ಸಂಕ್ರಮಣ

ಸಂಕ್ರಮಣ

ಪ್ರಖರ ಕಿರಣಗಳಿಂದ ಮೆರೆದ ಸೂರ್ಯ
ಮರೆಯಾಗಲು ಹಿಮರಾಜನ ಮಡಿಲಲ್ಲಿ
ಆರ್ಭಟಿಸಲು ವರುಣ ಕಾರ್ಮೋಡಗಳ ಮುಗಿಲಲ್ಲಿ
ಉರುಳುತಿದೆ ಕಾಲಚಕ್ರ ನೀ ನಿಂತರೂ ನಾನಿಲ್ಲೆನೆನುತ

ಪುನರಾಗಮಿಸಲು ಹೇಮಂತ ಶರದಾದಿ ಋತುಗಳು
ಬದಲಾಗಲು ರವಿ-ಚಂದ್ರ-ಭುವಿ ನಕ್ಷೆಗಳು
ಕೈ ಜೋಡಿಸುತಿಹಳು ಇಳೆ, ಕಾಲನ ಜೊತೆಗೆ
ಸಜ್ಜಾಗುತಿಹಳು ಪ್ರಕೃತಿ, ಬರುವ ನಾಳೆಗಳಿಗೆ

ಓಡುತಿದೆ ಋತುಚಕ್ರ, ಅನುಸರಿಸಿದೆ ಜೀವರಾಶಿFall Colour Beauty
ಸಿಂಗಾರಗೊಂಡಿದೆ ಸಸ್ಯವರ್ಗ, ನಡೆದಿರಲು ಬಣ್ಣಗಳ ಓಕುಳಿ
ಅದಲು ಬದಲಾಗಿದೆ ಸೂರ್ಯ ಚಂದ್ರರ ಅವಧಿ
ಇರುಳು ದಾಟಿರಲು ಹಗಲಿನ ಪರಿಧಿ

ಹಸಿರು ಎಲೆಗಳಲೆನಿತು ಈ ಕೆಂಪು ವರ್ಣ
ನಿರ್ಗಮಿಸುತಿರುವ ಗ್ರೀಷ್ಮನ ಬೀಳ್ಕೊಡುಗೆಯ ರೋದನವೋ
ಆಗಮಿಸುತಿರುವ ಶಿಶಿರನ ಕೆಂಧೂಳಿ ಸ್ವಾಗತವೋ
ಏನೊಂದು ಅರಿಯದಾಗಿದೆ, ಬರೀ ವಿಸ್ಮಯವಿಲ್ಲಿದೆ

ಅದೆನಿತು ಸಸ್ಯರಾಶಿ, ತವರು ತೊರೆಯದ ಕುಲ ಪುತ್ರನಂತೆ;
ಈ ಮಣ್ಣಿನ ನೀಳೆತ್ತರದ ಸೂಜಿಮೊನೆಯ ನಿತ್ಯಹರಿದ್ವರ್ಣ ಮರಗಳು
ಮೆಟ್ಟಿದ ನೆಲವ ಸ್ವಂತವಾಗಿಸಿಕೊಂಡಿರುವ ಭಾಗಿನಿಯಂತೆ
ಎಲ್ಲಿಂದಲೋ ಬಂದ, ಹಳದಿ ಕೆಂಬಣ್ಣಗಳ ಅಗಲೆಲೆಯ ವೃಕ್ಷಗಳು

ನವಜಾತ ಶಿಶುವಿನಂತಹ ಗುಲಾಬಿ ಬಣ್ಣದೆಲೆಗಳು
ಯೌವನದ ಬಿಸಿರಕ್ತದಂತಹ ಕೆಂಬಣ್ಣದೆಲೆಗಳು
ನವವಸಂತಕೆ ಕಾಲಿಡುತಿರುವಂತಹ ತಿಳಿಗಿಳಿವರ್ಣದೆಲೆಗಳು
ಜವಾಬ್ದಾರಿಗಳಿಂದ ಮಾಗಿದ ಗಾಢಹಸುರೆಲೆಗಳು

ಕರ್ತವ್ಯ ಮುಗಿಸಿ ಹಣ್ಣಾದ ಹಳದಿ ಎಲೆಗಳು
ವೃದ್ಧಾಪ್ಯದ ರುದ್ರಾಕ್ಷಿಯ ಕಂದು ಬಣ್ಣದೆಲೆಗಳು
ಮುಗಿಯಿತು ನಮ್ಮ ಆಯಸ್ಸು, ಇನ್ನು ನಮ್ಮನು ಹರಸು ಎಂದಿರಲು
ಕಾಲನ ಕರೆಗೆ ಓಗೊಟ್ಟು ಬೋಳಾದ ಟೊಂಗೆಗಳು

ಯಾವುದೀ ಮಾಯೆ, ಯಾರೀ ಯಕ್ಷಿಣಿ
ಎನಿತು ಅಲಂಕರಿಸಿಕೊಂಡಿಹಳು ಧಾರಿಣಿ
ನಿಸರ್ಗವೆಲ್ಲ ರಂಗಾದ ರಂಗೋಲಿ, ವರ್ಣಗಳ ಚಿತ್ತಾರ
ಏತಕೀ ಹುನ್ನಾರ, ಏನ ಹೇಳ ಬಯಸಿದೆ ಪರಿಸರ?

ಅಡಗಿದೆ ಸುಂದರ ಸೃಷ್ಟಿಯೊಳಗೊಂದು ವಿಶ್ವಕೋಶ
ನೀಡುತಿದೆ ಸರಳ ಜೀವನಕೊಂದು ಸಂದೇಶ
ಅನಿವಾರ್ಯವು ಹೊಂದಾಣಿಕೆ; ಪರಿಷ್ಕೃತ ದೃಷ್ಟಿಕೋನ
ಬಂದೊದಗಲು ಸಂಕ್ರಮಣ, ಪರಿವರ್ತನೆ ಜಗದ ನಿಯಮ!

Rating
No votes yet