ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ ಇಟ್ನಾಳ
ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ ಇಟ್ನಾಳ
ಇಂದು ಈಗ ತಾನೆ ಕರ್ನಾಟಕದ ರಂಗ ಕೋಗಿಲೆ ಸುಭದ್ರಮ್ಮ ಮನಸೂರ ಅವರ ರಂಗಗೀತೆಗಳನ್ನು ಕೇಳುವ, ಆನಂದಿಸುವ ಸುಸಮಯವೊಂದು ನನಗೆ ಒದಗಿ ಬಂದದ್ದು ನನ್ನ ಭಾಗ್ಯ. ಅಭಿನಯ ಭಾರತಿ, ಧಾರವಾಡ ಹಾಗೂ ಜಿ. ಬಿ. ಜೊಶಿ ಮೆವೋರಿಯಲ್ ಟ್ರಸ್ಟ್, ಧಾರವಾಡ ಇವರಿಂದ ಜಿ. ಬಿ ಯವರ ಸ್ಮರಣೆಯ 20 ನೆಯ ಪುಣ್ಯತಿಥಿಯ ನಿಮಿತ್ತ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮೊದಲು ಜಿ. ಬಿ ಯವರನ್ನು ಸ್ಮರಿಸಿದವರು ಶ್ರೀ ಬಾಳಣ್ಣಾ ಶೀಗಿಹಳ್ಳಿ. ಎಂದಿನಂತೆ ಕಚೇರಿ ಕೆಲಸ ಮುಗಿಸಿ ಹೊರಬರುವ ಹೊತ್ತಿಗೆ ಆಗಲೇ ಸಂಜೆ ಏಳು ಗಂಟೆ, ಸುಭದ್ರಮ್ಮನವರ ಹಾಡು ಕೇಳುವ ಸೌಭಾಗ್ಯವಿದೆಯೊ ಇಲ್ಲವೋ ಎಂದು ಅವಸರದಲ್ಲಿ ಧಾರವಾಡದ ನಮ್ಮ ರಂಗಾಯಣಕ್ಕೆ ದೌಡಾಯಿಸಿದೆ. ಸುಭದ್ರಮ್ಮನವರು ಸುಶ್ರಾವ್ಯವಾಗಿ ಹಾಡುತ್ತಿರುವುದು ದೂರದಿಂದಲೇ ಕೇಳಿ, ಹೆಜ್ಜೆಗಳು ವೇಗದಿಂದ ಮೂರು ಮೂರು ಮಾರು ಜಿಗಿದು ಸಭಾಭವನದಲ್ಲಿ ಪ್ರವೇಶಿಸಿದೆ. ಸುತ್ತ ಕಣ್ಣಾಡಿಸಿದೆ. ಸಭಾಂಗಣದ ಸುತ್ತ ಎಲ್ಲ ಸಭಿಕರೂ ವೇದಿಕೆಯಲ್ಲಿ ಇರಬೇಕಾದವರೆ. ಎಲ್ಲರೂ ದಿಗ್ಗಜರು. ನಾನೊಬ್ಬನೇ ಇಡೀ ಸಮಾರಂಭದಲ್ಲಿ ಆಸೀನ ಶ್ರೀಸಾಮಾನ್ಯ. ಸುಂದರ ಸುಮಧುರ ಲಾಲಿತ್ಯಮಯ ಹಾಡುಗಳು ಕರ್ನಾಟಕದ ರಂಗ ಕೋಗಿಲೆ, ಸುಭದ್ರಮ್ಮನವರು ಕಂಠಸಿರಿಯಿಂದ ಹೊರಹೊಮ್ಮುತ್ತಿರುವುದೇ ನನ್ನನ್ನು ಚಕಿತಗೊಳಿಸಿತು. 70+ ರ ಇಳಿವಯಸ್ಸಿನಲ್ಲಿಯೂ ಅತ್ಯಂತ ಶೃತಿ ಶುದ್ಧವಾಗಿ ಹಾಡುತ್ತ ನೆರೆದ ಹಿರಿಯ ಪ್ರೇಕ್ಷಕ ಗಣವನ್ನು ಅಂದಿನ ರಂಗಭೂಮಿಯ ನೆಲೆಗೆ ಕರೆದೊಯ್ಯುತ್ತಿದ್ದರು. ಈ ಅನನ್ಯ ಸಂಗೀತಾನುಭವ ಅನುಭವಿಸಿದವರಿಗೇ ಗೊತ್ತು, ಅದರ ಸವಿ. ಬದುಕು ಸಾರ್ಥಕವಾದ ಗಳಿಗೆಗಳು. ಹಲವಾರು ಹಾಡುಗಳ ನಂತರ ಎಂದಿನಂತೆ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಅಕ್ಕನ ವಚನವನ್ನು ಸುಶ್ರಾವ್ಯವಾಗಿ ಹಾಡಿ, ಕೈಮುಗಿದಾಗ ಸಭಿಕರ ಚಪ್ಪಾಳೆಯ ಗೂಂಜಾರವ ಅವರವರ ಹರುಷದ ಸಂಕೇತವಾಗಿತ್ತು. ಸಮಾರಂಭ ಮುಗಿದ ಬಳಿಕ ಅವರ ಹತ್ತಿರ ಮಾತನಾಡುವ ಅವಕಾಶ ದೊರೆತಿತು. ಇಂದಿನ ಪೀಳಿಗೆ ರಿಯಾಜ್ ಮಾಡುವುದಿಲ್ಲ, ಕೇವಲ ದಿಢೀರ್ ಪ್ರಸಿದ್ಧಿ ನಿರೀಕ್ಷಿಸುತ್ತಾರೆ. ತಾವು ತಮ್ಮ ಗುರುಗಳ ಆಜ್ಞಾನುಸಾರ ಅಖಂಡ 12 ತಾಸುಗಳ ವರೆಗೆ ರಿಯಾಜ್ ಗಾಗಿ ಹಾಡುತ್ತಿದ್ದೆವು ಎಂದು ನೆನಪುಗಳ ಬುತ್ತಿ ಬಿಚ್ಚಿದರು. ಅವರ ಮಾತುಗಳು ಕೂಡ ಮೃದು ಮಧುರ. ಈಗಿನ ಪೀಳಿಗೆ ರಿಯಾಜ್ ನ ಮಹತ್ವ ಅರಿಯಬೇಕು, ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇಂತಹ ದಿಗ್ಗಜರು ನನ್ನ ಹತ್ತಿರವೇ ಇರುವರಲ್ಲ ಎಂದು ಧನ್ವತೆಯಿಂದ ಅವರ ಕಾಲಿಗೆರಗಿ ಆಶಿರ್ವಾದ ಪಡೆದೆ. ಹಾಗೆಯೇ ಅಮೀರಬಾಯಿ ಕರ್ನಾಟಕಿಯ ಹಾಡುಗಳ ಬಗ್ಗೆ ಚರ್ಚಿಸಿದೆ. ಅಮೀರಬಾಯಿ ಹಾಡುಗಳಲ್ಲಿ, ‘ನಿನ್ನನು ನೆನೆಯುತ ರಾತ್ರಿಯ ಕಳೆದೆ……………….. ಅವರ ಹಾಡನ್ನು ‘ಚೈತ್ರಾಂಜಲಿ’ ನಾಟಕದಲ್ಲಿ ಹಾಡಿದ್ದೆ. ನೀವು ಕೇಳಿದ್ದರೆ ಹಾಡುತ್ತಿದ್ದೆ ಎಂದರು. ನನಗೆ ಇನ್ನಿಲ್ಲದ ಸಂತೋಷ. ಅವರೇ ಮಾತು ಮುಂದುವರೆಸಿ, ‘ಅಮೀರಬಾಯಿಯವರ ಕಾಲದಲ್ಲಿ ರಂಗಭೂಮಿಯ ಗೀತೆಗಳು ಹಾಗೂ ಸಿನೇಮಾ ಗೀತೆಗಳು ಬಹಳ ಫರಕ ಇರಲಿಲ್ರಿ’ ಎಂದು ತಿಳಿಸಿ, ಸುಮಾರು ಅಂದಿನ ಜನಪ್ರಿಯ ಗೀತೆಗಳಾದ, ‘ಪ್ರಿಯ ಮಧುವನದಲಿ ಚಂದ ನೋಡುವ ಬಾ, ಪ್ರಿಯ ಆಡುವ ಬಾ’, ‘ವಾರಿ ನೋಟ ನೋಡಿ ಮಳ್ಳ ಮಾಡಿದನವಾ ಯಾರ ಮುಂದ ಹೇಳಬೇಕು ಮರುಗುದ ಜೀವ’, ಸರೋಜಿನಿ ಆರೂರ ಹಾಡಿದ, ‘ಇವನೇ ನನ್ನ ಗೆಣೆಕಾರ’, ಹಾಡುಗಳು ರಂಗಭೂಮಿಯಿಂದಲೇ ಅಲ್ಲಿಗೆ ಹೋಗಿದ್ದು ಎಂಬುದು ನಮ್ಮ ಚರ್ಚೆಯ ವಿಷಯವಾಯಿತು.ಹಾಗೂ ಈ ವಯಸ್ಸಿನಲ್ಲಿಯೂ ಸುಭದ್ರಮ್ಮನವರು ರಂಗಗೀತೆಗಳನ್ನು ಕಲಿಸುವ ಶಿಬಿರಗಳಿಗೆ, ನವ್ಯ ನಾಟಕಗಳಿಗೂ ಸ್ಪಂದಿಸಿ ಹಾಡುತ್ತಾರೆ ಎಂಬುದು ತಿಳಿಯಿತು. ದೇಶ ವಿದೇಶಗಳಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದು ವಿನೀತ ಸ್ವಭಾವದ ಸುಭದ್ರಮ್ಮನವರು ಆದರ್ಶದ ಮೂರ್ತಿಯಂತೆ ನಮ್ಮ ಮುಂದೆ ನಿಲ್ಲುತ್ತಾರೆ. ದಿಗ್ಗಜರೆಲ್ಲ ಅವರೊಂದಿಗೆ ಮಾತಿಗೆ ಕಾದಿದ್ದರು. ಅವರಿಗೆ ಜಾಗ ಕೊಟ್ಟು ಬದಿಗೆ ಸರಿದು ನಿಂತಾಗ, ನಮ್ಮ ಕಾಲದ ಆಕಾಶವಾಣಿ ಧಾರವಾಡದ ಅಕ್ಕಮ್ಮ, ವತ್ಸಲಾ ಕುಲಕರ್ಣಿಯವರು ಸುಭದ್ರಮ್ಮನ ಹಾಡಿಗೆ ತಲೆದೂಗಿ ನಮಸ್ಕರಿಸಿದ್ದು ಇಬ್ಬರು ಅಂದಿನ ಕಲಾವಿದರ ಮಿಲನಕ್ಕೆ ಸಾಕ್ಷಿಯಾದೆ. ಒಂದು ಧನ್ಯತೆಯ ಸಂಜೆ ಹೀಗೆ ಕಳೆದದ್ದು ನಿಜಕ್ಕೂ ನನ್ನ ಭಾಗ್ಯವೆಂದು ಬಗೆದು ಅವರಿಗೆ ನಮಸ್ಕರಿಸಿ ಬಂದೆ.
Comments
ಉ: ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ...
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಸುಭದ್ರಮ್ಮ ಮನ್ಸೂರ ರವರ ವ್ಯಕ್ತಿತ್ವ, ಸಂಗೀತದ ಬಗೆಗಿನ ಅವರ ಬದ್ಧತೆ ಹಾಗೂ ಇಂದಿಗೂ ಇಳಿ ವಯಸ್ಸಿನಲ್ಲಿಯೂ ಸಂಗೀತದ ಬಗೆಗಿನ ಆಸಕ್ತಿ ಹಳೆಯ ತಗಲೆಮಾರಿನ ಸಂಸ್ಕೃತಿಯನ್ನು ತೋರಿಸುವಂತಹುದು, ಅವರತಂತಹವರು ಇಂದಿನ ಪೀಳಿಗೆಗೆ ಮಾದರಿಯಾಗಬೆಕು. ನಿಮ್ಮ ಈ ಲೇಖನ ಸುಭದ್ರಮ್ಮ ಮನ್ಸೂರ ಮತ್ತು ಅಮೀರಬಾಯಿ ಕರ್ನಾಟಕಿ ಯವರಿ ಹಾಡುಗಳ ಝಲಕ್ ಗಳು ಮನದಲ್ಲಿ ಸುಳಿದು ಹೋದವು. ನಿಮ್ಮ ಬರಹ ನಾನು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಕಣ್ಣಾರೆ ಕಂಡ ಅನುಭವ ನೀಡಿತು. ಅವರೊಂದಿಗೆ ನೀವು ಮಾತನಾಡಿದ ವಿಷಯ ತಿಳಿದು ಸಂತಸವಾಯಿತು. ಅಪ್ಯಾಯಮಾನವಾದ ಬರಹ ಮತ್ತು ಬರವಣಿಗೆಯ ಶೈಲಿ ಹಿಡಿಸಿತು ಧನ್ಯವಾದಗಳು.
In reply to ಉ: ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ... by H A Patil
ಉ: ಸುಭದ್ರಮ್ಮ ಮನಸೂರರ ರಂಗ ಗೀತೆಗಳ ಅಪರೂಪದ ಸಂಜೆ, - ಲಕ್ಷ್ಮೀಕಾಂತ...
ಹಿರಿಯರಾದ ಪಾಟೀಲ ರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ತಮ್ಮ ಲೇಖನದ ಮೆಚ್ಚುಗೆಯ ಜೊತೆಗೆ ಅಮೀರಬಾಯಿ ಹಾಗು ಹಳೆಯ ತಲೆಮಾರಿನ ಗೀತೆಗಳ ಮೆಲುಕಿಗೂ ಮೆಚ್ಚುಗೆ ಸೂಚಿಸಿ, ಪ್ರೇರಣೆ ನೀಡುವ ತಮಗೆ ಹೃದಯದುಂಬಿದ ನಮನಗಳು ಸರ್.