ಸ್ವ - ಗತ

ಸ್ವ - ಗತ

ಮೊನ್ನೆ   ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬಸ್ಸು ಹತ್ತಿದಾಗ  ರಾತ್ರಿ ಎಂಟೂಕಾಲು ಗಂಟೆಯಾಗಿತ್ತು.  ಬಸ್ಸು   ಕೆಂಪೇಗೌಡ ಬಸ್ ನಿಲುಗಡೆಯಿಂದ ಹೊರಟಾಗ  ಹಾಗೇ ಒಂದಷ್ಟು ಹಿಂದಿನ ನೆನಪುಗಳು    ಬಂದವು .
ಬಹಳ ಹಿಂದೆ ನಾನಾಗ ೪-೫ ವರುಷದವನಿರಬೇಕು.  ಆಗ ಮೈಸೂರಿನಲ್ಲಿ ಇನ್ನೂ ಸಬ್ ಅರ್ಬನ್  ಬಸ್ ಸ್ಟ್ಯಾಂಡ್  ಆಗಿರಲಿಲ್ಲ.  ಈಗಿನ ಸಿಟಿ ಬಸ್ ಸ್ಟ್ಯಾಂಡ್ ನಿಂದಲೇ  ಬೆಂಗಳೂರಿಗೆ ನಾನ್-ಸ್ಟಾಪ್ ಬಸ್ ಸರ್ವೀಸ್ ಇತ್ತು.  ಬಹುಶಃ   ಟಿಕೆಟ್ ಬೆಲೆ  ದೊಡ್ಡವರಿಗೆ ಆರೂವರೆ ರೂಪಾಯಿ, ಮತ್ತು ಮಕ್ಕಳಿಗೆ ಮೂರೂಕಾಲು.  ಪ್ರತಿ ಇಪ್ಪತ್ತರಿಂದ ಮೂವತ್ತು ನಿಮಿಷಕ್ಕೊಂದು ಬಸ್ಸು.  ಆಗಲೂ  ಪ್ರಯಾಣದ ಅವಧಿ  ಮೂರುಗಂಟೆಗಳು. ಹೆಚ್ಚಿನ ನೆನಪು ಇಲ್ಲದಿದ್ದರೂ  ಆಗ ಮದ್ದೂರಿನ ಸನಿಹದ ಯಾವುದೋ  ಹೋಟೆಲ್ ಬಳಿ ಕಾಫಿ/ಟೀ ಗೆಂದು ಬಸ್ಸು ನಿಲ್ಲಿಸುತ್ತಿದ್ದುದಂತೂ ನೆನಪಿದೆ.   ಬರುಬರುತ್ತಾ  ಆರು - ಏಳನೇ ತರಗತಿಗೆ ಬಂದಾಗ, ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಊರಿಗೆ ಹೋಗುತ್ತಿದ್ದ ನೆನಪು ಇದೆ.  ಆಗ ನನ್ನನ್ನು ಕರೆದುಕೊಂಡು ಹೋಗಲು, ನನ್ನ ಅಜ್ಜಿ   ಅಥವಾ  ಮಾಮ   ಹೀಗೆ ಯಾರಾದರೊಬ್ಬ ಹಿರಿಯರು,  ಮದ್ದೂರಿನ ಬಳಿ ಬಸ್ಸು ನಿಂತಾಗ, ಎಳನೀರನ್ನು ಬಿಟ್ಟು ಇನ್ನೇನನ್ನೂ ಕೇಳಬಾರದೆಂಬ ತಾಕೀತು. ನನಗೋ, ಅಷ್ಟು ದೊಡ್ಡ ಬಸ್ಸನ್ನು,  ಸಣ್ಣ ಚಕ್ರ ಹಿಡಿದು ಓಡಿಸುವ ಡ್ರೈವರಣ್ಣನ  ಪಕ್ಕ ಕೂರುವ ಆಸೆ.  ಆದರೆ ಬಸ್ಸಿನ ಮಧ್ಯದಲ್ಲಿ ಕೂರಬೇಕೆಂಬುದು, ಜೊತೆಯಲ್ಲಿರುವ ಹಿರಿಯರ ಕಟ್ಟಪ್ಪಣೆ. ಅಕಸ್ಮಾತ್  ಮುಂದಿನಿಂದ  ಗುದ್ದಿದರೂ, ಹಿಂದಿನಿಂದ ಗುದ್ದಿದರೂ, ಮಧ್ಯೆ ಇರುವ ನಾವು ಸುರಕ್ಷಿತ ಎಂಬ ತರ್ಕ.  (ಈಗಲೂ ನಮ್ಮ ಮಾಮ ಬಸ್ಸಿನ ಮಧ್ಯದ ಸೀಟಿನಲ್ಲೇ ಕೂರುವುದು.. ಅಷ್ಟೇ  ಏಕೆ, ರೈಲಿನಲ್ಲೂ ಮಧ್ಯದ ಬೋಗಿ .) ಮೈಸೂರಿನಿಂದ ಶ್ರೀರಂಗಪಟ್ಟಣ ತಲುಪಿದರೆ  ,  ಶ್ರೀರಂಗನಿಗೊಂದು   ನಮಸ್ಕಾರ,  ಕಾವೇರಿಗೆ ಕಾಣಿಕೆ.  ಐದೋ, ಹತ್ತೋ ಪೈಸೆ ಇರಬೇಕು.   ಆಗ  ನನಗೆ ಗೊತ್ತಿದ್ದಂತೆ ಐದು ಪೈಸೆಗೆ ಹತ್ತು ಶುಂಠಿ ಪೆಪ್ಪರ್ಮೆಂಟ್  ಬರುತ್ತಿತ್ತೆನ್ನಿ.  ಮುಂದೆ ಮಂಡ್ಯ   ಸಕ್ಕರೆ  ಕಾರ್ಖಾನೆ  , ವಿಶ್ವೇಶ್ವರಯ್ಯನವರ ಸಾಧನೆಯ ನೆನಹು, ಮುಂದೆ ಮದ್ದೂರಿನ ಬಳಿ  ಸ್ವಲ್ಪ ನಡೆದಾಡಿ  , ಹಗುರಾಗುವ ಹುನ್ನಾರ   ರಾಮನಗರ ತಲುಪುವಷ್ಟರಲ್ಲೇ  ಅಯಾಸ. ಇನ್ನೇನು  ಬೆಂಗಳೂರು ಬರುತ್ತೆ ಎಂದು ಕಾಯುತ್ತಾ ಕೂಡುವ ತವಕ. ಬಿಡದಿ ಬಳಿ  ಲೋಹಿತ್ ಫಾರಂ  ಮೇಲೆ ಅದು ನಮ್ಮದೇ ಏನೋ ಎನ್ನುವಂತ  ಅಭಿಮಾನದ ನೋಟ.  ಈಗಿನ ಕವಿಕಾ ಬಂದರೆ  ಆಗ ಬೆಂಗಳೂರು ತಲುಪಿದಂತೆ,  ಮೈಸೂರು ರಸ್ತೆಯ  ಫ್ಲೈ -ಓವರ್  ಇಲ್ಲ.  ಪೋಲೀಸ್ ಕ್ವಾರ್ಟರ್ಸ್ನ    ಬಹುಮಹಡಿ   ಕಟ್ಟಡಗಳನ್ನು ಕಂಡು ಒಂಥರಾ ಪುಳಕ.  ಇಲ್ಲಿ ಜನ ವಾಸ ಮಾಡುವವರಿಗೆ ಭಯವಾಗುವುದಿಲ್ಲವಾ ಎನ್ನುವ ಭಯ.  ಅಷ್ಟರಲ್ಲೇ  ಬೆಂಗಳೂರು ಬಸ್ ಸ್ಟಾಂಡ್.  

ಇತ್ತಲಿಂದ ಕ್ಯೂ ನಲ್ಲಿ ನಿಂತು ಟಿಕೆಟ್ ಪಡೆದು ಹತ್ತಿದೆವೆಂದರೆ, ಮಂಡ್ಯ ಸಿಗುವ ತನಕ  ಏನೋ ಬೆದರಿಕೆ.  ಆಮೇಲೆ ಮನೆ ತಲುಪಿದ ಸಂಭ್ರಮ.

ಬರುಬರುತ್ತಾ.. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ, ಒಬ್ಬನದೇ ಓಡಾಟ .  ಹಿರಿಯರ ಮಾತನ್ನು ಮೀರಿ, ಡ್ರೈವರ್  ಪಕ್ಕದ ಕಿಟಕಿಯ ಸೀಟಿನಲ್ಲಿ  ಕೂತು ,  ರಸ್ತೆ ನೋಡುವ ಹವ್ಯಾಸ.  ಆಗಿನ ರಸ್ತೆ  ಈಗಿನಷ್ಟು  ಅಗಲವಿರಲಿಲ್ಲ.  ಅಲ್ಲದೇ  ಈಗಿನಂತೆ ನುಣುಪೂ ಇರಲಿಲ್ಲ.  ಹಳ್ಳಗಳ ನಡುವೆ ಹೊಡೆದಾಡಿ, ಗಾಡಿ ಓಡಿಸುವ ಸಾರಥಿಗೆ, ಎತ್ತಿನ ಬಂಡಿಗಳ ಚಕ್ರವ್ಯೂಹ  ಭೇದಿಸುವ ಅಭಿಮನ್ಯು   ಅವನು . ಆಗಿನ  ಬಸ್ಸುಗಳಿಗೂ  ಈಗಿನಂತೆ  ಪವರ್ ಸ್ಟೇರಿಂಗ್ ಇಲ್ಲವಲ್ಲಾ..  ಆ   ಚಕ್ರ ತಿರುಗಿಸುವ ಸೊಬಗನ್ನು ನೋಡುವುದೇ ಒಂದು  ಆನಂದ.  ಮಧ್ಯೆ   ಮಧ್ಯೆ    ನೀರು ಹಾಕಿಕೊಳ್ಳುವುದು ಬೇರೆ.  ಕೂದಲೆಳೆ ಯಷ್ಟರಲ್ಲಿ ತಪ್ಪಿಸಿಕೊಂಡ ಅವಘಡಗಳೆಷ್ಟೋ..?

ಇವನ್ನೆಲ್ಲಾ ನೆನಸಿಕೊಳ್ಳುವಷ್ಟರಲ್ಲಿ   ಮೈಸೂರು ಬಂದಿತ್ತು.  ರಾತ್ರಿ  ಹನ್ನೊಂದೂ ಮುಕ್ಕಾಲಾಗಿತ್ತು.  volvo ಬಸ್ಸು ಎರಡು ಘಂಟೆ  ಇರಬಹುದು,  ಆದರೆ      ಎಂಬತ್ತೆಂಟು ರೂಪಾಯಿ  ತೆಗೆದುಕೊಳ್ಳುವ   ಕೆಂಪು ಬಸ್ಸಿಗೆ  ಈಗಲೂ ಮೂರೂವರೆ  ಘಂಟೆ ಬೇಕೆಂದರೆ, ಅಭಿವೃದ್ದಿಯಾಗುತ್ತಿರುವುದೇನು?  ಎಂದು ಚಿಂತಿಸುತ್ತಾ   ಹತ್ತು ನಿಮಿಷಗಳಲ್ಲಿ ನಡೆದೇ ಮನೆ ಸೇರಿದೆ.  ಬರುವಾಗ ರೈಲಿನಲ್ಲಿ ಹಿಂತಿರುಗೋಣ ಎಂದು ಚಿಂತಿಸುತ್ತಾ!  ರಾಮನಗರ ಮೈಸೂರು ಮಧ್ಯೆ   ನಡೆದ ಒಂದು ರೋಚಕ ಘಟನೆಯನ್ನು ನೆನೆಸಿಕೊಳ್ಳುತ್ತಾ..!!  ಮತ್ತು  ಅದು ನನಗೆ ಕಲಿಸಿದ ಪಾಠವನ್ನು  ಮಥಿಸುತ್ತಾ..!!!

ಸಮಯ ಸಿಕ್ಕರೆ  ಅದನ್ನು ಯಾವಾಗಲಾದರೂ   ಹೇಳುತ್ತೇನೆ..ಅಲ್ಲಿಯವರೆಗೂ .. ಬೈ  ಬೈ.

Rating
No votes yet

Comments