ಹಬ್ಬಿರುವ ಮಬ್ಬಿನೊಳಗೊಬ್ಬನೇ

ಹಬ್ಬಿರುವ ಮಬ್ಬಿನೊಳಗೊಬ್ಬನೇ

ಸಿಡ್ನಿಯಲ್ಲಿ ಚಳಿಗಾಲ ಕೊನೆಗಾಣುವ ದಿನಗಳಿವು. ಕಡೆಯ ಸಲ ತಬ್ಬಿ ಬೀಳ್ಕೊಡುವಂತೆ ಹೊರಗೆ ಮಂಜು ತಬ್ಬಿದೆ ನೆಲವ, ಮೌನ ತಬ್ಬುವ ಹಾಗೆ. ಇಲ್ಲೇಕೆ ಅಡಿಗರು ಬಂದರು ಎಂದು ಚಕಿತಗೊಳ್ಳುತ್ತೇನೆ. ಅವರ ಹಿಂದೆಯೇ ರಾಜರತ್ನಂ ಕೂಡ ಕಾಣಿಸಕೊಂಡರು ತಬ್ಬುವ ಮೋಡಿಗೆ ಮಡಕೇರಿಯಲ್ಲಿ ಮುಗ್ಧರಾಗುತ್ತಾ. ಎಲ್ಲಿ ಹೋದರೂ ಬಿಡದ ಇವರೆಲ್ಲರ ಸಾಂಗತ್ಯದ ಅದೃಷ್ಟ.
ದಟ್ಟವಾಗಿ ಮುಚ್ಚಿದ ಮಂಜಿನ ನಡುವೆ ನೆರಳುಗಳಂತೆ ಸರಿದಾಡುವ ಜನ. ನೀರವ. ಎಲ್ಲರೂ ಪಿಸುಗುಡುತ್ತಿರುವಂತೆ ಅನಿಸುತ್ತಿದೆ. ಜೋರಾಗಿ ಮಾತಾಡಿದರೆ ಎಲ್ಲಿ ಮಂಜು ಚದುರಿಬಿಡುತ್ತದೋ, ಚಳಿಗಾಲ ಓಡಿಬಿಡುತ್ತದೋ ಎಂಬ ಅಂಜಿಕೆಯೆ? ಚಳಿಗಾಲದಲ್ಲಿ ನಲಿಯುವ, ಚಳಿಯನ್ನು ಪ್ರೀತಿಸುವ ಜನರಿವರು. ಈಗೀಗ ನಾನೂ...?

ಹತ್ತಾರು ಅಡಿಗಳಾಚೆ ಏನೂ ಕಾಣದ ಮಂಜು. ರೈಲು ಬಂತೇ ಎಂದು ಬಿಳಿಯ ಗೋಡೆಯಲ್ಲಿ ಹುಡುಕುವ ಕಣ್ಣುಗಳು. ಕಣ್ಣಿಗೆ ಬೀಳುವ ಎಷ್ಟೋ ಮುಂಚೆ ರೈಲಿನ ಸದ್ದು ಎಲ್ಲರಿಗೂ ಕಚಗುಳಿಯಿಟ್ಟಾಗ ನನಗೆ ಕಾಣಿಸಿದ್ದು-
'ಹಬ್ಬಿರುವ ಮಬ್ಬಿನೊಳಗೊಬ್ಬನೇ ಮುದುಕ
ಕೋಲೂರಿ ನಡೆದಿದ್ದಾನೆ'
ಗಾಂಧಿ ಶತಮಾನೋತ್ಸವದಲ್ಲಿ ಶಿವರುದ್ರಪ್ಪ ಬಂದಾಡುತ್ತಾರೆ. ಗಾಂಧಿ ಕತ್ತಲೆಯಲ್ಲಿ ಧಡಗುಟ್ಟಿ ಬರುವ ರೈಲಿನ ಹಾಗೆ, ಬಂದು ಹಾಗೇ ಕತ್ತಲಲ್ಲಿ ಲೀನವಾಗುವ ಹಾಗೆ ಎಂದಿದ್ದಾರಲ್ಲವೆ? ಸಾಲುಗಳು ನೆನಪಿಲ್ಲ. ಆದರೆ ಪ್ರತಿಮೆ ತಲೆಯಲ್ಲಿ ಸುಳಿದಾಡುತ್ತದೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಆಸ್ಟ್ರೇಲಿಯಾದ ಆದಿನಿವಾಸಿಗಳು ಗಾಂಧಿಯ ಬಗ್ಗೆ ಚಿಂತಿಸಿದ್ದರಂತೆ. ಬ್ರಿಟೀಷರ ಎದುರು ಗಾಂಧಿಯ ಪ್ರತಿರೋಧ, ಚಳವಳಿಗಳು ತಮಗೂ ಮಾದರಿಯಾಗಬಲ್ಲವೆ ಎಂದು ಚರ್ಚಿಸಿದ್ದರಂತೆ. ಅದರ ಬಗ್ಗೆ ಇನ್ನಷ್ಟು ಓದಬೇಕು ಎಂದು ಮನಸ್ಸಿನ ಮೂಲೆಯಲ್ಲಿ ಒಂದು ಪುಟ್ಟ ಗುರುತು ಹಾಕಿಕೊಳ್ಳುತ್ತೇನೆ. ಅಂದಿಗೂ-ಇಂದಿಗೂ, ಅಲ್ಲಿಗೂ-ಇಲ್ಲಿಗೂ ಕೊಂಡಿ ಹುಡುಕುವುದು, ಅಂದಿಗೂ-ಇಂದಿಗೂ-ಅಲ್ಲಿಗೂ-ಇಲ್ಲಿಗೂ ಸಲ್ಲುವ ಒಂದು ದಾರಿ ಅನಿಸುತ್ತದೆ. ಅರವತ್ತರ ದಶಕದ ಅಬಾರಿಜಿನಗಳ "freedom ride", ನಂತರ ಅವರಿಗೆ ಸಿಕ್ಕ ಓಟಿನ ಹಕ್ಕು, ಅಬಾರಿಜಿನಿ ಸಮುದಾಯದ ಬದುಕನ್ನು ಚೆನ್ನಾಯಿಸಿತೆ? ಗಾಂಧಿ ನಮಗಿಂದು ಎಷ್ಟು ದಕ್ಕುತ್ತಾರೆ? ದಕ್ಕಲೇಬೇಕೆ?

ಇನ್ನೂ ಮಂಜು ಚದುರಿಲ್ಲ. ಆದರೂ ಹಕ್ಕಿಗಳಿಗೆ "ಋತುಗಳ ರಾಜ ವಸಂತ" ಬರುತ್ತಿದ್ದಾನೆ ಎಂದು ಗೊತ್ತಾಗಿಬಿಟ್ಟಿದೆ. (ಯಾರದು-ಬಿಎಂಶ್ರಿ-ಅನುವಾದ?).

ಮರಿಹಕ್ಕಿಗಳು ಎಡೆಬಿಡದೆ ಚಿಲಿಪಿಲಿ ಅನ್ನುತ್ತಲೇ ಇವೆ.

ಎಲ್ಲಿಯ ಯಾವ ವಾಸನೆ ತಟ್ಟಿ ಎಬ್ಬಿಸಿದೆ ಅವನ್ನು?

Rating
No votes yet