ರಿಮೋಟ್ ಅರಣ್ಯೀಕರಣ

ರಿಮೋಟ್ ಅರಣ್ಯೀಕರಣ

ನನಗೊಬ್ಬರು ಸ್ನೇಹಿತೆಯಿದ್ದಾಳೆ. ಅವಳ ಹೆಸರು ಶ್ರೀಮತಿ ರಶ್ಮಿ ರಾಜೇಶ್. ವಾಸ್ತವ್ಯ ಅಮೆರಿಕ. ನಾನು ನೋಡಿದ್ದು ಒಮ್ಮೆ ಮಾತ್ರ ಅವರ ಮದುವೆಯಲ್ಲಿ. ಅಂತರ್ಜಾಲದಲ್ಲಿ ನನಗೆ ಪರಿಚಯವಾಗಿ, ಅವರ ಮದುವೆಗೆ ನಾನು Photographer ಆಗಿ ಬರಬೇಕೆಂದು ಕೇಳಿಕೊಂಡಳು. ಹಾಗೆ ಅವರ ಮದುವೆಯ ಚಿತ್ರಗಳನ್ನು ತೆಗೆಯುವ ಭಾಗ್ಯ ನನ್ನದಾಯಿತು. ಇದಾಗಿ ಬಹುಶ: ೨ ವರ್ಷವಾಯಿತು.
ಈ ಮಧ್ಯೆ ನನ್ನ ಮತ್ತು ಅವಳ ಮಧ್ಯೆ ಗಿಡಮರಗಳ ಬಗ್ಗೆ, ಅರಣ್ಯೀಕರಣದ ಬಗ್ಗೆ ನಮ್ಮ ಸಮಾನ ಆಸಕ್ತಿಯ ವಿನಿಮಯ ಆಗಿದೆ. ಇತ್ತೀಚೆಗೆ ಅವಳು ನನ್ನಲ್ಲಿ ಒಂದು ವಿಶೇಷವಾದ ಕೋರಿಕೆಯನ್ನು ಮುಂದಿಟ್ಟಳು. ಇನ್ನು ಕೆಲವು ದಿನಗಳಲ್ಲಿ ರಾಜೇಶ್ ಹುಟ್ಟುಹಬ್ಬವಿರುವುದಾಗಿಯೂ, ಆ ಪ್ರಯುಕ್ತ ನಾನು ನಮ್ಮ ಊರಿನಲ್ಲಿ ನಮ್ಮ ಸ್ವಂತ ಜಾಗದಲ್ಲಿ ಗಿಡಮರಗಳನ್ನು ನೆಡಿಸಬೇಕಾಗಿಯೂ, ಅದಕ್ಕೆ ತಗಲುವ ಖರ್ಚನ್ನು ತಾನು ಕೊಡುವುದಾಗಿಯೂ ಕೇಳಿಕೊಂಡಳು !. ನಾನೋ ಊರಿನಿಂದ ತುಂಬ ಹೊರಗಿದ್ದೇನೆ. ನನ್ನಮ್ಮನನ್ನು ಆ ಕೆಲಸಕ್ಕೆ ಹಚ್ಚಿದೆ. ಕೆಲವು ಮರಗಳ ನರ್ಸರಿ ಗಿಡಗಳನ್ನು ತಂದೆ ತಂದದ್ದಾಯಿತು. ಅವುಗಳನ್ನು ನೆಡಿಸಿದ ಬಳಿಕ ಅವಳಿಗೆ ಸುದ್ದಿ ಮುಟ್ಟಿಸಿದೆ. ಮೊನ್ನೆ ಊರಿಗೆ ಹೋಗಿದ್ದಾಗ ಅವುಗಳನ್ನು ನೋಡಿ ಆನಂದಿಸಿದೆ ಕೂಡ. ನಮ್ಮ ಸ್ಥಳದಲ್ಲಿ ನಡೆದ ಕೆಲಸಕ್ಕೆ ದುಡ್ಡು ತೆಗೆದುಕೊಳ್ಳುವುದು ನನ್ನಿಂದಾಗಲಿಲ್ಲ.
ಅವಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಕಾರ್ಯಗಳಿಗಾಗಿ ತನಗೆ ಪ್ರತಿವರ್ಷ ಖರ್ಚು ಮಾಡುವ ಉದ್ದೇಶವಿದೆಯೆಂದು ಕೇಳಿಕೊಂಡಿದ್ದಾಳೆ ಮತ್ತು ಯೋಗ್ಯ ಫಲಾನುಭವಿಗಳನ್ನು ಹುಡುಕುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾಳೆ. ನನಗೆ ಇನ್ನೂ ಯಾರೂ ಸಿಕ್ಕಿಲ್ಲ, ಇಷ್ಟರವರೆಗೆ!. ಊರಿನಲ್ಲಿ ರಬ್ಬರ್ ಕೃಷಿಗಾಗಿ, ಮತ್ತು ಇತರ ಅಭಿವೃಧ್ಧಿಯ ಹೆಸರಿನಲ್ಲಿ ಅರಣ್ಯ ಸರ್ವನಾಶದತ್ತ ಸಾಗಿದೆ. ಎಲ್ಲರೂ ಸವರುವವರೇ ಹೊರತು ನೆಡುವವರು ಯಾರೂ ಕಾಣಲಿಲ್ಲ !.
ನೋವಿನೊಂದಿಗೆ...
ವಸಂತ್ ಕಜೆ.
Rating
No votes yet

Comments