ಲಿನಕ್ಸಾಯಣ -೩- ಬದಲಾವಣೆಯ ಬಯಸಿ
ಮನುಜ ಮತ:
ಎಲ್ಲೋ ಹುಡುಕಿದೆ ಇಲ್ಲದ ತಂತ್ರಾಂಶ
ಕಣ್ಣಿದ್ದೂ ಕಾಣದ ಕುರುಡನಂತೆ.
ಕಂಕುಳಲ್ಲಿಟ್ಟು ಕೊಂಡ್ ಲಿನಕ್ಸ್
ನೀಲ ಕಿಂಡಿಯ ಮದ್ಯೆ ಜೀವ ಸೈದನಂತೆ.
ಲಿನಕ್ಸ್,ಯುನಿಕ್ಸ್... ಈ "ನಿಕ್ಸ್"ಗ ಳ ಬಗ್ಗೆ ಮಾತಾಡ್ಲಿಕ್ಕೆ ಶುರು ಮಾಡಿದ್ರೆ, ಏನೋದೊಡ್ಡ ವಿಷಯದ ಬಗ್ಗೆ ಮಾತಾಡ್ತಿದೀನಿ ಅಂದ್ಕೊಳ್ಳೊರು ತುಂಬಾ ಮಂದಿ. ನೀವು ಉಪಯೋಗಿಸಿ ನೋಡಿ ಚೆನ್ನಾಗಿದೆ ಅಂದ್ರೆ ಬ್ಯಾಡ್ ಮರಾಯ, ಯಾರ್ ತಲೆ ಕೆಡಿಸ್ಕೊಳ್ತಾರೆ ಅನ್ನೊರು ಮತ್ತಿಷ್ಟು ಮಂದಿ. ಅಂದ್ರೆ ಇಲ್ಲಿ ಹೊಸದನ್ನ ಪ್ರಯತ್ನಿಸಿ ನೋಡ್ಲಿಕ್ಕೆ ಉತ್ಸಾಹ ಇಲ್ಲದಿರೊದು ಮತ್ತು ಎಲ್ಲಿ ನಾನೀಗಾಗ್ಲೆ ಕಲ್ತಿರೊದನ್ನ ಮರೆತು ಹೊಗ್ತೇನೋ ಅನ್ನೋ ಹೆದರಿಕೆ , ನನ್ನ ಕಂಪ್ಯೂಟರ್ ಎಲ್ಲಿ ಹಾಳಾಗೊಗತ್ತೊ ಅನ್ನೊದರ ಭಯ ನಿಮ್ಮನ್ನ ಕಾಡ್ತಿರ ಬಹುದು. ಅದೇ ವಿಷಯ ನಿಮಗೆ ಬೇರೆಯವರು ಉಪಯೋಗಿಸ್ತಿರೊ ವಿಂಡೋಸ್ ಹಾಗು ಇನ್ನಿತರ ತಂತ್ರಾಂಶಗಳನ್ನ ೧೦ರೂಪಾಯಿಯ ಸಿ.ಡಿ . ನಲ್ಲಿ ಕಾಪಿ ಮಾಡ್ಕೊಳ್ಲಿಕ್ಕೆ ಕಾರಣ ಆಗಿರ್ಬೇಕು. ಎನಾದ್ರೂ ಆದ್ರೆ ಅವರನ್ನೆ ಸಹಾಯ ಕೇಳ ಬಹುದಲ್ಲ ಇದು ತಲೆ ಕೆಡಿಸಿ ಕೊಳ್ಳೊದಕ್ಕಿಂತ ಸುಲಭದ ಕೆಲಸ . ಎಲ್ಲರೂ ಬಳಸೊದನ್ನೇ ತಾವೂ ಬಳಸೊ ಮಡಿವಂತಿಕೆ ಮತ್ತೆ ಕೆಲವರಿಗೆ. ಪೈರಸಿ ಮಾಡ್ತೀರಲ್ರಿ ಅಂದ್ರೆ ಸದ್ದೇ ಇಲ್ಲ!
ಕಂಪ್ಯೂಟರ್ ಕೊಳ್ಳಬೇಕಾದಾಗ ಬೇರೆಯವರನ್ನ ಕಂಡು ಸಲಹೆ ಪಡೆಯೋ ಅಷ್ಟು ಬರವಸೆ ಅವರ ಮೇಲೆ ಎಷ್ಟಿತ್ತೋ ಅಷ್ಟೇ ಬರವಸೆಯನ್ನ ನನ್ನಲ್ಲಿಟ್ಟು , ಲಿನಕ್ಸ್ ಬಗ್ಗೆ ಕೊಂಚ ತಿಳಿಯೋ ಪರಿಶ್ರಮ ನೀವ್ ಪಟ್ಟಿದ್ದೇ ಆದ್ರೆ ಯಾರ ಹಂಗೂ ಇಲ್ಲದ ಆಪರೇಟಿಂಗ್ ಸಿಸ್ಟಂ ಅನ್ನ ನೀವು ಉಪಯೋಗಿಸ್ಲಿಕ್ಕೆ ಶುರು ಮಾಡ್ಬಹುದು.
ಲಿನಕ್ಸ ಮತ್ತಿತರ ತಂತ್ರಾಂಶಗಳನ್ನ ನಮ್ಮೆಲ್ಲರಿಗೆ ಸಿಗೂ ಹಾಗೆ ಮಾಡಿದ್ದು ರಿಚರ್ಡ್ ಸ್ಟಾಲ್ಮನ್ (ಆರೆಮ್ಮೆಸ್ ) ರವರು ಪ್ರಾರಂಭಿಸಿದ ಫ್ರೀ ಸಾಫ್ಟ್ವೇರ್ ಫೌಂಡೇಶನ್ . ಸಮುದಾಯದ ಒಳಿತಿಗಾಗಿ ಶುರುವಾದ ಈ ಪ್ರತಿಷ್ಠಾನ ತನ್ನ ಪ್ರತಿನಿಧಿಗಳಿಂದ ಅಭಿವೃದ್ದಿ ಮಾಡಲ್ಪಟ್ಟ ತಂತ್ರಾಂಶಗಳನ್ನ, ಬಳಕೆದಾರರು ಇತರರ ಜೊತೆ ಹಂಚಿಕೊಳ್ಳಲು, ಬಳಸಲು, ಅದನ್ನ ಮತ್ತೆ ತಮ್ಮ ಅನುಕೂಲತೆಗೆ ತಕ್ಕಂತೆ ಬದಲಿಸುವ ಸ್ವಂತಂತ್ರವನ್ನ ನೀಡುವ ಜಿ.ಪಿ.ಎಲ್ ಲೈಸೆನ್ಸ್ (ಪರವಾನಗಿ) ಯೊಂದಿಗೆ ಬಿಡುಗಡೆ ಮಾಡ್ತಾಬಂದಿದೆ. ಈ ಸಂಸ್ಥೆಯ ಬಗ್ಗೆ ಮತ್ತು ಜಿ.ಪಿ.ಎಲ್ ಬಗ್ಗೆ ಹೆಚ್ಚು ತಿಳಿದು ಕೊಳ್ಳಲು ನೋಡಿ (ವಿಳಾಸ : http://www.gnu.org ಕನ್ನಡ ಆವೃತ್ತಿ : http://www.gnu.org/home.kn.shtml). (ಈ ವೆಬ್ ಸೈಟ್ ಸಂಪೂರ್ಣವಾಗಿ ಕನ್ನಡದಲ್ಲಿಲ್ಲ. ಆಸಕ್ತರು ಇದನ್ನ ಕನ್ನಡದಲ್ಲಿ ಅನುವಾದಿಸಲಿಕ್ಕೆ ಸಹಾಯ ಮಾಡಬಹುದಾಗಿದೆ . http://dev.sampada.net/GNU_dot_org_translations)
ಲಿನಕ್ಸನ ಜೀವಾಳ ಕರ್ನೆಲ್. ಇದನ್ನ ಬರೆದವರು "ಲಿನುಸ್ ಟೋರ್ವಾಲ್ಡಿಸ್". ನೀವು ದಿನಾ ನಿಮ್ಮ ದಿನಚರಿಗೆ ಬಳಸೋ ಪ್ರೊರ್ಗಾಮ್ ಗಳನ್ನ ನಿಯಂತ್ರಿಸಿ ನಿಮ್ಮ ಕಂಪ್ಯೂಟರಿನಲ್ಲಿರುವ ಹಾರ್ಡ್ವೇರ್ ಗಳಿಗೆ ಟ್ರಾಫಿಕ್ ಪೊಲೀಸಿನವರಂತೆ ಸಂಕೇತಗಳನ್ನ ಕಳಿಸುವ,ತಿಳಿಸುವ ಕೆಲಸ ಕರ್ನೆಲ್ ನದು. ಇದರ ಬಗ್ಗೆ ಮತ್ತೆ ವಿವರವಾಗಿ ತಿಳಿಸ್ತೇನೆ. ಹ್ಯಾಗೆ ನಿಮ್ಮ ಪ್ರೊರ್ಗಾಮ್ ಗಳು ಕಾರ್ಯನಿರ್ವಹಿಸ್ತವೆ ಅನ್ನೂ ಕುತೂಹಲ ನಿಮ್ಮಲ್ಲಿದ್ದರೆ ಅದನ್ನ ಸಂಪೂರ್ಣವಾಗಿ ಅರ್ಥಮಾಡ್ಕೊಳ್ಳಿಕ್ಕೆ ಲಿನಕ್ಸ್ ಗಿಂತ ಚಂದದ ಆಪರೇಟಿಂಗ್ ಸಿಸ್ಟಂ ನಿಮಗೆ ಸಿಗಲಿಕ್ಕಿಲ್ಲ.
ಕಾಲ ಬದಲಾದಂತೆ ಹೊಸತು ಮನೆ ಮಾಡ್ಕೊಳ್ತದೆ. ಹೊಸತನ್ನ ನೋಡುವಂತಹವರು ನಾವಾಗ್ಬೇಕು. ಹೊಸತು ಚೆನ್ನಿದ್ದರೆ ಉಪಯೋಗಿಸಬಾರದೇಕೆ?ಕೆಟ್ಟದ್ದಾಗಿದ್ದರೆ ದೂರವಿಡಿ ತಪ್ಪಿಲ್ಲ. ಬದಲಾವಣೆಗಳನ್ನ ಪರಿಶೀಲಿಸದೆ ನಿರ್ಲಕ್ಷಿಸದಿರಿ.
ಇದೆಲ್ಲಾ ಓಕೆ, ನೀವೆಲ್ಲಾ ಉಬಂಟು (ಇದೂ ಲಿನಕ್ಸ್ ನ ಒಂದು ಅವತಾರ) ಉಪಯೋಗಿಸಬಾರ್ದೇಕೆ? ಒಂದು ಟೆಸ್ಟ ರನ್ ನೋಡೇಬಿಡಿ. ಇದಕ್ಕೆ ನೀವು ಲಿನಕ್ಸ್ ಇನ್ಸ್ಟಾಲ್ ಮಾಡಬೇಕಿಲ್ಲ. ಉಬುಂಟು ಲೈವ್ ಸಿ.ಡಿ ಇಂದ ನಿಮ್ಮ ಕಂಪ್ಯೂಟರ್ ಚಾಲನೆ ಮಾಡಿದರಾಯಿತು. (ವಿಂಡೋಸ್ ಇನ್ಸ್ಟಾಲ್ ಮಾಡೋದಕ್ಕಿಂತ ಮುಂಚೆ ನಿಮ್ಮ ಕಂಪ್ಯೂಟರ್ ನ ಸಿ.ಡಿ ಇಂದ ಬೂಟ್ ಮಾಡಿದ್ರಲ್ಲ ಹಾಗೆ.) ನೀವು ಲಿನಕ್ಸ್ ಹ್ಯಾಗೆ ಕಾಣತ್ತಂತ ನೋಡ ಬಹುದು. ನಿಮ್ಮ ದೈನಂದಿನ ಕಾರ್ಯಗಳಿಗೆ ಬೇಕಾದ ಅದೆಷ್ಟೋ ತಂತ್ರಾಂಶಗಳು ಇದರಲ್ಲೇ ಅಡಕಿ ಕೊಂಡಿರೋದನ್ನ ನೀವ್ ಕಾಣ್ತೀರ. ನಿಮ್ಮ ಮನೇಲಿರೋ ಬ್ರಾಡ್ ಬ್ಯಾಂಡ್, ವೈರ್ಲೆಸ್ (ನಿಸ್ತಂತು) ನೆಟ್ವರ್ಕ್ ಕೂಡ ನಿಮಿಷದಲ್ಲೇ ಉಪಯೋಗಿಸ್ಲಿಕ್ಕೆ ಶುರುಮಾಡಬಹುದು. ಇನ್ನಷ್ಟನ್ನ ಮುಂದಿನ ಭಾಗದಲ್ಲಿ ತಿಳಿಸ್ತೇನೆ.
ಉಬುಂಟು ಸಿ.ಡಿ ನಿಮಗೆ ಉಚಿತವಾಗಿ ಇಲ್ಲಿ ಸಿಗುತ್ತದೆ : http://www.ubuntu.com
ಸಿ.ಡಿ ನಿಮಗೆ ಸಿಗೋದು ತಡ ಆದ್ರೆ ನನಗೆ ತಿಳಿಸಿ. ನಾನದನ್ನ ಕಾಪಿ ಮಾಡಿ ಕೊಡಬಲ್ಲೆ. (ಪೈರಸಿ ಅಲ್ಲಾ ರೀ, ಇದು ಜಿ.ಪಿ.ಎಲ್ ನನಗೆ ನೀಡಿರುವ ಸ್ವಾತಂತ್ರ.). ಉಬುಂಟು ಜಿ.ಪಿ.ಎಲ್ ಅಡಿಯಲ್ಲಿ ಬಿಡುಗಡೆಯಾಗಿದೆ.
ನೀವು ದಿನವಿಡೀ ಉಪಯೋಗಿಸೋ ತಂತ್ರಾಂಶಗಳನ್ನ ಪಟ್ಟಿ ಮಾಡಿ ನನಗೆ ಕಳಿಸ್ತೀರಾ? ನಾನ್ ಬರೆಯೋ ಮುಂದಿನ ಆವೃತ್ತಿಗಳಲ್ಲಿ ಅವನ್ನ ಲಿನಕ್ಸ್ನಲ್ಲಿ ಹ್ಯಾಗೆ ಪಡಿಬಹುದು ಅನ್ನೋದನ್ನ ತಿಳಿಸ್ಲಿಕ್ಕೆ ಸಹಾಯ ಆಗತ್ತೆ.