ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....

ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....

ಬ್ಲಾಗ್‌ಗಳ ಬಗ್ಗೆ ಎಷ್ಟು ಜನ ಕೇಳಿದ್ದಾರೆ... ನಮ್ಮಲ್ಲಿ ಬಹುತೇಕರಿಗೆ ಬ್ಲಾಗ್‌ ಬಗ್ಗೆ ಏನೂ ಗೊತ್ತೇ ಇಲ್ಲ. ಬೆಂಗಳೂರಿನಂತಹ ಮಹಾನಗರದಲ್ಲೇ ಇದರ ಬಗ್ಗೆ ತಿಳಿವಳಿಕೆ ಕಡಿಮೆ ಇರೋವಾಗ ಜಿಲ್ಲಾ ಕೇಂದ್ರದಲ್ಲಿರುವವರಿಗೆ ಹೇಗೆ ಗೊತ್ತಿರೋದು ಸಾಧ್ಯ ಹೇಳಿ...
ಎಲ್ಲಿಯ ತನಕ ಓದುವವರಿರುತ್ತಾರೋ ಅಲ್ಲಿತನಕ ಬರೆಯುವವರು ಇರುತ್ತಾರೆ ಎಂದು ಹೇಳಬಹುದೇ ಅಥವಾ ಎಲ್ಲಿ ತನಕ ಬರೆಯೋರು ಇರುತ್ತಾರೋ ಅಲ್ಲಿ ತನಕ ಓದೋರು ಇರುತ್ತಾರೆ ಎಂದು ಹೇಳುವುದೇ ಗೊತ್ತಾಗ್ತಾ ಇಲ್ಲ. ಒಟ್ಟಿನಲ್ಲಿ ಬರವಣಿಗೆ ಒಂಥರಾ ಖುಷಿ ನೀಡುವಂಥಾದ್ದು. ಭಾವನೆಗಳ ಅಭಿವ್ಯಕ್ತಿಗೆ ಅದೊಂದು ದಾರಿ ಕೂಡಾ ಹೌದು. ಅಂತಹ ಬರಹಗಳನ್ನು ಓದುವುದು ಕೂಡಾ ಒಂದು ರೀತಿ ಖುಷಿ ಕೊಡುವಂಥಾದ್ದೇ..
ಏನೇ ಆಗ್ಲಿ ಸೃಜನಶೀಲತೆಗೊಂದು ವೇದಿಕೆ ಬರವಣಿಗೆ ನೀಡತ್ತೆ... ಹೊಸತನದ ನಿರೀಕ್ಷೆ ಕೂಡಾ ಇರತ್ತೆ.. ಹೀಗೆ ಹೊಸತನ ಹೊಸತನ ಎಂದು ಜಪಿಸಿ ಜಪಿಸಿ ಅನೇಕರು ಅಂತರ್ಜಾಲದ ಮೊರೆ ಹೋಗಿದ್ದಾರೆ. ಹಾಗೆ ಬ್ಲಾಗ್‌ಗಳು ಅನೇಕರಿಗೆ ಹೊಸ ವೇದಿಕೆಯಾದವು.
ಕನ್ನಡದಲ್ಲೀಗ ಬ್ಲಾಗ್‌ಗಳಿಗೇನು ಕೊರತೆಯೇ ? ಮೊನ್ನೆ ಮೊನ್ನೆ ಬಂದಂತೆ ಅನಿಸಿದರೂ ಆಗಲೇ ಇದರ ಸಂಖ್ಯೆ ಸಾವಿರಕ್ಕೂ ಅಧಿಕ. ಬೇರೆ ಪತ್ರಿಕೆಗಳಿಗೆ ಅಥವಾ ನಿಯತಕಾಲಿಕೆಗಳಿಗೆ ಲೇಖನಗಳು, ಕತೆ ಕವಿತೆ ಬರೆಯೋದು ಅನಂತರ ಅದು ಪ್ರಕಟವಾಗುತ್ತೋ ಇಲ್ಲವೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ ಕೂಡೋದು ಎಲ್ಲವೂ ಒಂಥರಾ ಬೇಜಾರು ಬಂದವರಿಗೆ ಬ್ಲಾಗ್ ವರದಾನವಾಗಿದೆ. ಬ್ಲಾಗ್ ತೆರೆಯೋದೇನೂ ಕಷ್ಟದ ಕೆಲಸವಲ್ಲ. ಒಂದು ಈ ಮೇಲ್‌ ಐಡಿ ಇದ್ದರೆ ಸಾಕು. ಅಂತರ್ಜಾಲ ಸೌಲಭ್ಯ ಇದ್ದಲ್ಲಿ ಬರಹ ತಂತ್ರಾಂಶದಲ್ಲಿ ಲೇಖನಗಳಿರಬಹುದು... ಕತೆ.. ಕವಿತೆಗಳಿರಬಹುದು ಅಪ್‌ಲೋಡ್‌ ಮಾಡಬಹುದು.
ಆದರೆ ಈ ಬ್ಲಾಗ್‌ಗಳ ಬಗ್ಗೆ ಬಹುತೇಕ ಜನರಿಗೆ ಅರಿವಿಲ್ಲ. ಅನೇಕ ಪತ್ರಕರ್ತರಿಗೂ ಇದರ ಬಗ್ಗೆ ಮಾಹಿತಿ ಇಲ್ಲ. ಅಂಥದ್ದರಲ್ಲಿ ಬ್ಲಾಗ್‌ ಮೂಲಕ ಬಹುಶಃ ಪತ್ರಿಕೋದ್ಯಮದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಚಿತ್ರದುರ್ಗದಿಂದ ಪ್ರಕಟವಾಗುತ್ತಿರುವ ಜಿಲ್ಲಾ ಮಟ್ಟದ ಪತ್ರಿಕೆಯೊಂದು ಬ್ಲಾಗ್‌ ರೂಪದಲ್ಲಿ ಓದುಗರ ಕೈ ಸೇರುತ್ತಿದೆ
ಶ.ಮಂಜುನಾಥ್ ದಂಪತಿ ನಡೆಸುತ್ತಿರುವ ಸುದ್ದಿಗಿಡುಗ ಎಂಬ ಹೆಸರಿನ ಆ ಸ್ಥಳೀಯ ದೈನಿಕ ಇಂದು ವಿಶ್ವದ ಯಾವುದೇ ಭಾಗದಲ್ಲೂ ಕನ್ನಡಿಗರು ನೋಡುವ ಅವಕಾಶ ಲಭಿಸಿದೆ. ಪತ್ರಿಕೆಯ ಫೋಟೋ ಪತ್ರಿಯನ್ನು ಪ್ರತಿದಿನ ಅಪ್‌ಲೋಡ್ ಮಾಡಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ಈ ರೀತಿ ಬ್ಲಾಗ್‌ ಪತ್ರಿಕೋದ್ಯಮಕ್ಕೆ ಕೈ ಹಾಕಿದ್ದು ನಿಜಕ್ಕೂ ಶ್ಲಾಘನೀಯ.
ನೀವೂ ನೋಡಬಹುದು ಈ ಬ್ಲಾಗ್‌ನ್ನು ಈ ವಿಳಾಸದಲ್ಲಿ
http://www.suddigiduga.blogspot.com/
ಹ್ಞಾಂ...! ಹೇಳೋದೆ ಮರೆತೆ ನೋಡಿ... ಸುದ್ದಿ ಮಾಧ್ಯಮದ ಮೇಲೂ ಒಂದು ಬ್ಲಾಗ್ ಕಣ್ಣಿದೆ. ಆ ಬ್ಲಾಗ್ ಬರೆಯೋರು ಬಹುಶಃ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಲ್ಲ ಟಿ.ವಿ. ಪತ್ರಿಕೆಗಳ ತಪ್ಪು ಹುಡುಕ್ತಿದ್ದಾರೆ ಅನ್ಸತ್ತೆ.. ಪಾಸೆಟಿವ್‌... ನೆಗೆಟಿವ್‌... ಎಲ್ಲ ವಿಚಾರಗಳೂ ಇರುತ್ತವಾದರೂ ನೆಗೆಟಿವ್‌ ಸ್ವಲ್ಪ ಹೆಚ್ಚಾಗಿರುತ್ತದೆ. ಓದಿದ ಒಬ್ಬೊಬ್ಬರಲ್ಲೂ ಒಂದೊಂದು ಅಭಿಪ್ರಾಯ ಹುಟ್ಟುತ್ತದೆ ಅಂದರೆ ತಪ್ಪೇನೂ ಇಲ್ಲ...
ಅದನ್ನು ನೀವೂ ನೋಡಬೇಕೆ... ಹಾಗಾದರೆ ಈ ವಿಳಾಸ ನೋಡಿ...
http://www.suddimaatu.blogspot.com/
ಇದನ್ನೆಲ್ಲಾ ನೋಡಿ ಓದಿದ ಮೇಲೆ ನೀವೂ ಬ್ಲಾಗ್ ಬರೆಯಬೇಕು ಎಂದೆನಿಸಿದರೆ ಪ್ರಯತ್ನಿಸಬಹುದು.....

ಉಮೇಶ್‌ ಕುಮಾರ್‍.

Rating
No votes yet

Comments