ವೇದಭಾರತಿಯಿಂದ ಗುರುಪೂರ್ಣಿಮಾ ಆಚರಣೆ
ಕಳೆದ ವರ್ಷ ಆಗಸ್ಟ್ 19ಕ್ಕೆ ಆರಂಭವಾದ "ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದಪಾಠವು ಕೆಲವೇ ದಿನಗಳಲ್ಲಿ ನಿತ್ಯವೇದಪಾಠವಾಗಿ ಮುಂದುವರೆಯಿತು.ಕಳೆದ ಹನ್ನೊಂದು ತಿಂಗಳಲ್ಲಿ ಸ್ವರಗಳ ಪರಿಚಯದ ಜೊತೆಗೆ ಈಶ್ವರಸ್ತುತಿ ಪ್ರಾರ್ಥನಾ ಮಂತ್ರಗಳು,ಹಾಗೂ ಆರೇಳು ಸೂಕ್ತಗಳನ್ನು ಗುರುಗಳು ಕಲಿಸಿಕೊಟ್ಟಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀವಿಶ್ವನಾಥಶರ್ಮರು ಹಾಕಿದ ಭದ್ರ ಬುನಾದಿಯಮೇಲೆ ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀಪ್ರಸಾದ್ ಮತ್ತು ಹಾಸನದ ಶ್ರೀ ಅನಂತನಾರಾಯಣರು ವೇದಪಾಠವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ.ಸಾಪ್ತಾಹಿಕ ಪಾಠನಡೆಯುವಾಗ ವಿಶ್ವನಾಥಶರ್ಮರು ಅಥವಾ ಪ್ರಸಾದ್ ಪಾಠವನ್ನು ನಡೆಸಿಕೊಂಡುಹೋಗುತ್ತಿದ್ದರು. ಆನಂತರ ಹಾಸನದವರೇ ಆದ ಮಿತ್ರ ಅನಂತನಾರಯಣರು ನಿತ್ಯವೂ ವೇದಪಾಠವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಹಜವಾಗಿ ಗುರುಪೂರ್ಣಿಮಾ ದಿನವು ಹತ್ತಿರವಾಗುತ್ತಿದ್ದಂತೆ ಎಲ್ಲಾ ಸದಸ್ಯರಿಗೂ ಗುರುಪೂಜಾ ಕಾರ್ಯಕ್ರಮವನ್ನು ಮಾಡುವ ತವಕ.ಗುರುಪೂರ್ಣಿಮೆಯ ದಿನವೇ ಮೂರೂ ಜನ ಗುರುಗಳನ್ನು ಕರೆದು ಅವರ ಮಾತುಗಳನ್ನು ಕೇಳುವ ಹಂಬಲ. ಎಲ್ಲರನ್ನೂ ಆಹ್ವಾನಿಸಿದೆವು. ಕಾರ್ಯಕ್ರಮಕ್ಕೆ ವೇದ ಕಲಿಯುವ ಎಲ್ಲರೂ ಹಾಜರ್. ಆದರೆ ಒಬ್ಬರು ಮಾತ್ರ ಗುರುಗಳು ಬರಬೇಕಾಗಿದ್ದವರು ಅವರೂ ಬೇರೊಂದು ಕಾರ್ಯಕ್ರಮ ನಿಮಿತ್ತ ಬರಲಾಗಲಿಲ್ಲ.ಇಬ್ಬರು ಗುರುಗಳು ಮೊದಲೇ ತಾವು ಬರಲು ಸಮಯಾವಕಾಶವಿಲ್ಲವೆಂದು ಹೇಳಿದ್ದರು.ಸರಿ ಕಾರ್ಯಕ್ರಮ ಮಾಡಲು ಸಂಕಲ್ಪಿಸಿದ್ದಾಗಿದೆ. ಕವಿನಾಗರಾಜರೊಡನೆ ಚರ್ಚಿಸಿ ಒಂದು ಸ್ವರೂಪ ನೀಡಿದ್ದಾಯ್ತು. ಮೊದಲು ಸಾಂಗವಾಗಿ ಅಗ್ನಿಹೋತ್ರ ನಡೆಯಿತು. ಎಲ್ಲರೂ ಚೆನ್ನಾಗಿಯೇ ಈಶ್ವರಸ್ತುತಿಪ್ರಾರ್ಥನಾ ಮಂತ್ರವನ್ನು ಪಠಿಸಿ ನಂತರ ಅಗ್ನಿಹೋತ್ರ ಮಂತ್ರವನ್ನು ಸಾಮೂಹಿಕವಾಗಿಯೇ ಪಠಿಸಿದರು. ಅಗ್ನಿಹೋತ್ರವು ಸೊಗಸಾಗಿ ಸಂಪನ್ನಗೊಂಡಿತು.
ನಂತರ ಗುರುಪೂಜಾ ಕಾರ್ಯಕ್ರಮ. ಯಾವ ಗುರುವನ್ನು ಪೂಜಿಸುವುದು. ಗುರು ವ್ಯಕ್ತಿಯಾದರೆ ಶಾಶ್ವತನಲ್ಲ. ಹಾಗಾಗಿ ತತ್ವವನ್ನೇ ಆಯ್ದುಕೊಂಡೆವು. ನಮ್ಮೆಲ್ಲರಿಗೂ ಮಹಾನ್ ಗುರು ಭಗವಂತನೇ. ಅವನ ನುಡಿಯೇ ವೇದ. ವೇದವೇ ನಮಗೆ ಗುರು. ವೇದವನ್ನು ಪೂಜಿಸುವುದೆಂದರೆ ವೇದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಬೇರೆಯವರಿಗೂ ಜ್ಞಾನವನ್ನು ನೀಡುವುದು. ಈ ಸ್ಪಷ್ಟವಿಚಾರವನ್ನು ಮನಸ್ಸಿನಲ್ಲಿ ಸಂಕಲ್ಪಿಸಿ ಸಾಂಕೇತಿಕ ವಾಗಿ ವೇದಭಾಷ್ಯ ಗ್ರಂಥವನ್ನೇ ಅರ್ಚಿಸಿದೆವು.[ ವೇದದಲ್ಲಿ ಹೂ ಅರ್ಚಿಸುವ ಪದ್ದತಿ ಎಲ್ಲಾ ಇಲ್ಲವೆಂದು ನನ್ನ ಅನಿಸಿಕೆ. ಆದರೆ ಸಾಂಕೇತಿಕವಾಗಿ ಮನದಲ್ಲಿ ವಿಚಾರವನ್ನು ಸಂಕಲ್ಪಿಸಿಕೊಂಡೇ ಮಾಡಿದೆವು] ಈ ವಿಚಾರಕ್ಕಾಗಿ ನನ್ನ ದುಡಿಮೆಯ ಒಂದು ಭಾಗವನ್ನು ಸಮರ್ಪಿಸುವುದು. ಎಲ್ಲರೂ ಈ ವಿವರಣೆ ಪಡೆದು ಅದರಂತೆ ಗುರುಪೂಜಾ ನಡೆಯಿತು. ನಂತರ ಎಲ್ಲಾ ಸದಸ್ಯರೂ ತಮ್ಮ ತಮ್ಮ ವಿಚಾರ ಹಂಚಿಕೊಂಡರು. ಆರಂಭದಲ್ಲಿ ರೆಕಾರ್ಡ ಮಾಡುವ ಯೋಜನೆ ಇರಲಿಲ್ಲ. ಕೆಲವರ ಆತ್ಮೀಯ ನುಡಿಗಳನ್ನು ಕೇಳಿದಂತೆ ರೆಕಾರ್ಡ ಮಾಡ ಬೇಕೆನಿಸಿತು. ನಮ್ಮ ವೆಬ್ ತಾಣ vedasudhe.com ನಲ್ಲಿ ರೆಕಾರ್ಡ್ ಆದ ಧ್ವನಿಯನ್ನು ಇಲ್ಲಿ ಹಂಚಿಕೊಂಡಿದ್ದೇವೆ.
ಕೇಳಿ. ಈ ಅಪರೂಪದ ಗುಪೂಜಾ ಮೊದಲ ವರ್ಷದ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.