ಲೋಕಸಭೆಗೆ ನಡೆವ ಚುನಾವಣೆಯಲ್ಲಿ ಕನ್ನಡಪರ ಅಭ್ಯರ್ಥಿಗಳನ್ನೆ ಗೆಲ್ಲಿಸಿ - ಕರವೇ ಅಧ್ಯಕ್ಷ ನಾರಾಯಣ ಗೌಡರ ಕರೆ

ಲೋಕಸಭೆಗೆ ನಡೆವ ಚುನಾವಣೆಯಲ್ಲಿ ಕನ್ನಡಪರ ಅಭ್ಯರ್ಥಿಗಳನ್ನೆ ಗೆಲ್ಲಿಸಿ - ಕರವೇ ಅಧ್ಯಕ್ಷ ನಾರಾಯಣ ಗೌಡರ ಕರೆ

ನಮಸ್ತೆ ಗೆಳೆಯರೆ,
ಈ ವಿಶಯದ ಬಗ್ಗೆ ಸಂಪದದಲ್ಲೂ ಚರ್ಚೆ ಆಗಿದೆ, ಕರ್ನಾಟಕದಲ್ಲಿ ಈ ಸರ್ತಿಯ ಲೋಕಸಭೆ ಚುನಾವಣೆಯಲ್ಲಿ ಕನ್ನಡ ಪರ ಮತ್ತು ಕನ್ನಡ ನಾಡಿನ ಪರವಾಗಿ ಯೋಚಿಸುವ ಅಭ್ಯರ್ಥಿಗೆ ಮತಹಾಕಬೇಕು ಅನ್ನೋದು ಎಲ್ಲರ ಒಕ್ಕೊರಲಿನ ಅಭಿಪ್ರಾಯ. ಇದರ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಹೋರಾಟ ಮಾಡುತ್ತಾ ಬಂದಿದ್ದ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡರು ಹೇಳಿರುವ ಮಾತುಗಳನ್ನ ಓದಿ. ಓಟಿಗಾಗಿ ಏನು ಬೇಕಾದರು ಮಾಡಲು ಹಿಂಜರಿಯದ ರಾಜಕೀಯ ಪಕ್ಷಗಳಿಗೆ ತಮ್ಮ ಮಾತಿನ ಚಾಟಿ ಏಟನ್ನು ಬೀಸಿದ್ದಾರೆ. ಈ ಲೇಖನವನ್ನ ಸಂಭಂಧ ಪಟ್ಟವರಿಂದ ಅನುಮತಿ ಪಡೆದುಕೊಂಡು ಇಲ್ಲಿ ಹಾಕುತ್ತಿದ್ದೇನೆ.

ದಿನಾಂಕ-೧೬-೦೪-೨೦೦೯

ಅಕ್ಕರೆಯ ಕನ್ನಡಿಗ,

ಲೋಕಸಭಾ ಚುನಾವಣೆಗಳು ಹತ್ತಿರವಾಗಿವೆ. ಕಳೆದ ತಿಂಗಳಿನಲ್ಲಿ ನಡೆದ ಕೆಲವು ಘಟನೆಗಳು ಈ ದಿನ ನಮ್ಮ ಮತದಾನದ
ಮಹತ್ಚವನ್ನು ಸಾರಿ ಹೇಳುತ್ತಿದೆ. ಕನ್ನಡನಾಡಲ್ಲಿ ರಾಜಕೀಯ ಪಕ್ಷಗಳು ಮತಗಳಿಕೆಗಾಗಿ ಪರಭಾಷಿಕರನ್ನು ಓಲೈಸುವ
ಭರದಲ್ಲಿ ನಾಡಿನ ಹಿತಾಸಕ್ತಿಗೇ ಮಾರಕವಾಗಿ ನಡೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಗರ
ಪಾಲಿಕೆಯ ಹೊಸ ಕಟ್ಟಡದ ಮೇಲೆ ಎಂ.ಇ.ಎಸ್. ನ ಮೇಲುಗೈ ಗುರುತಾಗಿ ಎಂ.ಇ.ಎಸ್. ನ ಬಾವುಟವನ್ನು ಹಾರಿಸಲು
ಮುಂದಾದ ಘಟನೆ ನಡೆಯಿತು. ಎಂ.ಇ.ಎಸ್ಸಿನ ಬೆರಳಿಣಿಕೆಯ ಮೆರವಣಿಗೆಗಾರರ ಜೊತೆಗೆ ಬೆಳಗಾವಿಯ ಸಂಸದರಾದ
ಸುರೇಶ್ ಅಂಗಡಿಯವರು ಕೈಜೋಡಿಸಿ; ಕೈಲಿ ಎಂ.ಇ.ಎಸ್. ಧ್ವಜ ಹಿಡಿದು ಪಾಲಿಕೆ ಕಟ್ಟದದ ಕಡೆ ಅಡಿಯಿಟ್ಟರು. ತಾವು
ಕನ್ನಡ ನಾಡಿನ ಸಂಸದ; ಎಂ.ಇ.ಎಸ್ ನಾಡೊಡೆಯಲು ಮುಂದಾಗಿರುವ ಪಕ್ಷ ಅನ್ನೋದನ್ನೆಲ್ಲಾ ಮರೆತು ಈ ಕೃತ್ಯಕ್ಕೆ
ಅವರು ಶಾಸಕ ಸಂಜಯ್ ಪಾಟೀಲರ ಜೊತೆಗೂಡಿ ಮುಂದಾದರು. ಈ ಸಭೆಯಲ್ಲಿ ಕನ್ನಡ ವಿರೋಧಿ ಘೋಷಣೆಗಳಿದ್ದರೂ
ಸಂಸದರು ಮತ್ತು ಶಾಸಕರು ತುಟಿಪಿಟಕ್ಕೆನ್ನಲಿಲ್ಲ. ಮತ್ತೆ ನಿಪ್ಪಾಣಿಯ ಚುನಾವಣಾ ಭಾಷಣದಲ್ಲಿ ಶಾಸಕರು ಮುಖ್ಯಮಂತ್ರಿಗಳ
ಎದುರಿನಲ್ಲೇ ಮರಾಠಿ ಭಾಷಣಗಳನ್ನು ಮಾಡಿದರು. ಶಿವಮೊಗ್ಗದಲ್ಲಿ ಭಾ.ಜ.ಪಾ. ಸಚಿವ ಈಶ್ವರಪ್ಪರವರ ಉಪಸ್ಥಿತಿಯಲ್ಲಿ ತಮಿಳು
ಸಮಾವೇಶವನ್ನು ನಡೆಸಿ ತಮಿಳು ಭಾಷಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ಹೇಳಿದರು. ಬೆಂಗಳೂರಿನಲ್ಲಿ
ತೆಲುಗು ಭಾಷಿಕರ ಸಮ್ಮೇಳನವೊಂದನ್ನು ನಡೆಸಲಾಯಿತು. ನಾಡಿನ ಮುಖ್ಯವಾಹಿನಿಯಲ್ಲಿ ಬೆರೆತಿರುವ ಪರಭಾಷಿಕರನ್ನೂ
ಅನ್ಯರನ್ನಾಗಿಸಿ, ಮುಖ್ಯವಾಹಿನಿಯಿಂದ ಬೇರೆಯಾಗಿಸುವ ಹೀನ ಕಾರ್ಯಕ್ಕೆ ರಾಜಕೀಯ ಪಕ್ಷಗಳು ಮುಂದಾಗುವುದನ್ನು
ವಿರೋಧಿಸಿ ಅಂದು ಅಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷ
ಡಿ.ಎಂ.ಕೆ ಜೊತೆ ಸಖ್ಯಕ್ಕೂ, ಜನತಾದಳ ಅಣ್ಣಾ ಡಿ.ಎಂ.ಕೆ ಜೊತೆ ಹೊಂದಾಣಿಕೆಗೂ ಮುಂದಾಗಿರುವುದು ಖಂಡನೀಯವಾಗಿದೆ.

ಇಂತಹ ಹೊಂದಾಣಿಕೆಗಳಾಗುವಾಗ ನಾಡಹಿತವನ್ನು ಬಲಿಕೊಡುವುದಿಲ್ಲ ಎನ್ನುವ ಭರವಸೆಯೇ ಇಲ್ಲವಾಗಿದೆ. ಬಂಧುಗಳೇ,
ಕನ್ನಡ ವಿರೋಧಿ ನಿಲುವಿನ ಅಭ್ಯರ್ಥಿಗಳು ಅದ್ಯಾವ ಪಕ್ಷಕ್ಕೇ ಸೇರಿರಲಿ ಅಂತಹವರನ್ನು ಮತಪೆಟ್ಟಿಗೆಯಲ್ಲಿ ತಿರಸ್ಕರಿಸಿ
ಎಂದು ಈ ಮೂಲಕ ಕರೆಕೊಡಲು ಬಯಸುತ್ತೇನೆ. ಕನ್ನಡ ಕರ್ನಾಟಕ ಮತ್ತು ಕನ್ನಡಿಗರ ಹಿತ ಮತ್ತು ಏಳಿಗೆಗಳ ಬಗ್ಗೆ
ಕಾಳಜಿಯಿಲ್ಲದ, ಸಂಸತ್ತಿನ ಅಧಿವೇಶನಕ್ಕೆ ತಪ್ಪಿಸುವ ಮತ್ತು ನಾಡಪರವಾಗಿ ದನಿ ಎತ್ತದ ರಾಜಕಾರಣಿಗಳ ವಿರುದ್ಧವಾಗಿ
ಮತ ಚಲಾಯಿಸೋಣ. ಕನ್ನಡಿಗರ ಹಿತ ಕಾಯದ ರಾಜಕಾರಣಕ್ಕೆ ನಾಡಲ್ಲಿ ಉಳಿಗಾಲವಿಲ್ಲವೆಂದು ಸಾರೋಣ.

ವಂದನೆಗಳು

ಟಿ.ಏ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆಯ

Rating
No votes yet

Comments