ಸರ್ವರೊಳಗೊಂದಾದ ಮಂಕುತಿಮ್ಮ.

ಸರ್ವರೊಳಗೊಂದಾದ ಮಂಕುತಿಮ್ಮ.

ತಿಮ್ಮ ಸೀದಾ ಸಾದಾ ಹುಡುಗ. ಚಿಕ್ಕಂದಿನಲ್ಲಿ ಆಟ-ಪಾಠ ಎಲ್ಲದರಲ್ಲೂ ಮುಂದು. ವ್ಯವಹಾರ ಜ್ಞಾನ ಸ್ವಲ್ಪ ಕಡಿಮೆ ಅನ್ನೋದು ಬಿಟ್ಟರೆ ಎಲ್ಲದರಲ್ಲೂ ಎತ್ತಿದ ಕೈ. ಅವನು ಭಾಗವಹಿಸದ ಸ್ಪರ್ಧೆಯೇ ಇರುತ್ತಿರಲಿಲ್ಲ. ಬಹುಮಾನ ವಿತರಣೆಯಲ್ಲಿ ಎಲ್ಲರ ಬಾಯಲ್ಲೂ ಒಕ್ಕೊರಲಿನಿಂದ ಬರುತ್ತಿದ್ದ ಹೆಸರು "ತಿಮ್ಮ"...
ಈಗ ಪ್ರತಿಷ್ಟಿತ ಐಟಿ ಕಂಪನಿಯ ಉದ್ಯೋಗಿ. ಮಹಾನಗರಿ ಬೆಂಗಳೂರಿಗೆ ಬಂದು ಅವನ ವ್ಯವಹಾರ ಜ್ಞಾನವೂ ಸುಧಾರಿಸಿತ್ತು. ಹಗಲೂ-ರಾತ್ರಿಯೆನ್ನದೆ ದುಡಿಯುತ್ತಿದ್ದ. ಬಸವಣ್ಣನ ಕಾಯಕವೇ ಕೈಲಾಸ ಮಾತು ಅವನಲ್ಲಿ ನೆಟ್ಟಿತ್ತು. ಕಾಲ ಹೀಗೇ ಸಾಗಿರುವಾಗ ತಿಮ್ಮನಿಗೆ ತಾನೇನನ್ನೋ ಕಳೆದುಕೊಳ್ಳುತ್ತಿದ್ದೇನೆಂದು ಭಾಸವಾಗಹತ್ತಿತು. ದಿನೇ ದಿನೇ ಈ ಭಾವನೆ ಹೆಚ್ಚುತ್ತಲೇ ಹೋಯಿತು. ಇರುವ ವಾರಾಂತ್ಯದಲ್ಲೊಮ್ಮೆ ತಿಮ್ಮ ಬಿಡುವಾಗಿದ್ದಾಗ ಹೊರಗಿನ ಪ್ರಕೃತಿಯನ್ನೇ ಬೆರಗಾಗಿ ನೋಡುತ್ತ ನಿಂತಿದ್ದ. ಥಟ್ಟನೆ ಬಾಲ್ಯದ ಗೆಳೆಯನೊಬ್ಬನ ಕರೆ. ಉತ್ತರಿಸಿ ಹಗುರಾದ ತಿಮ್ಮ ನಿಧಾನವಾಗಿ ಮನೆಯ ಮೇಲಿನ ವರಾಂಡದಲ್ಲಿ ಕೂತು ಆ ಗೆಳೆಯನೊಡನೆ ಇದ್ದ ಬಾಲ್ಯದ ದಿನಗಳನ್ನು ನೆನೆಯುತ್ತಲೇ ಹೋದ. ಕೆದಕಿದಂತೆ ಹನಿ ಒಡೆದು ಸಮುದ್ರದಂತೆ ಅವನನ್ನಾವರಿಸಿತ್ತು..ತಿಮ್ಮ ಕಳೆದು ಹೋಗಿದ್ದ ತನ್ನ ಬಾಲ್ಯದ ದಿನಗಳಲ್ಲಿ...
ತಿಮ್ಮ ಸ್ಕೂಲಿನಲ್ಲಿ ಹೋದ ಮೇಲೆ ಪಾಠದಲ್ಲಿ ಮಗ್ನ. ಮಧ್ಯಾಹ್ನದ ವೇಳೆ ಅವನಿಗಿಷ್ಟ. ಏಕೆಂದರೆ ಒಂದಲ್ಲ ಎಲ್ಲ ಗೆಳೆಯರ ಬುತ್ತಿಯ ಒಂದು ತುತ್ತು ಸಿಗುತ್ತಿತ್ತು. ಆ ಹಲವಾರು ತುತ್ತು ಅಮೃತ. ಊಟ-ಹರಟೆ. ಎಲ್ಲ ಶಾಲೆಯ ಹುಡುಗರಿಗೂ ಇಷ್ಟವಾದ ಗೇಮ್ಸ್ ಪೀರಿಯಡ್ ತಿಮ್ಮನಿಗೂ ಪ್ರಿಯವಾಗಿತ್ತು. ಅವನಿಗೆ ಯಾರೊಡನೆಯೂ ಮನಸ್ತಾಪವಿರದಿದ್ದರೂ ಆಪ್ತರಾದ ಗೆಳೆಯರ ಬಳಗವಿತ್ತು!!
ಬರೀ ಓದು,ಆಟ,ಪುಸ್ತಕಗಳು, ಇಷ್ಟೇ ಅವನ ಬದುಕಾಗಿತ್ತು..ತಿಮ್ಮ ಆಗ ಬಹಳ ಸಂತೋಷವಾಗಿದ್ದ.
ನಂತರದ ಕಾಲೇಜು ಮೋಜಿನದಾಗಿದ್ದರೂ, ಬೆಂಗಳೂರು ಸಾಕಷ್ಟು ಪಾಠ ಕಲಿಸಿತ್ತು. ಈಗ ತಾನಿಲ್ಲಿ... "ಏ ತಿಮ್ಮಾ..ವಾಟರ್ ಬಿಲ್ಲ್ ಎಲ್ಲಿಟ್ಟಿದ್ದೀಯಾ..?"ಅಣ್ಣನ ಕರೆಗೆ ವಾಸ್ತವಕ್ಕೆ ಬಂದ ತಿಮ್ಮ. ಹೋಗಿ ವಾಟರ್ ಬಿಲ್ಲನ್ನು ಅಣ್ಣನಿಗೆ ಕೊಟ್ಟು ಬಂದು ನೋಡುತ್ತಾನೆ ತಂದಿದ್ದ ಚಹ್ಹಾ..ಆಗಲೇ ತಣ್ಣಗಾಗಿ ಮಲಗಿಬಿಟ್ಟಿತ್ತು. ಹೋದರೆ ಹೋಗಲಿ ಮತ್ತ್ಯಾರು ಬಿಸಿ ಮಾಡಿಕೊಂಡು ತರ್ತಾರೆ ಎಂದು ತನಗೆ ತಾನೆ ಹೇಳಿಕೊಂಡ.
ತಿಮ್ಮನ ಲಹರಿ...(ಬ್ರಾಕೆಟ್ ನಲ್ಲಿ ಬರುವುದೆಲ್ಲವೂ ಒಳಮನಸ್ಸಿನ ಮಾತು)
ಈಗ ತಾನೊಬ್ಬ ಐಟಿ ಉದ್ಯೋಗಿ. ಕೈ ತುಂಬಾ ಸಂಬಳ. ಅದು ಬಂದ ದಿನ ಅವನಿಗೇನೂ ಅನ್ನಿಸುವುದಿಲ್ಲ..ಅಷ್ಟೂ ಸಂಬಳ ತನ್ನಷ್ಟಕ್ಕೆ ತಾನೇ ಡೆಬಿಟ್ ಕಾರ್ಡಲ್ಲಿ ಕೂತಿರತ್ತೆ. (ಹಿಂದೆ ಕೈಯಲ್ಲಿ ಅಪ್ಪಾಜಿ ಶನಿವಾರ ಕೊಡುತ್ತಿದ್ದ ಎಂಟಾಣೆ ಅದೆಷ್ಟು ಖುಷಿ ಕೊಡುತ್ತಿತ್ತು. ಆ ದಿನ ಹಬ್ಬ.. ತನಗಿಷ್ಟವಾದ ಬ್ರೆಡ್-ಜಾಮ್ ಮನೆಯಲ್ಲಿರುತ್ತಿತ್ತು!!).ಬೆಳಗ್ಗೆ ಎದ್ದು ರೆಡಿಯಾಗಿ ಹೋದವ ಬರುವುದು ರಾತ್ರಿ 10ಕ್ಕೆ. ಊಟ-ನಿದ್ದೆ(ಉದ್ಧಾರ...). ರೂಮಲ್ಲಿ ಕೂಡಿಟ್ಟ ಪುಸ್ತಕದ ರಾಶಿ ಓದುವವರಿಲ್ಲದೆ ಮಲಗಿವೆ(ಮನೆಯಲ್ಲಾದರೆ ಅಪ್ಪಾಜಿ - ಅಮ್ಮ ತಂದಿಟ್ಟ ಯಾವ ಪುಸ್ತಕವನ್ನೂ ಜಾಲಾಡದೆ ಉಳಿಸಿರಲಿಲ್ಲ). ಓದಿನ ಆಸೆ ಹಾಗೆಯೇ ಇದೆ. ಅಂಗಡಿಯಲ್ಲೊಂದು ಒಳ್ಳೆಯ ಪುಸ್ತಕ ಕಂಡರೆ ನನ್ನ ಬ್ಯಾಗಲ್ಲಿರುತ್ತೆ(ಓದೋದೊಂದಿಲ್ಲ ಅಷ್ಟೇ!!).
ಮೊನ್ನೆ ಬಂದ ಒಂದು ಮೇಲ್ ತುಂಬಾ ಇಷ್ಟವಾಗಿತ್ತು. ಅದರಲ್ಲಿದ್ದಿದ್ದು ಒಂದು ಪುಟ್ಟ ಕಥೆ.. ಆದರೆ ಮನಸ್ಸಿಗೆ ನಾಟಿತ್ತು.
{{{{{ ಕಥೆಯಲ್ಲಿ ನಮ್ಮ ಹುಡುಗ ಕೆಲಸದಲ್ಲಿ ಮಗ್ನನಾಗಿರುತ್ತಾನೆ. ಬರೆದಿದ್ದ ಕೋಡ್ ನಲ್ಲಿ ಏನೋ ತಪ್ಪಾಗಿತ್ತು.. ಆದರೆ ನಾಲ್ಕು ಗಂಟೆ ಕಳೆದರೂ ಏನೂ ತಿಳಿಯದಾಗಿತ್ತು. ಆದರೆ ಪದೇ ಪದೇ ಬರುತ್ತಿದ್ದ ಗೆಳತಿಯ ಕರೆ ಅವನಿಗೆ ಕೋಪ ಬರಿಸುತ್ತಿತ್ತು. ಅದನ್ನು ರಿಸೀವ್ ಮಾಡದೆ ಹಾಗೆಯೇ ಕೆಳಗಿಟ್ಟು ಮಗ್ನನಾದ. ಸ್ವಲ್ಪ ಸಮಯದ ನಂತರ ಹೊರಗಡೆ ನೋಡುತ್ತಿದ್ದ ಹುಡುಗನಿಗೆ ಕಂಡದ್ದು ಒಂದು ಪಾತರಗಿತ್ತಿ. ಅದು ತನ್ನೆದುರಿಗಿರುವ ಗಾಜಿನಲ್ಲಿ ಕಂಡ ಮರವನ್ನೆ ನಿಜವೆಂದು ಭ್ರಮಿಸಿ ಅದನ್ನು ಮುಟ್ಟಲು ಹೋಗಿ ಗಾಜಿಗೆ ಹಾಯುತ್ತಿತ್ತು. ಇದು ಪುನಃ ಪುನಃ ಪುನರಾವರ್ತನೆಯಾಗುತ್ತಿತ್ತು. ಇದನ್ನು ಕಂಡ ಹುಡುಗ ತನಗೆ ತಾನೆ ಹೇಳಿಕೊಂಡ.. "ಈ ಚಿಟ್ಟೆ ಮರವೆಂದು ಭ್ರಮಿಸಿ ಹೇಗೆ ಒದ್ದಾಡುತ್ತಿದೆಯಲ್ಲ..ಸ್ವಲ್ಪ ತಿರುಗಿ ನೋಡಿದ್ದರೆ ನಿಜವಾದ ಮರ ತನ್ನೆದುರಿಗೇ ಇದೆ ಎಂದು ಅದಕ್ಕೆ ತಿಳಿಯುತ್ತಿತ್ತು.ಪಾಪ!!"ಎಂದು.
ಆದರೆ ಈಗ ತನ್ನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಎಷ್ಟು ಕಷ್ಟ ಪಟ್ಟು ದುಡಿದರೇನು.. ತನ್ನವರಿಗೇ ಮೀಸಲಿಡಲು ಸಮಯವಿಲ್ಲ. ಯಾವ ಪುರುಷಾರ್ಥಕ್ಕೆ ಇಷ್ಟೊಂದು ದುಡಿಯುತ್ತಿರುವೆ ಎಂದು ಹುಡುಗನಿಗನ್ನಿಸತೊಡಗಿತು. ಅಷ್ಟರಲ್ಲೆ ಮತ್ತೆ ಮೊಬೈಲ್ ರಿಂಗಣಿಸಿತು. ಮಾತಾಡಿ ಗೆಳತಿಗೆ ಕೆಫೆಯಲ್ಲಿ ಸಿಗುವೆನೆಂದು ಹೇಳಿ ಕೆಲಸವನ್ನು ಅಲ್ಲೇ ನಿಲ್ಲಿಸಿ ಹೊರಟ. ಕೆಫೆಯಲ್ಲಿ ಹೋದ ಮೇಲೆ ತಿಳಿಯಿತು ತನ್ನಂತೆ ಅವಳೂ ಊಟ ಮಾಡಿರಲಿಲ್ಲವೆಂದು. ಅವಳ ಕೆಲಸದಲ್ಲೂ ಏನೋ ತಪ್ಪಾಗಿ ಮ್ಯಾನೇಜರ್ ಬೈದಿದ್ದು, ಕೆಲಸ ಆ ದಿನವೇ ಮುಗಿಯಬೇಕೆಂದು ತಾಕೀತು ಮಾಡಿದ್ದು.. ಎಲ್ಲವನ್ನೂ ಹೇಳುತ್ತಲೇ ಹೋದಳವಳು. ಅವಳಿಗೆ ಸಮಾಧಾನಿಸಿ ಊಟ ಮಾಡಿ ಹೊರಟ ಹುಡುಗನಿಗೂ ಮನಸ್ಸಿಗೆ ಏನೋ ಸಮಾಧಾನವಾಗಿತ್ತು. ಹೋದವನಿಗೆ ಅರ್ಧ ಗಂಟೆಯಲ್ಲೇ ತಪ್ಪು ಎಲ್ಲಿ ನಡೆದದ್ದು ಎಂದು ತಿಳಿದುಹೋಯಿತು. ಸಂಜೆ ಮನೆಗೆ ಹೊರಟವನಿಗೆ ಜೊತೆಯಾದಳು ಗೆಳತಿ. ಅವಳ ಕೆಲಸವೂ ಮುಗಿದದ್ದು, ಮ್ಯಾನೇಜರ್ ಸಂತಸಗೊಂಡಿದ್ದು, ಎಲ್ಲವನ್ನೂ ಹೇಳುತ್ತಲೇ ಹೋದಳು ಚಿಕ್ಕ ಮಗುವಿನಂತೆ. ಅವಳ ನಗುಮುಖವನ್ನೇ ನೋಡುತ್ತ ಖುಷಿಯಾಗಿ ನಡೆಯುತ್ತಿದ್ದನವನು.. ತನಗೆ ಬದುಕಿನ ಹೊಸ ಅರ್ಥ ತಿಳಿಸಿದ ಪಾತರಗಿತ್ತಿಗೆ ಮನದಲ್ಲೆ ವಂದಿಸುತ್ತ.. }}}}}}
ಈಗ ತಾನು ಇದೇ ಹಾದಿಯಲ್ಲಿ ತುಂಬ ಪ್ರಾಕ್ಟಿಕಲ್ ಆದೆನೇನೋ ಅನ್ನಿಸತೊಡಗಿತ್ತು(ಹಗಲೂ ರಾತ್ರಿ ಮಿಷೀನ್ ಥರ ದುಡಿದ್ರೆ ಇನ್ನೇನಾಗತ್ತೆ..). ವಾರದಲ್ಲಿ ಸಿಗುವ ಎರಡು ದಿನದ ತುಂಬ ಸಮಯ ನಿದ್ದೆ ಇಲ್ಲವೇ ಟಿವಿ ಆವರಿಸುತ್ತಿವೆ(ಜೀರೋ ಪರ್ಸೆಂಟ್ ಜೀವನ ಬೇಕೆ ಇದೋ ತಿಮ್ಮನ ಹತ್ತಿರವಿದೆ ಔಷಧ ಹ್ಹೆ ಹ್ಹೆ). ಮನಸ್ಸು ದೇಹ ಎರಡೂ ಅದೇನೋ ಜ್ವರ ಬಂದವರಂತಿರುತ್ತವೆ( ಮಂಕಾದ ನಮ್ಮ ತಿಮ್ಮ ಮಂಕುತಿಮ್ಮ ಹ ಹ್ಹ ಹ್ಹ...).
ದಿನ ಬೆಳಗಾದರೆ ತಾನು ಫ್ರೆಷ್ ಆದ ಮೇಲೆ ಚಹಾ ಪಾರ್ಲೆ-ಜಿ ತಿನ್ನುತ್ತ ಹೊರಗಡೆ ಕಾಣುವ ಪ್ರಕೃತಿಯನ್ನು ಆಸ್ವಾದಿಸಬೇಕು. ಬಿಸಿ ಬಿಸಿ ಪೇಪರ್ ಓದುತ್ತ ಹೊರಗಡೆ ವಾಕ್ ಹೋಗಿ ಬರಬೇಕು. ಸ್ನಾನವಾದ ಮೇಲೆ ಕೆಲಸಕ್ಕೆ ಹೋಗಿ ಸಂಜೆ ಬೇಗ ಮನೆಗೆ ಬರಬೇಕು. ತನಗಿಷ್ಟವಾದ ತಿಂಡಿ ಮುಗಿಸಿ ಚಿತ್ರ ಬಿಡಿಸುವುದೋ, ಪುಸ್ತಕ ಓದುವುದೋ, ಸಂಗೀತ ಕೇಳುವುದೋ ಮಾಡುತ್ತ ದಿನ ಕಳೆಯಬೇಕು. ಇವು ದಿನವೂ ಪುನರಾವರ್ತನೆಯಾಗುವ ತನ್ನ ಕನಸುಗಳು(ಯಾವುದೂ ನೆರವೇರಿಲ್ಲ ಅಷ್ಟೆ..). ಮೊನ್ನೆ ಹೇಗೋ ಸಮಯ ಹೊಂದಿಸಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತನಗೆ ಯಾವ ನಿಗದಿತ ಬಹುಮಾನವೂ ಬರಲಿಲ್ಲ. ಬಹುಮಾನವೇನೂ ದೊಡ್ಡ ಮೊತ್ತವಲ್ಲ ಆದರೆ ನಿಜಕ್ಕೂ ಬೇಸರವಾಗಿದ್ದು..ತನ್ನ ಬಗ್ಗೆ. ಸೃಜನಶೀಲತೆ ದಿನೇ ದಿನೇ ಮಾಯವಾಗತೊಡಗಿದೆ. ತಾನು ಏನಾದರೂ ಮಾಡಲೇ ಬೇಕು ಇಲ್ಲದಿರೆ ಹೀಗೆ ಬದುಕಿಡೀ ನಿರೀಕ್ಷೆಯಲ್ಲೇ ಕಳೆಯಬೇಕಾಗುತ್ತದೆ...
..............
.............
.............

ತಿಮ್ಮ ಹಲವಾರು ಬಾರಿ ಕೆಲಸ ಬಿಡಲು ಯೋಚಿಸಿದ್ದುಂಟು. ಆದರೆ ಬೇರೆಡೆಯೂ ಇದೇ ಪರಿಸ್ಥಿತಿ ಇದ್ದರೆ ಅಲ್ಲಿಯೂ ಕೆಲಸ ಬಿಡುವುದೇ? ಕೊಟ್ಟ ಕುದುರೆಯನೇರಲರಿಯದವ ಮತ್ತೇನನ್ನು ಸಾಧಿಸಿಯಾನು? ಹಾಗಾಗಿಯೇ ಅವನೀಗ ತಾನಿದ್ದಲ್ಲಿಯೇ ಹೊಂದಿಕೊಂಡಿದ್ದಾನೆ.
ಬೆಳಗ್ಗೆ ಬೇಗನೆ ಏಳುವ.. ಚಹಾ ಕುಡಿದು ಆಫೀಸಿಗೆ ಹೋಗುವ. ರಾತ್ರಿ ಬಂದ ಮೇಲೆ ಸ್ವಲ್ಪ ಓದು-ಬರಹ. ನಂತರ ನಿದ್ದೆ. ವಾರಾಂತ್ಯದಲ್ಲಿ ತನ್ನಿಷ್ಟದ ಸಂಗೀತ, ಚಿತ್ರ ಬಿಡಿಸುವಿಕೆಯಲ್ಲಿ ಪಾಲ್ಗೊಳ್ಳುವ...
ಇದೀಗ ನಿಮ್ಮ ಸರದಿ. ತಿಮ್ಮನ ಜಾಗದಲ್ಲಿ ನೀವಿದ್ದಲ್ಲಿ ನಿಮ್ಮ ಸಲಹೆ ಏನಾಗಿರುತ್ತಿತ್ತು?

Rating
No votes yet

Comments