ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

ಸುಖಾಂತ್ಯ ಕಂಡ ರಕ್ಷಾಬಂಧನದ ಎಡವಟ್ಟು!

ನಿನ್ನೆ
ರಕ್ಷಾಬಂಧನದ
ದಿನದಂದು,
ನಾ ರವಾನಿಸಿದ್ದ
ಸಂದೇಶ ಕಂಡು,
ಉರಿದು ಕೆಂಪಾಗಿ,
ಕರೆಮಾಡಿ ಬೈಗುಳದ
ಸುರಿಮಳೆಗೈದು,
ನನ್ನ ಭೇಟಿಗಾಗಿ
ಕಾಯುತ್ತಿದ್ದಳಾಕೆ;

ಸಂಜೆ ನಾನು ನನ್ನೆಲ್ಲಾ
ಜಾಣ್ಮೆಯನ್ನು ಒರೆಗೆ ಹಚ್ಚಿ,
ಹೊಸ ಹೊಸ ಕಥೆಗಳನ್ನು
ಮನದಲ್ಲೇ ಹೆಣೆದುಕೊಂಡು,
ಅಂಜುತ್ತಲೇ ಆಕೆಯ
ಮುಂದೆ ಹೋಗಿ ನಿಂತಾಗ,
ಹುಸಿಗೋಪವನೂ ತೋರದೇ
ಬಿಸಿ ಬಿಸಿ ಕಾಫಿಯೊಂದಿಗೆ
ಸಿಹಿತಿಂಡಿಯನೂ ನೀಡಿದಾಗ,
ನನ್ನ ಕಣ್ಣುಗಳನ್ನೇ
ನಾನು ನಂಬದವನಾದೆ;

ನಾನು ಮಾತನಾಡಲು
ಬಾಯ್ಬಿಡುವ ಮೊದಲೇ,
"ತಪ್ಪಾಯ್ತು ಕಣ್ರೀ
ಏನೇನೋ ಬೈದ್ ಬಿಟ್ಟೆ,
ನೀವೇನು ಅಂತ ನನಗೆ
ಗೊತ್ತಿಲ್ಲಂತೀರಾ...
ನೀವು ಬೇಕಾದ್ರೆ ಇನ್ನೂ
ನೂರಾರು ಹೆಣ್ಣುಗಳನ್ನು
ಸಹೋದರಿಯರನ್ನಾಗಿ
ಸ್ವೀಕರಿಸಿಕೊಂಡು,
ಅವರೆಲ್ಲರಿಂದ ನೀವು
ರಾಖಿ ಕಟ್ಟಿಸಿಕೊಂಡರೂ
ಪರವಾಗಿಲ್ಲರೀ ನನಗೆ,
ಆದರೆ,
ದಯವಿಟ್ಟು ಇನ್ನಾರನ್ನೂ
"ಸಖೀ" ಎಂದು ಕರೆಯದಿರಿ,
ನನಗದಷ್ಟೇ ಸಾಕು..."

ಹೇಳಿ ನನಗಿನ್ನೇನು ಬೇಕು...?
***************
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments