ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೧

ಶಾರದೆಯ ಮದುವೆ ಮತ್ತು ದೆವ್ವ ‍ ‍‍- ೧

ಸಂಜೆ ಸುಮಾರು ೫-೪೫ ರಿಂದ ೬ ಗಂಟೆ ಸಮಯ, ಸೂರ್ಯ ಮುಳುಗಿ ರಾತ್ರಿಯಾಗುವ ಮುಸ್ಸಂಜೆ, ಬೀದಿ ಬಾಗಿಲಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದ ನಾರಾಯಣನನ್ನು ಕೂಗಿದ ಲಲಿತಮ್ಮನವರು,

- ನಾರಯಣ, ಶಾರದೆ ಏನು ಮಾಡುತ್ತಿದ್ದಾಳೆ ನೋಡು, ತಲೆ ಬಾಚ್ಕೊಂಡು ಬರ್ತೀನಿ ಅಂತ ಅವಳ ರೂಮಿಗೆ ಹೋದೋಳು ಇನ್ನೂ ಬರಲಿಲ್ಲ, ಹೋಗಿ ಅವಳನ್ನ ಕರಿ ದೇವರ ದೀಪ ಹಚ್ಚಲಿ. - ಅಂದ್ರು.

 ಆಡಿಸುತ್ತಿದ್ದ ನಾಯಿಯನ್ನು ದೂರ ತಳ್ಳಿದ ನಾರಾಯಣ ಮನೆಯ ಒಳಗೆ ಬಂದು, ಮರದ ಮೆಟ್ಟಲಗಳನ್ನು ಹತ್ತುತ್ತಾ,   - ಅಕ್ಕಾ, ಅಕ್ಕಾ... - ಎಂದು ಕೂಗುತ್ತಾ, ಮಹಡಿ ಸೇರಿ, ಶಾರದೆಯ ರೂಮಿನ ಬಾಗಿಲನ್ನು ಸೇರಿದವನೆ ಗರ ಬಡಿದವನಂತೆ ನಿಂತುಬಿಟ್ಟ.

ರೂಮಿನ ಒಳಗೆ ಶಾರದೆ ತನ್ನ ಎಡಗಾಲಿನ ಪಾದವನ್ನು ಹಿಂದೆ ಮಡಿಚಿ ಹಿಮ್ಮಡಿಯನ್ನು ತೊಡೆಗೆ ಒತ್ತಿ, ಮಂಡಿಯನ್ನು ಮೇಲ್ಲೆತ್ತಿ ಹಿಡಿದು, ಅದರ ಮೇಲೆ ಎಡಗೈ ಅಂಗೈ ಇಟ್ಟಿದ್ದಾಳೆ, ಅದೇ ರೀತಿ ಬಲಗಾಲಿನ ಹಿಮ್ಮಡಿಯನ್ನು ತೊಡೆಗೆ ಒತ್ತಿ, ಹಿಂದಕ್ಕೆ ಮಡಿಚಿದ ಮಂಡಿಯನ್ನು ನೆಲ ಸೋಕಿಸುವಂತೆ ಹಿಡಿದು ಅದರಮೇಲೆ ಬಲ ಅಂಗೈಯನ್ನಿಟ್ಟು ತಲೆ ಬಗ್ಗಿಸಿಕೊಂಡು ಕುಳಿತಿದ್ದಾಳೆ. ಬಿಚ್ಚಿರುವ ತಲೆ ಕೂದಲು ಎತ್ತಿ ಹಿಡಿದಿರುವ ಎಡಮಂಡಿಗಿಂತ ಕೆಳಗೆ ಇಳಿದು ಬಗ್ಗಿಸಿರುವ ಅವಳ ಪೂರ್ತಿ ಮುಖವನ್ನು ಮುಚ್ಚಿದೆ. ಆ ಭಂಗಿಯಲ್ಲಿ ಕುಳಿತಿರುವ ಅವಳ ಶರೀರ ನಿಧಾನವಾಗಿ ಹಿಂದೆ ಮುಂದೆ ಆಡುತ್ತಿದೆ.

ಬಾಗಿಲಲ್ಲಿ ನಿಂತ ನಾರಾಯಣ ಹೆದರಿಕೆಯಿಂದಲೆ,

 - ಅ....ಕ್ಕಾ, ಅ...ಕ್ಕಾ......!!! - ಎಂದು ನಿಧಾನವಾಗಿ ಕರೆದ.

ಒಮ್ಮೆಗೆ ಬಗ್ಗಿಸಿದ ತನ್ನ ಕತ್ತನ್ನು ಮೇಲೆತ್ತಿದ ಶಾರದ ತಲೆಯನ್ನು ಅತ್ತಿತ್ತ ಕೊಡವಿ ಮುಖವನ್ನು ಮುಚ್ಚಿದ್ದ ಕೂದಲನ್ನು ತನ್ನ ಬಲಗೈಯಿಂದ ಪಕ್ಕಕ್ಕೆ ಸರಿಸಿ, ಎಡಗಡೆಗೆ ತನ್ನ ಕತ್ತನ್ನು ವಾಲಿಸಿ, ಎಡಗಾಲಿನ ಪಾದವನ್ನು ದಡ್ ದಡ್ ಎಂದು ನೆಲಕ್ಕೆ ಬಡಿಯುತ್ತಾ, ವಿಚಿತ್ರವಾದ ನಗೆಯನ್ನು ಸೂಸಿ, ಕಣ್ಣುಗಳನ್ನು ಅಗಲವಾಗಿ ಬಿಡುತ್ತ, ಒಡಕು ಮಿಶ್ರಿತ ಗಂಟಲಿನೊಡಗೂಡಿ

- ಏನೋ ನಾರಯಣ...!!..... ಚೆನ್ನಗಿದ್ಯೇನೊ......!! - ಅಂತ ಕೇಳಿದ್ಲು.

ಗಾಬರಿಯಾದ ನಾರಾಯಣ ಅಮ್ಮಾ ಎಂದು ಚೀರುತ್ತಾ ಎರಡು ಹೆಜ್ಜೆ ಹಿಂದೆ ಸರಿದು ಬಾಗಿಲಿಗೆ ಆತು ನಿಂತ. ಅವನ ಗಂಟಲು ಒಣಗಿದೆ, ಅಲುಗಾಡಲೂ ಆಗುತ್ತಿಲ್ಲ. ಸ್ವಲ್ಪ ಸಾವರಸಿಕೊಂಡು ರೂಮಿನಿಂದ ಆಚೆ ಬಂದವನೆ, ಮೆಟ್ಟಲುಗಳ ಕಡೆ ಒಂದೆ ನೆಗೆತಕ್ಕೆ ಹಾರಿ, ಮೆಟ್ಟಲುಗಳನ್ನು ಇಳಿಯುತ್ತಾ,

- ಅಮ್ಮಾ ಅಮ್ಮಾ....!!??!! ಬೇಗ ಬಾ, ಅಕ್ಕ ಒಂಥರ ಆಡ್ತಿದ್ದಾಳೆ, ನಂಗೆ ಭಯ ಆಗ್ತಿದೆ. - ಅಂತ ಕೂಗಿದ.

ಮುಂಬಾಗಿಲಲ್ಲಿ ಕುಳಿತ ಲಲಿತಮ್ಮ ನವರು ಗಾಬರಿಯಿಂದ ಒಳ ಬರುತ್ತಾ,

- ಯಾಕೋ..? ಏನಾಯ್ತೋ........!!??. ಹಾಗಿ ಚೀರ್ತಾ ಇದ್ಯ. _

- ಅಮ್ಮ ಅಕ್ಕಂಗೆ ಏನೊ ಆಗಿದೆ, ವಿಚಿತ್ರವಾಗಿ ಆಡ್ತಿದ್ದಾಳೆ. ಮಾತು ಒಂಥರ ಇದೆ. ಬೇಗ ಬಾ.. -

ಗಾಬರಿಯಿಂದ ಬೇಗ ಬೇಗ ಮೆಟ್ಟಲುಗಳನ್ನು ಹತ್ತಿ, ಶಾರದೆಯ ಕೊಠಡಿಯೆಡೆಗೆ ದಾವಿಸಿದವರೆ, ಅಲ್ಲಿ ಮಗಳ ಅವತಾರ ಕಂಡು ಭಯದೊಂದಿಗೆ ದಂಗಾಗಿ ಹೋದರು. ನಾರಾಯಣ ಹೆದರಿಕೆಯಿಂದ ನಿಧಾನವಾಗಿ ಹಿಂದೆ ಬಂದವನು ಅಮ್ಮನ ಸೀರೆಯ ಸೆರಗನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದ.

ಲಲಿತಮ್ಮನವರು, ಸ್ವಲ್ಪ ತಮ್ಮ ಮನಸ್ಸನ್ನು ಹಿಡಿತಕ್ಕೆ ತಂದುಕೊಂಡು,

- ಶಾರದ ಏಕಮ್ಮ ಹೀಗೆ ಕುತಿದ್ಯ. ಎದ್ದೇಳು ಕೆಳಗೆ ನಡಿ ಮುಖ ತೊಳ್ಕೊ. -

ಅವರ ಮಾತಿಗೆ ವಿಚಿತ್ರವಾಗಿ ನಗುತ್ತಾ, ಕತ್ತನ್ನು ಅತ್ತ ಇತ್ತ ಆಡಿಸುತ್ತ

- ಏನೆ... ಲಲ್ತ..... ನಮ್ಮ ಶಾರದಂಗೆ ಮದ್ವೆ..... ಮಾಡಿಸ್ತಿಯೇನೆ ಮದ್ವೆ...!!?, ಅದೂ ಅವಳ ಇಷ್ಟ ಏ..ನು... ಅಂತ ಕೇಳ್ದೆ ಮದ್ವೆ ಮಾಡಿಸ್ತಿಯೇನೆ...? ಹ್ಯಾಗೆ ಮಾಡಿಸ್ತಿಯ ನಾನು ನೋಡ್ತಿನೆ..... ಹ.......ಹ್ಹಹ್ಹ........ಹ......... -

ಜೊರಾಗಿ ನಗುತ್ತಾ ತಾನು ಕುಳಿತ್ತಿದ್ದ ಚಾಪೆಯ ಮೇಲೆ ಹಾಗೆ ಹಿಂದೆ ಬಿದ್ದಳು ಶಾರದ.

ಹತ್ತಿರ ಹೋದ ಲಲಿತಮ್ಮನವರು ಮಗಳ ತಲೆಯನ್ನು ಎತ್ತಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು, ತಲೆ ನೇವರಿಸುತ್ತಾ ತಮಗೆ ಗೊತ್ತದ್ದ ನರಸಿಂಹ ದೇವರ ಸ್ತೋತ್ರ ಮನಸ್ಸಿನಲ್ಲೆ ಹೇಳುತ್ತಾ,

- ನಾರಾಯಣ ಕೆಳಗೆ ಹೋಗಿ ಒಂದು ಚೊಂಬಿನಲ್ಲಿ ನೀರು ತೆಗೆದು ಕೊಂಡು ಬಾ. - ಎಂದರು.

- ಅಮ್ಮ ನನಗೆ ಭಯ ಆಗುತ್ತೆ ನಾನು ಹೋಗೋಲ್ಲ ಅಂದ. -

- ಗಾಬ್ರಿ ಮಾಡ್ಕೋಬೇಡ, ನರಸಿಂಹ ದೇವರನ್ನು ನೆನೆಯುತ್ತಾ ಹೋಗು ನಾರಾಯಣ. ಏನೂ ಆಗೋಲ್ಲ. ಮುಸ್ಸಂಜೆ ಹೊತ್ತು, ಇಲ್ಲಿ ಗಾಳಿ ಸರಿಯಾಗಿ ಆಡೋಲ್ಲ ನೋಡು ಏನೋ ಒಂಥರ ಆಗಿರ್ಬೇಕು ಅಷ್ಟೆ. ನೀರು ತಂದು ಕೊಟ್ಟು ಹಾಗೆ ಹನುಮಂತ ದೇವರ ದೇವಸ್ಥಾನಕ್ಕೆ ಹೋಗು, ನಿಮ್ಮಪ್ಪ ಅಲ್ಲಿಗೆ ಹೋಗಿದ್ದಾರೆ. ಅವರನ್ನು ಕರೆದು ಕೊಂಡು ಬಾ, ಹ್ಜ್ಞ್.... ಹಾಗೆ ಅಲ್ಲಿಂದ ಸ್ವಲ್ಪ ಕುಂಕುಮ ತಾ ಆಯ್ತಾ. -
****************************************************

ಈ ಘಟನೆ ನಡೆವುದಕ್ಕೆ ಸ್ವಲ್ಪ ಮುಂಚಿನ ವಿಚಾರ.

***************************************************


ನರಸಿಂಹ ಮೂರ್ತಿಗಳ ಮನೆಯಿಂದ ಸುಶ್ರಾವ್ಯವಾಗಿ ಕೇಳಿ ಬರುತ್ತಿದೆ,

`ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ.......`

ಬೀದಿಯಲ್ಲಿ ನಡೆಯುತ್ತಿದ್ದವರೂ, ಎರಡು ನಿಮಿಷ ನಿಂತು ರಾಗದ ಸವಿಯನ್ನು ಸವಿದು ಮುಂದುವರೆಯುತ್ತಿದ್ದರು, ಪೂರ್ತಿ ಕೇಳಿಯೆ ಹೋಗೋಣವೆಂದುಕೊಂಡ ಸಂಗೀತಾಸಕ್ತ ಮಂದಿ ಮನೆಯ ಮುಂದಿನ ಜಗಲಿಯಮೇಲೆ ಆಸೀನರಾಗಿ, ಮಧುರ ನಾದದ ಸವಿಯಲ್ಲಿ ಮೈ ಮರೆತಿದ್ದರು.

ಒಳಗೆ ಹಾಡುತ್ತಿರುವುದು ನರಸಿಂಹಮೂರ್ತಿಗಳ ಮಗಳು ಶಾರದ. ಬಾಲ್ಯದಿಂದಲೂ ಸಂಗೀತ ಗಾಯನದ ಬಗ್ಗೆ ತುಂಬು ಆಸಕ್ತಿ. ಮನೆಯಲ್ಲಿ ಪ್ರಾಥಮಿಕ ಹಂತದ ತಯಾರಿ ನಡೆದಿದ್ದು ಆಕೆಯ ತಾಯಿ ಲಲಿತಮ್ಮನವರಿಂದ. ಆಕೆಯ ಕಂಠ ಸಿರಿಯನ್ನು ಕೇಳಿ ತನ್ನ ಸಂಪೂರ್ಣ ಬೆಂಬಲವನ್ನಿತ್ತು, ಸುತ್ತಮುತ್ತ ಹತ್ತೆಂಟು ಊರುಗಳಿಗೆ ಪ್ರಖ್ಯಾತ ಸಂಗೀತಗಾರರೆನಿಸಿದ್ದ ವಾಸುದೇವ ಆಚಾರ್ಯರ ಬಳಿ ಸಂಗೀತ ಪಾಠ ಹೇಳಿಸುವುದರ ಜೊತೆಗೆ, ಮಗಳ ಸಂಗೀತ ವಿದ್ವತ್ ಮುಗಿಯುವವರಗೆ ಒತ್ತಸೆಯಾಗಿ ನಿಂತವರು ತಂದೆ ನರಸಿಂಹ ಮೂರ್ತಿಗಳು.

ನರಸಿಂಹ ಮೂರ್ತಿ, ಲಲಿತಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳು, ದೊಡ್ಡ ಮಗಳು ಶಾರದ ಮತ್ತು ಅವಳ ತಮ್ಮ ನಾರಯಣ. ತಂದೆಯ ಮನೆಯಿಂದ ವಂಶ ಪಾರಂಪರ್ಯವಾಗಿ ಬಂದ ತೆಂಗಿನ ತೋಟ, ಜೊತೆಗೊಂದಿಷ್ಟು ಕೃಷಿ ಭೂಮಿ, ಉಪಾಧ್ಯಾಯವೃತ್ತಿ. ಸಂಸಾರದ ನೊಗ ಎಳೆಯಲು ಸಹಕರಿಸುವ ಹೆಂಡತಿ, ಓದು ಬರಹದಲ್ಲಿ ಹಿಂದುಳಿಯದ ಮಕ್ಕಳು, ಹಾಗಾಗಿ ಯಾವುದೆ ಕುಂದು ಕೊರತೆ ಮೂರ್ತಿಗಳಿಗಿಲ್ಲ.

ಡಿಗ್ರಿ ಮುಗಿಸಿರುವ ಮಗಳಿಗೆ ಆಗಲೆ ೨೩ ವರ್ಷವಾಯ್ತು ಬೇಗ ಮದುವೆ ಮಾಡಬೇಕೆಂಬ ಆತುರ ಲಲಿತಮ್ಮನವರಿಗೆ, ಈ ವಿಷಯವಾಗಿ ಇತ್ತೀಚೆಗೆ ಗಂಡನ ಬೆನ್ನು ಹತ್ತಿದ್ದಾರೆ ಆಕೆ.

- ಅಲ್ಲಾಂದ್ರೆ ಇನ್ನು ಎಷ್ಟು ದಿನ ಬೇಕು ನಿಮಗೆ, ನನ್ನ ಮಗಳು ಸುಂದರಿ ಶಾರದೆಗೆ ಒಂದು ಗಂಡು ಹುಡುಕಲಿಕ್ಕೆ -

- ಅದೆ ಪ್ರಯತ್ನದಲ್ಲಿ ಇದ್ದೇನಲ್ಲ ಲಲಿತಾ, ನಿನಗೆ ಗೊತ್ತಿಲ್ಲವೆ. ನಮ್ಮ ಶಾರದ ತುಂಬಾ ಬಿಳುಪಲ್ಲದಿದ್ದರೂ ಕಪ್ಪಂತು ಅಲ್ಲ. ಜೊತೆಗೆ ಲಕ್ಷಣವಾಗಿದ್ದಾಳೆ. ಹೋದ ಸಲ ಬಂದ ಗಂಡು ಎಲ್ಲಾ ಚೆನ್ನಾಗಿತ್ತು, ಆದ್ರೆ ಹುಡುಗ ಬಂದು ಅಮೇರಿಕಾದಲ್ಲಿ ವಾಸ ಇರಬೇಕಾಗುತ್ತೆ ಅಂತ ಹೇಳಿದ್ದಕ್ಕೆ, ನೀನು ನಿನ್ನ ಮಗಳು ಬಿಲ್ ಕುಲ್ ಆಗೋಲ್ಲ ಅಂದ್ಬಿಟ್ರ. ಇಲ್ದೆ ಹೋಗಿದ್ರೆ ಇಷ್ಟು ಹೊಟ್ಟಿಗೆ ಮದುವೇನೆ ಆಗಿ ಹೋಗಿರೋದು -

- ಸಾಕು ಸುಮ್ಮನಿರಿ, ಇರೋ ಒಬ್ಳು ಮಗಳು ಆಮೇರಿಕಾ ಆಸ್ಟ್ರೇಲಿಯ ಅಂತ ಹೋಗಿ ಬಿಟ್ರೆ, ಎಂತದು ಬೇಡ, ಇಲ್ಲೆ ಹತ್ರದಲ್ಲೆ ಒಳ್ಳೆ ಗಂಡನ್ನು ನೋಡಿ. ಮಕ್ಕಳು ನಮ್ಮ ಮುಂದೆ ನೆಮ್ಮದಿಯಾಗಿದ್ರೆ ನಮಗೂ ನೆಮ್ಮದಿ. -

- ನಿಂದೆಲ್ಲ ಇಷ್ಟೆ ಆಗೋಯ್ತು, ನಮ್ಮ ಅಳಿಯ, ಮಗಳು ಹೊರದೇಶದಲ್ಲಿ ಇದ್ದಾರೆ ಅಂದ್ರೆ ಸುತ್ತಾಮುತ್ತಾ ನಮಗೆಷ್ಟು ಮರ್ಯಾದೆ, ನಿಮಗೆ ಇದೆಲ್ಲ ತಿಳಿಯೋಲ್ಲ. ಬಾವಿ ಕಪ್ಪೆಗಳು, ನಿಮ್ಮ ಹಣೆ ಬರಹ, ಏನಾದ್ರೂ ಮಾಡ್ಕೊಳ್ಳಿ. -

- ನೀವು ಗಂಡಸರು, ನಿಮಗೆ ಇದೆಲ್ಲ ಅರ್ಥ ಆಗೋಲ್ಲ. ನಾನು ತಿಳಿದಿರುವವರ ಹತ್ರ ಹೇಳಿದ್ದೇನೆ. ನೀವು ಪ್ರಯತ್ನಿಸುತ್ತಿರಿ. -

- ಹೇಳಿದ್ದೇನೆ ಲಲಿತ. ಈಗ ಒಂದು ಸಂಬಂಧ ಬಂದಿದೆ. ಹುಡುಗನ ಮನೆಯವರು ಬಂದು ಮೈಸೂರು ಕಡೆಯವರಂತೆ, ಬೆಂಗಳೂರಿನಲ್ಲಿ ಸಾಫ಼್ಟ್ವೇರ್ ಕಂಪನಿಲಿ ಕೆಲ್ಸ, ತಿಂಗಳಿಗೆ ೭೫,೦೦೦ ಸಾವಿರ ಸಂಬ್ಳ, ಜೊತೆಗೆ ಕಂಪ್ನಿಯಿಂದ ಕಾರೂ ಕೊಟ್ಟಿದ್ದಾರಂತೆ. ಬೆಂಗ್ಳೂರಲ್ಲಿ ನಮ್ಮ ರಂಗಾಚಾರಿ ಇದಾನಲ್ಲ ಅವನ ಪರಿಚಯಸ್ಥರಂತೆ. ಅದಕ್ಕೆ ಅವನು ಹೋದವಾರ ಫ಼ೋನ್ ಮಾಡಿದ್ದ, ಎಲ್ಲ ಸರಿ ಹೋದ್ರೆ ಮುಂದಿನ ಭಾನುವಾರ ಹುಡ್ಗನ ಮನೆಯವರನ್ನು ಕರೆದು ಕೊಂಡು ಬರ್ತೀನಿ, ಯಾವುದಕ್ಕೂ ಮತ್ತೆ ಫ಼ೋನ್ ಮಾಡ್ತಿನಿ ಅಂತ ಹೇಳಿದ್ದಾನೆ. ನೋಡೋಣ ದೈವೀಚ್ಚೆ ಏನಿದೆಯೋ -

- ಹೋಗ್ಲಿ ಬಿಡಿ ಸಧ್ಯ ವಿದೇಶಕ್ಕಿಂತ ಬೆಂಗ್ಳೂರು ವಾಸಿ, ಸ್ವಲ್ಪ ದೂರ, ಆದ್ರೂ ಹೋಗಿ ಬರೋಕ್ಕೆ ತೊಂದ್ರೆ ಏನೂ ಇಲ್ಲ -

- ಹೌದೌದು, ನಿನಗೆ ನಿನ್ನ ಮಗ್ಳಿಗೆ ಮಗ್ಗಲು ಮನೆಲಿ ಹುಡ್ಗ ಇದ್ರೆ ಇನ್ನೂ ಆರಾಮ್, ಅದೇನಿದೆ ಅಂತ ಒದ್ದಾಡ್ತಿರೊ ಈ ಕೊಂಪೆಲಿ ನಾ ಕಾಣೆ. ನಮ್ಮ ಕಾಲಕಂತು ಬದುಕು ಇಷ್ಟೆ ಆಗೋಯ್ತು, ಏನೋ ಮಕ್ಕಳು ಸ್ವಲ್ಪ ಬೇರೆ ಪ್ರಪಂಚ ನೋಡ್ಲಿ ಅಂದ್ರೆ, ಅಮ್ಮ ಮಗಳು ಸರ್ಯಾಗಿದ್ದೀರ. -

- ಇದಾನಲ್ಲ ನಿಮ್ಮ ಕುಲ ಪುತ್ರ ಅದೇನು ದೇಶ ಸುತ್ತುಸ್ತಿರೊ ಸುತ್ಸಿ, ನಾನು ನೋಡ್ತಿನಿ ಅವ್ನು ಪಡೊ ಸುಖಾನ. -

_ ನೋಡ್ತಾ ಇರು ಅವನನ್ನು ಎಂಜಿನಿಯರ್ರೊ ಇಲ್ಲ ಡಾಕ್ಟ್ರೋ ಮಾಡಿ ಅಮೇರಿಕಾಗೆ ಕಳ್ಸೆ ಕಳಿಸ್ತೀನಿ. ಆಮೇಲೆ ನಾನೂ ಫ಼ಾರಿನ್ ಟ್ರಿಪ್ ಮಾಡ್ತೀನಿ. ಆಗ ನೀನೇನಾದ್ರೂ ಜೊತೆ ಹೊರಟ್ರೆ ನಾನು ಒಪ್ಪಲ್ಲ. -

- ಹಾಗೆ ಆಗ್ಲಿ ಮಾರಾಯ್ರೆ, ನನಗೇನೂ ಅದೆಲ್ಲ ಆಸೆ ಇಲ್ಲ. -

- ಸುಮ್ನೆ ತಮಾಷೆಗಂದೆ ಲಲ್ತ, ಬೇಸ್ರ ಮಾಡ್ಕೋಬೇಡ. ನಾಳೆ ಆ ರಂಗಾಚಾರೀನ ಮಾತಾಡ್ಸಿ ನೋಡ್ತೀನಿ, ಈಗ ಸ್ವಲ್ಪ ತೋಟದ ಕಡೆ ಹೋಗಿ ಬರ್ತೇನೆ, ನಾರಾಯಣ ಬಾರೋ ತೋಟಕ್ಕೆ ಹೋಗಿ ಬರೋಣ. -

    ಮಾರನೆ ದಿನ ರಂಗಾಚಾರಿಯ ಫ಼ೋನ್ ಕರೆ ಬಂದೆ ಬಿಟ್ಟಿತು,

- ನರಸಿಂಹ ಮೂರ್ತಿಗಳೆ ನಾನು, ರಂಗಾಚಾರಿ ಚೆನ್ನಾಗಿದ್ದೀರ..., -

- ಓ ಹೋ ಆಚಾರಿ ಏನಪ್ಪ ಸಮಾಚಾರ,? ವಿಷ್ಯ ಏನಾದ್ರೂ ಗೊತ್ತಾಯ್ತ..? ಏನಂತರೆ ಹುಡ್ಗನ ಮನೆಯವರು. -

- ಮೂರ್ತಿಗಳೆ, ನಾಳೆ ಭಾನುವಾರಕ್ಕೆ ಎಲ್ಲ ಸಿದ್ಧತೆ ಮಾಡ್ಕೊಳ್ಳಿ. ನಾನು ಹುಡುಗನ ಮನೆಯವರನ್ನ ಕರ್ಕೊಂಡು, ಬೆಳ್ಳಿಗ್ಗೆ ಇಲ್ಲಿಂದ ಹೊರಟು ಊಟದ ಹೊತ್ತಿಗೆ ನಿಮ್ಮನೆಗೆ ಬರ್ತೀವಿ.
ಒಳ್ಳೆ ಹುಡ್ಗ ಮೂರ್ತಿಗಳೆ. ಕನ್ನಡಕ ಹಾಕೋತಾನೆ ಅನ್ನೋದು ಬಿಟ್ರೆ ಬೇರೆ ಏನೂ ಐಬಿಲ್ಲ. ಯಾವ ಕೆಟ್ಟ ಚಟನೂ ಇಲ್ಲ. ಒಳ್ಳೆ ಸಂಬಂಧ. ಹ್ಜ್ಞು... -

- ಆಯ್ತಪ್ಪ ರಂಗಾಚಾರಿ, ನಮ್ಮ ಪ್ರಯತ್ನ ನಾವು ಮಾಡೋಣ, ದೇವರ ಇಚ್ಚೆ ಏನಿದ್ಯೋ, ಋಣಾನುಬಂಧ ಇದ್ರೆ ನಮ್ದೇನು ಅಲ್ವ.? ಏನೋ ಗಂಡ - ಹೆಂಡ್ತಿ ಸುಖವಾಗಿದ್ರೆ ಸರಿ. ಆಯ್ತಪ್ಪ ಭಾನುವಾರಕ್ಕೆ ಕಾಯ್ತ ಇರ್ತೀನಿ, ಬಂದ್ಬಿಡಿ. -

- ಲಲ್ತ ರಂಗಾಚಾರಿ ಫ಼ೋನ್ ಮಾಡಿದ್ದ ಕಣೆ, ಹುಡ್ಗನ ಮನೆಯವರೆಲ್ಲ ಬರುವ ಭಾನುವಾರ ಬರ್ತಾರಂತೆ, ನಮ್ಮ ಶಾರದನ್ನ ನೋಡ್ಲಿಕ್ಕೆ. ಬೆಳಿಗ್ಗೇನೆ ಹೊರಟು ಬರ್ತೀವಿ ಅಂತ ಹೇಳ್ದ, ಊಟಕ್ಕೆ ಇಲ್ಲಿಗೆ ಬರ್ತಾರಂತೆ ಕಣೆ. ಒಬ್ಬಟ್ಟು ಮಾಡ್ಬಿಡೆ, ನಿನ್ನ ಕೈ ರುಚಿ ಚೆನ್ನಗಿರುತ್ತೆ. -

- ಅದೆಲ್ಲ ಅಡಿಗೆ ಮನೆ ವಿಷ್ಯ ನನಗೆ ಬಿಡಿ, ಮನೆ ಸುತ್ತ ಮುತ್ತ ಎಲ್ಲ ಸ್ವಲ್ಪ ಚೊಕ್ಕಟ ಮಾಡ್ಸಿ, ಪಕ್ಕದ ಹೂವಿನ ತೋಟದ ತುಂಬಾ ಶಾದ್ರೆ ಬೆಳ್ಕೊಂಡಿದೆ. -

- ನೀನೊಂದು ಅವ್ರೇನು ನಮ್ಮ ಶಾರದನ್ನ ನೋಡೋಕ್ಕೆ ಬರ್ತಾರೊ ಇಲ್ಲ ತೋಟ ನೋಡ್ಕೊಂಡು ಹೋಗೋಕ್ಕೆ ಬರ್ತಾರೋ.? -

- ಹಾಗಲ್ಲ ಅಂದ್ರೆ, ಬೆಂಗಳೂರಿನ ಜನ ತೋಟ ಹಸಿರು ಅಂದ್ರೆ ಸ್ವಲ್ಪ ನಿಂತು ನೋಡ್ತಾರೆ, ಏಕೇಂದ್ರೆ ಇದೆಲ್ಲ ಅವರಿಗೆ ಅಪರೂಪ ಅಲ್ವ, ಅದಕ್ಕೆ ಹೇಳ್ದೆ. -

- ಹ್ಮ್.... ಅದೂ ಸರಿನೆ ಆಯ್ತು ಬಿಡು. -

ಭಾನುವಾರದ ಹೊತ್ತಿಗೆ ಸಡಗರವೋ ಸಡಗರ ಮನೆ ಮಂದಿಗೆಲ್ಲ. ನರಸಿಂಹ ಮೂರ್ತಿಗಳಂತು ಬೀದಿ ಬಾಗಿಲಿಗೆ ಮತ್ತೆ ಅಲ್ಲಿಂದ ಹಜಾರದ ಒಳಕ್ಕೆ ಅದೆಷ್ಟು ಸಾರಿ ಸುತ್ತು ಹಾಕಿದರೊ, ಅವರಿಗೆ ತಿಳಿಯದು. ಸಾವಿರ ಸರ್ತಿ ನಾರಾಯಣನನ್ನು ಕೂಗಿ ಇದು ಅಲ್ಲಿಡು, ಇದನ್ನು ಹೊರಗೆ ಹಾಕು, ಬಾಗಿಲಿನ ಮುಂದೆ ಮಲಗುವ ನಾಯಿಯನ್ನು ಅತ್ತ ಓಡಿಸು, ಹೇಳಿದ್ದೆ ಹೇಳಿದ್ದು. ನಾರಾಯಣನಂತು ಅಡಿಗೆ ಮನೆಗೆ ಹೋಗಿ ಅಮ್ಮನ ಬಳಿ,

- ಅಮ್ಮ, ಇವತ್ತು ಅಪ್ಪ ಏಕೆ ಇಷ್ಟೊಂದು ಗಾಬರಿ ಮಾಡ್ಕೋಂಡಿದ್ದಾರೆ. -

- ಅಯ್ಯೊ ಅವ್ರು ಹಾಗೆ ಯಾರಾದ್ರೂ ಮನೆಗೆ ಬರ್ತಾರೆ ಅಂದ್ರೆ ಸಾಕು ಅದೇನೋ ಕಾತುರ, ತಾವು ನಿಂತ ಕಡೆ ನಿಲ್ಲಲ್ಲ, ಇದ್ದೋರನೆಲ್ಲ ಓಡ್ಸಾಡಿ ಬಿಡ್ತಾರೆ. -

ಅಷ್ಟರಲ್ಲಿ ನರಸಿಂಹ ಮೂರ್ತಿಗಳು ಕೂಗುತ್ತ ಒಳಗೆ ಬಂದ್ರು.

- ಲಲ್ತ ಅವ್ರು ಬಂದ್ರು ಅಂತ ಕಾಣುತ್ತೆ, ನೀನು ಮುಂಬಾಗಿಲಿಗೆ ಬಾ, ಅಡ್ಗೆ ಮನೇನ ಅವ್ರು ನೋಡ್ಕೋತಾರೆ -

ಪಕ್ಕದ ಮನೆ ಸಾವಿತ್ರಮ್ಮ ನವರು ಅಡ್ಗೆ ಕೆಲ್ಸ್ ಮುಂದುವರೆಸಿದರೆ, ಅಷ್ಟು ಹೊತ್ತೂ ಅಡಿಗೆಗೆ ಸಹಾಯ ಮಾಡುತ್ತಿದ್ದ ಶಾರದ ಮರದ ಮೇಟ್ಟಲುಗಳನ್ನೇರಿ ಅಟ್ಟಣಿಗೆಯ ಮಾಳಿಗೆಯ ಮೇಲಿದ್ದ ತನ್ನ ರೂಮಿಗೆ ಸೇರಿ ಕದ ಹಾಕಿಕೊಂಡಳು.

ಏಲ್ಲರನ್ನೂ ಬಹು ಆದರದಿಂದ ಬರಮಾಡಿಕೊಂಡರು ದಂಪತಿಗಳು,

- ಬನ್ನಿ ಬನ್ನಿ , ಪ್ರಯಾಣ ಆಯಾಸ ಅನ್ನಿಸಲಿಲ್ಲ ತಾನೆ ? - ನರಸಿಂಹ ಮೂರ್ತಿಗಳು ಕೇಳಿದ ಪ್ರಶ್ನೆಗೆ,

- ಏಸಿ ಕಾರು, ಜೊತೆಗೆ, ಬೆಂಗಳೂರಿನಿಂದ ಹೊರಗೆ ಬಂದು, ಈ ಹಳ್ಳಿಯ ವಾತಾವರಣದಲ್ಲಿದ್ದರೆ ಆಯಾಸ ಅನ್ನಿಸುವುದೆ ಇಲ್ಲ ಬಿಡಿ, ಓ.... ಮರೆತಿದ್ದೆ ನನ್ನ ಹೆಸರು ರಾಮಮೂರ್ತಿ, ಹುಡುಗನ ತಂದೆ, ಮತ್ತೆ ಈಕೆ ನನ್ನಾಕೆ ವಸುಂದರ, ಇವನು ಶ್ರೀಧರ ನನ್ನ ಮಗ. - ಅಂತ ಪರಿಚಯ ಮಾಡಿ ಕೊಂಡರು ಹುಡುಗನ ತಂದೆ.

ಎಲ್ಲರೂ ನಗನಗುತ್ತಾ ಮನೆಯ ಒಳಕ್ಕೆ ಪ್ರವೇಶಿಸಿ, ನಡುಮನೆ ಸೇರಿ ತಮಗಾಗಿ ಸಿದ್ದಪಡಿಸಿದ್ದ ಜಾಗದಲ್ಲಿ ಆಸೀನರಾದರು, ಅಷ್ಟರಲ್ಲಿ ರಂಗಾಚಾರಿ ಮಾತನಾಡುತ್ತಾ,

- ನೋಡಿ ರಾಮಮೂರ್ತಿಗಳೆ, ಇವರೂ ನಿಮ್ಮಹಾಗೆ ಮೂರ್ತಿಗಳೆ ಆದರೆ ರಾಮರಲ್ಲ ನರಸಿಂಹ ಅವತಾರಿಗಳು, ಆಮೇಲೆ ಇವರು ಅವರ ಶ್ರೀಮತಿ ಲಲಿತಮ್ಮನವರು, ಮತ್ತೆ ಅವರ ಕೊನೆ ಮಗ ನಾರಾಯಣ., ಅರೆ ಶಾರ್ದ ಎಲ್ಲಿ ಲಲಿತಮ್ಮನವರೆ? -

- ಅವಳು ನಾಚಿಗೆ ಜಾಸ್ತಿ, ಮಹಡಿ ಸೇರಿ ಬಿಟ್ಟಿದ್ದಾಳೆ, ನೀವು ಮಾತಾಡ್ತ ಇರಿ ನಾನು ಈಗ ಬಂದೆ - ಹೀಗೆನ್ನುತ್ತಾ ಮುಂದಿನ ಸಿದ್ದತೆಗೆ ಒಳ ನಡೆದರು ಲಲಿತಮ್ಮನವರು.

ಉಉಟವಾಯ್ತು, ಹುಡುಗಿ ನೋಡಿದ್ದೂ ಆಯ್ತು, ತೋಟ ಗದ್ದೆ ಪರಿಚಯವೂ ಆಯ್ತು, ಎಲ್ಲರೂ ಕೂಡಿ ಶಾರದಳನ್ನು ನೋಡಿದ ನಂತರ ಆಕೆ ಹೇಳಿದ ` ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ........ ` ದಾಸರ ಪದ ಕೇಳಿದ ಹುಡುಗನ ತಾಯಿಯಂತು ಇಂತಹ ಕಂಠ ಸಿರಿಯ ಇವಳೆ ನನ್ನ ಸೊಸೆ ಅಂತ ನಿರ್ಧರಿಸಿ ತನ್ನ ಗಂಡನ ಕಿವಿಯಲ್ಲಿ ಗುಟ್ಟು ಹೇಳಿಬಿಟ್ಟಿದ್ದೂ ಆಯ್ತು.
ಸರಿ ನಾವೂ ಯೋಚನೆ ಮಾಡುತ್ತೇವೆ, ನೀವೂ ಯೋಚಿಸಿ, ನಮ್ಮ ಮನೆಗೂ ಭೇಟಿ ಕೊಡಿ, ಯಾವುದಕ್ಕೂ ಇನ್ನೆರಡು ದಿನದಲ್ಲಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆಂದು ಹೇಳುತ್ತಾ,
ಬಂದಿದ್ದವರೆಲ್ಲ ಕಾರನ್ನು ಏರಿದರು.

ನರಸಿಂಹ ಮೂರ್ತಿಗಳ ಮನೆಯಲ್ಲಿ ಕೂಡ ಒಂದು ಹಂತಕ್ಕೆ ಎಲ್ಲರೂ ಹುಡುಗನ ಮನೆಯವರನ್ನು ಒಪ್ಪಿಯಾಗಿತ್ತು, ನರಸಿಂಹಮೂರ್ತಿಗಳು ಶಾರದಳನ್ನು ನೋಡಿ,

- ಏನಮ್ಮ ನಿನಗೆ ಏನನ್ನಿಸುತ್ತೆ, ನಮಗೆಲ್ಲ ಹುಡುಗ ಹುಡುಗನ ಮನೆಯವರೆಲ್ಲ ಹಿಡಿಸ್ತು, ಆದ್ರೂ ಜೊತೇಲಿ ಇರೋರು ನೀವು, ನಿನ್ನ ಮನಸ್ಸಿನ ಭಾವನೆ, ಸಂತೋಷ ಬಹಳ ಮುಖ್ಯ. ನಿನ್ನ ನಿರ್ಧಾರ ಹೇಳಿದ ಮೇಲೆ ಬಾಕಿ ವಿಚಾರ -

- ನನ್ನದೇನಿಲ್ಲಪ್ಪ, ನೀವುಗಳು ದೊಡ್ಡೋರು ಹೇಗೆ ಹೇಳಿದ್ರೆ ಹಾಗೆ - ಅಂದಳು ಶಾರದ ಕತ್ತು ಬಗ್ಗಿಸಿಕೊಂಡು.

- ಯೋಚ್ನೆ ಮಾಡ್ಲಿಬಿಡಿ,ಹೇಗೂ ಅವ್ರೂ ಎರಡು ದಿನ ಬಿಟ್ಟು ತಿಳಿಸ್ತೀವಿ ಅಂತ ಹೇಳಿದ್ದಾರಲ್ಲ -

- ಇಲ್ಲ ಲಲ್ತ ನನಗನ್ನಿಸಿದಂತೆ ಅವ್ರಿಗೆ ಸಂಪೂರ್ಣ ಒಪ್ಪಿಗೆ ಇದೆ, ಹಾಗೆ ಅಗ್ಲಿ ಬಿಡು ಕಾಯ್ದು ನೋಡೋಣ,ಆದ್ರೂ ಅದಕ್ಕೆ ಮುಂಚೆ ನಾವೂ ಒಂದು ತೀರ್ಮಾನ ಮಾಡಿರ್ಬೇಕಲ್ವಾ? ಅದಕ್ಕೆ ಕೇಳ್ದೆ -

- ಅವ್ಳೂ ಯೋಚಿಸಲಿ ಬಿಡಿ. -

ತಾಥಾಸ್ತು ಎಂದ ರಾಯರ ಮಾತಿಗೆ ಅಂದಿನ ಸಭೆ ಮುಕ್ತಾಯವಾಯ್ತು.

ಎರಡು ದಿನ ಮುಗಿದು ಮೂರನೆ ದಿನ ಮೂರ್ತಿಗಳು ರಂಗಾಚಾರಿಗೆ ಫ಼ೋನ್ ಮಾಡಿ, ಇನ್ನೂ ಹುಡುಗನ ಮನೆಯವರ ಅಭಿಪ್ರಾಯ ತಿಳಿಯಲಿಲ್ಲ ವಿಚಾರಿಸೋಣ ಎಂದೆಣಿಸಿ ತೋಟದ ಕಡೆಯಿಂದ ಬಂದು ಮನೆಗೆ ಪ್ರವೇಶ ಮಾಡುವುದಕ್ಕೂ, ಮನೆಯ ದೂರವಾಣಿ ರಿಂಗಣಿಸುವುದಕ್ಕೂ ಏಕ ಕಾಲ ಕೂಡಿ ಬಂತು.

- ಹಲೋ ಯಾರು..? -

- ನಮಸ್ಕಾರ ನರಸಿಂಹಮೂರ್ತಿಗಳೆ, ನಾನು ರಾಮಮೂರ್ತಿ ಮಾತಾಡ್ತಿದ್ದೀನಿ. ರಾಯರೂ ಆರೋಗ್ಯವೆ..? -

- ಓ..ಹೋ.... ನಮಸ್ಕಾರ ನಮಸ್ಕಾರ. ತಾವು ತಮ್ಮ ಮನೆಯವರೆಲ್ಲ ಆರೋಗ್ಯವೆ..? ತಮ್ಮ ಫ಼ೋನಗಾಗೆ ಎದುರು ನೋಡ್ತಿದ್ದೆ. ಇದೀಗ ರಂಗಾಚಾರೀನ ವಿಚಾರ್ಸಿ ನಂತರ ತಮಗೆ ಫ಼ೋನ್ ಮಾಡೋಣ ಅನ್ಕೋತಿದ್ದೆ, ನೆನೆದವರ ಮನದಲ್ಲಿ ಅನ್ನೋಹಾಗೆ ತಾವೆ ಕರೆ ಮಾಡಿದ್ದೀರ. ಇರ್ಲಿ, ಅಂದಹಾಗೆ ನಿಮ್ಮ ಮಗ ಹಾಗೂ ಮನೆಯವರ ಅಭಿಪ್ರಾಯ ಏನು ಸ್ವಾಮಿ. -

- ಕಂಡಿತ ನರಸಿಂಹ ಮೂರ್ತಿಗಳೆ ಆ ವಿಚಾರವಾಗೆ ಫ಼ೋನ್ ಮಾಡ್ದೆ. ನಮಗಂತು ನಿಮ್ಮ ಮನೆ, ನಿಮ್ಮ ಮಗಳು, ನೀವೆಲ್ಲ ನೀಡಿದ ಆದರದ ಆತಿಥ್ಯ ತುಂಬ ಹಿಡ್ಸಿದೆ ಸ್ವಾಮಿ, ನಮ್ಮ ಕಡೆಯಿಂದ ಅಂತು ಹುಡ್ಗೀನ ಮನೆ ತುಂಬಿಸಿ ಕೊಳ್ಳೋದಿಕ್ಕೆ ಎಲ್ಲರಿಗೂ ಸಂಪೂರ್ಣ ಒಪ್ಪಿಗೆ ಇದೆ. ಇನ್ನು ತಮ್ಮ ಮನದ ಅಭಿಪ್ರಾಯ ತಿಳಿಸಿದ್ರೆ ಬಾಕಿ ವಿಷ್ಯ ಮುಂದುವರಿಸಬಹುದು. -

- ಕಂಡಿತ, ಹಾಗೆ ಆಗ್ಲಿ ಸ್ವಾಮಿ, ನಮಗೂ ನಿಮ್ಮ ಹುಡುಗನಿಗೆ ನಮ್ಮ ಮಗಳನ್ನು ಮದುವೆ ಮಾಡಿ ಕೊಡಲು ಏನೂ ಅಭ್ಯಂತರವಿಲ್ಲ, ನಿಮ್ಮ ಹುಡುಗನ ಅಲ್ಲಲ್ಲ ನಮ್ಮ ಅಳಿಯನ ಜಾತಕನ ನಮ್ಮ ರಂಗಾಚಾರಿ ಕೈಲಿ ತಲುಪಿಸಿ, ಹುಡುಗ ಹುಡುಗಿ ಇಬ್ಬರ ಜಾತಕ ತೋರ್ಸಿ ಒಳ್ಳೆ ಮಹೂರ್ತ ಇಡಿಸೋಣ, ನಮ್ಮೂರಿನಲ್ಲಿ ಹನುಮಂತ ಶಾಸ್ತ್ರಿ ಅಂತ ಇದ್ದಾರೆ, ಅವರು ಒಳ್ಳೆ ಲಗ್ನ ಇಟ್ಟು ಕೊಡ್ತಾರೆ, ಏನಂತೀರ.? -

- ಅಯ್ಯೋ ಈ ಜಾತ್ಗ ಗೀತ್ಗ ಎಲ್ಲ ನಮಗೆ ನಂಬಿಕೆ ಇಲ್ಲ, ಇರ್ಲಿ ಬಿಡಿ ನಿಮ್ಮ ಸಂತೋಷ ಕಳಿಸ್ತೀನಿ. ಆಮೇಲೆ ನೀವೆಲ್ಲ ಒಮ್ಮೆ ನಮ್ಮ ಮನೇಗೆ ಬನ್ನಿ. -

ಅಂತ ಹೇಳಿ ಆ ಕಡಿಯಿಂದ ಫ಼ೋನ್ ಕಟ್ ಆಯ್ತು. ಹಿಂದೆ ನಿಂತ ಲಲಿತಮ್ಮನವರು, ಬಾಗಿಲ ಮರೆಯಲ್ಲಿ ನಿಂತ ಶಾರದಳನ್ನು ಉದ್ದೇಶಿಸಿ, ನರಸಿಂಹ ಮೂರ್ತಿಗಳು

- ಲಲ್ತ ಅದೆ ಮೊನ್ನೆ ಬೆಂಗಳೂರಿಂದ ಬಂದಿದ್ರಲ್ಲ ಅವ್ರದ್ದೆ ಫ಼ೋನು. ಅವ್ರಿಗೆ ನಮ್ಮ ಶಾರದ ಮತ್ತು ನಮ್ಮ ಮನೆ ಎಲ್ಲ ಒಪ್ಪಿಗೆಯಾಗಿದೆ. ನಮ್ಮನ್ನೂ ಅವರಮನೆಗೆ ಬನ್ನಿ ಅಂತ ಹೇಳಿದ್ದಾರೆ. ಯಾವುದಕ್ಕೂ ಅವರ ಮಗನ ಜಾತಕಾನೂ ಕೇಳಿದ್ದೇನೆ. ನೆನ್ನೆ ಸಂಜೆ ಮಾತಾಡಿದಾಗಲೂ ನಮಗೆಲಾ ಒಪ್ಪಿಗೆ ಇರೋ ಅಭಿಪ್ರಾಯ ಇದ್ದಿದ್ದರಿಂದ, ನಮಗೂ ಒಪ್ಪಿಗೆ ಇದೆ ಅಂತ ತಿಳಿಸಿದ್ದೇನೆ,
ಸರೀನ ಲಲ್ತ.

- ಹೋಗ್ಲಿ ಬಿಡಿ ಒಳ್ಳೇದೆ ಆಯ್ತು. ನೋಡಿದ್ರೆ ಒಳ್ಳೆ ಜನ ಕಂಡಹಾಗೆ ಕಾಣ್ತಾರೆ. ಹೇಗೋ ನಮ್ಮ ಶಾರದ ಚೆನ್ನಾಗಿದ್ರೆ ಸಾಕು. -

- ಏನಮ್ಮ ಶಾರದ ಸಂತೋಷನಾ?. -

 ಕತ್ತನ್ನು ಬಗ್ಗಿಸಿಕೊಂಡೆ, ನಿಮ್ಮಿಷ್ಟದಂತೆ ಆಗಲಿ ಎಂದು ಸೂಚಿಸಿ ಮಹಡಿಯ ತನ್ನ ಕೋಣೆ ಸೇರಿಕೊಂಡಳು ಶಾರದ.

ಇನ್ನು ಮುಂದಿನ ಕೆಲಸಗಳಬಗ್ಗೆ, ಸಿದ್ದತೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡ ದಂಪತಿಗಳು, ರಂಗಾಚಾರಿಯ ಜೊತೆ ಚರ್ಚಿಸಿ ಗಂಡಿನ ಕಡೆಯವರ ಮನೆಗೆ ಭೇಟಿ ಕೊಡುವ ಬಗ್ಗೆ ನಿರ್ಧರಿಸಬೇಕೆಂದು ಕೊಂಡರು. ಅಂದು ಸಂಜೆ ನರಸಿಂಹ ಮೂರ್ತಿಗಳು, ಹನುಮಂತ ಶಾಸ್ತ್ರಿಗಳನ್ನು ಕಂಡು ಬರುವುದಾಗಿ ಹೇಳಿ ಊರ ಮುಂದಿನ ಹನುಮಂತನ ದೇವಸ್ಥಾನದ ಕಡೆ ಹೊರಟರು.

*********************

ಮುಂದುವರೆಯುವುದು..........

 

Rating
No votes yet

Comments