ಸುಲಭವಲ್ಲವೋ ಮಹದಾನಂದ ...

ಸುಲಭವಲ್ಲವೋ ಮಹದಾನಂದ ...

ಹಿಂದಿನ ಬರಹದಲ್ಲಿ, ಪುರಂದರ ದಾಸರ ಇಂದಿನ ಯೋಗ ಶುಭಯೋಗ ಎನ್ನುವ ಪದವನ್ನು ಹೆಸರಿಸಿದ್ದೆ. ಅದಕ್ಕೇ ಅವರದೇ ಇನ್ನೊಂದು ದೇವರನಾಮದ ಬಗ್ಗೆ ಮಾತಾಡೋಣ ಎನ್ನಿಸಿತು. ಪುರಂದರ ದಾಸರು ನಾಕು ಲಕ್ಷ ಎಪ್ಪತ್ತೈದು ಸಾವಿರ ರಚನೆಗಳನ್ನು ಬರೆದರೆಂದು ನಂಬಿಕೆ. ಈ ನಂಬಿಕೆ ಹೇಗೇ ಇರಲಿ, ನಮಗೆ ಸಿಕ್ಕಿರುವುದು ಸುಮಾರು ಎರಡು ಸಾವಿರಕ್ಕೂ ಕಡಿಮೆ ರಚನೆಗಳು. ದಾಸಸಾಹಿತ್ಯದಲ್ಲಿ ಪುರಂದರರು ಅತೀ ಮುಖ್ಯರಾಗಿ ಕಾಣಲು ಅವರ ಸರಳವಾದ, ಮನಸ್ಸಿಗೆ ಸುಲಭವಾಗಿ ನಾಟುವ ಶೈಲಿಯೇ ಕಾರಣ ಎಂದು ನನ್ನ ಭಾವನೆ.

ಇವರ ಹೆಚ್ಚಿನಂಶ ರಚನೆಗಳು ಬಹಳ ಸುಲಭವಾಗಿದ್ದರೂ, ಕೆಲವು ಒಗಟಿನಂತಹ ಪದಗಳನ್ನೂ ಪುರಂದರ ದಾಸರು ಬರೆದಿದ್ದಾರೆ. ಅರ್ಥ ಆಯಿತೋ ಇಲ್ಲವೋ ಎಂದು ತಿಳಿಯಲು ಹೆಣಗಬೇಕಾದ ಪರಿಸ್ಥಿತಿ ಈ ಪದಗಳದ್ದು. ಅಂತಹ ಒಂದು ಉದಾಹರಣೆ ಇಲ್ಲಿದೆ.

ಪಲ್ಲವಿ :

ಸುಲಭವಲ್ಲವೊ ಮಹದಾನಂದ ತನ್ನೊಳಗೆ ತಾ ತಿಳಿಯಬೇಕು ಗುರು ದಯದಿಂದ

ಚರಣ 1:

ಬೆಕ್ಕನು ಇಲಿ ನುಂಗುವ ತನಕ ಕಡುರಕ್ಕಸಿಯ ಕಂಡು ಗಿಣಿ ನುಂಗುವತನಕ

ಮಕ್ಕಳ ಭಕ್ಷಿಸುವ ತನಕ ಮದಸೊಕ್ಕಿದ ಗಜವನ್ನು ನರಿ ನುಂಗುವ ತನಕ

ಚರಣ 2:

ಇಷ್ಟದೈವತ ವಶವಾಗೋತನಕ ಮೂರು ಬೆಟ್ಟಗಳನ್ನು ನೊಣ ನುಂಗುವತನಕ

ಶಿಷ್ಟರೊಡನೆ ಸೇರುವತನಕ ಗುಬ್ಬಿ ರಾಜಹಂಸನ ನುಂಗುವತನಕ

ಚರಣ 3:

ಒಳಹೊರಗೊಂದಾಗುವತನಕ ಸಾಲ ಕಳೆಯೆಂಬುವ ಭಾವ ಬಯಲಾಗುವ ತನಕ

ಬೆಳಗಿನೊಳಗೆ ಕಾಣುವತನಕ ನಮ್ಮ ಪುರಂದರ ವಿಠಲನ ದಯವಾಗುವ ತನಕ

ಈ ಪದ ಓದಲು ಶಿಶುನಾಳ ಶರೀಫರ ಕೋಡಗನ ಕೋಳಿ ನುಂಗಿತ್ತಾ ಎಂಬ ಪದದಂತಿದೆಯಲ್ಲವೇ? ಶರೀಫರು ಹರಿದಾಸರ ಪ್ರಭಾವಕ್ಕೊಳಗಾಗಿರುವುದು ನಾವು ಇನ್ನೂ ಹಲವೆಡೆ ಕಾಣಬಹುದು.

ಸಂಪದಿಗರೇ, ಈಗ ಈ ಪದದ ಅರ್ಥವನ್ನು ಯಾರಾದರೂ ಬರೆಯಬಲ್ಲಿರಾದರೆ ದಯವಿಟ್ಟು ಬರೆಯಿರಿ. ನಮ್ಮೆಲ್ಲರಿಗೂ ಒಳಿತಾಗುತ್ತದೆ!

Rating
No votes yet

Comments