ಸಂಗೀತ ನವರಾತ್ರಿ - ವಿಜಯ ದಶಮಿ

ಸಂಗೀತ ನವರಾತ್ರಿ - ವಿಜಯ ದಶಮಿ

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ  ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್ಷದ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.

ಮೈಸೂರು ವಾಸುದೇವಾಚಾರ್ಯರು ಅವರ ಸಂಗೀತ ಪರಂಪರೆಯಂತೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲೇ ಕೃತಿಗಳನ್ನು ರಚಿಸಿದವರು. ಈ ಬಿಲಹರಿ ರಾಗದ ಕೃತಿಯಂತೂ ಸೊಗಸಾದ ರಚನೆ. ವಾಸುದೇವಾಚಾರ್ಯರ ಅತೀ ಪ್ರಸಿದ್ಧ ರಚನೆಗಲ್ಲಿದೂ ಒಂದು ಎಂದು ಖಂಡಿತ ಹೇಳಬಹುದು. ಈ ಹಾಡಿನ ಸಾಹಿತ್ಯ ಹೀಗಿದೆ.

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ
ಶೃತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರ ಮರ್ದಿನಿ|| ಪಲ್ಲವಿ||

ವಾಚಾಮಗೋಚರ ಮಹಿಮ ವಿರಾಜಿತೇ ವರಗುಣ ಭರಿತೇ
ವಾಕ್ಪತಿಮುಖಸುರವಂದಿತೇ ವಾಸುದೇವ ಸಹಜಾತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ರಾಕಾ ನಿಶಾಕರ ಸನ್ನಿಭ ವದನೇ ರಾಜೀವಲೋಚನೇ
ರಮಣೀಯ ಕುಂದರದನೇ ರಕ್ಷಿತಭುವನೇ ಮಣಿಸದನೇ
ಮೂಕವಾಕ್ಪ್ರದಾನವಿಖ್ಯಾತೇ ಮುನಿಗಣನುತ ಸುಪ್ರೀತೇ
ಶ್ರೀಕರ ತಾರಕ ಮಂತ್ರ ತೋಷಿತೆ ಚಿತ್ತೇ ಸದಾ ನಮಸ್ತೇ ||ಶ್ರೀ ಚಾಮುಂಡೇಶ್ವರಿ ಪಾಲಯಮಾಂ||

ಈ ರಚನೆಯನ್ನ ನೀವು ಕೆಳಗಿನ ಕೊಂಡಿಯನ್ನ ಚಿಟುಕಿಸಿ ಕೇಳಬಹುದು:

ಶ್ರೀ ಚಾಮುಂಡೇಶ್ವರಿ ಪಾಲಯಮಾಂ - ಎಂ.ಎಸ್.ಸುಬ್ಬುಲಕ್ಷ್ಮಿ ಅವರ ದನಿಯಲ್ಲಿ

ಈ ಕೃತಿಯ ಬಗ್ಗೆ ಯೋಚಿಸುತ್ತಿದ್ದಾಗಲೇ ಡಾ.ರಾಜ್ ಅವರ ನೆನಪು ಬಂತು. ಕನ್ನಡ ಚಲನಚಿತ್ರರಂಗದ ಹಿನ್ನೆಲೆ ಗಾಯಕರಲ್ಲಿ ಅತಿ ಹೆಚ್ಚು ಶಾಸ್ತ್ರೀಯ ಶೈಲಿಯ ಹಾಡುಗಳನ್ನು ಬಹಳ ಸೊಗಸಾಗಿ ಹಾಡಿರುವುದು ಅವರು ಎಂದು ನನ್ನ ಅಭಿಪ್ರಾಯ. ಅವರ ನಾಟಕರಂಗದ ತರಪೇತಿಯೂ ಇದಕ್ಕೆ ಕಾರಣವಿರಬೇಕು. ಕೆಲವು ವರ್ಷಗಳ ಹಿಂದೆ ಡಾ.ರಾಜ್ ದಸರಾ ಹಬ್ಬದ ಉದ್ಘಾಟನೆಗೆ (ಅಥವಾ ಸುಮ್ಮನೇ ಹಬ್ಬದ ಸಡಗರವನ್ನು ನೋಡುವುದಕ್ಕೇನೋ, ನನಗೆ ಮರೆತಿದೆ) ಮೈಸೂರಿಗೆ ಬಂದಿದ್ದರು. ವಿಜಯದಶಮಿಯ ಮೆರವಣಿಗೆ ಹೊರಟಿತು. ತಾಯಿ ಚಾಮುಂಡಿಯ ಅಂಬಾರಿಯನ್ನು ಕಂಡ ರಾಜ್, ಕೂಡಲೆ ತಾವೇತಾವಾಗಿ, ಯಾರೂ ನಿರೀಕ್ಷಿಸಿರದಂತೆ ವಾಸುದೇವಾಚಾರ್ಯರ ಈ ಹಾಡನ್ನು ಹಾಡತೊಡಗಿದರು. ಯಾವುದೇ ವಾದ್ಯಗಳ ಹಿಮ್ಮೇಳವಿಲ್ಲದೆ, ಯಾವ ವೇದಿಕೆಯೂ ಇಲ್ಲದೆ ಮನಬಿಚ್ಚಿ ಅವರು ಹಾಡಿದ್ದು ಕೇಳಲು ಬಹಳ ಸೊಗಸಾಗಿತ್ತು. ಇದು ಟಿವಿಯಲ್ಲಿ ಪ್ರಸಾರವಾಗಿದ್ದನ್ನು ನಾನು ಕಂಡೆ.

ಮನೆಯ ಮುಂದೆ ಉತ್ಸವ ಬಂದಾಗ ಹಾಡಿಕೊಳ್ಳುವುದನ್ನೂ, ದೇವಾಲಯದಲ್ಲಿ ದೇವರ ಮುಂದೆ ತಮ್ಮಷ್ಟಕ್ಕೆ ತಾವೇ ಹಾಡಿಕೊಳ್ಳುವ ಜನರನ್ನು ನೋಡಿದ್ದೇವೆ. ಅವರು ಹಾಡುವುದು ಯಾರೂ ಕೇಳಲಿ ಎಂದಲ್ಲ. ಬದಲಿಗೆ ಅವರು ನಂಬಿರುವ ದೇವರಿಗೆ ಹತ್ತಿರವಾಗಲು ಅದೊಂದು ದಾರಿ ಎಂದು ಅವರೆಂದುಕೊಳ್ಳುತ್ತಾರೆ. ಆದರೆ ಈ ರೀತಿ ಹಲವು ಜನರ ಮುಂದೆ, ಯಾವುದೇ ವೇದಿಕೆಯಿಲ್ಲದಿದ್ದಾಗಲೂ ತಮ್ಮಷ್ಟಕ್ಕೆ ತಾವಾಗಿಯೇ ಹಾಡಿಕೊಳ್ಳುವ ಪ್ರಸಿದ್ಧ ಸಂಗೀತಗಾರರು, ತಾರೆಯರು, ಕಡಿಮೆಯೇ. ಈ ಸರಳತೆಯೇ ರಾಜ್ ಅವರ ಜನಪ್ರಿಯತೆಗೆ ಒಂದು ಕಾರಣ ಎನ್ನಿಸುತ್ತೆ.

ರಾಜ್ ಅವರ ನೆನಪು ಬಂದಾಗ ಶ್ರೀ ಕೃಷ್ಣದೇವರಾಯ ಚಿತ್ರದ ಶ್ರೀ ಚಾಮುಂಡೇಶ್ವರೀ ಗೀತೆಯೂ ನೆನಪಾಯಿತು. ಅದು ಕೂಡ ಶಾಸ್ತ್ರೀಯ ನೆಲೆಗಟ್ಟಿನಲ್ಲೇ- (ಮಿಶ್ರ)ತಿಲಂಗ್ ರಾಗದಲ್ಲಿ ಸಂಯೋಜಿತವಾಗಿರುವ ಹಾಡು. ಅದನ್ನೂ ಒಮ್ಮೆ ನೋಡಹುದಲ್ಲ ಎನ್ನಿಸಿತು. ಈ ಹಾಡನ್ನು ಹಾಡಿರುವುವು ಪಿ.ಲೀಲಾ.


ಹತ್ತು ದಿವಸಗಳ ದೊಡ್ಡ ಹಬ್ಬಸಾಲಿನ ಕೊನೆಯ ದಿನಕ್ಕೆ ಬಂದಿದ್ದೇವೆ. ಇನ್ನು ಕೆಲವೇ ಘಂಟೆಗಳಲ್ಲಿ ತಾಯಿ ಚಾಮುಂಡಿಯ ಉತ್ಸವ ಮೈಸೂರಿನಲ್ಲಿ ಜರುಗುತ್ತೆ. ಹೋದವರ್ಷ ಯಾವುದೇ ಮುಂದಾಲೋಚನೆ ಇಲ್ಲದೇ ನಾನು "ನವರಾತ್ರಿಯ ದಿನಗಳು" ಸರಣಿಯನ್ನು ಬರೆದಿದ್ದೆ. ಈ ಬಾರಿ ಮತ್ತೆ ಅದೇ ರೀತಿ ಹತ್ತು ದಿನ ಬರೆಯಲು ಆಗುವುದೋ ಇಲ್ಲವೋ ಎಂಬ ಅನುಮಾನದಿಂದ ಅದರ ಯೋಚನೆಯನ್ನೂ ಮಾಡಿರಲಿಲ್ಲ. ಆದರೆ ಕೆಲವು ಸಂಪದಿಗರು ಈ ರೀತಿಯ ಬರಹಗಳನ್ನು ಎದಿರುನೋಡುತ್ತಿರುವುದನ್ನು ಕಂಡಮೇಲೆ ಈ ಸಲದ ’ಸಂಗೀತ ನವರಾತ್ರಿ’ಯನ್ನು ಬರೆದೆ.ಇದನ್ನು ಓದಿ, ಹಾಡುಗಳನ್ನು ಕೇಳಿ ಸಂತಸ ಪಟ್ಟ, ಟಿಪ್ಪಣಿ ಹಾಕಿದ ಎಲ್ಲರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ.

ದೇವೀ ನವರಾತ್ರಿಯ ಸಮಯದಲ್ಲಿ, ಈ ಸಾಲುಬರಹವನ್ನು ಬರೆಯಲು ಸಾಧ್ಯವಾದದ್ದು ನನ್ನ ಸುದೈವವೆಂದೇ ಎಣಿಸಿದ್ದೇನೆ. ಶ್ರೀ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಕೇಳಿಕೊಳ್ಳುತ್ತಾ ಈ "ಸಂಗೀತ ನವರಾತ್ರಿ" ಮಾಲಿಕೆಯನ್ನು ಮುಗಿಸುತ್ತಿದ್ದೇನೆ.

ಎಲ್ಲರಿಗೂ ನಮಸ್ಕಾರ.

-ಹಂಸಾನಂದಿ

Rating
No votes yet

Comments