ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೨

ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೨

ಬಯೋಸ್ ಬಗ್ಗೆ ಓದ್ಲಿಕ್ಕೆ ಹೇಳಿದ್ದೆ, ನಿಮ್ಮ ಹೋಮ್ವರ್ಕ್ ಮುಗ್ಸಿದ್ರಾ? ;) ಇರಲಿ ಅದರ ಬಗ್ಗೆ ಆಮೇಲೆ ಚಿಂತಿಸುವ. ಈಗ ಮುಂದೆ ಓದಿ.

ಕಂಪ್ಯೂಟರ್ ಕಂಡುಹಿಡಿದ ದಿನಗಳಿಂದಲೂ ಅದನ್ನ ಚಾಲನೆಗೊಳಿಸುವ ವಿಧಾನಗಳಲ್ಲಿ ಅನೇಕ ಬದಲಾವಣೆಗಳು ಬಂದಿವೆ. ಪೇಪರ್, ಸ್ವಿಚ್ ಇತರೇ ಮಾಧ್ಯಮಗಳನ್ನ ಫೀಡ್ ಮಾಡುವ ತಂತ್ರಜ್ಞಾನ ಬಳಸಿ ಕಂಪ್ಯೂಟರ್ ಚಾಲನೆ ಮಾಡಬೇಕಾದಂತ ಕಾಲವೊಂದಿತ್ತು. ಇವತ್ತು, ಒಂದು ಸ್ವಿಚ್ ಅದುಮಿದರೆ ಸಾಕು ಸೂಪರ್ ಕಂಪ್ಯೂಟರ್ ಕೂಡ ಕಾರ್ಯನಿರ್ವಹಿಸಲಿಕ್ಕೆ ಶುರುಮಾಡ್ತದೆ. ಬೂಟ್ ಪ್ರಾಸೆಸ್ ಅನ್ನೂ ಒಂದು ಕಾರ್ಯಕ್ರಮ ಇದನ್ನ ಸುಲಭಗೊಳಿಸಿದರೂ ಅದೊಂದು ಕ್ಲಿಷ್ಟಕರ ಕಾರ್ಯ. ಅಂತಹ ಕೆಲಸವನ್ನ ಮಾಡ್ಲಿಕ್ಕೆ ತಾನೆ ಕಂಪ್ಯೂಟರ್ ಇರೋದು. 

ಮೊದಲೇ ಹೇಳಿದಂತೆ ಡೆಸ್ಕ್ಟಾಪ್ ಕಂಪ್ಯೂಟರ್ ಇರಲಿ, ಇಲ್ಲ ಸೂಪರ್ ಕಂಪ್ಯೂಟರ್ ಇರಲಿ, ಮೊಬೈಲ್, ಪಿ.ಡಿ.ಎ ಇರಲಿ ಅದರಲ್ಲಿರುವ ಲಿನಕ್ಸ್ ಬೂಟ್ ಆಗೋದು ಮಾತ್ರ ಆಶ್ಚರ್ಯಕರ ರೀತಿಯಲ್ಲಿ ಒಂದೇ ರೀತಿ. 

ಕೆಳಕಂಡ ಚಿತ್ರ ನಿಮಗೆ ಲಿನಕ್ಸ್ ಬೂಟ್ ಪ್ರಾಸೆಸ್ ನ ವಿವಿಧ ಹಂತಗಳನ್ನ ತೋರಿಸ್ತಿದೆ. :

ಇದೆಲ್ಲಾ ಸರಿ, ಇದನ್ನ ನಾವ್ಯಾಕೆ ತಿಳ್ಕೋಬೇಕು ಅಂತೀರಾ? 

ಯಾವುದೇ ಆಪರೇಟಿಂಗ್ ಸಿಸ್ಟಂ ಇರಲಿ, ಅದು ಹ್ಯಾಗೆ ಕೆಲಸ ಮಾಡ್ತದೆ ಅಂತ ಗೊತ್ತಿಲ್ಲದೇ ಇದ್ರೆ ಮುಂದೆ ಯಾವುದಾದರೊಂದು ತೊಂದರೆ ಬಂದಾಗ ಆ ತೊಂದರೆಯನ್ನ ನಿವಾರಿಸೋದು ಸಾಧ್ಯವಾಗಲ್ಲ. ಕೆಲ ಸಲ ವಿಂಡೋಸ್ ನಲ್ಲಿ ತೊಂದರೆಯಾದ್ರೆ ಅದನ್ನ ಸರಿಪಡಿಸೋದರ ಬದಲು ಸಂಪೂರ್ಣವಾಗಿ ರೀಇನ್ಟಾಲ್ ಮಾಡಿರ್ಬೇಕಲ್ಲ ನಿಮ್ಮಲ್ಲಿ ಕೆಲವರು? ಇದು ನಿಮ್ಮ ಅಮೂಲ್ಯ ಫೈಲ್ಗಳನ್ನ ಹಾಳು ಮಾಡಿದ್ದಿರಬಹುದು ಕೂಡ. ಇದೇನಾದರೂ ಸರ್ವರ್ಗಳಲ್ಲಾದರೆ ಏನಾಗಬಹುದು ಅಂತ ಒಮ್ಮೆ ಯೋಚಿಸಿ ನೋಡಿ. ಇದನ್ನ ತಪ್ಪಿಸ್ಬೇಕಾದ್ರೆ, ಬೂಟ್ ಪ್ರಾಸೆಸ್ ಇತ್ಯಾದಿಗಳ ಬಗ್ಗೆ ತಿಳಿದು ಕೊಳ್ಳೋದು ಮುಖ್ಯ. ತುಂಬಾ ಸುಲಭ ಸಹ. ಮುಂದಿನ ಸಾಲುಗಳು ನಿಮಗೆ ಅದರ ಬಗ್ಗೆ ಹೆಚ್ಚಿನ ವಿಷಯವನ್ನ ತಿಳಿಸ್ತವೆ. 

ಕಂಪ್ಯೂಟರ್ ಅನ್ನ ಆನ್ ಮಾಡಿದಾಗ ಅಥವಾ ರೀ-ಸೆಟ್ ಮಾಡಿದಾಗ, ಪ್ರಾಸೆಸರ್ ಒಂದು ನಿರ್ದಿಷ್ಟ  ಮೆಮೋರಿ ಲೊಕೇಷನ್ ನಿಂದ ತಂತ್ರಾಂಶದ ಸಾಲುಗಳನ್ನಕಾರ್ಯಗತಗೊಳಿಸುತ್ತದೆ. ಪರ್ಸನಲ್ ಕಂಪ್ಯೂಟರ್ನಲ್ಲಿ ಇದು ಬಯೋಸ್ ನಲ್ಲಿರುತ್ತದೆ. ಪ್ರಾಸೆಸರ್ ನಲ್ಲಿರುವ CPU (ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್) ಈ ಕಾರ್ಯಕ್ರಮವನ್ನ ಫ್ಲಾಷ್ / ROM ಚಿಪ್ ನ ಒಂದು ಮೆಮೋರಿ ಚಿಪ್ ನಿಂದ ಪಡೆದು ಕಾರ್ಯಗತ ಗೊಳಿಸ್ತದೆ. ಇದೆಲ್ಲಾ ಒಂದೇ ಫಲಿತಾಂಶವನ್ನ ನೀಡ್ತದೆ. ಒಟ್ಟಿನಲ್ಲಿ ಬಯೋಸ್ ಸಿಸ್ಟಂ ಬೂಟ್ ಆಗ್ಲಿಕ್ಕೆ ಬೇಕಿರೋ ಎಲ್ಲ ಹಾರ್ಡ್ವೆರ್ ಡಿವೈಸ್ ಗಳನ್ನ ಕಂಡು ಕೊಳ್ಳಬೇಕು (ಬಯೋಸ್ ಹ್ಯಾಗೆ ಕಾರ್ಯನಿರ್ವಹಿಸ್ತದೆ ಅನ್ನೋದು ಇನ್ನೂ ಕುತೂಹಲಕಾರಿ) ಹಾಗೂ ಯಾವ ಮಾಧ್ಯವಮವನ್ನ (ಡಿವೈಸ್) ಬೂಟ್ ಮಾಡಬೇಕು (ಅಂದ್ರೆ ಎಲ್ಲಿ ನಿಮ್ಮ ಆಪರೇಟಿಂಗ್ ಸಿಸ್ಟಂ ಇದೆ) ಅನ್ನೋದನ್ನ ತಿಳಿದುಕೊಳ್ಳಬೇಕು.

 

 

ಬಯೋಸ್ ಪೋಸ್ಟ್ ಸ್ಕ್ರೀನ್

ಸರಿ, ಬಯೋಸ್ ಬೂಟ್ ಡಿವೈಸ್ ಕಂಡುಕೊಂಡದ್ದಾಯಿತು. ಈಗ  ಮೊದಲ ಹಂತದ ಬೂಟ್ ಲೋಡರ್ ಅನ್ನ ಕಂಪ್ಯೂಟರ್ ನಲ್ಲಿರುವ ತಾತ್ಕಾಲಿಕ ಸ್ಮೃತಿ ಕೋಶ (RAM) ಮೆಮೋರಿಗೆ ಲೋಡ್ ಮಾಡಿ ಕಾರ್ಯನಿರ್ವಹಿಸುವಂತೆ ಮಾಡ್ಬೇಕು. ಈ ಬೂಟ್ ಲೋಡರ್ ನಿಮ್ಮ ಹಾರ್ಡ್ದಿಸ್ಕ್ / USB ಡಿಸ್ಕ್, ಫ್ಲಾಪಿ ಡಿಸ್ಕ್  ಮುಂತಾದವುಗಳ ಮೊದಲ ಮೆಮೋರಿ ಲೊಕೇಷನ್ (MBR) ನಲ್ಲಿರುತ್ತದೆ. ಇದರ ಬಗ್ಗೆ ಮತ್ತೊಮ್ಮೆ ದೀರ್ಘವಾಗಿ ಬರೆಯುತ್ತೇನೆ. ಇದರ ಮುಖ್ಯ ಕೆಲಸ ನಿಮ್ಮ ಡಿಸ್ಕ್ ನಲ್ಲಿರೋ ಪಾರ್ಟೀಷನ್ ಗಳ ಮಾಹಿತಿಯನ್ನ ತನ್ನಲ್ಲಿಟ್ಟುಕೊಂಡು, ಯಾವ ಪಾರ್ಟೀಷನ್ ನಲ್ಲಿ ಎರಡನೇ ಹಂತದ ಬೂಟ್ ಲೋಡರ್ ಇದೆ ಅನ್ನೋದನ್ನ ತಿಳಿದು ಅದನ್ನ ಮೆಮೋರಿಗೆ ಲೋಡ್ ಮಾಡೋದು. MBR ನಲ್ಲಿ ೫೧೨ ಬೈಟ್ಸ್ ನಟ್ಟು ಮಾತ್ರ ಮಾಹಿತಿಯನ್ನ ಸಂಗ್ರಹಿಸಿಡ ಬಹುದು. ಆದರೆ ಇದರ ಪಾತ್ರ ಮಾತ್ರ  ಬಹು ಮುಖ್ಯ.

ಎರಡನೇ ಹಂತದ ಬೂಟ್ ಲೋಡರ್ ಮೆಮೋರಿಗೆ ಲೋಡ್ ಆಗಿ ಕಾರ್ಯನಿರ್ವಹಿಸಲಿಕ್ಕೆ ಶುರುಮಾಡಿದಾಗ ಅದು ನಿಮ್ಮ ಮುಂದೆ ಸ್ಲ್ಪಾಷ್ ಸ್ಕ್ರೀನ್ (Spalsh Screen)ಅನ್ನ ನಿಮ್ಮ ಮುಂದಿಡುತ್ತದೆ. ನಿಮ್ಮ ಕಂಪ್ಯೂಟರ್ ನಲ್ಲಿ ಲಿನಕ್ಸ್ ಇನ್ಸ್ಟಾಲ್ ಆಗಿದ್ದರೆ, GRUB ಅನ್ನೋ ತಂತ್ರಾಂಶದ ಸ್ಪ್ಲಾಷ್ ಸ್ಕ್ರೀನ್ ನಿಮ್ಮ ಮುಂದೆ ಲಿನಕ್ಸ್ ಮತ್ತು ಇತರೆ ಆಪರೇಟಿಂಗ್ ಸಿಸ್ಟಂಗಳನ್ನ ಆಯ್ಕೆಯನ್ನ ತೋರಿಸ್ತದೆ. ಕೆಳಗಿನ ಚಿತ್ರದಲ್ಲಿ ಅದನ್ನ ನೀಡಲಾಗಿದೆ. 

GRUB ಎರಡನೇ ಹಂತದ ಬೂಟ್ ಲೋಡರ್.

ಈ ಹಂತದಲ್ಲಿ ನೀವು ಲಿನಕ್ಸ್ ಅನ್ನು  ಆಯ್ಕೆ ಮಾಡಿಕೊಂಡಾಗ ಲಿನಕ್ಸ್ ಕರ್ನೆಲ್ ಇಮೇಜ್ ಮತ್ತು ಆಪ್ಶನಲ್ ಪ್ರಾರಂಭಿಕ RAM ಡಿಸ್ಕ್ (ಇದರಲ್ಲಿ ತಾತ್ಕಾಲಿಕ root ಫೈಲ್ ಸಿಸ್ಟಂ ಇರತ್ತೆ ) ಅನ್ನುನಿಮ್ಮ ಕಂಪ್ಯೂಟರಿನ ಮೆಮೋರಿಗೆ ಲೋಡ್ ಮಾಡಲಾಗುತ್ತದೆ. ಕರ್ನೆಲ್ ಇಮೇಜ್ ಮೆಮೋರಿಗೆ ಲೋಡ್ ಆದ ನಂತರ ಗ್ರಬ್ (ಎರಡನೇ ಹಂತದ ಬೂಟ್ ಲೋಡರ್) ಬೂಟ್ ಪ್ರಾಸೆಸ್ ನ ನಿಯಂತ್ರಣವನ್ನು ಕರ್ನೆಲ್ ಇಮೇಜಿಗೆ ನೀಡುತ್ತದೆ. ಕಂಪ್ರೆಸ್ ಆಗಿದ್ದ ಕರ್ನೆಲ್ ಈ ಹಂತದಲ್ಲಿ ಡಿ-ಕಂಪ್ರೆಸ್ ಆಗಿ, ಮುಂದಿನ ಕಾರ್ಯಕ್ಕೆ ತನ್ನನ್ನ ತಾನು ಅಣಿ ಮಾಡಿ ಕೊಳ್ಳುತ್ತದೆ (Kernel Initialization Phase).  ಈ ಹಂತದಲ್ಲಿ ಎರಡನೇ ಹಂತದ ಬೂಟ್ ಲೋಡರ್ ನಿಮ್ಮ ಸಿಸ್ಟಂನ ಹಾರ್ಡ್ವೇರ್ ಅನ್ನು ಎಣಿಸಿ, ಚೆಕ್ ಮಾಡುವುದರೊಂದಿಗೆ, root ಡಿವೈಸ್ ಅನ್ನು ಮೌಂಟ್ ಮಾಡುತ್ತದೆ (ಹಾರ್ಡಿಸ್ಕ್ ಅನ್ನು ಉಪಯೋಗಿಸಲಾಗುವಂತೆ ಅಣಿ ಮಾಡುವ ಕೆಲಸ mount) ಹಾಗು ಹಾರ್ಡ್ವೇರ್ ಗಳು ಕಾರ್ಯನಿರ್ವಹಿಸಲಿಕ್ಕೆ ಬೇಕಾದ ಕರ್ನೆಲ್ ಮಾಡ್ಯೂಲ್ ಗಳನ್ನ ಮೆಮೋರಿಗೆ ಲೋಡ್ ಮಾಡಲಾಗುತ್ತದೆ. 

ಇದಾದ ನಂತರವೇ ಬಳಕೆದಾರನಿಗೆ ಬೇಕಾದ ಮೊದಲನೇ ಕಾರ್ಯಕ್ರಮ ಶುರುವಾಗುವುದು. ಇದೇ Init ಅಥವಾ user-space ಪ್ರೋಗ್ರಾಮ್. ಮುಂದೆ ಇನ್ನೂ ಕ್ಲಿಷ್ಟಕರವಾದ ಸಿಸ್ಟಂ ಪ್ರೊಗ್ರಾಮ್ ಗಳು ತಮ್ಮ ಕೆಲಸಕ್ಕೆ ಅಣಿಯಾಗ್ತವೆ ಮತ್ತು ನಿಮಗೆ ಕಂಪ್ಯೂಟರ್ ಉಪಯೋಗಿಸಲಿಕ್ಕೆ ಸಾಧ್ಯವಾಗುತ್ತವೆ. 

ಈ ಮೆಲ್ಕಂಡ ಲೇಖನ ನಿಮಗೆ ಲಿನಕ್ಸ್ ಬೂಟ್ ಪ್ರಾಸೆಸ್ ನ ಒಂದು ಸಂಕ್ಷಿಪ್ತ ಚಿತ್ರಣವನ್ನ ಮಾತ್ರ ನೀಡ್ತಿದೆ. MBR, GRUB, Kernel, Init ಅದರ ಜೊತೆಗೆ ಬಯೋಸ್ ನ ಕೆಲಸಗಳನ್ನ ಒಮ್ಮೆ ಇಣುಕಿ ನೋಡುವುದು ಒಂದು ಹೊಸ ಪ್ರಪಂಚವನ್ನೇ ಇಣುಕಿ ನೋಡಿದಂತೆ. ಇದರ ನಡುವೆ ನಿಮಗೆ ಆಶ್ಛರ್ಯಕರ ಅನ್ನೋ ಮಾಹಿತಿಗಳು ಸಿಗ್ತವೆ. ಲಿನಕ್ಸ್ ವಿಂಡೋಸ್ ಗಿಂತ ಹೇಗೆ ಭಿನ್ನ, ಅದು ವೇಗ ಮತ್ತು ಸೆಕ್ಯೂರಿಟಿಯ ಅನುಭವವನ್ನ ತನ್ನ ಬಳಕೆದಾರರಿಗೆ ನೀಡ್ತಾ ಬಂದಿದೆ ಅನ್ನೋದು ಕೂಡ ನಿಮಗೆ ತಿಳಿಯುತ್ತದೆ. ಇವುಗಳ ಬಗ್ಗೆ ಮುಂದೆ ಲಿನಕ್ಸಾಯಣ ಬೆಳಕು ಚೆಲ್ಲಲಿದೆ. 

ಮುಂದಿನ ಹೋಮ್ ವರ್ಕ್ ;) :  ಮೇಲೆ ಹೇಳಿದಂತೆ ನೀವೇ ಸ್ವಲ್ಪ ಲಿನಕ್ಸ್ ಪ್ರಪಂಚದ ಕಡೆ ಇಣುಕು ನೋಡ ಬೀರುವವರಿದ್ದರೆ ನಿಮಗಿದೆ ಇಲ್ಲಿ ಒಂದು ಚ್ಯಾಲೆಂಜ್. ಲಿನಕ್ಸ್ ಕರ್ನೆಲ್ ಮಾಡ್ಯೂಲ್ ಅಂತ ಮೇಲೆ ಹೇಳ್ತಿದ್ದೆ ಅಲ್ವಾ? ಯಾಕೆ ಅದು ಮಾಡ್ಯುಲರ್ ರೂಪದಲ್ಲಿದೆ? ಅದು ಲಿನಕ್ಸ್ ಅನ್ನು ನನ್ನ ಹಳೆಯ ಫೋನಿನ ೩೨ ಎಂ.ಬಿ ಕಾರ್ಡಿನಲ್ಲಿ ಸ್ಥಾಪಿಸಿ ಉಳಿಸಲಿಕ್ಕೆ ಹ್ಯಾಗೆ ಸಹಾಯ ಮಾಡ್ತು ಅಂತ ಕಂಡು ಹಿಡಿದು ನೋಡಿ. ಮತ್ತೆ ಸಿಗುವ. 

Rating
No votes yet

Comments