ಸಕಾಲದಲ್ಲಿ ಮುಂಗಾರು ಮಳೆ

ಸಕಾಲದಲ್ಲಿ ಮುಂಗಾರು ಮಳೆ

ಅಷ್ಟು ಚೆನ್ನಾಗಿದೆ ಇಷ್ಟು ಚೆನ್ನಾಗಿದೆ ಎಂದೆಲ್ಲಾ ಕೇಳಿ ಕೇಳಿ ಸಾಕಾಗಿ ಇನ್ನು ನೋಡದೇ ಕಳೀದು ಎಂದಂದುಕೊಂಡು ಇಂದು ನಾನು ಮುಂಗಾರು ಮಳೆ ನೋಡೇ ಬಿಟ್ಟೆ. ಮಂಗಳೂರಿನ ಜನ ಕನ್ನಡ ಸಿನೆಮಾ ನೋಡುವುದೇ ಇಲ್ಲ ಎಂದಂದುಕೊಂಡು ನಾನು ಥ್ಯೇಟರಿಗೆ ಹೋದೆ. ನೋಡಿದರೆ ಬಾಲ್ಕನಿ ಫುಲ್! ಈ ಸಿನೆಮಾ ಇದೇ ಥ್ಯೇಟರಿನಲ್ಲಿ ಆಗಲೇ ಕನಿಷ್ಟ ೫ ವಾರದಿಂದ ಓಡುತ್ತಿದೆ. ಕೆಳಗೆ ಕೂತರೆ ಅದೂ ಆಲ್‍ಮೋಸ್ಟ್ ಫುಲ್. ನಾನು ಕೂತ ಕೆಲವು ಸಮಯದಲ್ಲೇ ದೀಪ ಆರಿತು ಸಿನೆಮಾ ಆರಂಭವಾಯಿತು.

ಟೈಟಲ್ ಆದ ಮೇಲೆ ತೀರಾ ಸಾದಾರಣ ಎನ್ನುವ ಓಪನಿಂಗ್ ಆಗುತ್ತೆ ಸಿನೆಮಾಕ್ಕೆ. ಗಣೇಶ್ ಪಾತ್ರ ಯಾಕೆ ಹೀಗಿದ್ದಾನೆ? ಮಡಿಕೇರಿಯ ಹುಡುಗಿ ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದಾಳೆ? ರೇಡಿಯೋ ಮಿರ್ಚಿಗೆ ದೂರವಾಣಿಸಿದ ಕೂಡಲೇ ಲೈನ್ ಸಿಗುವುದು! ಶುದ್ಧ ನಾಲಾಯಕ್ಕಾದ ಮಗನಿದ್ದೂ ಅಮ್ಮ ಅವನಿಗೆ ಸಹಕಾರ ಕೊಡುವುದು, ಅಪ್ಪ ಮಗನಿಗೆ ಹೆದರುವುದು! ಈ ರೀತಿ ವಿಚಿತ್ರವಾಗಿ ಸಿನೆಮಾ ಆರಂಭವಾಗುತ್ತದೆ. ಮುಂದೆ ಸಿನೆಮಾದುದ್ದಕ್ಕೂ ಈ ವಿಚಿತ್ರಗಳ ಸರಮಾಲೆ ಮುಂದುವರೆಯುತ್ತದೆ. ಎಷ್ಟೋ ಕಡೆ ಸ್ಕ್ರಿಪ್ಟ್ ವೀಕ್ ಅನ್ನಿಸುತ್ತದೆ. ನಟನೆ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸುತ್ತದೆ. ಚಿತ್ರದ ನಡುವೆ ಪಂಜಾಬಿ ನೃತ್ಯ ಅನಗತ್ಯ ಅನ್ನಿಸುತ್ತದೆ. ಸಿನೆಮಾದ ಕಥೆ ಮೊದಲೇ ಅನೇಕ ಛಾಯೆಗಳಲ್ಲಿ ಹಿಂದಿಯಲ್ಲಿ ಬಂದಿದೆ ಅನ್ನಿಸುತ್ತೆ. ಪ್ರಸಿದ್ಧ ದಿಲ್ ವಾಲೆ ದುಲ್ಹನಿಯಾ ಲೇಜಾಯೆಂಗೆ ಇದೇ ಕಥೆಯ ಎಳೆಯಲ್ಲವೇ? (ಇದು ಅದರ ನಕಲು ಎಂದಲ್ಲ ನಾನು ಹೇಳುತ್ತಿರುವುದು) ಹೀಗೆ ಅನೇಕ ವಿಷಯಗಳು ಮಾಮೂಲು ಎಂದನ್ನಿಸುತ್ತದೆ. ಆದರೆ ನಾನು ಇದನ್ನೇ ಪಟ್ಟಿಮಾಡಿದರೆ ತಪ್ಪು ಮಾಡಿದಂತಾಗುತ್ತದೆ.

ಮೇಲೆ ಬರೆದ ಎಲ್ಲಾ ವಿಷಯಗಳ ಹೊರತಾಗಿಯೂ ಈ ಸಿನೆಮಾ ನನಗೆ ಸಂತೋಷ ಕೊಟ್ಟಿತು. ಸಿನೆಮಾ ಮುಗಿಸಿ ಹೊರಗೆ ಬರುವಾಗ ಒಂದು ಭಾವದ ಬುತ್ತಿಯನ್ನು ಈ ಚಿತ್ರ ಕಟ್ಟಿ ಕೊಟ್ಟಿತು. ಸಿನೆಮಾ ಮಾಡಿದ ಪ್ರತಿಯೊಬ್ಬರಲ್ಲಿ ಅದ್ಭುತವಾದ ಒಂದು ಪ್ರಾಮಾಣಿಕತೆ ಕಾಣುತ್ತದೆ. ಕಥೆಯೊಂದನ್ನು ಹೇಳುವ ತುಡಿತ ಕಾಣುತ್ತದೆ. ಕಣ ಕಣದಲ್ಲೂ ಚಿತ್ರ ತಂಡದ ಪ್ರಯತ್ನ ಕಾಣುತ್ತದೆ. ಪ್ರಾಮಾಣಿಕತನವೊಂದಿದ್ದರೆ ಉಳಿದದ್ದೆಲ್ಲವೂ ಸರಿಯಾಗುತ್ತೆ ಅಂತಾರಲ್ಲಾ, ಹಾಗೇ ಮುಂಗಾರು ಮಳೆ ಹಿಟ್ಟ್ ಆಗಿದೆ. ಮುದನೀಡುವ ಚಿತ್ರವಾಗಿಯೂ ರೂಪಗೊಂಡಿದೆ. ಬರೇ ಲಾಂಗು ಮಚ್ಚು ಎಂದು ಸಿನೆಮಾ ಬರುತ್ತಿರುವ ಸಮಯದಲ್ಲಿ ಹೀಗೊಂದು ಚಿತ್ರ ಮಾಡುವ ಧೈರ್ಯವೇ ಇಡೀ ಚಿತ್ರ ತಂಡ ಚಿತ್ರದ ಬಗ್ಗೆ ಎಷ್ಟು ನಂಬಿಕೆ ಇಟ್ಟಿತ್ತು ಎನ್ನುವುದಕ್ಕೆ ಸಾಕ್ಷಿ.

ಚಿತ್ರದ ಒಂದು ಮುಖ್ಯ ವಿಷಯವೆಂದರೆ ಸಂಗೀತ ಹಾಗೂ ಹಾಡಿನ ಸಾಹಿತ್ಯ. ಇಷ್ಟು ಹಿತವಾದ ಹಾಗೂ ಅರ್ಥಭರಿತ ಸಾಹಿತ್ಯ ಕನ್ನಡದಲ್ಲಿ ಬಹಳ ಕಾಲದ ನಂತರ ನಾನು ಕೇಳಿದ್ದು. ಜಯಂತ ಕಾಯ್ಕಿಣಿ, ಕವಿರಾಜ್, ಶಿವ ಹಾಗೂ ಸ್ವತಃ ಯೋಗರಾಜ್ ಭಟ್ಟ್ ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಸಂಗೀತವೂ ಹಿತವಾಗಿದೆ. ಜೋಗವನ್ನು ಭಿನ್ನವಾಗಿ ಚಿತ್ರೀಕರಿಸಿದ್ದಾರೆ ಎಂದು ಬಹಳವಾಗಿ ಹೇಳಲ್ಪಟ್ಟಿತ್ತು. ಆದರೆ ಜೋಗದವರೆಗೆ ಮೊದಲಬಾರಿಗೆ 'ಜಿಮಿಜಿಪ್ ಕ್ರೇನ್' ತಲುಪಿಸಿದ್ದು ಬಿಟ್ಟರೆ ಬೇರೇನೂ ನನಗೆ ವಿಶೇಷ ಏನೂ ಅನ್ನಿಸಲಿಲ್ಲ. ಆದರೆ ಸಿನೆಮಟೋಗ್ರಾಫರ್‍ನ ಕಂಪೊಸಿಷನ್ ಸೆನ್ಸ್ ನನಗೆ ಹಿಡಿಸಿತು. ಶಾಟ್ ಟೇಕಿಂಗ್ ಕೆಲವೆಡೆ ವೀಕ್ ಅನ್ನಿಸಿದರೂ ಹೆಚ್ಚಿನ ಕಡೆ ಚೆನ್ನಾಗಿಯೇ ಇದೆ. ಚಿತ್ರದ ಸಂಕಲನ ಅನೇಕ ಕಡೆ ದೃಶ್ಯದ ಭಾವದ ಮೇರೆ ಮೀರಿ ಹೋಗುತ್ತಿದ್ದು ಕಿರಿ-ಕಿರಿ ಅನ್ನಿಸುತ್ತಿತ್ತು. ನೃತ್ಯ ಸಂಯೋಜನೆಯಲ್ಲಿ ಮತ್ತೆ ಹಿಂದೀ ಸಿನೆಮಾಗಳ ಅನೇಕ ಛಾಯೆ ಕಂಡುಬರುತ್ತಿತ್ತು (ನಕಲು ಅಲ್ಲ) ಎರಡು ಫೈಟ್ ಇದ್ದು ಭಿನ್ನವಾಗಿ ಕಂಡಿತು.

ಈ ಬರಹ ಮುಗಿಸುವ ಮುನ್ನ ನನ್ನದೊಂದು ಸಣ್ಣ ಅನುಭವ. ಹಲವು ವರ್ಷಗಳ ಹಿಂದೆ ನಾನು ಡಿಗ್ರಿ ಓದುತ್ತಿರುವಾಗ ನಾಗತಿಹಳ್ಳಿಯವರ ವಠಾರ ದಾರವಾಹಿ ತಂಡ ಚಿತ್ರೀಕರಣಕ್ಕೆ ಮಂಗಳೂರಿಗೆ ಬಂದಿತ್ತು. ಇಲ್ಲಿಂದ ಅವರಿಗೆ ಜೂನಿಯರ್ ಕಲಾವಿದರ ಅಗತ್ಯ ಇತ್ತು. ಹೇಗಾದರೂ ಚಿತ್ರರಂಗಕ್ಕೆ ಬರಬೇಕೆಂದಿದ್ದ ನಾನು ಹಾಗೆ ಆ ತಂಡ ಸೇರಿದೆ. ಮಂಗಳೂರಿನ ಪುಡಿ ರೌಡಿಗಳಲ್ಲಿ ನಾನು ಒಬ್ಬ. ನಾಯಕ ನಟ ಗಣೇಶ್ ಹಾಗೂ ನಾಯಕಿಗೆ ತೊಂದರೆ ಕೊಡಲು ಪ್ರಯತ್ನಿಸಿ ಗಣೇಶ್ ಕೈಯಲ್ಲಿ ಹಿಗ್ಗಾ ಮುಗ್ಗಾ ಒದೆಸಿಕೊಳ್ಳುವುದು ನಮ್ಮ ಸೀನು! ಶೂಟಿಂಗ್ ನನಗಿನ್ನೂ ಹೊಸತು. ಶೂಟಿಂಗ್ ನಂತರದ ಸಮಯದಲ್ಲಿ ಗಣೇಶ್‍ರೊಂದಿಗೆ ಮಾತುಕತೆ ನಡೆಯುತ್ತಿತ್ತು. ಮನುಷ್ಯ ಸೀದಾ, ಸರಳ-ಸಜ್ಜನ, ಒಳ್ಳೆಯವ ಎಂದನ್ನಿಸಿತು. ನಂತರ ಕಾಲ ಸರಿಯಿತು, ನಾನು ಇಂದು ಚಿತ್ರರಂಗಕ್ಕೇ ಮತ್ತೆ ಬಂದಿಳಿದ ಸಮಯದಲ್ಲಿ ಕನ್ನಡ ಚಿತ್ರರಂಗದ ಮೊದಲ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ಮುಂಗಾರು ಮಳೆಯ ಆಡಿಯೋ ಬಿಡುಗಡೆ. ಅಲ್ಲಿ ಮತ್ತೆ ಗಣೇಶ್ ಸಿಕ್ಕಿದರು. ಅವರಿಗೆ ನಾನು ಖಂಡಿತಾ ನೆನಪಿರಲಿಲ್ಲ. ನೆನಪಿರುವುದು ಸಾಧ್ಯವೂ ಇಲ್ಲ. ಆದರೆ ಗಣೇಶ್ ಇನ್ನೂ ಹಾಗೇ ಇದ್ದರು, ಸರಳ, ಸಜ್ಜನ. ಮುಂಗಾರು ಮಳೆ ದೊಡ್ಡ ಹಿಟ್ ಆದ ಮೇಲೂ ಆತ ಹಾಗೇ ಇದ್ದಾರೆಂದು ಕೇಳಿದೆ. ಸಂತೋಷವಾಯಿತು. ಮುಟ್ಟಿದ್ದಕ್ಕೆ ಬಿಟ್ಟದ್ದಕ್ಕೆ ಕೋಲ ಕುಣಿಸುವ ನಾಯಕ ನಟರುಗಳಿರುವ ಈ ಸಮಯದಲ್ಲಿ ಗಣೇಶ್ ನಿಜಕ್ಕೂ ಆದರ್ಶಪ್ರಾಯ.

ಒಟ್ಟಿನಲ್ಲಿ ಮುಂಗಾರು ಮಳೆ ಇನ್ನೂ ಜೋರಾಗಿ ಸುರಿದು ಕನ್ನಡ ಚಿತ್ರರಂಗಕ್ಕೆ ತಂಪುನೀಡಲಿ ಎಂದು ಹಾರೈಸುತ್ತೇನೆ.

Rating
No votes yet

Comments