ವಾಹ್ವಾರೆ ಮೆಣಸಿನಕಾಯಿ!

ವಾಹ್ವಾರೆ ಮೆಣಸಿನಕಾಯಿ!

ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ.

ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯನ್ನು, ಅಲ್ಲಿಂದ ಹೊರಜಗತ್ತಿನಲ್ಲಿ ಪರಿಚಯ ಮಾಡಿಸಿದ್ದು ಕೊಲಂಬಸ್. ೧೪೯೪ರಲ್ಲಿ ಸ್ಪೆಯಿನಿಗೆ, ಆಮೇಲೆ ಯೂರೊಪಿನ ಇತರ ದೇಶಗಳು , ನಂತರ ಏಷ್ಯಾದ ಬೇರೆ ಬೇರೆಕಡೆಗೆ ಹೀಗೆ ನಾವಿಕರ ಜೊತೆ ಅದು ಸಾಗಿತಂತೆ. (ಮಾಹಿತಿ:ವಿಕಿಪಿಡಿಯಾ - ಹಾಗೇ ಇದೇ ಅಭಿಪ್ರಾಯವನ್ನು ಬಿ.ಜಿ.ಎಲ್.ಸ್ವಾಮಿಯವರ ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕದಲ್ಲೂ ಓದಿದ್ದ ನೆನಪಿದೆ)

ಅಂದರೆ ಕ್ರಿ.ಶ.೧೫೦೦ರ ಹೊತ್ತಿಗೆ ಭಾರತಕ್ಕೆ (ಅತೀ ಮೊದಲು ಎಂದರೆ) ಬಂದಿರಬಹುದಾದ ಮೆಣಸಿನಕಾಯಿ ಸುಮಾರು ಐವತ್ತು ವರ್ಷಗಳಲ್ಲೇ ಕನ್ನಡಿಗರ ನಾಲಿಗೆಯನ್ನು ಗೆದ್ದುಬಿಟ್ಟಿತ್ತು ಎನ್ನುವುದಕ್ಕೆ ಪುರಂದರ ದಾಸರ ಈ ರಚನೆಯೇ ಒಂದು ಕುರುಹು

ಈಗ ಓದಿ: ವಾಹ್ವಾರೆ ಮೆಣಸಿನಕಾಯಿ!

ಪಲ್ಲವಿ:
ವಾಹ್ವಾರೆ ಮೆಣಸಿನ ಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||

ಚರಣಗಳು:

೧: ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟ ನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹು ರುಚಿಯೆಂಬೆ

೨: ಒಂದೆರಡರೆದರೆ ಬಹು ರುಚಿಯೆಂಬೆ
ಮೇಲೆರಡರೆದರೆ ಬಹು ಖಾರೆಂಬೆ
ಅದು ಎರಡರೆದರೆ ಅತಿ ಖಾರೆಂಬ

೩: ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕ್ಕೆ ನಿನ್ನ ಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಟ್ಠಲನ ನೆನೆಯೋದು ಭಾರ

(ಅಂದ
ಹಾಗೆ ನನಗೆ ದೊರೆತ ಈ ಸಾಹಿತ್ಯದಲ್ಲಿ ಕೆಲವು ತಪ್ಪುಗಳು ಇವೆಯೇನೋ ಎಂದು ಎನಿಸುತ್ತಿದೆ - ಮೊದಲ ಎರಡು ಚರಣಗಳಲ್ಲಿ ಮೂರು ಸಾಲಿದ್ದು, ಕೊನೆಯದರಲ್ಲಿ ನಾಲ್ಕಿದೆ. ಅದೇ ರೀತಿ, ಎರಡನೇ, ಮೂರನೇ ಚರಣಗಳಲ್ಲಿ ಪ್ರಾಸವೂ ತಪ್ಪಿದೆ.
ಇದರ ಶುದ್ಧ ಸಾಹಿತ್ಯವಿದ್ದವರು, ದಯವಿಟ್ಟು ಒಂದು ಟಿಪ್ಪಣಿ ಹಾಕಿ)

ಇಂದಿಗೂ,
ಬೇರೆ ಯಾವುದೇ ಪದಾರ್ಥವಿಲ್ಲದಿದ್ದಾಗ, ರಾಗಿಮುದ್ದೆಯ ಜೊತೆಗೋ, ರೊಟ್ಟಿಯ ಜೊತೆಗೋ ಹಸಿಮೆಣಸಿಕಾಯನ್ನೇ ನೆಂಚಿಕೊಂಡು ತಿನ್ನುವುದನ್ನು ನೋಡಿಯೇ ಇರುತ್ತೇವೆ. ಆದರೆ ಇದಕ್ಕೆ ಐನೂರು ವರ್ಷಗಳ ಚರಿತ್ರೆಯನ್ನೇ ಈ ಹಾಡು ತೋರಿಸುವುದೊಂದು ವಿಶೇಷ. "ಬಡವರಿಗೆಲ್ಲ ನಿನ್ನಾಧಾರ ಅಡಿಗೆ ಊಟಕ್ಕೆ ನಿನ್ನ ಸಾರ" ಅನ್ನುವ ಮಾತು, ಅವತ್ತಿಗೂ ಇವತ್ತಿಗೂ ನಿಜವಾಗೇ ಉಳಿದಿರುವುದು ನೋಡಿ ಅಚ್ಚರಿಯಾಗುವುದಂತೂ ಸುಳ್ಳಲ್ಲ.

-ಹಂಸಾನಂದಿ

Rating
No votes yet

Comments