ಸೂರ್ಯನನ್ನು ಕಂಡ ಮನುಷ್ಯ

ಸೂರ್ಯನನ್ನು ಕಂಡ ಮನುಷ್ಯ

ಕತ್ತಲು ಅಭ್ಯಾಸವಾದವರಿಗೆ, ಕತ್ತಲಲ್ಲೇ ಹಿತ ಕಂಡುಕೊಂಡವರಿಗೆ ಸೂರ್ಯ ಶತ್ರು. ಕಣ್ಣಿದ್ದೂ ಕುರುಡರಾಗಿರುವುದು ಇವರಿಗೆ ಸುಖವೆನಿಸುತ್ತದೆ. ತಮ್ಮ ನಂಬುಗೆಗಳಿಗೆ ಹೊಂದದ ಹೊಸ ಯೋಚನೆ, ತತ್ವಗಳನ್ನು ಸಹಿಸುವುದು ಕೂಡ ಕಣ್ಣು ಕುಕ್ಕುವ ಬೆಳಕಿನಷ್ಟೇ ಕಷ್ಟವಾಗುತ್ತದೆ. ಆ ಅಸಹನೆಯ ಕಿಡಿಯನ್ನು ಗುರುತಿಸುವುದು ಬಹಳ ಸುಲಭ. ಅದು ಕಟಕಿ, ನಿಂದೆ, ವ್ಯಂಗ್ಯ, ಪರೋಕ್ಷವಾದ ಚುಚ್ಚುಮಾತು, ನೋಯಿಸಿ ಖುಶಿ ಪಡುವ ಸಣ್ಣತನಗಳ ರೂಪದಲ್ಲಿ ಹೊರಗೆ ಒಸರುತ್ತದೆ. ಇಂಥದ್ದನ್ನು ಇವತ್ತೂ ಕಣ್ತುಂಬ ಕಾಣುವುದು ಸಾಧ್ಯ.

ಸಾಕ್ರೆಟೀಸ್‌ನ ಬದುಕಿನ ಸಾರವನ್ನು ನಾಟಕೀಯವಾಗಿ ಕೆಲವೇ ದೃಶ್ಯಗಳಲ್ಲಿ ಹಿಡಿದು ರಂಗಕ್ಕೆ ತರುವ ಸಾರ್ಥಕ ಪ್ರಯತ್ನವಾಗಿ ಈ ಮರಾಠಿ ನಾಟಕ 'ಸೂರ್ಯ ಪಾಹಿಲೆಲಾ ಮಾಣುಸ್' ಮೂಡಿ ಬಂದಿರುವುದು ಮಕರಂದ ಸಾಠೆಯವರಿಂದ. ಅದನ್ನು ಕಂಡು, ಮೆಚ್ಚಿ ಕನ್ನಡಕ್ಕೆ ತಂದವರು ಮಾರುತಿ ಶಾನಭಾಗ. ನೀನಾಸಂ ತಿರುಗಾಟದ ಚಿರೇಬಂದಿ ವಾಡೆ ನೋಡಿದ್ದವರಿಗೆ, (ದೂರದರ್ಶನದಲ್ಲೂ ಈ ನಾಟಕ ಹಲವು ಬಾರಿ ಮರುಪ್ರಸಾರವಾದ ನೆನಪು) ಅದರ ಧಾರವಾಡ ಕನ್ನಡ ಸೊಗಡಿನ ಸಂಭಾಷಣೆಯ ನೆನಪಿರುವವರಿಗೆ ಮಾರುತಿ ಶಾನಭಾಗರನ್ನು ಪರಿಚಯಿಸಬೇಕಿಲ್ಲ ಅನಿಸುತ್ತದೆ. ಮಹೇಶ ಎಲಕುಂಚವಾರ್ ಅವರ ಮರಾಠಿ ನಾಟಕ 'ವಾಡಾ ಚಿರೇಬಂದಿ'ಯ ಅನುವಾದ ಅದು.

ಈ ನಾಟಕವೂ ಸಾಕ್ರೆಟೀಸ್‌ಗೆ ಸಿಕ್ಕಿದ ಫಲವನ್ನು ನಾಟಕೀಯವಾಗಿ ಚಿತ್ರೀಕರಿಸುತ್ತದೆ. ಕತ್ತಲೆಯ ಗವಿ, ಅಲ್ಲಿಂದ ಹೊರಬಂದ ಮನುಷ್ಯ ಬೆಳಕನ್ನು ಸಹಿಸಲು ಪಡುವ ಪಾಡು, ಅವನನ್ನು ಸಮಾಧಾನಿಸಿ ಬೆಳಕಿಗೆ ಹೊಂದಿಕೊಳ್ಳುವಂತೆ ಮಾಡಲು ಪ್ರಯತ್ನಿಸುವ ಸಾಕ್ರೆಟೀಸ್‌ನ ಅನುಯಾಯಿಗಳು ಹೇಳುವ ಸಾಕ್ರೆಟೀಸ್‌ನ ಕತೆ, ಉದ್ದಕ್ಕೂ ಆತ ಮತ್ತೆ ಬೆಳಕಿನಿಂದ ಕತ್ತಲೆಯ ಗವಿಗೇ ಮರಳುವ ಸಾಧ್ಯತೆಯನ್ನು ಜೀವಂತವಾಗಿರಿಸಿರುವ ರೀತಿ, ಪರೋಕ್ಷವಾಗಿ ಸಾಕ್ರೆಟೀಸ್‌ನನ್ನೂ ಅವನ ಸುತ್ತಲಿನವರನ್ನೂ ಇಂದಿಗೆ ಸಂಬದ್ಧಗೊಳಿಸುವ ಪರಿ ಎಲ್ಲ ಅಚ್ಚುಕಟ್ಟಾಗಿದೆ. ದೀಪದ ಅಡಿಯಲ್ಲೇ ಕತ್ತಲೆ ಇರುವಂತೆ, ಸೂರ್ಯನ ಬೆಳಕು ನೆರಳಿಗೂ ಕಾರಣವಾಗುವಂತೆ ಸಾಕ್ರೆಟೀಸ್‌ ಅಥವಾ ಅರಿವಿನ ಯಾವುದೇ ಹಾದಿ ಸರಳವಾದ ಮತ್ತು ವಿರೋಧಾಭಾಸಗಳೇ ಇಲ್ಲದ ದಾರಿಯಲ್ಲವೆಂಬುದನ್ನು ನಾಟಕ ಮರೆಯದೇ ಒಂದು ಸಂತುಲಿತ ಚಿತ್ರಣವನ್ನು ನೀಡುತ್ತದೆ. ಸಂಕೀರ್ಣ ವಸ್ತುವನ್ನು ಅಷ್ಟೇ ಕುಶಲವಾಗಿ, ನಾಟಕೀಯವಾಗಿ ತೆರೆದಿಡುವುದರಿಂದ ರಂಗದ ಮೇಲೆ ಇದು ಹೆಚ್ಚು ಪರಿಣಾಮಕಾರಿಯಾಗಿ, ಜೀವಂತವಾಗಿ ಪ್ರೇಕ್ಷಕನಿಗೆ ಅನುಭವವಾಗುವುದು ಸಾಧ್ಯವಾಗಿದೆ ಅನಿಸುತ್ತದೆ. ಗಂಭೀರವಾದ ಈ ನಾಟಕ ಮರಾಠಿ ರಂಗಭೂಮಿಯಲ್ಲಿ ಅತ್ಯಂತ ಜನಪ್ರಿಯವಾಗಿ ನೂರಕ್ಕೂ ಅಧಿಕ ಪ್ರದರ್ಶನಗಳನ್ನು ಕಂಡಿತು ಮತ್ತು ವಿಸಿಡಿ ರೂಪದಲ್ಲಿ ಮನೆಮನೆಗೆ ತಲುಪಿತು ಎಂದರೆ ಮರಾಠಿ ರಂಗಭೂಮಿ ಪರಂಪರೆಯ ಸಮೃದ್ಧಿಯನ್ನೂ, ಅಲ್ಲಿನ ಜನರ ಅಭಿರುಚಿಯ ಸಮೃದ್ಧಿಯನ್ನೂ ಅರ್ಥಮಾಡಿಕೊಳ್ಳಬಹುದಾಗಿದೆ.

ಋಜುವಾತು ಪ್ರಕಾಶನ ಹೊರತಂದಿರುವ ಈ ಪುಟ್ಟ ನಾಟಕದ ಬಗ್ಗೆ ಸ್ವತಃ ಮಾರುತಿ ಶಾನಭಾಗರೇ ಬರೆದ ಮಾತುಗಳು ಹೀಗಿವೆ:

"ನಮ್ಮ ಜನಜೀವನದ ಸದ್ಯದ ಒಲವು ನಿಲುವುಗಳನ್ನು ಗಮನಿಸಿದಾಗ, ಅಥೆನ್ಸ್‌ನಲ್ಲಿ ಅಂದು ನಡೆದುಹೋದ ಸಾಮಾಜಿಕ ದುರವಸ್ಥೆ ಇನ್ನೊಮ್ಮೆ ಉಂಟಾಗಿದೆಯೆನ್ನುವುದು ಹೊಳೆಯಬಹುದು. ವಾಸ್ತವದಿಂದ ದೂರ ಸರಿದಿರುವ, ಕಿಲುಬುಗೊಂಡಿರುವ ನಮ್ಮ ವಿವೇಕ ದೃಷ್ಟಿ, ಉಪಯುಕ್ತತಾವಾದದ ವಜ್ರಮುಷ್ಟಿಯಲ್ಲಿ ಕ್ಷೀಣವಾಗುತ್ತಿರುವುದನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಆಚಾರ ವಿಚಾರಗಳಲ್ಲಿ ಅಸಹಿಷ್ಣುತೆ ತುಂಬಿಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಉಳಿದಿಲ್ಲ. ನೀತಿ ನಗೆಗೇಡಿಗೆ ತುತ್ತಾಗಿದೆ. ನ್ಯಾಯ ಸಂಸ್ಥೆಯ ಬಗ್ಗೆ ಪೀಡಿತರಲ್ಲಿ ಭರವಸೆ ಉಳಿದಿಲ್ಲ. ದೇಶ, ಧರ್ಮದಂಥ ಗೊಡ್ಡು ಮಠಗಳ ವೈಭವೀಕರಣ ನಡೆದಿದೆ. ಇಂತಹ ಸಮಯ ಪ್ಲೇಟೋನ ಗವಿಯ ಕತ್ತಲೆಯ ಅರಳು ಮರಳು ಪರಿಸ್ಥಿತಿಯಿಂದ ಹೊರಬರುವ ಒಬ್ಬ ದಿಟ್ಟನಂತೆ ಎಚ್ಚೆತ್ತವರ ತಂಡವೇ ನಮಗೆ ಈಗ ಬೇಕಾಗಿದೆ. ಸೊಕ್ರೆಟೀಸ್‌ನ ಸಿದ್ಧಾಂತಗಳ ಸ್ಪಷ್ಟ ಮಂಡನೆ ಮನವೊಲಿಸುವಂತಹುದು. ಇದು ಭಾವನೆಗಳ ವೈಭವೀಕರಣದಿಂದ ದೂರ. ಯಾವುದನ್ನೂ ವೈಭವೀಕರಿಸುವ ಹವ್ಯಾಸವಿಲ್ಲ. ಆದರೂ ಸವಾಲುಗಳು ಹಿಂಜರಿಯುವುದಿಲ್ಲ. ಬಾಳುವೆಯ ಸಂದಿಗೊಂದಿಗಳಿಂದ ಏಳುವ ಈ ಮುಖಾಮುಖಿಗೆ ಸೊಕ್ರೆಟೀಸೋತ್ತರ ಸಮಗ್ರದರ್ಶನದ ಅಗತ್ಯವಿದೆ. ಸಮಚಿತ್ತದಿಂದ ಇವುಗಳನ್ನೆಲ್ಲ ಅಳವಡಿಸಿಕೊಂಡಿರುವುದೇ ಈ ಕೃತಿಯ ಸಿದ್ಧಿ."

ರಂಗಕೃತಿಯ ಹೆಸರು : ಸೂರ್ಯನನ್ನು ಕಂಡ ಮನುಷ್ಯ

ಋಜುವಾತು ಪ್ರಕಾಶನ, ೪೯೮, ಆರನೇ 'ಎ' ಮೈನ್, ಆರ್.ಎಂ.ವಿ. ಎರಡನೇ ಹಂತ, ಬೆಂಗಳೂರು - ೫೬೦೯೪.

ಬೆಲೆ: ಅರವತ್ತು ರೂಪಾಯಿ.

Rating
No votes yet