ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.

ಈ ರೀತಿಯ ಒಂದು ವಿನೂತನ ಚಿಂತನೆ, ಕರ್ನಾಟಕ ರಾಜ್ಯದ ಎಲ್ಲಾ ಸೈಬರ್‍ ಕೆಫೆಗಳ ಗಣಕಗಳಲ್ಲಿ, ಶಾಲೆಗಳಲ್ಲಿನ ಗಣಕಗಳಲ್ಲಿ ಹಾಗೂ ಮಾರಾಟವಾಗುವ ಎಲ್ಲಾ ಗಣಕಗಳಲ್ಲೂ ಕನ್ನಡದ ತಂತ್ರಾಂಶ ತಜ್ಞರುಗಳಿಂದ, ಕನ್ನಡಕ್ಕಾಗಿಯೇ ರೂಪಿತವಾಗಿರುವ ಉಚಿತ ತಂತ್ರಾಂಶಗಳನ್ನು ಅನುಸ್ಥಾಪಿಸಲು, ಕನ್ನಡ ಜನರ ಅಧಿಕಾರ ಸ್ಥಾನವಾದ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ, ಕನ್ನಡ, ಸಂಸ್ಕೃತಿ, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಖಾತೆಗಳ ಸಚಿವರುಗಳಿಗೆ ಹಾಗೂ, ಇಲಾಖಾ ಕಾರ್ಯದರ್ಶಿಗಳಿಗೆ, ಮನವಿಯೊಂದನ್ನು ಸಲ್ಲಿಸುವುದು. ಇದಕ್ಕೆ ಪೂರಕವಾಗಿ, ಕ್ರಿಯಾತ್ಮಕವಾದ 'ಸಹಿ-ಸಂಗ್ರಹಣಾ ಅಭಿಯಾನ'. ತಂತ್ರಜ್ಞಾನ ಕ್ಷೇತ್ರದ ಹೊರಗಿನ ಪ್ರಪಂಚದೊಂದಿಗೆ ಬೆರೆಯುವ, ಅರಿಯುವ ಹಾಗೂ ಗೌರವಿಸುವ, ಅವಕಾಶವನ್ನು ಒದಗಿಸಿಕೊಡುವ, ಸಾಧ್ಯತೆಗಳನ್ನು ತೆರೆದಿಟ್ಟಿರುವ ಈ ಅಭಿಯಾನದಲ್ಲಿ ತೊಡಗಿಸಿಕೊಂಡವರ ಯಾದಿ ಬೆಳೆಯುತ್ತಾ, ಅದರ ಫಲವಾಗಿ, ಮನವಿಯ ಆಶಯವು ಹೆಚ್ಚು ಹೆಚ್ಚು ಕನ್ನಡಿಗರನ್ನು ತಲುಪಿ, ಅದಕ್ಕೆ ಅಭೂತಪೂರ್ವ ಬೆಂಬಲವು ಹರಿದುಬಂದು, ಕನ್ನಡ ಸಮಾಜದಲ್ಲಿ ಎಚ್ಚರವೊಂದನ್ನು ಮೂಡಿಸುತ್ತಿದೆ.

ಕನ್ನಡಿಗರ ನೆಚ್ಚಿನ ರಾಷ್ಟ್ರಕವಿ, ಹಿರಿಯರೂ ಆದ ಶ್ರೀಯುತ ಜಿ ಎಸ್ ಶಿವರುದ್ರಪ್ಪನವರು, ಮನವಿಗೆ ಬೆಂಬಲವಾಗಿ ತಮ್ಮ ಸಹಿಯನ್ನು ಲಗತ್ತಿಸಿ, ಸ್ವಪ್ರೇರಣೆಯಿಂದ ತಮ್ಮ ಸುತ್ತಲಿದ್ದವರನ್ನು ಉದ್ದೇಶಿಸಿ, ಸಹಿ ಹಾಕುವಂತೆ ಕೇಳಿಕೊಂಡಿರುತ್ತಾರೆ.

ಕವಿ, ಪ್ರಾಧ್ಯಾಪಕ ಪ್ರೊ ದೊಡ್ಡರಂಗೇಗೌಡರು, ಬೆಂಗಳೂರು ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಎಂ. ಏ. ಪೊನ್ನಪ್ಪರವರು, ಇತ್ತೀಚೆಗೆ ಮನವಿ ಪತ್ರಕ್ಕೆ ತಮ್ಮ ಸಹಿ ಲಗತ್ತಿಸಿ, ಬೆಂಬಲ ಸೂಚಿಸಿರುವ ಇತರ ಪ್ರಮುಖರು.

ಇವರುಗಳನ್ನು ಕಂಡು, ವೈಯುಕ್ತಿಕವಾಗಿ ಅವರುಗಳಿಂದ ಸಹಿ ಸಂಗ್ರಹಿಸುತ್ತಾ ಇರುವ ಸ್ವಯಂಸೇವಕರುಗಳೂ, ವಿವಿಧ ತೆರನಾದಂತಹ ವೃತ್ತಿಗಳಲ್ಲಿರುವವರು. ತಮ್ಮ ಒತ್ತಡದ ಬದುಕಿನ ನಡುವೆ, ಕನ್ನಡದ ಮೇಲಿನ ಅಭಿಮಾನದಿಂದ ಹಾಗೂ ಕ್ರಿಯಾಶೀಲತೆಯ ಮೇಲಿನ ನಂಬುಗೆಯಿಂದ, ಈ ಕಾಯಕದಲ್ಲಿ ತೊಡಗಿಸಿಕೊಂಡವರುಗಳು. ಅಂತಹ ವಿನಯವಂತಿಕೆಯನ್ನು ಹುಟ್ಟುಹಾಕಿರುವುದು ಈ ಅಭಿಯಾನದ ನಿಜವಾದ ಸಾಧನೆ.

ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಿಚ್ಛಿಸುವವರುಗಳು, ಮನವಿ ಪತ್ರವನ್ನು ಪಡೆಯಬಹುದಾದ ವಿಳಾಸ
http://www.kanlit.com/manavi.pdf

ವಂದನೆಗಳು

ಕನ್ನಡಸಾಹಿತ್ಯ.ಕಾಂ(http://www.kannadasaahithya.com,http://www.kanlit.com)ನ ಧ್ಯೇಯೋದ್ದೇಶಗಳಿಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ

Rating
No votes yet