ಶ್ವೇತಕೇತು ಸೋತರೇ ಖುಶಿ!

ಶ್ವೇತಕೇತು ಸೋತರೇ ಖುಶಿ!

ಎಲ್ಲರ ಯೋಚನಾ ವಿಧಾನವನ್ನೂ ಗೌರವಿಸುವುದು ಅಗತ್ಯ. ಒಪ್ಪುತ್ತೀರೋ ಇಲ್ಲವೋ ಅದು ಬೇರೆಯೇ ಪ್ರಶ್ನೆ. ಆದರೆ ವಿಭಿನ್ನವಾದುದಕ್ಕೆ, ವೈರುಧ್ಯಗಳಿಗೆ, ಹೊಸತಿಗೆ ತೆರೆದ ಮನಸ್ಸು ಇಟ್ಟುಕೊಂಡಿರುವುದು ಅಗತ್ಯ.ಬರೇ ಒಳ್ಳೆಯದು ಅಂತ ಅಲ್ಲ, ಅದು ಅಗತ್ಯವಾದ ಮನೋಧರ್ಮ.

ಹಾಗಿರುತ್ತ, ಭೈರಪ್ಪನವರ ನಿಲುವೂ ಅನಂತಮೂರ್ತಿಯವರ ನಿಲುವೂ ಗೌರವಕ್ಕೆ ಪಾತ್ರವಾಗಬೇಕು. ಆದರೆ ಅದನ್ನು ಅವರು ಒಂದು ಸೃಜನಶೀಲ ಕೃತಿಯ ಮೂಲಕ ನಮ್ಮೆದುರು ಇರಿಸಿದಾಗ, ಕೆಲವು ಪ್ರಶ್ನೆಗಳೇಳುತ್ತವೆ. ಗೌರವಕ್ಕೆ ಅರ್ಹವಾದದ್ದು ಕೂಡ ಪ್ರಶ್ನಾತೀತವೇನಲ್ಲ, ಅಲ್ಲವೆ?

ಶ್ರೀನಿವಾಸ ಶ್ರೋತ್ರಿಗಳ ಕಾಲಮಾನ ಮತ್ತು ಪ್ರಾಣೇಶಾಚಾರ್ಯರ ಕಾಲಮಾನ ಸರಿಸುಮಾರು ಒಂದೇ. ಭೈರಪ್ಪನವರ ಕೃತಿ ಪ್ರಕಟವಾಗಿದ್ದು ೧೯೬೫ರಲ್ಲಾದರೂ ಅದನ್ನು ಅವರು ೧೯೬೨ರಲ್ಲೇ ಬರೆದಿದ್ದರಂತೆ. ಆದರೂ ಅದರಿಂದ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ ಬಿಡಿ. ಎರಡೂ ಕಾದಂಬರಿಗಳು ಹೆಚ್ಚು ಕಡಿಮೆ ಒಂದು ತಲೆಮಾರಿನಷ್ಟು ಹಿಂದಿನ ಕತೆಯನ್ನೇ ಹೇಳುತ್ತಿರುವುದು. ಹಾಗಾಗಿ ಶ್ರೀನಿವಾಸ ಶ್ರೋತ್ರಿಗಳಿಗೆ ತಮ್ಮ ಅಕಾಲದಲ್ಲಿ ವಿಧವೆಯಾದ ಸೊಸೆ ಕಾತ್ಯಾಯಿನಿ ಬೇರೊಬ್ಬ ಯುವಕನಲ್ಲಿ ಅನುರಕ್ತೆಯಾಗಿ ಅವನೊಂದಿಗೇ ಮರುವಿವಾಹಕ್ಕೆ ಸಜ್ಜಾದಾಗ ತಮ್ಮ ಮಗನ ಬೀಜದ ಸಂತಾನವಾದ ಮೊಮ್ಮಗ ಯಾರ ಆಸ್ತಿ, ಯಾರ ವಾರಸುದಾರ ಮತ್ತು ಯಾವ ಪರಂಪರೆಯ ಮುಂದುವರಿಕೆ ಎಂಬ ಪ್ರಶ್ನೆ ಎದುರಾಗುವುದು ಮತ್ತು ಅದರ ಪರಿಹಾರಕ್ಕಾಗಿ ಅವರು ಧರ್ಮಗ್ರಂಥಗಳನ್ನು ತಡಕಾಡುವುದು, ಸ್ವತಃ ಕಾತ್ಯಾಯಿನಿಯ ತಂದೆ ಕಾನೂನು ಪುಸ್ತಕಗಳನ್ನು ಉದ್ಧರಿಸುವುದು ಎಲ್ಲ ಸಹಜವೇ. ಪ್ರಾಣೇಶಾಚಾರ್ಯರೂ ಸಂಸ್ಕಾರಕ್ಕೆ ಕಾಯುತ್ತಿರುವ ಹೆಣವನ್ನಿಟ್ಟುಕೊಂಡು ಇದನ್ನೇ ಮಾಡುತ್ತಾರೆ, ಅಲ್ಲವೇ. ಆ ಕಾಲಮಾನದಲ್ಲಿ ಬದುಕಿದ್ದವವರ ಸಂಸ್ಕಾರ ಅದು, ಬಿಡಿ. ಆದರೆ ಇದನ್ನು ಹೇಳುತ್ತಿರುವ ಅನಂತಮೂರ್ತಿ ಮತ್ತು ಭೈರಪ್ಪನವರು ಆ ಕಾಲಮಾನವನ್ನು ಚಿತ್ರಿಸುತ್ತಿರುವ ಕಾಲಮಾನ ಬೇರೆ. ಅದು ಸದಾ ಕಾಲಕ್ಕೆ ೧೯೬೫ ಕೂಡ ಆಗಿರುವುದಿಲ್ಲ! ಇವತ್ತು ನಾನು ಅದನ್ನು ಓದುತ್ತಿದ್ದರೆ ಅವರು ಅದನ್ನು ನನಗೆ ಇವತ್ತೇ ಹೇಳುತ್ತಿರುವುದು! ಉದ್ದಾಲಕನ ಕಾಲದಲ್ಲೇ ಒಬ್ಬ ಶ್ವೇತಕೇತು ಇದ್ದ, ಸ್ವತಃ ಉದ್ಧಾಲಕನ ಮನೆಯಲ್ಲೇ ಇದ್ದ! ಪ್ರಶ್ನಿಸಿದ. ಉದ್ಧಾಲಕನೂ ಕನಿಷ್ಟ ಅದನ್ನು ಸಹಿಸಿದ.

ಕೃತಿಯೊಳಗಿನ ಪಾತ್ರಗಳ ನಿಲುವುಗಳು `ಅವರ ಧರ್ಮ ಅವರಿಗೆ, ಇವರ ಧರ್ಮ ಇವರಿಗೆ' ಎಂಬತ್ತಿದ್ದರೆ ಅದೇನೂ ಅಂಥಾ ವಿರೋಧಾಭಾಸ ಸೃಷ್ಟಿಸುವುದಿಲ್ಲ. ಆದರೆ ನಮಗೆ ಇದನ್ನೆಲ್ಲ ಹೇಳುತ್ತಿರುವ ಅನಂತಮೂರ್ತಿಯವರಿಗೂ ಭೈರಪ್ಪನವರಿಗೂ ತಾವು ಏನನ್ನು ಹೇಳುತ್ತಿದ್ದೇವೆ, ಯಾರಿಗೆ ಹೇಳುತ್ತಿದ್ದೇವೆ ಮತ್ತು ಹೇಳುತ್ತಿರುವುದರ ಉದ್ದೇಶವೇನು ಎಂಬುದು ಖಚಿತವಿರುತ್ತದೆ ಅಲ್ಲವೆ? ಯಾವಾಗ(ಯಾವ ಕಾಲಮಾನದಲ್ಲಿ ನಿಂತು) ಹೇಳುತ್ತಿದ್ದೇವೆ ಎಂದೂ ಸೇರಿಸಬೇಕಿತ್ತೆ, ಆಗಲಿ. ಇವರು ಶ್ವೇತಕೇತುವನ್ನು ಹೇಗೆ ಎದುರಿಸುತ್ತಾರೆ ಎಂಬುದು ಪ್ರಶ್ನೆ. ಯಾಕೆಂದರೆ ಶ್ವೇತಕೇತು ಒಬ್ಬ ನಾರಣಪ್ಪನಾಗಿ, ರಾಜನಾಗಿ ಎದುರಾಗದಂತೆ ಅನಂತಮೂರ್ತಿಯವರೋ ಭೈರಪ್ಪನವರೋ ಚಮತ್ಕಾರ ಮಾಡಬಹುದು. ಬೇಕೆಂದರೆ ಸಾಯಿಸಬಹುದು. ವಾನಪ್ರಸ್ಥಕ್ಕೂ ಕಳುಹಿಸಿ ಕೈತೊಳೆದುಕೊಳ್ಳಬಹುದು.

ಆದರೆ ನಾವು ಪ್ರಶ್ನಿಸಬಹುದು. ಪ್ರಶ್ನಿಸಬೇಕು. ಯಾಕೆಂದರೆ ಇದೆಲ್ಲ ನಮ್ಮ ನಿಮ್ಮ ಸಂಸಾರದೊಳಗೇ ನಡೆಯುತ್ತಿರುವ ಬಹಳಷ್ಟಕ್ಕೆ ನೇರವಾಗಿಯೇ ಸಂಬಂಧಿಸಿದ್ದು.

ಭೈರಪ್ಪನವರ ಆವರಣದ ಲಕ್ಷ್ಮಿ ಅಥವಾ ರಜಿಯಾ ಹಾಗೂ ಅವಳ ತಂದೆ 'ಮುಸ್ಲಿಂ ದ್ವೇಷಿ ಗಾಂಧೀವಾದಿ' ನರಸಿಂಹ ಗೌಡರೂ ಶ್ರೀನಿವಾಸ ಶ್ರೋತ್ರಿಗಳು ೧೯೬೨ಕ್ಕೂ ಹಿಂದೆ ಮಾಡಿದ್ದನ್ನೇ ಮಾಡುತ್ತಾರೆ ಎಂಬುದು ಗಮನಾರ್ಹವಾಗುವುದೂ ಈ ಕಾರಣಕ್ಕೇ. ಮಗಳು ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದಾಗ ಅವಳ ತಂದೆ ಮುಸ್ಲಿಂ ಧರ್ಮಗ್ರಂಥಗಳನ್ನು, ಇತಿಹಾಸವನ್ನು ಅಧ್ಯಯನ ಮಾಡತೊಡಗುತ್ತಾರೆ. ಬಹುಷಃ ಮುಸ್ಲಿಂ ಜನಾಂಗ ಪರಂಪರೆಯಿಂದಲೇ ನೀಚತನದ್ದೋ ಅಲ್ಲವೋ ಎಂಬುದನ್ನು ತಿಳಿಯುವುದೇ ಅವರ ಉದ್ದೇಶವಿರುವಂತೆ ಕಾಣುತ್ತದೆ. ಮಗಳ ಮಗನೂ ಮುಂದೆ ಒಂದಾದರೂ ಹಿಂದೂ ದೇವಸ್ಥಾನವನ್ನು ಒಡೆಯುವವನೇ ಆಗುತ್ತಾನೆ ಎಂಬುದರ ಸಮರ್ಥನೆಗಾಗಿ ಅವರು ಅಧ್ಯಯನ ಕೈಗೊಂಡಂತಿದೆ. ಮಗಳೂ ಮುಂದೆ ಹೆಚ್ಚೂ ಕಡಿಮೆ ಅಂತಹುದೇ ಉದ್ದೇಶದಿಂದ ತಂದೆಯ ಕಾರ್ಯವನ್ನು ಮುಂದುವರಿಸುತ್ತಾಳೆ.

ಶ್ರೀನಿವಾಸ ಶ್ರೋತ್ರಿಗಳಿಗಾದರೋ ತಮ್ಮದೇ ಹುಟ್ಟಿನ ಹಿನ್ನೆಲೆ, ಪರಂಪರೆಯ ವಾರಸುದಾರಿಕೆ ತಮಗೆ ದಕ್ಕಿದ ಬಗೆ, ಅದನ್ನು ಮುಂದಿನವರಿಗೆ ವಹಿಸಿಕೊಡುವುದಕ್ಕೆ ತಾವು ಎಷ್ಟು ಮಾತ್ರಕ್ಕೆ ಅರ್ಹರು ಎಂಬ ದ್ವಂದ್ವ, ಆಚರಣೆಯಲ್ಲಿ ತಾವು ನಡೆಸಿಕೊಂಡು ಬಂದಿದ್ದು ಎಷ್ಟರಮಟ್ಟಿಗೆ ತಾವು ವಹಿಸಿಕೊಂಡ ಪರಂಪರೆಯದ್ದು ಮತ್ತು ಎಷ್ಟರ ಮಟ್ಟಿಗೆ ತಮ್ಮ ಸ್ವಂತ ಸಂಸ್ಕಾರದ್ದು ಎಂಬೆಲ್ಲ ಗೊಂದಲಗಳೆದ್ದಂತೆ ಕಾಣುತ್ತದೆ. ಅಷ್ಟರ ಮಟ್ಟಿಗೆ ಶ್ರೀನಿವಾಸ ಶ್ರೋತ್ರಿಗಳ ಪಾತ್ರ ಕೃತಿಕಾರನ ಸಿದ್ಧಾಂತಗಳಿಂದಲೇ ನೇರವಾಗಿ ನಿರ್ವಹಿಸಲ್ಪಡದೆ ಸ್ವಲ್ಪ ಸ್ವತಂತ್ರವಾಗಿ ರಕ್ತಮಾಂಸಗಳಿರುವ ಪಾತ್ರದಂತೆ ಚಿತ್ರಿಸಲ್ಪಟ್ಟಿದೆ ಎನ್ನಬೇಕು. ಅದರೆ ಈಗಿನ ಭೈರಪ್ಪನವರ ಪಾತ್ರಗಳಿಗೆ ಅಂಥ ಆಂತರಿಕ ಗೊಂದಲಗಳೂ ಕಾಡುತ್ತಿಲ್ಲ. ಎಲ್ಲ ಗೋಡೆಗೆ ಬಡಿದ ಹಲಗೆಯ ತರ ಚಪ್ಪಟೆ, ಒಂದೇ ಮುಖದ ಸತ್ಯ. ಹಾಗಾಗಿ ಧರ್ಮಗ್ರಂಥಗಳಲ್ಲಿ ಸಿಗುವ ಪರಿಹಾರವೇ ಅವರಿಗೆ ಪ್ರಮಾಣ. ಉದ್ಧಾಲಕ ಹೇಳಿದ್ದೇ ಅಂತಿಮವಾಗುತ್ತದೆ. ಶ್ವೇತಕೇತುವಿಗೆ ಧ್ವನಿಯಿಲ್ಲ. ನೈಜ ಮುಖಾಮುಖಿಯ ಪ್ರಶ್ನೆಯೇ ಇಲ್ಲ. ಮುಖಾಮುಖಿ ಏನಿದ್ದರೂ ಸೋಲುವುದಕ್ಕೇ ಹುಟ್ಟಿದ ದುರ್ಬಲ ಎದುರಾಳಿಯೊಂದಿಗೆ, ಸಿನಿಮಾದ ಹೀರೋ ತಾನು ಮಾಡಲಿರುವ ಫೈಟಿಗೆ ಮುನ್ನ ತಿನ್ನುವ ಕೆಲವೇ ಕೆಲವು ಏಟುಗಳಂತೆ!

Rating
No votes yet