ಸರಕಾರದ ಶಾಲೆಯ ಸರದಾರರು
ಎಲ್ಲಾ ಅದೃಷ್ಟವಂತರೂ ಪ್ರೈವೇಟ್ ಶಾಲೆಗಳಿಗೆ, ಕಾನ್ವೆಂಟ್ ಪ್ರಭಾವಳಿಗೆ ಶರಣಾಗತರಾಗಿ ವರುಷಗಳೇ ಸಂದುಹೋಗಿದ್ದ ಕಾಲದಲ್ಲಿ ಸೃಷ್ಟಿಕರ್ತನೊಬ್ಬನಿಗೇ ತಿಳಿದ ಕಾರಣಗಳಿಂದ ಸರಕಾರಿ ಶಾಲೆಗೆ ’ಕೊಟ್ಟ ವಾಕ್ಯಕೆ ತಪ್ಪಿ ನುಡಿದರೆ ಮೆಚ್ಚನಾ ಪರಮಾತ್ಮನು’ಎಂದು, ವಚನ ಭ್ರಷ್ಟರಾಗಲಿಚ್ಛಿಸದೇ ನಮ್ಮ ತಲೆಮಾರು ಮನೆಯ ಹಿಂದಿನ ರಸ್ತೆಯಲ್ಲಿದ್ದ ಸರಕಾರಿ ಶಾಲೆಗೆ ಪಾದಾರ್ಪಣೆ ಮಾಡಿಯೇ ಬಿಟ್ಟಿತು. ವಚನ ಯಾರು ಯಾರಿಗೆ ಕೊಟ್ಟಿದ್ದು ಅನ್ನೋದು ಮಾತ್ರ ಇವತ್ತಿಗೂ ತಿಳಿದಿಲ್ಲ.
ಬೆಂಗಳೂರಿನ ಹೃದಯಭಾಗದಲ್ಲಿ ೧೯೮೨-೮೩ ನೇ ಇಸವಿಯಲ್ಲಿ ಸರಕಾರಿ ಶಾಲೆಗಳು, ಸರಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಆ ದೇವರಿಗೇ ಪ್ರೀತಿ ಎಂಬಂತೆ ಕೆಲಸ ನಿರ್ವಹಿಸುತ್ತಿದ್ದವು ಅನ್ನೋದು ಅನುಭವ ವೇದ್ಯ ಸತ್ಯ!
ಬಸವನ ಹಿಂದೆ ಬಾಲ ಅನ್ನೋಹಾಗೆ ಅಕ್ಕ ಕಲಿತ ಶಾಲೆಯಲ್ಲಿ ಪ್ರತಿಸಲ ಸೇರಿ ಅವಳು ಗಳಿಸಿದ ಒಳ್ಳೆಯ ಹೆಸರಿನ ನೆರಳಿನಲ್ಲೇ ನಾನೂ ಅಲ್ಪ ಸ್ವಲ್ಪ ಹೆಸರುಳಿಸಲು-ಗಳಿಸಲು ಸರ್ವ ಪ್ರಯತ್ನ ನಡೆಸುತ್ತಿದ್ದೆ. ೧-೪, ೫-೭, ಹೀಗೆ ಸರಕಾರಿ ಮಾದರಿ ಪ್ರಾಥಮಿಕ ಹಾಗೂ ಸರಕಾರಿ ಮಾದರಿ ಮಾಧ್ಯಮಿಕ ಶಾಲೆಗಳಲ್ಲಿ, ನಡೆಸುತ್ತಿದ್ದ ಈ ಪ್ರಯತ್ನ ಕೊಂಚ ಮಟ್ಟಿಗೆ ಸಫಲವೂ ಆಗಿದ್ದು, ನಾನು ಬುದ್ಧಿವಂತಳಾಗಿದ್ದರಿಂದಲೋ ಅಥವಾ ಶಾಲೆಯ ರೇಸ್ ನಲ್ಲಿ ಇದ್ದುದೇ ಕಡಿಮೆ ವಿದ್ಯಾರ್ಥಿಗಳೆಂಬ ಕಾರಣಕ್ಕೋ ಅರಿಯೆ!
ಇಂತಿರ್ಪ ನಮ್ಮ ಆದಿನಾರಾಯಣ ಶೆಟ್ಟಿ ಪೇಟೆಯ ಶಾಲೆ (ಸ್ಥಳೀಯರ ಬಾಯಲ್ಲಿ ಆದಪ್ಪ ಸ್ಕೂಲ್ ಆಗಿದ್ದು,) ಹಳೆಯ ದೊಡ್ಡ ಶಾಲಾ ಕಟ್ಟಡದಲ್ಲಿ ಒಂದು ಮಾಧ್ಯಮಿಕ ಶಾಲೆ ಮತ್ತು ಎರಡು ಪ್ರತ್ಯೇಕ ಪ್ರಾಥಮಿಕ ಶಾಲೆಗಳು, (ಎರಡು ವಿಭಾಗಗಳಲ್ಲ! ) ಒಟ್ಟು ಮೂರು ಶಾಲೆಗಳಿಗೂ ಮೂವರು ಮುಖ್ಯೋಪಾಧ್ಯಾಯಿನಿಯರು!
೧-೪ ನೇ ತರಗತಿಯವರೆಗೆ ಇದ್ದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ೧೫. ಮುಖ್ಯೋಪಾಧ್ಯಾಯಿನಿಯನ್ನೂ ಸೇರಿಸಿ, ಅಧ್ಯಾಪಕರು ಮೂರು. ಒಂದು ಪ್ರಾಧಮಿಕ ಶಾಲೆಯ ಶಾಲೆಯ ಹೆಡ್ ಮಿಸ್, ಅಕ್ಕ ಅಲ್ಲಿಂದ ತೇರ್ಗಡೆ ಹೊಂದಿ ಮಾಧ್ಯಮಿಕ ಶಾಲೆಗೆ ಹೋದಮೇಲೆ ಮತ್ತೊಂದು ಮಿಕದ ಹಾದಿಕಾಯುತ್ತಿದ್ದರೇನೋ, ಅಕ್ಕನ ಶಾಲೆಗೆ ಅಮ್ಮನ ಸಂಗಡ ಹೋಗುತ್ತಿದ್ದ ನನಗೆ ಬಲಗೈ ತಲೆಯ ಮೇಲಿಂದ ಎಡಗಿವಿ ತಲುಪುವ ಏಕೈಕ ಕಾರಣದಿಂದ ಐದು ವರ್ಷಗಳಾಗದಿದ್ದರೂ ಪರವಾಗಿಲ್ಲ ಶಾಲೆಗೆ ಸೇರಬಹುದು ಎಂದು ಶಿಫಾರಸ್ಸು ಮಾಡಿ, ಶಾಲೆಗೆ ಸೇರಿಸಿಕೊಂಡರು. ಹೀಗೆ ಇತರೆ ಹದಿನಾಲ್ಕು ವಿದ್ಯಾರ್ಥಿಗಳ ಜೊತೆ ಹದಿನೈದನೆಯವಳಾಗಿ ವಿದ್ಯಾರ್ಜನೆಗಾಗಿ ನಾನೂ ಅದೇ ಶಾಲೆಗೆ ಬಿಜಯಂಗೈದೆ!
ನಮ್ಮ ಆ ಶಾಲೆ ದೊಡ್ಡದಾದರೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಡಿಮೆ! ಹಾಜರಾತಿ ಕಡಿಮೆಯಿದ್ದ ಸಂದರ್ಭದಲ್ಲಂತೂ ಏಕೋಪಾಧ್ಯಾಯಿನಿಯ ಸುಪರ್ದಿಯಲ್ಲಿ, ಒಂದೇ ಕೊಠಡಿಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನೂ ಉದ್ದುದ್ದ ಮಣೆಗೊಂದು ತರಗತಿಗಳಂತೆ (ಚಿಕ್ಕ ಮಕ್ಕಳಾದ್ದರಿಂದ ಇನ್ನೂ ಮರದ ಬೆಂಚುಗಳ ಮೇಲೆ ಆಸೀನರಾಗುವ ಸೌಭಾಗ್ಯ ನಮಗಿನ್ನೂ ಒದಗಿರಲಿಲ್ಲ!) ನಮ್ಮನ್ನು ಕೂರಿಸುತ್ತಿದ್ದರು!
ಮಾಧ್ಯಮಿಕ ಶಾಲೆಯ ಸ್ಥಿಗತಿಯೂ ಇದಕ್ಕೆ ಹೊರತಾಗಿರಲಿಲ್ಲ, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಇಪ್ಪತ್ತೈದಾದರೆ, ಶಿಕ್ಷಕರ ಸಂಖ್ಯೆ ಮೂರೇ! ನಾಲ್ಕನೇ ತರಗತಿಯಿಂದ ಇಂಗ್ಲಿಷ್ ಪಾಠವೂ ಆರಂಭವಾದ್ದರಿಂದ, ಮುಖ್ಯೋಪಾಧ್ಯಾಯಿನಿ ಯವರೇ ಇಂಗ್ಲಿಷ್ ಪಾಠಕ್ಕೆ ಬರುತ್ತಿದ್ದುದು, ಮತ್ತೊಬ್ಬ ಶಿಕ್ಷಕಿ ಇತರ ಎಲ್ಲಾ ವಿಷಯಗಳಿಗೂ ಏಕೈಕ ಆಕರ, ಇನ್ನೊಬ್ಬ ಅಂಧ ಶಿಕ್ಷಕಿ ಸಂಗೀತ ಪಾಠದ ಜೊತೆಗೆ, ಆಗಾಗ, ನಮ್ಮ ಕೈಯ್ಯಲ್ಲೇ ಇಂಗ್ಲಿಷ್ ಅಕ್ಷರಗಳನ್ನು ಜೋಡಿಸಿ ಓದುವಂತೆ ಹೇಳಿ ಇಂಗ್ಲಿಷ್ ಕಲಿಸಿಕೊಡುತ್ತಿದ್ದಾಕೆ!
ಶಿಕ್ಷಕರು ಇದ್ದದ್ದೇ ಕಡಿಮೆಯಾದರೂ ಬಹಳಷ್ಟು ಮಂದಿ ತಾವು ಪಡೆಯುತ್ತಿದ್ದ ಸಂಬಳಕ್ಕೆ ಪ್ರಾಮಾಣಿಕರಾಗಿರಲು ಪ್ರಯತ್ನಿಸುತ್ತಿದ್ದರು, ಅಂಥಾ ಕೆಲವರಿಂದಲೇ ನಾವು ಈ ಮಟ್ಟದಲ್ಲಾದರೂ ಇದ್ದೇವೆ ಎಂಬುದು ಪ್ರಾಮಾಣಿಕ ಸತ್ಯ.
ಮೂಲಭೂತ ಸೌಕರ್ಯವೆಂಬುದು ಆ ಶಾಲೆ ಕಂಡು ಕೇಳರಿಯದ ಪದ ಪುಂಜ, ಶಾಲೆಯಲ್ಲಿ ಕಸ ಗುಡಿಸುವುದು ದಿನಕ್ಕೊಬ್ಬರ ಸರದಿ, ಶಿಕ್ಷಕರ ಡಬ್ಬಿ ತೊಳೆಯುವುದು, ಅವರಿಗೆ ಹತ್ತಿರದ ಹೊಟೇಲಿನಿಂದ ದೋಸೆ ತಂದುಕೊಡುವುದು ಮುಂತಾದ ಗುರು ಸೇವೆ-ಕೈಂಕರ್ಯಗಳನ್ನು ಮಾಡಿದ ವಿದ್ಯಾರ್ಥಿಗಳೂ ಅಲ್ಲಿದ್ದರು. ರಸಾಯನ ಶಾಸ್ತ್ರದ ಪ್ರಯೋಗಕ್ಕೆ ಅಣಿಮಾಡುವವರೂ ವಿದ್ಯಾರ್ಥಿಗಳೇ, ಶಾಲೆಯ ಬೀಗ ಬೇಗ ಬಂದು ತೆಗೆಯುವವರೂ ವಿದ್ಯಾರ್ಥಿಗಳೇ, ಸಮಯಕ್ಕೆ ಸರಿಯಾಗಿ ಬೆಲ್ ಹೊಡೆಯುವುದೂ ವಿದ್ಯಾರ್ಥಿಗಳೇ! ಈಗಿನ ಪೋಷಕರು ಬಯಸುವ Individual attention ಆಗಲೇ ಕೊಂಚಮಟ್ಟಿಗೆ ನಮಗೆ ಸಿಗುತ್ತಿದ್ದುದು ಹೀಗೆಯೇ!
ಇಂದು ವಿಪರೀತವಾಗಿರುವ ವಿದ್ಯಾಭ್ಯಾಸದ ವಾಣಿಜ್ಯೀಕರಣದ ನಡುವೆ ಥಟ್ಟನೇ ನೆನಪಿಗೆ ಬಂದ ನಮ್ಮ ಶಾಲೆಯ ನೆನಪು ಮನ ಕಲಕಿದರೂ, ಎರಡೂ ವ್ಯವಸ್ಥೆಯ ಅಜಗಜಾಂತರ ಅಚ್ಚರಿ ಹುಟ್ಟಿಸುತ್ತದೆ. ಅಂತರರಾಷ್ಟ್ರೀಯ ಶಾಲೆಗಳು ಈಜುವುದು, ಕುದುರೆ ಸವಾರಿ, ಆಟೋಟಗಳನ್ನು ಕಲಿಸಿಕೊಟ್ಟರೆ ನಮ್ಮ ಶಾಲೆಗಳು ನಮಗೆ ಜೀವನ ಕೌಶಲ್ಯಗಳನ್ನು ಕಲಿಸಿತೇನೋ ಎಂದು ಸಮಾಧಾನ ಪಟ್ತುಕೊಳ್ಳುವುದು ನಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕ್ಷೇಮ J
ವಿದ್ಯಾರ್ಥಿಗಳಿಲ್ಲದೇ ಸರಕಾರೀ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದ ಆ ಕಾಲದಲ್ಲಿ, “ಕೊಟ್ಟ ಕುದುರೆಯನೇರಲರಿಯುವುದು” ಬಿಟ್ಟು ಬೇರೆ ದಾರಿಯಿಲ್ಲದೇ, ಅಲ್ಲಿಯ ಅವಗುಣಗಳನ್ನು ಬಿಟ್ಟು ಸದ್ಗುಣಗಳನ್ನೇ ಮುಖ್ಯವಾಗಿಸಿಕೊಂಡು ಪಾಲಿಗೆ ಬಂದ ಪಂಚಾಮೃತವನ್ನು ಸ್ವೀಕರಿಸಿ, ಕನ್ನಡ- ಇಂಗ್ಲಿಷ್ ಮಾಧ್ಯಮಗಳ ನಡುವಿನ ಏರಿಳಿತದ ನಡುವೆ ಈಸುತ್ತ, ಜಯಿಸುವ ಸತತ ಪ್ರಯತ್ನವನ್ನು ಇನ್ನೂ ಮಾಡುತ್ತಲೇ ಇದ್ದೇವೆ. ನಮ್ಮನ್ನೇ ನೋಡಿ ನಾವೇ ನಗುವುದನ್ನು ಕಲಿತಿದ್ದೇವೆ. ಕಷ್ಟಗಳೂ ಸಹ ನಮ್ಮ ನಗುವನ್ನು ಕಂಡು ಮರೆಯಾಗುವುದನ್ನು ಕಲಿಯುತ್ತಿವೆ. ಪರಮಾತ್ಮ ಇಲ್ಲೂ ತಾನೇ ಇದ್ದೇನೆ ಎಂದು ತೋರಿಸಿಕೊಟ್ಟಿದ್ದಾನೆ.