ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)

ಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?

ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.)

ಮೊದಲಿಗೆ ದೇವತಾಸ್ತುತಿಯೊಂದಿಗೆ, ಕಾರ್ಯಕ್ರಮ ಪ್ರಾರಂಭಿಸೋಣವೇ? ;-)

MLV sings Venkatachalanilayam

 

ಈ ಮೇಲೆ ನೀವು ಕೇಳಿದ್ದು ಶ್ರೀಮತಿ ಎಮ್.ಎಲ್.ವಸಂತಕುಮಾರಿಯವರ ಧ್ವನಿಯಲ್ಲಿ ಪುರಂದರ ದಾಸರ ಪ್ರಸಿದ್ಧ ದೇವರನಾಮ ’ವೆಂಕಟಾಚಲನಿಲಯಂ ವೈಕುಂಠ ಪುರವಾಸಂ’. ನೀವು ಊಹಿಸಿರುವ ಹಾಗೆ, ಇದೂ ಸಿಂಧೂಭೈರವಿ ರಾಗದಲ್ಲೇ ನಿಯೋಜಿತವಾಗಿದೆ.

ರಾಗದ ವಿಷಯ ಹೇಳುವ ಮೊದಲು ಈ ರಚನೆಯ ಬಗ್ಗೆ ಒಂದು ಟಿಪ್ಪಣಿ ಹೇಳಬಯಸುವೆ. ನೀವು ಈಗ ಕೇಳಿದಂತೆ, ಈ ಹಾಡು ಸಂಸ್ಕೃತದಲ್ಲಿ ಇದೆ. ಆದರೆ, ಅದರಲ್ಲಿ ಒಂದು ತಪ್ಪು ಕಾಣುತ್ತದೆ. ಇಡೀ ರಚನೆಯು ದ್ವಿತೀಯಾ ವಿಭಕ್ತಿಯಲ್ಲಿದೆ. ಅಂದರೆ "ವೆಂಕಟಾಚಲದಲ್ಲಿ (ತಿರುಪತಿಯಲ್ಲಿ) ನೆಲೆಸಿದವನನ್ನು, ವೈಕುಂಠ ಪುರದಲ್ಲಿ ವಾಸಮಾಡುವನನ್ನು , ತಾವರೆಯಂಥ ಕಣ್ಣುಳ್ಳವನನ್ನು, ...." - ಹೀಗೆ ಬಂದಾಗ ಕೊನೆಯಲ್ಲಿ ನೆನೆಯುತ್ತೇನೆ ಎಂದೋ, ಸ್ಮರಿಸುತ್ತೇನೆ ಎಂತಲೋ, ಪೂಜಿಸುತ್ತೇನೆ ಎಂದೋ ಇರಬೇಕಿತ್ತಲ್ಲವೇ? ಅದಿಲ್ಲದೇ ಇದ್ದಾಗ ರಚನೆ ಅಪೂರ್ಣ ಎನ್ನಿಸದೇ? ಹಾಗಾಗಿ ನನಗೆ ಇದು "ವೆಂಕಟಾಚಲ ನಿಲಯ, ವೈಕುಂಠಪುರವಾಸ..." ಮೊದಲಾಗಿ ಇದ್ದಿದ್ದರೆ,(ಪ್ರಥಮಾ ವಿಭಕ್ತಿ) ಈ ತೊಂದರೆ ಇರದೇ ಹೋಗುತ್ತಿತ್ತು. ಮತ್ತೆ, ಆಗ ಆ ಹಾಡು ಕನ್ನಡದ್ದೇ ಎಂದೂ ಹೇಳಬಹುದಿತ್ತು. (ಏಕೆಂದರೆ, ಇಲ್ಲಿರುವ ಪದಗಳೆಲ್ಲ ಸಮಸಂಸ್ಕೃತ ಪದಗಳೇ - ಎಂದರೆ, ಕನ್ನಡದಲ್ಲಿ ಸಂಸ್ಕೃತದಲ್ಲಿ ಇದ್ದಂತೆಯೇ ಬಳಸುವ ಪದಗಳು) - ಅಲ್ಲವೇ?

ಸರಿ. ಕೊಂಕಣ ಸುತ್ತಿಕೊಂಡು ಅಂತೂ ಮೈಲಾರಕ್ಕೆ ಬರೋಣ. ಏಳುಸ್ವರವು ಸೇರಿ ಸಂಗೀತವಾಯಿತು ಎನ್ನುವ ಮಾತನ್ನು ನೀವು ಕೇಳಿದ್ದೀರಿ. ಸ-ರಿ-ಗ-ಮ-ಪ-ದ-ನಿ ಎಂಬ ಈ ಏಳು ಸ್ವರಗಳಲ್ಲಿ, ಸ ಮತ್ತು ಪ ಎನ್ನುವ ಸ್ವರಗಳನ್ನು ಪ್ರಕೃತಿ ಸ್ವರ ಎನ್ನುತ್ತೇವೆ. ಏಕೆಂದರೆ, ಈ ಸ್ವರಗಳು ಯಾವ ರಾಗದಲ್ಲೂ ಬದಲಾವಣೆ ಹೊಂದುವುದಿಲ್ಲ. ನಿಮ್ಮ ಆಧಾರ ಶ್ರುತಿ ಸ ಅನ್ನುವುದರ ಕಂಪನಾವರ್ತನ(frequency) 400 ಹರ್ಟ್ಸ್ ಆಗಿದ್ದರೆ, ಪ ಸ್ವರದ ಕಂಪನಾವರ್ತನ ಅದರ ಒಂದೂವರೆಯಷ್ಟು - ಅಂದರೆ ೬೦೦ ಹರ್ಟ್ಸ್ ಆಗಿರುತ್ತೆ. ಹಾಗೇ, ಮೇಲಿನ ಷಡ್ಜ(ಸ)ದ ಕಂಪನಾವರ್ತನ ಆಧಾರ ಷಡ್ಜದ ಎರಡರಷ್ಟು, ಅಂದರೆ, ೮೦೦ ಹರ್ಟ್ಸ್ ಆಗಿರುತ್ತೆ ಅನ್ನುವುದನ್ನು ಒಮ್ಮೆ ಹೇಳಿಬಿಡುವೆ. ಅಲ್ಲದೇ, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ,ಆಧಾರಷಡ್ಜ ಇಂತಹ ಕಡೆಯೇ ಇರಬೇಕೆಂಬ ನಿಯಮವಿಲ್ಲ. ಹಾಗಾಗಿ, ಇಲ್ಲಿ ಹೇಳಿರುವ ೪೦೦-೬೦೦-೮೦೦ ಹರ್ಟ್ಸ್ ಗಳು ಬರೇ ಉದಾಹರಣೆಗಷ್ಟೇ.

ಈಗ ಸಿಂಧೂಭೈರವಿ ರಾಗದಲ್ಲಿ ಒಂದು ಆಲಾಪನೆ ಕೇಳೇಣ. ಆಲಾಪನೆಯೆಂದರೆ, ರಾಗವನ್ನು ಯಾವುದೇ ಹಾಡಿಲ್ಲದೇ ವಿಸ್ತಾರ ಮಾಡುವ ರೀತಿ. ಬಾಯಿಹಾಡುಗಾರಿಕೆಯಲ್ಲಿ ನ ನ, ತನನ, ತದರಿನ, ಮೊದಲಾದ (ಅರ್ಥವಿಶೇಷವಿಲ್ಲದ) ಪದಗಳನ್ನು ಉಪಯೋಗಿಸುತ್ತಾರೆ. ವಾದ್ಯದಲ್ಲಿ ನಿಮಗೆ ಅದು ಕೇಳುವುದಿಲ್ಲ ಬಿಡಿ!

Prasanna plays AlApane of Sindhu bhairavi raaga

ಈಗ ಈ ರಾಗದ ಸ್ವರಗಳಿಗೆ ಮರಳೋಣ. ಸಿಂಧೂಭೈರವಿ ಒಂದು ಸಂಪೂರ್ಣ ರಾಗ. ಎಂದರೆ, ಈ ರಾಗದಲ್ಲಿ ಏಳೂ ಸ್ವರಗಳನ್ನು ಉಪಯೋಗಿಸಲಾಗುತ್ತೆ.ಮೊದಲೇ ಹೇಳಿದ್ದೆ - ಸ ಪ ಗಳು ಯಾವ ರಾಗದಲ್ಲೂ ಬದಲಾಗುವುದಿಲ್ಲ ಎಂದು. ಎಂದರೆ, ಉಳಿದ ಸ್ವರಗಳು - ಎಂದರೆ, ರಿ-ಗ-ಮ-ದ-ನಿ ಗಳು ಬದಲಾಗುತ್ತವೆ ಎಂದು ನೀವು ಅರ್ಥ ಮಾಡಿಕೊಂಡಿದ್ದರೆ, ನಿಮಗೆ ಪೂರ್ತಿ ಅಂಕಗಳು :). ಸಾಧಾರಣವಾಗಿ ಒಂದು ರಾಗದಲ್ಲಿ ಒಂದು ಸ್ವರದ ಒಂದೇ ಬಗೆ ಉಪಯೋಗಿಸಲಾಗತ್ತೆ. ಸಾಧಾರಣವಾಗಿ, ಅನ್ನುವದರ ಕೆಳಗೆ ಒಂದು ಗೆರೆ ಎಳೆದುಕೊಳ್ಳಿ. ಯಾಕೆಂದರೆ, ಎಷ್ಟೋ ರಾಗಗಳಲ್ಲಿ, ಒಂದು ಸ್ವರದ ಎರಡೂ ಪ್ರಕಾರಗಳು ಬಳಸಲ್ಪಡಬಹುದು.

ಹಿಂದೂಸ್ತಾನಿಯ ಭೈರವಿಯನ್ನು ಭೈರವೀ ಥಾಟ್ ಸೇರಿಸಲಾಗುತ್ತೆ. ಅದಕ್ಕೆ ಕರ್ನಾಟಕ ಸಂಗೀತದಲ್ಲಿ ಹನುಮತೋಡೀ ಮೇಳವೆಂದು ಹೆಸರು. ಹಿಂದೂಸ್ತಾನಿಯಲ್ಲಿ ಈ ಥಾಟ್ ಗೆ ಬರುವ ರಿ-ಗ-ಮ-ದ-ನಿ ಎಲ್ಲವೂ ಕೋಮಲ ಸ್ವರಗಳು. ಒಂದು ಸ್ವರದಲ್ಲಿ ಎರಡು ವಿಧಗಳಿದ್ದಾಗ, ಕೆಳಗಿರುವ ಸ್ವರವನ್ನು ಕೋಮಲವೆಂದೂ, ಮೇಲಿರುವ ಸ್ವರವನ್ನು ತೀವ್ರವೆಂದೂ ಹೇಳುವುದು ಹಿಂದೂಸ್ತಾನಿಯಲ್ಲಿ ಪದ್ಧತಿ. ಕರ್ನಾಟಕ ಸಂಗೀತದಲ್ಲಿ ಹೆಸರಿಸುವುದು ಸ್ವಲ್ಪ ಬೇರೆ. ಆದರೂ, ಸಿಂಧೂಭೈರವಿಯನ್ನು ಹಿಂದೂಸ್ತಾನಿಯಂದಲೇ ತೆಗೆದುಕೊಂಡಿರುವುದರಿಂದ, ಅದೇ ಸ್ವರಗಳೇ ಇಲ್ಲೂ ಪ್ರಯೋಗವಾಗುತ್ತವೆ.

ಕೆಲವು ರಾಗದಲ್ಲಿ ಒಂದು ಸ್ವರದ ಎರಡೂ ವಿಧಗಳು ಉಪಯೋಗಿಸಲ್ಪಡಬಹುದೆಂದು ಹೇಳಿದೆ. ಈ ನಿಟ್ಟಿನಲ್ಲಿ ಸಿಂಧೂಭೈರವಿ ಒಂದು ವಿಶಿಷ್ಟ ರಾಗ - ಈ ರಾಗದಲ್ಲಿ ರಿ-ಗ-ಮ-ದ-ನಿ ಈ ಎಲ್ಲಾ ಸ್ವರಗಳ ಎರಡೂ ಪ್ರಕಾರಗಳೂ ಸಂದರ್ಭಾನುಸಾರವಾಗಿ ಬಳಸಲ್ಪಡುತ್ತವೆ! ಅದಕ್ಕೆಂದೇ ಇದಕ್ಕೆ ಹಿಂದೂಸ್ತಾನಿಯಲ್ಲಿ ದ್ವಾದಶೀ ಭೈರವಿ ಎಂದೂ ಹೇಳುವ ಪರಿಪಾಠವಿದೆ. ಕೆಲವೊಮ್ಮೆ ಈ ರಾಗದಲ್ಲಿ ಈ ಹೆಚ್ಚುವರಿ ಸ್ವರಗಳನ್ನು ಹೇಳದೇ ಹಾಡಿದಾಗ, (ಹಿಂದೂಸ್ತಾನಿಯಲ್ಲಿ) ಅದಕ್ಕೆ ಶುದ್ಧ ಭೈರವೀ ಎಂದೂ ಹೇಳುವುದನ್ನು ಕೇಳಿದ್ದೇನೆ. ಅದಕ್ಕೆ ಸರಿಸುಮಾರು ಸಮಾನವಾದ ದೇಶ್ಯ ತೋಡಿ, ದೇಶಿಕ ತೋಡಿ ಎಂದು ಕರೆಯಲ್ಪಡುವ ಒಂದು ರಾಗವೂ ಕರ್ನಾಟಕ ಸಂಗೀತದಲ್ಲಿದೆ. ಈ ರಾಗದಲ್ಲಿರುವ ತ್ಯಾಗರಾಜರ ನಮೋನಮೋ ರಾಘವಾಯ ಅನಿಷಂ ಎನ್ನುವ ರಚನೆಯನ್ನು ಇಲ್ಲಿ ಕೇಳಿ.

<a href="http://www.musicindiaonline.com/p/x/u422zZXuTd.As1NMvHdW/">ಸಿ.ಸರೋಜ ಮತ್ತು ಸಿ.ಲಲಿತಾ ಅವರ ಕಂಠದಲ್ಲಿ - ನಮೋ ನಮೋ ರಾಘವಾಯ</a>

ಒಂದು ಹೆಚ್ಚುವರಿ ಮಾಹಿತಿ. ಈ ರಚನೆ, ತ್ಯಾಗರಾಜರು ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ರಚಿಸಿದ್ದ ಮೊತ್ತಮೊದಲ ರಚನೆ ಎಂದು ದಾಖಲಾಗಿದೆ.

ಇನ್ನು ಕರ್ನಾಟಕ ಸಂಗೀತದಲ್ಲಿ ಮೊದಮೊದಲು ಹಿಂದೂಸ್ತಾನಿ ಶೈಲಿಯ ರಾಗಗಳನ್ನು ಉಪಯೋಗಿಸುವುದರ ಜೊತೆಗೆ, ಅಲ್ಲಿನ ವ್ರಜ ಭಾಷೆಯನ್ನೂ, ಅಲ್ಲಿಯ ಭಜನ್, ಖ್ಯಾಲ್ ಮೊದಲಾದುವುಗಳನ್ನೂ ರಚಿಸಿದವರಲ್ಲಿ ಸ್ವಾತಿ ತಿರುನಾಳ್ ಮಹಾರಾಜರದ್ದು ಎತ್ತಿದ್ದ ಕೈ. ಇವರ ’ವಿಶ್ವೇಶ್ವರ ದರುಶನ ಕರ್’ ಎನ್ನುವ ಸಿಂಧುಭೈರವಿ ರಾಗ ಭಜನೆಯೊಂದನ್ನು ಇಲ್ಲಿ ನೋಡಿ, ಕೇಳಿ.

Prashant Krishnamoorti sings a shloka, followed by Visweswara darushana kar

ಇನ್ನು ಈ ರಾಗದಲ್ಲಿ, ನನಗೆ ಮೊದಲು ಪರಿಚಯವಾದ ಒಂದು ಹಾಡಿನ ಬಗ್ಗೆ ಹೇಳುವೆ. ಕನ್ನಡಿಗರಿಗೆಲ್ಲ ಚೆನ್ನಾಗಿ ತಿಳಿದ ಈ ಹಾಡು, ೬೦ರ ದಶಕದ ಸುಬ್ಬಾಶಾಸ್ತ್ರಿ ಅನ್ನುವ ಚಲನಚಿತ್ರದ್ದು. ಹಾಡಿದ್ದವರು ಶ್ರೀರಂಗಂ ಗೋಪಾಲರತ್ನಂ. ಪು.ತಿ.ನರಸಿಂಹಾಚಾರ್ಯರ ಗೀತೆಗೆ ಸಂಗೀತ ನೀಡಿದ್ದವರು ವೀಣೆ ದೊರೆಸ್ವಾಮಯ್ಯಂಗಾರ್.

ನನಗೆ, ಈ ಹಾಡಿನ ಯಾವುದೇ ಕೊಂಡಿ ದೊರೆಯಲಿಲ್ಲವಾಗಿ, ಬರೀ ಹಾಡಿನ ಸಾಹಿತ್ಯ ಹಾಕುತ್ತಿದ್ದೇನೆ. ಓದುತ್ತಾ ಗುನುಗಿಕ್ಕೊಳ್ಳಿ.

ಕೃಷ್ಣನ ಕೊಳಲಿನಾ.. ಕರೆ ರಚನೆ: ಪು. ತಿ. ನ

ಕೃಷ್ಣನ ಕೊಳಲಿನಾ.. ಕರೆ ||ಆಲಿಸು||೨||
ತ್ವರೆ ತ್ವರೆ...||೨||
ಕೃಷ್ಣನ ಕೊಳಲಿನಾ.. ಕರೆ ||
೧.
ತೊಟ್ಟಲಿನ ಹಸುಗೂಸ ಮರೆ ಮರೆ| ಪಕ್ಕದ ಗಂಡನ ತೊರೆ ತೊರೆ||
ಬೃಂದಾವನಕೆ.. ತ್ವರೆ ತ್ವರೆ||ಕೃಷ್ಣನ ಕೊಳಲಿನಾ.. ಕರೆ ||
೨.
ಮುತ್ತಿನ ಕುಪ್ಪಸ ಹರಳೋಲೆ| ಮಲ್ಲಿಗೆ ಜಾಜಿ ಮುಡಿಮಾಲೆ|
ಹೆಜ್ಜೆಯ ನೇವುರ ಗೆಜ್ಜೆಯ ಪಿಲ್ಲಿ| ಮರೆತೇ ಬಂದೆವು ಮನೆಯಲ್ಲೆ ಸಖಿ||
ಕೃಷ್ಣನ ಕೊಳಲಿನಾ.. ಕರೆ ||ಆಲಿಸು||೨||
೩.
ಹೊತ್ತಾರೆ ಹೊರೆ ಗೆಲಸ ಮಿಕ್ಕಾರೆ ಮಿಗಲಿ|ಪಕ್ಕದ ನೆರೆ ಹೋರೆ ನಕ್ಕಾರೆ ನಗಲಿ|
ಬೃಂದಾವನದೋ..ಳ್ ಆಲಿಸಿ ಗೋ..ಮುರಳಿ|
ಕೃಷ್ಣನ ಕೊಳಲಿನಾ.. ಕರೆ ||ಆಲಿಸು||
ಕೃಷ್ಣನ ಕೊಳಲಿನಾ... ಕರೆ...||
೪.
ನೇಸರಕಿರ್*ಅಣ ಆಗಸದಿರುಳ|ತೊರೆಯಿಸುವಾ ರೀತಿ|
ಮುರಳೀಧರನ ಮುರಳಿ ಮಾಯೆಗೆ ಮನ ಬಿಟ್ಟಿತೆ ಭೀತಿ|
ಇನ್ನಾಯಿತೆ ಪ್ರೀತಿ||೨|| ಮುರಳಿ...
ಕೃಷ್ಣನ ಕೊಳಲಿನಾ... ಕರೆ ||ಆಲಿಸು||
ಕೃಷ್ಣನ ಕೊಳಲಿನಾ... ಕರೆ...||

ಹಿಂದೂಸ್ತಾನಿ ಪದ್ಧತಿಯಲ್ಲಿ, ಇಂತಿಂತಹ ರಾಗವನ್ನು ಇಂತಹ ಸಮಯದಲ್ಲೇ ಹಾಡಬೇಕು ಎನ್ನುವ ನಿಯಮವನ್ನು ಸ್ವಲ್ಪ ಕಟ್ಟುನಿಟ್ಟಾಗೇ ಪಾಲಿಸುತ್ತಾರೆ. ಹಾಗೇ, ಅವರಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಲು ಭೈರವಿ ಅನ್ನುವುದು ಸೂಕ್ತ, ಮಂಗಳಕರ ಅನ್ನುವ ನಂಬಿಕೆ. ಹಾಗಾಗಿ, ಈ ಬರಹವನ್ನು, ನಚಿಕೇತ ಶರ್ಮ ಅವರು ಹಾಡಿದ ಒಂದು ಭೈರವಿ ಧುನ್ ನೊಂದಿಗೆ ಮುಗಿಸುವೆ.

Nachiketa Sharma sings a dhun in bhairavi

ಸಿಂಧುಭೈರವಿಯ ಮುಂದಿನ ಭಾಗ? ಮತ್ತೆ ಕೆಲವು ದಿನಗಳ ನಂತರ!

-ಹಂಸಾನಂದಿ

Rating
No votes yet

Comments