ಶ್ರೀ ದೇವು ಹನೇಹಳ್ಳಿ ಅವರ "ಪಬ್ಬು ಹಬ್ಬಿಸಿದ ಗಬ್ಬು" ಲೇಖನಕ್ಕೆ ಪ್ರತಿಕ್ರಿಯೆ

ಶ್ರೀ ದೇವು ಹನೇಹಳ್ಳಿ ಅವರ "ಪಬ್ಬು ಹಬ್ಬಿಸಿದ ಗಬ್ಬು" ಲೇಖನಕ್ಕೆ ಪ್ರತಿಕ್ರಿಯೆ

ಉದಯವಾಣಿಯಲ್ಲಿ ಮತ್ತು ಸಂಪದದಲ್ಲಿ ದಿನಾಂಕ ೦೨.೦೨.೨೦೦೯ ರಂದು ಪ್ರಕಟವಾದ ಶ್ರೀ ದೇವು ಹನೇಹಳ್ಳಿಯವರು ಬರೆದ "ಪಬ್ಬು ಹಬ್ಬಿಸಿದ ಗಬ್ಬು" ಲೇಖನಕ್ಕೆ ಇದು ಪ್ರತಿಕ್ರಿಯೆ. (ನನ್ನ ಈ ಪ್ರತಿಕ್ರಿಯೆ ಉದಯವಾಣಿಯಲ್ಲಿ ದಿನಾಂಕ ೧೦-೨-೨೦೦೯ ರಂದು ಪ್ರಕಟವಾಗಿದೆ.)
ಶ್ರೀ ದೇವು ಹನೇಹಳ್ಳಿ ಅವರ ಲೇಖನದ ಕೊಂಡಿ http://sampada.net/article/16391

ಕದ್ರಿ ಪಾರ್ಕ್‌ನಲ್ಲಿ ನಡೆದ ಮಹಿಳಾ ಸಂಘಟನೆಯ "ಕಾನೂನನ್ನು ಕೈಗೆತ್ತಿಕೊಳ್ಳಲು ಇವರು ಯಾರು ?" - ಎನ್ನುವ ಪ್ರಶ್ನೆಗೆ ದೇವು ಹನೆಹಳ್ಳಿ ಅವರು ತಾವೇ ನೀಡಿದ ಉತ್ತರ ಹಾಸ್ಯಾಸ್ಪದ. ಪಬ್ಬುಗಳಿಗೆ ಹೋಗುವವರನ್ನು "ಕೇಳಬೇಕಾಗಿದ್ದವರು ಕೇಳದಿದ್ದಾಗ ಕೇಳಬಾರದವರು ಕೇಳಬಾರದ ರೀತಿಯಲ್ಲಿ ಕೇಳುತ್ತಾರೆ" ಎನ್ನುವುದು ಅವರ ಸಮಜಾಯಿಷಿ. ದೇವು ಹನೆಹಳ್ಳಿಯವರ ಪದಲಾಲಿತ್ಯದ ಬಗ್ಗೆ ಮೆಚ್ಚುಗೆಯಾದರೂ ಈ ಪದಗಳ ದೊಂಬರಾಟದ ನಡುವೆ ಮಹಿಳೆಯರ ಮೇಲೆ ದೇಶದ ಸಂಸ್ಕೃತಿಯನ್ನು ಕಾಪಾಡುವ ನೆಪದಲ್ಲಿ ನಡೆದ ದಾಳಿಯನ್ನು ಸಮರ್ಥಿಸಿಕೊಂಡಂತಾಗುತ್ತದೆ ಎಂಬುವುದನ್ನು ಮರೆಯುತ್ತಾರೆ.

ಈ ದೇಶದ ಸಂಸ್ಕೃತಿಯನ್ನು ಪಾಲಿಸುವುದು ಮತ್ತು ಉಳಿಸಿಕೊಳ್ಳುವುದು ಕೇವಲ ಮಹಿಳೆಯರ ಜವಾಬ್ದಾರಿಯೇ?

ಅನಾದಿಕಾಲದಿಂದಲೂ ಪುರುಷರು ಹೆಂಡದಂಗಡಿಗಳಿಗೆ, ಪಬ್ಬು, ಬಾರ್‌ಗಳಿಗೆ ಹೋಗಿ ದುಡಿದ ದುಡ್ಡನ್ನೆಲ್ಲ ಕುಡಿತ ಹಾಗೂ ಇನ್ನಿತರ ಚಟಗಳಿಗೆ ಪೋಲುಮಾಡಿ ಹೆಂಡತಿಯರೊಡನೆ ಇನ್ನಷ್ಟು ದುಡ್ಡಿಗಾಗಿ ಜಗಳವಾಡಿ ಹೊಡೆದು ಬಡಿದು ಸಾಯಿಸುವಾಗ ಈ "ಕೇಳಬಾರದ ರೀತಿಯಲ್ಲಿ ಕೇಳುವವರು" ಎಲ್ಲಿದ್ದರು?

ಪ್ರತಿದಿನ ಪತ್ರಿಕೆ ತೆಗೆದು ನೋಡಿದಾಗ ಗಂಡನ ದುಶ್ಚಟಗಳಿಂದ ರೋಸಿಹೋಗಿ, ವರದಕ್ಷಿಣೆಯ ಕಿರುಕುಳವನ್ನು ತಾಳಲಾರದೆ ತನ್ನ ಮಕ್ಕಳೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾಯುವ ಅಮಾಯಕ ಹೆಂಗಸರ ರಕ್ಷಣೆಗೆ ಇದುವರೆಗೆ ಅದೆಷ್ಟು ಮಂದಿ ಸ್ವಘೋಷಿತ ಸಂಸ್ಕೃತಿ ರಕ್ಷಕರು ಧಾವಿಸಿದ್ದಾರೆ?

ಕಾಮುಕ ಗಂಡಸರ ಪೈಶಾಚಿಕ ಕೃತ್ಯಗಳಿಗೆ ಬಲಿಯಾಗಿ ಜೀವನದ ಮಹತ್ವವನ್ನೇ ಕಳೆದುಕೊಂಡ ಅದೆಷ್ಟು ಮಂದಿ ಹೆಂಗಸರಿಗೆ, ಈಗ ಪಬ್ಬು ಸಂಸ್ಕೃತಿ ಹಾಳು ಎಂದು ಹಲುಬುವ ಮತ್ತು ಹೆಂಗಸರ ಮೇಲೆ ನಡೆದ ದಾಳಿಗಳನ್ನು ಸಮರ್ಥಿಸುವ ನಮ್ಮ ಪುರುಷ ಶಿಖಾಮಣಿಗಳು ಸಹಾಯ ಹಸ್ತ ಒದಗಿಸಿದ್ದಾರೆ?

ಬಹುಶಃ ಇಲ್ಲಿ ಕೂಡ "ಕೇಳುವವರು ಕೇಳದಿರುವಾಗ" "ಕೇಳಬಾರದ ರೀತಿಯಲ್ಲಿ ಕೇಳುವ" ವಿಧಾನಗಳಿಗೆ ಮಹಿಳೆಯರು ತೊಡಗಬೇಕೆ? "ಕಾನೂನನ್ನು ಕೈಗೆತ್ತಿಕೊಳ್ಳಲು" ಮಹಿಳೆಯರಿಗೆ ಇದೊಂದು ಆಹ್ವಾನ ಇರಬಹುದೇ? ಪಬ್ ಸಂಸ್ಕೃತಿಯನ್ನು ಸಮರ್ಥಿಸುವುದು ನನ್ನ ಈ ಲೇಖನದ ಉದ್ದೇಶ ಖಂಡಿತ ಅಲ್ಲ. ನಮ್ಮ ಯುವಜನರು ಒಳಿತು ಮತ್ತು ಕೆಡುಕುಗಳ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ಗ್ರಹಿಸಬಲ್ಲರು. ಮತ್ತು ಅದರ ನಡುವಿನ ಆಯ್ಕೆಯನ್ನು ಕೈಗೊಳ್ಳಲು ಬೇಕಾದ ಬುದ್ಧಿಮತ್ತೆಯೂ ಅವರಿಗೆ ಇದೆ.

"ಪಬ್ ಸಂಸ್ಕೃತಿಯಿಂದ ಯಾರೂ ಉದ್ಧಾರವಾಗುವುದಿಲ್ಲ, ಇದರಿಂದ ನಮ್ಮ ಯುವ ಜನತೆ ತಪ್ಪು ದಾರಿ ಹಿಡಿಯುತ್ತಾರೆ" ಎಂಬ ವಾದ ಇಲ್ಲಿ, ಈ ಹೊತ್ತಿಗೆ ಪ್ರಧಾನಭೂಮಿಕೆಯಲ್ಲಿರಬೇಕಾದ ವಿಷಯವಲ್ಲ. ಅದೊಂದು ಸಮಗ್ರವಾಗಿ ಆದರೆ ಪ್ರತ್ಯೇಕವಾಗಿ ಚರ್ಚಿಸಬೇಕಾದ ವಿಷಯ. ನಾವಿಲ್ಲಿ ಚರ್ಚಿಸಬೇಕಾದ ಮುಖ್ಯ ವಿಷಯವನ್ನು ಇದು ದಿಕ್ಕು ತಪ್ಪಿಸುತ್ತದೆ ಮತ್ತು ಇದು ಆ ಕೃತ್ಯವನ್ನು ಮಾಡಿದವರ ಉದ್ದೇಶವೂ ಕೂಡ ಆಗಿದೆ.

ಈ ಹಾಳು ಪಬ್ ಸಂಸ್ಕೃತಿ ಪುರುಷ ಹಾಗೂ ಮಹಿಳೆಯರಿಗೂ ಅನ್ವಯಿಸುವಾಗ ಇದರಲ್ಲಿ ಲಿಂಗಭೇದ ಯಾಕೆ ಎನ್ನುವುದೇ ನನ್ನ ಪ್ರಶ್ನೆ. ಪಬ್ ಸಂಸ್ಕೃತಿ ಗಂಡು, ಹೆಣ್ಣು ಇಬ್ಬರನ್ನೂ ತಪ್ಪು ದಾರಿಗೆ ಎಳೆಯುವುದಿಲ್ಲವೇ? ಪಬ್ ಎಷ್ಟು ಹಾಳೋ ಅಷ್ಟೇ ಬಾರ್‌ಗಳು ಹಾಳಲ್ಲವೇ? ಆದರೆ ಅದೆಷ್ಟು ಕುಂಟುಂಬಗಳನ್ನು ಬೀದಿ ಪಾಲು ಮಾಡಿ ನಾಶಪಡಿಸಿದ ಈ ಬಾರ್‌ಗಳಿಗೆ ಹೋಗುವ ಪುರುಷರ ಬಗ್ಗೆ ಯಾಕೆ ಯಾರು ಸೊಲ್ಲೆತ್ತುವುದಿಲ್ಲ.

ಕದ್ರಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಚರ್ಚೆಯಲ್ಲಿ ಪಾಲುಗೊಂಡ ಮಹಿಳೆಯರು ಪಬ್‌ಗಳಿಗೆ ಹೋಗುವುದು ಅಥವಾ ಕುಡಿಯುವುದು ನಮ್ಮ ವೈಯುಕ್ತಿಕ ನಿರ್ಧಾರ, ಸ್ವಾತಂತ್ರ್ಯ ಮತ್ತು ಹಕ್ಕು ಎಂದು ಹೇಳುವುದರಲ್ಲಿ ತಪ್ಪು ಏನು ? ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಕಾಳಜಿ ಇರುವ ಸ್ವಘೋಷಿತ ಸಂಸ್ಕೃತಿ ರಕ್ಷಕರು ಇಡೀ ದೇಶದಲ್ಲಿ ಪಾನ ನಿಷೇದ ಜಾರಿಗೆ ತರಲು ಶ್ರಮಿಸಿದ್ದಲ್ಲಿ ಅವರ ದೇಶ ಪ್ರೇಮ ಮೆಚ್ಚತಕ್ಕದ್ದು.

"ಪಾನ ನಿಷೇದ ಮಾಡಿದ್ದಲ್ಲಿ ಕುಡುಕರ ಸ್ವಾತಂತ್ರ್ಯ ಹರಣವಾಗುವುದಿಲ್ಲವೇ" ಎಂದು ಪ್ರಶ್ನಿಸುವ ಲೇಖಕರು ಮಹಿಳೆಯರಿಗೆ ಸಾರ್ವಜನಿಕವಾಗಿ ಹೊಡೆದು ಬಡಿದು ಸಂಸ್ಕೃತಿಯ ಹೆಸರಿನಲ್ಲಿ ಅವರ ಮೇಲೆ ದೌರ್ಜನ್ಯ ಎಸಗಬಹುದು ಎಂದು ಪರೋಕ್ಷವಾಗಿ ಪ್ರತಿಪಾದಿಸುತಿರುವುದು ಖೇದಕರ.

ಕದ್ರಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಪುರುಷರು ಸೇರಿದಂತೆ ಹಲವು ಮಹಿಳೆಯರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ವಾದ ವಿವಾದಗಳನ್ನು ಮುಂದಿಟ್ಟರು. ಪಬ್ ಸಂಸ್ಕೃತಿ ಒಳ್ಳೆಯೊದೋ ಕೆಟ್ಟದೋ ಎಂದು ಚರ್ಚಿಸುವುದು ಈ ಸಂಘಟನೆಯ ಉದ್ದೇಶವಾಗಿರಲಿಲ್ಲ. ಮಹಿಳೆಯರಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಬೇಲಿ ಹಾಕಿ ಕಾನೂನು ಕೈಗೆತ್ತಿಕೊಂಡವರ ವರ್ತನೆಯನ್ನು ಖಂಡಿಸಿ, ಅದರ ವಿರುದ್ದ ಜನಾಭಿಪ್ರಾಯ ಮೂಡಿಸಿ ಮಹಿಳೆಯರನ್ನು ಎಚ್ಚರಗೊಳಿಸುವುದೇ ಇದರ ಉದ್ದೇಶವಾಗಿತ್ತು. ಯಾರೋ ಭಾವೋದ್ವೇಗದಿಂದ "ನಾವು ಈಗ ಪಬ್‌ಗೆ ಹೋಗೋಣ" ಎಂದು ಹೇಳಿದ್ದನ್ನು ಮುಖ್ಯವಾಗಿಸಿ ನಾವು ಬಾರ್‌ಗೆ ಹೋಗಿ ಕುಡಿಯೋಣ ಎಂದು ತಿರುಚಿ ಈ ಲೇಖನದಲ್ಲಿ ಉಲ್ಲೇಖಿಸಿದ್ದು ಲೇಖನದ ಉದ್ದೇಶವನ್ನು ತೆರೆದಿಡುತ್ತದೆ. ಕೇವಲ ಮಹಿಳೆಯರ ವಿರುದ್ಥ ಕಿಡಿ ಕಾರುವುದೇ ಈ ಲೇಖನದ ಉದ್ದೇಶ ಎನ್ನುವ ಸಂಶಯ ಇದನ್ನು ಓದಿದ ಹಲವರಿಗೆ ಬಂದಿರುವುದು ಸಹಜ.

ಕದ್ರಿ ಸಮಾವೇಶದಲ್ಲಿ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದವರಲ್ಲಿ ತಮ್ಮ ಮಕ್ಕಳು ಕುಡಿಯುವುದನ್ನು ಸಮರ್ಥಿಸುವಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಯಾರೂ ನೀಡಿಲ್ಲ. ಬದಲಾಗಿ ಪಬ್ಬ್ ಸಂಸ್ಕೃತಿ ನಮಗೆ ಹೇಳಿದ್ದಲ್ಲ ಎಂದು ಹೇಳಿದವರೇ ಜಾಸ್ತಿ. ಮಹಿಳೆಯರು ತಮ್ಮ ಆಯ್ಕೆ, ಹಕ್ಕು, ಸ್ವತಂತ್ರ್ಯ ಎಂದು ಬೀದಿಗಿಳಿದಿರುವುದು ದೇವು ಹನೆಹಳ್ಳಿಯವರು ಹೇಳಿಕೊಂಡಂತೆ ಅವರಲ್ಲಿ ಭಯ ಹುಟ್ಟಿಸಿರಬೇಕು. ಅದೇ ರೀತಿ ಮಹಿಳಾ ಶರಾಬು ಮತ್ತು ಶರಾಬು ಎಂದು ವಿಂಗಡಣೆ ಮಾಡಿರುವುದೂ ಇವರ ಮೇಲ್ ಚವನಿಸಂಗೆ ಇನ್ನೊಂದು ಉದಾಹರಣೆ.

ನಮ್ಮಲ್ಲಾಗುವ ಪ್ರತಿಯೊಂದು ಲೋಪದೋಷಗಳಿಗೆ ಪೋಲಿಸರನ್ನು ದೋಷಿಸುವುದು ಸರ್ವೇಸಾಮಾನ್ಯ. ಗೂಬೆ ಕೂರಿಸಲು ಯಾರಾದರೂ ಬೇಕಲ್ಲವೇ! ಅಂದರೆ ಪೋಲಿಸರು ಒಳ್ಳೆಯವರು ಅಂತ ಕ್ಲೀನ್ ಚಿಟ್ ಕೊಡುವುದು ನನ್ನ ಉದ್ದೇಶ ಅಲ್ಲ. ಇತರರ ಲೋಪದೋಷಗಳನ್ನು ಎತ್ತಿ ಹಿಡಿಯುವುದೇ ನಮ್ಮ ಮುಖ್ಯ ಅಜೆಂಡಾ ಆಗಿ ಬಿಟ್ಟರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಅಸಾಧ್ಯ.

ಕದ್ರಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ ಕೆಲವರು ಈ ಸಂಘಟನೆಯನ್ನು ತಮ್ಮ ವೈಯುಕ್ತಿಕ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡ ಬಗ್ಗೆ ನನ್ನ ಆಕ್ಷೇಪವಿದೆ. ಮಹಿಳಾ ಸಂಘಟನೆಯವರು ಇಂತಹವರ ವಿರುದ್ಧ ಎಚ್ಚರದಿಂದಿರಬೇಕು. ಪಬ್ ಸಂಸ್ಕೃತಿಗಿಂತ ಹಿಂದೂ ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆದ ದಾಳಿಯ ಕುರಿತು ನಾವು ನಮ್ಮ ಹೋರಾಟವನ್ನು ಮುಂದುವರಿಸಬೇಕಾದುದ್ದು ಈಗಿನ ಅಗತ್ಯ.

’ತಣ್ಣಗಿನ’ ಮುಖಭಾವ ಹೊಂದಿ ತಾನು ಮಾಡಿದ್ದೇ ಸರಿಯೆಂದು ಸಮರ್ಥಿಸಿಕೊಳ್ಳುವ ಸ್ವಘೋಷಿತ ನೇತಾರನ ಉದ್ಧಾಟತನ ಮತ್ತು ಅಹಂ ಬಗ್ಗೆ ಪುರುಷ ಮತ್ತು ಮಹಿಳೆಯರು ಒಟ್ಟಾಗಿ ಧ್ವನಿ ಎತ್ತಬೇಕೆ ಹೊರತು ಕ್ಷುಲ್ಲಕ ಆರೋಪಗಳನ್ನು ಮುಂದಿರಿಸಿ ವಿಷಯವನ್ನು ಕಲುಷಿತಗೊಳಿಸುವ ಪ್ರಯತ್ನ ಸಲ್ಲದು. ಈ ದೇಶದ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಹಿಳೆಯರನ್ನೇ ಬೊಟ್ಟು ಮಾಡಿ ಹಲ್ಲೆ ಮಾಡುವುದು ಹೇಡಿತನದ ಇನ್ನೊಂದು ಪರಮಾವಧಿ.

Rating
No votes yet