹಾಗೂ ಎಲಿಝಬೆತ್ ಮುಂತಾದ ಪ್ರಮುಖ ಚಿತ್ರಗಳನ್ನು ನಿರ್ದೇಶಿಸಿದ ಶೇಖರ್ ಕಪೂರ್ ಇದರ ಹಿಂದೆ ಇದ್ದಾರಂತೆ. ಇವರು ಅದರ ಸ್ಕ್ರಿಪ್ಟ್ ಬರೆದವರು. ವರ್ಜಿನ್ ಕಾಮಿಕ್ಸ್ ಸ್ಥಾಪಿಸಿದವರಲ್ಲಿ ಇವರೂ ಒಬ್ಬರು. ವರ್ಜಿನ್ ಕಾಮಿಕ್ಸ್ ಹೋದ ವರುಷ ರಾಮಾಯಣವನ್ನು ಕಾಮಿಕ್ಸ್ ಜಗತ್ತಿಗೆ ಪಾಶ್ಚಿಮಾತ್ಯ ಜಗತ್ತಿಗೆ ಹಿಡಿಸುವ ರೀತಿಯಲ್ಲಿ ಹೊರತಂದದ್ದು ನೆನಪಿಸಿಕೊಳ್ಳಬಹುದು. ಪುಸ್ತಕ ಹಾಗೂ ಕಾಮಿಕ್ ಜಗತ್ತಿನಲ್ಲಿ ಪ್ರಖ್ಯಾತ ಹೆಸರುಗಳಾದ ದೀಪಕ್ ಚೋಪ್ರ ಹಾಗೂ ಅವರ ಮಗ ಗೋಥಮ್ (ಗೌತಮ್) ಚೋಪ್ರ ಕೂಡ ಇದರಲ್ಲಿದ್ದಾರಂತೆ (ಇವರುಗಳೂ ವರ್ಜಿನ್ ಕಾಮಿಕ್ಸ್ ಸ್ಥಾಪಕರು).

ರಾಮಾಯಣ - ವರ್ಜಿನ್ ಕಾಮಿಕ್ಸ್
(ಓದುಗರಿಗೆ ಈ ವಿಷಯ ನಾನು ತಿಳಿಸದಿದ್ದರೆ ನನಗೇ ಬೇಸರವಾಗುತ್ತದೆ: ವರ್ಜಿನ್ ತಂದ ರಾಮಾಯಣ ಕಾಮಿಕ್ಸ್ ಅಮರಚಿತ್ರಕಥೆ ಹಿಂದೊಮ್ಮೆ ತಂದಿದ್ದ ರಾಮಾಯಣ ಪುಸ್ತಕದಂತಲ್ಲ. ಇದರಲ್ಲಿ ಇತ್ತೀಚೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಅನೀಮ್ ಶೈಲಿ ಚಿತ್ರಗಳಲ್ಲಿ ಬಳಕೆಯಾಗಿದೆ. ಜೊತೆಗೆ ಕಾಮಿಕ್ಸ್ ಶೈಲಿ ಕೂಡ ಪಶ್ಚಿಮದ್ದೇ. ಕಚೇರಿ ಮಾತ್ರ ಬೆಂಗಳೂರಿನಲ್ಲಿ ಎಂದು ಕೇಳಿರುವೆ. ಕಥೆಯಲ್ಲಿರಬಹುದಾದ ಸಂದೇಶಕ್ಕಿಂತ ಹೆಚ್ಚಾಗಿ ದೃಶ್ಯ ವೈಭವ ಹಾಗೂ violence ಗೆ ಒತ್ತು ಹೆಚ್ಚು. ಕಥೆಯಲ್ಲಿ ಹಲವು ಪಾತ್ರಗಳ ಹಿನ್ನೆಲೆಯನ್ನು ಹೆಚ್ಚಿನ ವಿವರವಿಲ್ಲದೆ ಪ್ರಸ್ತುತಪಡಿಸಲು ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಕೆಲವೊಂದು ಬದಲಾವಣೆಗಳು ಕಥೆಯ ಸ್ವಾರಸ್ಯವನ್ನೇ ಕಳಚಿಹಾಕುತ್ತದೆ.

ಅಮರಚಿತ್ರಕಥೆಯನ್ನು ಓದಿದವರ ಮನದಲ್ಲಿ ಅದರಲ್ಲಿಯ ಸುಂದರ, ಸಿಂಪಲ್ ಆದ ಚಿತ್ರಗಳು ರಾಮನ ವನವಾಸದಿಂದ ಹಿಡಿದು ಅಕ್ಬರನ ಆಸ್ಥಾನದವರೆಗೂ ತನ್ನದೇ ಕಲ್ಪನೆ ತುಂಬಿರುತ್ತಿತ್ತು. ಆ ಕಲ್ಪನೆ ಹೊತ್ತು ವರ್ಜಿನ್ ಹೊರತಂದ ರಾಮಾಯಣ ಕಾಮಿಕ್ಸ್ ಓದಿದರೆ ಆಗುವುದು ಬರೇ ನಿರಾಶೆ. ದೃಶ್ಯಗಳು ಕಲಾತ್ಮಕವಾಗಿದ್ದರೂ ಅಮರಚಿತ್ರಕಥೆಯ ನಾಸ್ಟಾಲ್ಜಿಯಾ ಇದ್ದವರಿಗೆ ಇದು ಹಿಡಿಸದು. ಆದರೆ ಇದರ ಟಾರ್ಗೆಟ್ ಮಾರುಕಟ್ಟೆ - ಭಾರತವಾಗಿರಲಿಲ್ಲ. ಮುಂದೆ ಹೊರಬರುವ ವಿಡಿಯೋ ಗೇಮ್ ಮಾತ್ರ ಭಾರತದವರಿಗೂ ಲಭ್ಯವಾಗಬಹುದು)

ಈ ಕಾಮಿಕ್ಸ್ ನಲ್ಲಿರುವ ದೃಶ್ಯಾವಳಿ ಮಲ್ಟಿ ಪ್ಲೇಯರ್ ಆಟಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಆಟಕ್ಕೆ ಬೇಕಾದ ಹೊಡೆದಾಟ, ಬಡೆದಾಟ - ಯುದ್ಧ ಎಲ್ಲ ಕಥಾ ಪ್ರಸಂಗದಿಂದ ಇದ್ದದ್ದೇ. ಇದೇ ಬಹುಶಃ ಆಟದ ಜೀವಾಳ ಕೂಡ ಆಗಬಹುದು (ಹೆಚ್ಚಾಗಿ ಮಲ್ಟಿ ಪ್ಲೇಯರ್ ಗೇಮ್ಸ್ ಎಂದರೆ ಇದೇ ಅಲ್ಲವೆ?). ನಮ್ಮ ಸಂಸ್ಕೃತಿಯಲ್ಲಿ ಬೇರೂರಿರುವ ರಾಮಾಯಣಕ್ಕೆ, ಹೊಸ ಪೀಳಿಗೆಯವರು ಕಾಣಲಿರುವ ರಾಮಾಯಣವಾಗಿ ಇದರಿಂದ ಎಂತಹ ಹೊಸ ಸಂಸ್ಕೃತಿ ರೂಪುಗೊಳ್ಳುವುದು ಎಂಬುದನ್ನು ಕಾದು ನೋಡಬೇಕು.

Rating
No votes yet