ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ
(ಪ್ರಿಯ ಸಂಪದ ಬಂಧುಗಳೇ,
ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
ಪ್ರೀತಿಯಿಂದ,
ಶಶಿ)
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತು ವರುಷವೇ ಕಳೆದಿದೆ. ಕನ್ನಡ 'ಶಾಸ್ತ್ರೀಯ ಭಾಷೆ'ಎಂದು ಘೋಷಣೆಯಾದ ಬಳಿಕ ಒಂದು ಕನ್ನಡ ರಾಜ್ಯೋತ್ಸವ ಕಳೆದು ಮತ್ತೊಂದು ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕ ಸಜ್ಜಾಗಲಿದೆ. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಪಟ್ಟದಿಂದಾಗಿ ಸಿಗಬೇಕಾದ ಸವಲತ್ತುಗಳನ್ನು ಸಂಪೂರ್ಣವಾಗಿ ಇನ್ನೂ ಪಡೆಯಲಾಗಲಿಲ್ಲ. ಇದಕ್ಕೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮುಖ್ಯವಾದ ಕಾರಣವಾದರೂ, ತಮಿಳುನಾಡಿನಲ್ಲಿ ಗಾಂಧಿ ಎಂಬ ವ್ಯಕ್ತಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರ ವಿರುದ್ಧ ಹೂಡಿದ್ದ ಮೊಕದ್ದಮೆಯೂ ಕಾರಣವಾಗಿತ್ತು. ಕೇಂದ್ರದಲ್ಲಿ ಹೊಸ ಸರಕಾರ ರಚನೆಯಾದ ನಂತರ, ಸರಕಾರ ರಚಿಸಿದ ಯುಪಿಎನಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವವರು ಕನ್ನಡಿಗರೇ ಆಗಿರುವುದು ಕನ್ನಡಕ್ಕೆ ಒಂದು ರೀತಿಯ ವರವಾಗಿದೆ. ಹಾಗಾಗಿಯೇ, ಇಂದು ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮುಂದುವರಿಸಲು ಕೇಂದ್ರ ಸರಕಾರ ಸಂಬಂಧಿಸಿದ ಇಲಾಖೆಗೆ ಹಸಿರು ನಿಶಾನೆ ತೋರಿಸಿದೆ.
ಈ ಯೋಜನೆಗಳನ್ನು ಮುಂದುವರಿಸುವ ಸಲುವಾಗಿಯೇ ಶಾಸ್ತ್ರೀಯ ಕನ್ನಡ ಯೋಜನೆಗಳು ಕುರಿತು ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಏಪ್ರಿಲ್ 19&20ರಂದು 2 ದಿನಗಳ ಕಾಲ ಐತಿಹಾಸಿಕ ಸಮಾವೇಶ ನಡೆಯಿತು. ನಾಡಿನ ಬೇರೆ ಬೇರೆ ಮೂಲೆಗಳಿಂದ ಹಳೆ ತಲೆಮಾರಿನ ಹಳೆಗನ್ನಡ ವಿದ್ವಾಂಸರು ಹಾಗೂ ಹೊಸ ತಲೆಮಾರಿನ ಕನ್ನಡ ವಿದ್ವಾಂಸರು ಎಲ್ಲರೂ ಈ ಸಮಾವೇಶದಲ್ಲಿ ನೆರೆದಿದ್ದರು. ಪ್ರಮುಖವಾಗಿ ಕನ್ನಡಕ್ಕೆ ಶಾಸ್ತ್ರೀಯ ಕನ್ನಡ ಪಟ್ಟ ದೊರೆಕಿಸಿಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಸಮಾವೇಶದ ಪ್ರಮುಖ ಆಕರ್ಷಣೆಯಾಗಿದ್ದರು. ಇವರೊಂದಿಗೆ ನಾಡಿನ ಪ್ರಮುಖ ಹಳೆಗನ್ನಡ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಕೂಡ ಸೇರಿದ್ದರು. ಇವರು ಈಗಾಗಲೇ ಕನ್ನಡ ಅಭಿಜಾತ ಸಾಹಿತ್ಯ - ಅಧ್ಯಯನದ ಅವಕಾಶಗಳು ಆಹ್ವಾನಗಳು ಪುಸ್ತಕ ರಚಿಸಿದ್ದು, ಕನ್ನಡ ವಿಶ್ವವಿದ್ಯಾಲಯ,ಹಂಪಿಯು ಪ್ರಕಟಿಸಿದೆ. ಆದರೆ,ಕನ್ನಡವನ್ನು 'ಶಾಸ್ತ್ರೀಯ ಭಾಷೆ'ಎಂದು ಪಟ್ಟ ಹಿಡಿದು ನಮ್ಮ ನಾಡಿನಲ್ಲಿ ಹಾಗೂ ದೆಹಲಿಯಲ್ಲಿ ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ನಾಡೋಜ ದೇಜಗೌ ಅನಾರೋಗ್ಯದ ಕಾರಣ ಸಮಾವೇಶಕ್ಕೆ ಬಂದಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಹಾಗೂ ಕಾರ್ಯದರ್ಶಿಗಳಾದ ಶ್ರೀ ಜಯರಾಮ ರಾಜೇ ಅರಸ್ ಕೂಡ ಭಾಗವಹಿಸಿದ್ದರು. ಹಿರಿಯ ಭಾಷಾತಜ್ಞ, ನಾಟಕಕಾರ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಅಧಿಕೃತವಾಗಿ ಶ್ರಮಿಸಿದ ಪ್ರೊ.ಲಿಂಗದೇವರು ಹಳೆಮನೆ ಸಮಾವೇಶವನ್ನು ಸಂಯೋಜಿಸಿದ್ದರು.ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ.ರಾಜೇಶ್ ಸಚ್ ದೇವ್ ಕೂಡ ಸಮಾವೇಶದಲ್ಲಿ ಹಾಜರಿದ್ದು, ಕನ್ನಡೇತರರಾಗಿದ್ದರೂ ಕನ್ನಡದಲ್ಲಿಯೇ ಮಾತನಾಡಿ ಹಲವಾರು ವರುಷಗಳ ಕಾಲ ಮೈಸೂರಿನಲ್ಲಿ ವಾಸವಾಗಿರುವುದರಿಂದ ಕನ್ನಡದೊಂದಿಗೆ ತಾವು ಹೊಂದಿರುವ ಒಡನಾಟವನ್ನು ತೋರಿಸಿದರು.
ನೆರೆದಿದ್ದ ಬಹುಪಾಲು ಮಂದಿ ಹಿರಿಯ ವಿದ್ವಾಂಸರು 'ಶಾಸ್ತ್ರೀಯ' ಎನ್ನುವಂತಹ ಆಲೋಚನೆಗಳನ್ನು ಹೊರಹಾಕಿದರೆ, ಹೊಸ ತಲೆಮಾರಿನ ವಿದ್ವಾಂಸರು ಹೊಸ ಹೊಸ ಆಲೋಚನೆಗಳನ್ನು ಹೊಮ್ಮಿಸಿದರಲ್ಲದೆ, ಶಾಸ್ತ್ರೀಯ ಕನ್ನಡ ಹಾಗೂ ಆಧುನಿಕ ಕನ್ನಡ ಎರಡನ್ನೂ ಬೆಸೆಯುವಂತಹ ಯೋಜನೆಗಳನ್ನು ಹಾಕಿಕೊಳ್ಳುವಂತೆ ಸಲಹೆಯಿತ್ತಿದ್ದು, ಕನ್ನಡ 'ಹಳೆಬೇರು, ಹೊಸ ಚಿಗುರು ಕೂಡಿರಲು ಮರಸೊಬಗು'ಎಂಬಂತೆ ಹಳೆ ಹೊಸ ತಲೆಮಾರುಗಳು ಮೇಳೈಸಿದಂತೆ ಸೊಗಸಾದ ಚಿಂತಕರು, ಕ್ರಿಯಾಶೀಲ ವ್ಯಕ್ತಿಗಳನ್ನು ಹೊಂದಿದೆ ಎನ್ನುವುದನ್ನು ತೋರಿಸುತ್ತಿತ್ತು.
ಹೆಚ್ಚೂ ಕಡಿಮೆ ಆಹ್ವಾನಿತರಾಗಿದ್ದ ಬಹುಪಾಲು ವಿದ್ವಾಂಸರು ಮೊದಲನೆಯದಾಗಿ ಚರ್ಚಿಸಿದ್ದು 'ಶಾಸ್ತ್ರೀಯ ಕನ್ನಡ'ಎನ್ನುವುದು ಸರಿಯೇ ಅಥವಾ 'ಅಭಿಜಾತ ಕನ್ನಡ'ಎನ್ನುವುದು ಸರಿಯೇ ಅಥವಾ ತಮಿಳರು ತಮ್ಮದೇ ಆದ 'ಚೆಮ್ಮೊಳಿ'ಎಂಬ ಶಬ್ದವನ್ನು ಟಂಕಿಸಿರುವ ಹಾಗೆ ಕನ್ನಡದಲ್ಲೂ ಕನ್ನಡದ್ದೇ ಆದ ಶಬ್ದವನ್ನು ಟಂಕಿಸಬೇಕೇ ಎಂಬುದು. ಆ ವಿಷಯವಾಗಿ ನನ್ನ ಮುಂದಿನ ಲೇಖನದಲ್ಲಿ ವಿವರವಾಗಿ ಬರೆಯಲಿದ್ದೇನೆ.
ಕೇಂದ್ರ ಸರಕಾರವು ಕನ್ನಡವನ್ನು 'ಶಾಸ್ತ್ರೀಯ ಭಾಷೆ'ಎಂದು ಘೋಷಿಸುವುದಕ್ಕೆ ಕೆಲವೇ ದಿನಗಳ ಮುನ್ನ ಅಂದರೆ, ಅಕ್ಟೋಬರ್ 28, 2008ರಂದು ನಾನು ಇದೇ ಸಂಪದದಲ್ಲಿ 'ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ'(http://sampada.net/article/13339) ಎಂಬ ಲೇಖನವನ್ನು ಪ್ರಕಟಿಸಿದ್ದೆ. ನವೆಂಬರ್ 1, 2008ರಂದು ಅಂದರೆ ಕನ್ನಡ ರಾಜ್ಯೋತ್ಸವದ ದಿನದಂದು ಕೇಂದ್ರ ಸರಕಾರ ಕನ್ನಡವನ್ನು 'ಶಾಸ್ತ್ರೀಯ ಭಾಷೆ'ಎಂದು ಘೋಷಿಸಿತು. ಇದಾದ ನಂತರ ನಾನು ನವೆಂಬರ್ 6, 2008ರಂದು ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು - (http://sampada.net/article/13339)ಎಂಬ ಲೇಖನವನ್ನೂ ಬರೆದು ಪ್ರಕಟಿಸಿದ್ದೆ.
ಇಂದು ನಮ್ಮ ನಾಡಿನ ಜನಸಾಮಾನ್ಯ ಕನ್ನಡಿಗರಿಗೆ 'ಶಾಸ್ತ್ರೀಯ ಕನ್ನಡ'ಎಂದರೇನು, ಇದರಿಂದ ಕನ್ನಡಕ್ಕಾಗುವ ಪ್ರಯೋಜನ, ಲಾಭಗಳೇನು ಎಂಬುದು ತಿಳಿಯದಾಗಿದೆ. ನಾಡಿನ ಪ್ರಮುಖ ಜನಪರ, ವಸ್ತುನಿಷ್ಟ ಪತ್ರಿಕೆಯಾದ ಪ್ರಜಾವಾಣಿಯಲ್ಲು ಕೂಡ ಈ ಸಮಾವೇಶದ ಬಗ್ಗೆ ದೊಡ್ಡ ಸುದ್ದಿ ಪ್ರಕಟವಾಗದಿರುವುದು ನನ್ನಂತಹ ಕನ್ನಡಿಗರಲ್ಲಿ ಅಚ್ಚರಿ ಹುಟ್ಟಿಸಿದೆ. ಬೇರೆ ಪತ್ರಿಕೆಗಳಲ್ಲಿ ಈ ಬಗ್ಗೆ ವಿಶೇಷ ಸುದ್ದಿ ಅಥವಾ ಲೇಖನ ಪ್ರಕಟವಾಗಿದೆಯೇ ಎಂಬುದರ ಬಗ್ಗೆ ನನಗೆ ತಿಳಿಯದು.
ಈ ಸಮಾವೇಶದಲ್ಲಿ ಚರ್ಚಿತವಾದ ವಿಷಯಗಳು ಹಾಗೂ Classical Kannadaಕ್ಕೆ ಸಂವಾದಿಯಾಗಿ ಸಿರಿಗನ್ನಡ, ತಿಳಿಗನ್ನಡ, ಶಾಸ್ತ್ರೀಯ ಕನ್ನಡ, ಇತ್ಯಾದಿಗಳಲ್ಲಿ ಯಾವುದು ಸೂಕ್ತ ಎಂಬುದರ ಬಗ್ಗೆ ನನ್ನ ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇನೆ.