ವಧು ಪರೀಕ್ಷೆ

ವಧು ಪರೀಕ್ಷೆ

ಹುಡುಗಿಗೆ ಮನ್ಮಥನ ಕನಸು...... ನಾಳೆ
ನಡೆಯಲಿರುವ ಪರೀಕ್ಷೆಯಲ್ಲಿ ಮನ್ಮಥನ ಮೆಚ್ಚಿಸುವ ಪರಿಗೆ
ಇಂದೇ ಶುರುವಿಟ್ಟುಕೊಂಡಳು ತಪಸ್ಸು .
ಮಧ್ಯೆ ಅಮ್ಮ ಹೇಳಿದ ಮಂತ್ರಗಳ ಪಟನೆ,
ಕನ್ನಡಿಗೋ ನಾಚಿಕೆ ,ಹುಡುಗಿಗಿಲ್ಲ ಅಂಜಿಕೆ .

ನಾಳೆ ಎಂಬ ನಾಳೆ ಬಂತು .ವರನ ಕಡೆಯ ಕಾರು ಬಂತು .
ಮನೆಮಂದಿಗೆ ಏನೋ ಎಂತೋ ?........
ಹುಡುಗಿ ಇಣುಕಿ ಇಣುಕಿಯೇ ಸುಸ್ತು .
ಎಂದಿಲ್ಲದ ಇಂದೇಕೋ ಎದೆಯೊಳಗೆ ಗುಡುಗುಡು !!
ಪುಷ್ಪಕವಿಮಾನ ಅಲ್ಲವೆಂದು ತಿಳಿಹೇಳುವವರಾರು ?

ವಧು ಬಂದಳು ಹೊರಗೆ, ತಲೆತಗ್ಗಿಸಿ ನಾಜೂಕು ನಡಿಗೆ,
ರೇಶಿಮೆಯ ಸೀರೆ ಉಟ್ಟು ಮೈ ತುಂಬಾ ಬಂಗಾರ ತೊಟ್ಟು ,
ಯಾರದ್ದೋ ಕೇಳಬೇಡಿ ಒಳಗುಟ್ಟು .......!
ಚಾ ,ತಿಂಡಿ ,ಸರಬರಾಜು ...ತಿನ್ನಲಿಕ್ಕೆ ...
ಆದರೂ ಮುಲಾಜು ....!
ಹುಡುಗನೊ ಮಾಡೇಬಿಟ್ಟ ಪರೀಕ್ಷೆ ...
ಮುಖ ನೋಡಿದ್ದಷ್ಟೇ ಸಾಕಾಯ್ತು ಹುಡುಗಿಗೆ
ಇನ್ನು ಉಳಿದಿಲ್ಲ ನಿರೀಕ್ಷೆ

ಹುಡುಗನೋ ಮುಗುಳ್ನಕ್ಕ ನನಗೆಂದೆ ಈ ಸೃಷ್ಟಿ
ಮನೆಯವರಿಗೆ ಮಾತ್ರ ದಕ್ಷಿಣೆಯೆ ದೃಷ್ಟಿ .
ವಧು ಪರೀಕ್ಷೆ ಮುಗಿದಾಗ ಹುಡುಗಿಯೋ ಪಾಸು
ಹುಡುಗಿಯ ದೃಷ್ಟಿಯಲ್ಲಿ ಹುಡುಗ ನಪಾಸು .

ಮನ್ಮಥನಲ್ಲನಿವ ಮಯಾಸುರನ ಹಾಗೆ
ಒಪ್ಪುವುದೋ ಬಿಡುವುದೋ ಮುಂದಿನ ಕತೆ ಹೇಗೆ ?
ಅಪ್ಪ ಉಲಿದ ... ಹುಡುಗನ ಸಮ್ಮತಿಯೇ ಮೇಲು
ಹುಡುಗಿಗಿಲ್ಲ ಹಕ್ಕು ....?!
ಅಮ್ಮನಿಗೂ ತಿಳಿಯದೆ ಹುಡುಗಿ ಮನದ ಸಿಕ್ಕು

ಬೆಂಕಿ ಬಿತ್ತು ಮದುವೆಗೆ ಮನ ಒಪ್ಪದ ಬದುಕು
ಆಸ್ತಿ-ಪಾಸ್ತಿ ಬೇಕಷ್ಟುಉಂಟು ನಿಂದೇನೆ ಸೆಡಕು..?
ಅವಳ ಇಷ್ಟಾನಿಷ್ಟಗಳಿಗೆ ಬೆಲೆಯೇ ಇಲ್ಲ ಇಲ್ಲಿ
ಹುಡುಗಿ ಮನದೆ ಬಿಕ್ಕಿದಳು .......ಕೇಳುವವರಿಲ್ಲ ಅಲ್ಲಿ .

ರಾಘವೇಂದ್ರ ಆಚಾರ್
ನಾಯಕವಾಡಿ .

[ಯಾರದ್ದೋ ಜವಾಬ್ದಾರಿಯ ತೀರುವಿಕೆಗೆ ,ಇನ್ಯಾರದ್ದೋ ಕಟ್ಟುನಿಟ್ಟಿನ ಭಯಕ್ಕೆ ,ಮತ್ತಾವುದೋ ಬದಲಾಗದೆಂಬ ಕಾರಣಗಳಿಗೆ ಹೀಗೆ ಕೊರಳೊಡ್ಡಿ ,ಬಯಸದ್ದನ್ನ ಬಯಸಿದ್ದೀನಿ ಅನ್ನೋ ಬದುಕು ಬದುಕುವ ,ಕಣ್ಣೀರನ್ನೆಲ್ಲ ವಲೆ ಉಗುಳಿದ ಹೊಗೆಯ ಕಾರಣಕ್ಕೆ ಅಂತ ನಟಿಸಿ ಒಳಗೆ ಸುಟ್ಟುಕೊಂಡು ಹೊರಗೆ ನಗುವ ಎಷ್ಟೋ ಹೆಣ್ಣು ಜೀವಗಳ ನೆನೆದು ...........]

Rating
No votes yet

Comments