ಸಂವಿಧಾನ ವೇದವಾಕ್ಯವಲ್ಲ

ಸಂವಿಧಾನ ವೇದವಾಕ್ಯವಲ್ಲ

ಕರ್ನಾಟಕಕ್ಕೆ, ಬೆಂಗಳೂರಿಗೆ ಅನಿಯಂತ್ರಿತವಾದ ವಲಸೆ ಆಗ್ತಿರೋ ಈ ದಿನಗಳಲ್ಲಿ ಇದರ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಯಾರು ನೋಡಿದ್ರು ಸಂವಿಧಾನ ಹಾಗೆ ಹೇಳಿದೆ, ಹೀಗೆ ಹೇಳಿದೆ ಅಂತಾರೆ,, ಹಾಗಿದ್ರೆ ಸಂವಿಧಾನದ ಮಾತು ವೇದ ವಾಕ್ಯವೇ?? ನನಗನಿಸೋದು, ಸಂವಿಧಾನ ವೇದವಾಕ್ಯವಲ್ಲ. ಜನರಿಗೆ ಅನುಕೂಲ ಮಾಡಿಕೊಡುತ್ತೆ ಅನ್ನುವುದಾದರೆ ಅದನ್ನೂ ಬದಲಿಸಬಹುದು ಮತ್ತು ಬದಲಿಸಬೇಕು ಅಲ್ಲವೇ?

ಕನ್ನಡಿಗರ ಇಂದಿನ ಈ ದುಸ್ಥಿತಿಗೆ ಕಾರಣವೇ ನಮ್ಮ ಅತಿಯಾದ ಸಹನೆ. ಹೌದು, ಯಾರ ಬೇಕಾದ್ರೂ ಕರ್ನಾಟಕಕ್ಕೆ ಹೋಗಿ ಬದುಕಬೌದು. ಇಲ್ಲಿ ಎಲ್ಲ ಭಾಷೆ ನಡೆಯುತ್ತೆ. ಇಲ್ಲಿ ಕ್ರೈಮ್ ಇಲ್ಲ. ಇಲ್ಲಿ ವಾತಾವರಣ ಚೆನ್ನಾಗಿದೆ ಅಂತ ಹೇಳ್ಕೊಂಡು ಕನ್ನಡಿಗರು ಭಾಳಾ ಒಳ್ಳೇವ್ರು, ಪ್ರತಿಭಟಿಸಿದರೆ ನಮ್ಮ ಇಮೇಜ್ ಹಾಳಾಗುತ್ತೆ ಅಂದುಕೊಂಡೇ ಇವತ್ತು ಈ ಸ್ಥಿತಿ ತಲ್ಪಿರೋದು. ಅಲ್ಲಾ ಸ್ವಾಮಿ, ನಿಮಗೆ ಒಂದು ಅಂಗಡೀಲಿ ಕೆಲಸ ಬೇಕು ಅಂದ್ರೂ ಹಿಂದೀ ಬರುತ್ತಾ? ಅನ್ನೋ ಪ್ರಶ್ನೆ ಎದುರಿಸೋ ಗತಿ ಬಂದಿರೋದು ಕಾಣ್ತಿಲ್ವಾ?

ಮೊದಲಿಗೆ ನಮ್ಮ ನಾಡಿನ ಎಲ್ಲ ವ್ಯವಸ್ಥೆಗಳು, ಸೌಕರ್ಯಗಳು ಇರೋದು ನಮ್ಮ ಜನರ ಏಳಿಗೆಗೆ ಪೂರಕವಾಗಿ, ನಮ್ಮ ಜನರ ಅನುಕೂಲಕ್ಕಾಗಿ. ಅದು ಬಿಟ್ಟು ವಲಸೆ ಬರೋರ್ಗೆ ಅಂತ ವ್ಯವಸ್ಥೆ ಕಟ್ಟೋ ಮೂರ್ಖತನಾನ ಬಿಡ್ಲೇ ಬೇಕಾಗಿದೆ. ಮೊದಲಿಗೆ ವಲಸೆಗೆ ಕಡಿವಾಣ ಹಾಕ್ಬೇಕು. ಅಷ್ಟರ ಮೇಲೆ ಉದ್ಧಾರ ಮಾಡೊದಾದ್ರೆ ಬಿಹಾರ ರಾಜ್ಯದಲ್ಲಿ ಉದ್ಯೋಗಾವಕಾಶ ಹುಟ್ಟುಹಾಕಲಿ. ಅದುಬಿಟ್ಟು ಸ್ವತಃ ಅಡುಗೆ ಮಾಡೊ ಯೋಗ್ಯತೆ ಇಲ್ದೆ ಕಂಡೋರ ಮನೇಲಿ ಮಾಡಿದ ಅಡುಗೆ ಮೇಲೆ ಹಕ್ಕು ಸಾಧಿಸೋದು ಎಷ್ಟು ಸರಿ ಅಂತ. ಈಗಾಗ್ಲೆ ವಲಸೆ ಬಂದಿರೋರು ಮರ್ಯಾದೆಯಿಂದ ಕನ್ನಡ ನಾಡಿನ ನುಡಿ, ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡು ಮುಖ್ಯವಾಹಿನಿಯಲ್ಲಿ ಬೆರೀಬೇಕು. ಅದು ಬಿಟ್ಟು ಬೆಂಗಳೂರಲ್ಲಿ ಹಿಂದಿ ಮಾತಾಡೊರು ಜಾಸ್ತಿ ಇದಾರೆ ಅದಕ್ಕೆ ಎಲ್ಲ ಅಂಗಡಿಯೋರು ಹಿಂದೀಲಿ ಮಾತಾಡ್ಲಿ, ಬೆಂಗಳೂರಿನ ಎಫ್.ಎಂಗಳಲ್ಲಿ ಹಿಂದಿ ಮೊಳಗಲಿ ಅನ್ನೋರ್ನ ಬಗ್ಗು ಬಡೀಲೆ ಬೇಕು. ಇದ್ರಲ್ಲಿ ತಪ್ಪೆನು ಇಲ್ಲ.

ಸಾಧುಂಗೆ ಸಾಧು, ಮಾಧುರ್ಯಂಗೆ ಮಾಧುರ್ಯನ್ ಆದ್ರೆ ಮಾತ್ರಾ ಸಾಲದು, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್ ಕೂಡಾ ಆಗಬೇಕಿದೆ. ಅತಿಯಾದ ಸಹನೆ ದೌರ್ಬಲ್ಯ ಆಗಬಾರದು. ವಲಸೆ ಬೇಡ ಅನ್ನುವುದು ನನ್ನ ನಿಲುವಲ್ಲ. ವಲಸಿಗರು ಒಂದು ನಾಡು ಕಟ್ಟಲು ಎಷ್ಟು ಅಗತ್ಯ ಅನ್ನೋ ಅರಿವೂ ಇದೆ. ಆದರೆ ಕಡಿವಾಣ ಹಾಕಿದರೆ ಆಗುವುದು ಅನಿಯಂತ್ರಿತ ಅಂತರ ರಾಜ್ಯ ವಲಸೆ ನಿಯಂತ್ರಣ. ನಮ್ಮ ಜನರ ಅವಕಾಶ, ಬದುಕನ್ನು ಕಿತ್ತುಕೊಳ್ಳೂವ ವಲಸೆ ನಮಗೆ ಬೇಡ. ನಮ್ಮವರ ಬದುಕನ್ನು ಹಸನು ಮಾಡುವ ವಲಸೆ ಬೇಕು. ನಮ್ಮ ಅನ್ನ ಕಿತ್ತಕೊಂಡು, ನಮ್ಮ ಮುಂದೆ ಪಟ್ಟಾಗಿ ಕೂತು ಉಂಡು, ತೇಗಿ,,"ಕನ್ನಡಿಗ,, ಶಹಭಾಷ್,, ನಿಜವಾಗ್ಲೂ ನೀನು ವಿಶ್ವ ಮಾನವ" ಅಂತಾ ಯಾವನ ಕೈಲೋ ಅನ್ನಿಸಿಕೊಳ್ಳೊದು ನಮಗೆ ಬೇಕಾಗಿಲ್ಲ.

ಕನ್ನಡ, ಕರ್ನಾಟಕದ ಪರವಾಗಿ ಧ್ವನಿ ಎತ್ತೊರೆಲ್ಲ ಸಂಕುಚಿತ ಮನೋಭಾವದವರು, parochial, fanatic ಅನ್ನೋರು, ಇಲ್ಲ ಹಿಂಸೆಯ ಹಾದಿ ತುಳಿತಾರೆ ಅನ್ನೋರಿಗೂ ನಮ್ಮಲ್ಲಿ ಕಮ್ಮಿ ಇಲ್ಲ. ಹಿಂಸೆ ಅಹಿಂಸೆಯ ವ್ಯಾಖ್ಯಾನ ದೊಡ್ಡದು. ಉಪವಾಸ, ಧರಣಿ, ಅಮರಣಾಂತ ಸತ್ಯಾಗ್ರಹಗಳನ್ನು ಅಹಿಂಸೆ ಎನ್ನುವುದಕ್ಕಿಂತ ಸ್ವಹಿಂಸೆ ಎನ್ನುವುದೇ ಸರಿ. ಮಹಾತ್ಮ ಗಾಂಧಿ ಉಪವಾಸಕ್ಕೆ ಕೂತರು ಎಂದು ಆಂಗ್ಲರು ಬೆದರಿದರೋ ಅಥವಾ ಹಾಗೆ ಉಪವಾಸ ಮಾಡುವುದರಿಂದ ಗಾಂಧಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ನಾಳೆ ನಮ್ಮ ಗತಿ ಏನಾಗುವುದೋ ಎಂದು ಬೆದರಿದರೋ ನೀವೇ ಯೋಚಿಸಿ. ಜಾರಿಯಲ್ಲಿರುವ ಯಾವುದೇ ವ್ಯವಸ್ಥೆಯನ್ನು ಬದಲಿಸಲು ಹೋಗುವಾಗ ಹೋರಾಟ ಅನಿವಾರ್ಯ. ಅದನ್ನು ಶಾಂತ ರೀತಿಯಿಂದ ಮಾಡುವುದು ಒಂದು ಅಸ್ತ್ರವಾದರೇ, ಹಿಂಸೆಯೂ ಒಂದು ಅಸ್ತ್ರವೇ ತಾನೇ? ಒಂದು ಜನಾಂಗಕ್ಕೆ ಒಳಿತಾಗುತ್ತದೆ ಎನ್ನುವುದಾದರೆ ಅಂತಹ ಹಿಂಸೆಯನ್ನೂ ಜಗತ್ತು ಒಪ್ಪಿದ ಅನೇಕ ನಿದರ್ಶನಗಳಿವೆ ಅಲ್ಲವೇ? ಯುದ್ಧವೂ ಕೂಡಾ ಹಿಂಸೆಯೇ, ಆತ್ಮರಕ್ಷಣೆಗಾಗಿ ತೋರುವ ದೈಹಿಕ ಪ್ರತಿರೋಧವೂ ಹಿಂಸೆಯೇ, ನಮ್ಮ ಪೊಲೀಸರು, ಜೈಲುಗಳು, ನ್ಯಾಯಾಲಯ ವಿಧಿಸುವ ಗಲ್ಲು ಶಿಕ್ಷೆಗಳೂ ಹಿಂಸೆಯೇ… ಏನಂತೀರ?

Rating
No votes yet

Comments