ಸಂಪಿಗೆ

ಸಂಪಿಗೆ

ಚಿತ್ರ

ಕಣ್ಣು ಬಿಡುವ ಮೊದಲೇ ಅಮ್ಮನ ದನಿ ಕಿವಿಗೆ ತಲುಪಿತ್ತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಕೇಳಿದ್ದು ಒಂದು ಪದ, ಸಂಪಿಗೆ. ಅಷ್ಟು ಕೇಳಿದ್ದೇ ತಡ, ಮನಃಪಟಲ ಹದಿನೈದು ವರ್ಷಗಳಷ್ಟು ಹಿಂದೆ ಓಡಿತು. ಆಗ ನಗರದ ಇನ್ನೊಂದು ಮೂಲೆಯಲ್ಲಿ ನಮ್ಮ ಮನೆ. ಮೂರು ಚಕ್ರದ ಸೈಕಲ್ ನಲ್ಲಿ ಊರೆಲ್ಲಾ ಸುತ್ತಿ, ಅರ್ಥಾತ್ ಮನೆಯ ಬಳಿಯಿದ್ದ ಮೂರೂ ಅಡ್ಡರಸ್ತೆಗಳನ್ನು ದಾಟಿ ಹೋದರೆ, ಅಲ್ಲಿ ಒಂದು ಸಂಪಿಗೆ ಮರ. ಬಹಳ ದೊಡ್ಡ ಮರವೇನಲ್ಲ‌. ಆದರೆ ಇದ್ದ ಗಾತ್ರದ ತುಂಬಾ ಹೂವು. ಆ ಹೂವುಗಳೊಂದಿಗೆ ಅವು ಬೀರುವ ಪರಿಮಳ.

ಕಾನನದಲ್ಲಿ ಮೌನವಾಗಿ ಬಿರಿದು ಸೌರಭ ಸೂಸಿ ತೃಪ್ತವಾಗುವ ಮಲ್ಲಿಗೆಯಂತಲ್ಲ ಈ ಸಂಪಿಗೆ. ತನ್ನ ಉಪಸ್ಥಿತಿಯನ್ನು ಹಿಂಜರಿಕೆಯಿಲ್ಲದೆ ಪ್ರಸಾರಪಡಿಸುವ ಕಲೆ ಬಲ್ಲದು. "ಚಳಿಗಲದಲ್ಲೋ ಮಳೆಗಾಲದಲ್ಲೋ ಹೂವುಗಳು ಅರಳುತ್ತಿದ್ದವು, ಅವುಗಳ ಸುಗಂಧ ನಾಲ್ಕು ಬೀದಿಗಳನ್ನು ಹಬ್ಬುತ್ತಿತ್ತು" ಎಂದೆಲ್ಲಾ ಹೇಳಹೊರಟವಳು ನಾನು, ಆದರೆ ಅಸಲಿಗೆ ನನಗೆ ನೆನಪಿಲ್ಲ.

ಪ್ರತಿ ದಿನ ಶಾಲೆಗೆ ಹೋಗುತ್ತಾ ಬರುತ್ತಾ ಅದನ್ನು ನೋಡಿ ಅಭ್ಯಾಸವಾಗಿತ್ತು. ಸೀಮೆಯೇ ಇಲ್ಲದಂತೆ ಉದ್ದವಾಗಿ ಬೆಳೆಯುತ್ತಿದ್ದ ನನ್ನ ಮೂಗು ಹೂವುಗಳ ಪರಿಮಳವನ್ನು ಅಘ್ರಾಣಿಸುವುದು ರೂಢಿಯಾಗಿತ್ತು. ಕೆಲ ಸಮಯದ ನಂತರ, ಮುಖ್ಯರಸ್ತೆಗೆ ಅಡ್ಡವಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಕಡಿಯಲಾಯಿತು. ಆ ಮರ ಈಗ ಇಲ್ಲದಿದ್ದರೂ, ನನ್ನ ಬದುಕಿನಲ್ಲಿ ಅದರ ಉಪಸ್ಥಿತಿಯ ನೆನಪು ಭದ್ರವಾಗಿದೆ. ಎಷ್ಟೆಂದರೆ ಕಿವಿಗೆ ಬಿದ್ದ ಅದರ ಹೆಸರು ಈ ಯೋಚನಾಲಹರಿಯನ್ನು ಆರಂಭಿಸಿತ್ತು.

ಹೌದು, ಅಮ್ಮ ಯಾಕೆ ಸಂಪಿಗೆಯ ಹೆಸರೆತ್ತಿದ್ದು? ಇಷ್ಟು ವರ್ಷಗಳ ಬಳಿಕ ಈಗೇಕೆ ಅಮ್ಮನಿಗೆ ಆ ಸಂಪಿಗೆಯ ಚಿಂತೆ? ಅದೂ ಇಂತಹ ಮುಂಜಾನೆಯ ಸಮಯದಲ್ಲಿ? ವಿಷಯ ಏನೆಂದು ಹುಡುಕಿ, ಮಾಹಿತಿ ಕಲೆಹಾಕಲು ನಿರ್ಧರಿಸಿ, ಕೊನೆಯ ಒಂದು ಬಾರಿ ಆಕಳಿಸಿ, ಮೈಮುರಿದು, ಇನ್ನೇನು ಎದ್ದೇಳಬೇಕು. ಅಷ್ಟರಲ್ಲಿ ಅಮ್ಮನ ಕೂಗು ಮತ್ತೊಮ್ಮೆ, "ಸಂಪಿಗೆ ನೀರು ಬಿಟ್ಟಿದ್ದೇನೆ, ನೋಡಿಕೋ."

Rating
Average: 4 (2 votes)