ಹರೆಯದಲ್ಲಿ ಪ್ರೀತಿ- ಪ್ರೇಮ

ಹರೆಯದಲ್ಲಿ ಪ್ರೀತಿ- ಪ್ರೇಮ

ಚಂಚಲ ಮನಸ್ಸನ್ನು ಸ್ಥಿಮಿತಕ್ಕೆ ತರುವುದು ಯಾವುದು? ಆತ್ಮಶಕ್ತಿಯೆ. ಧ್ಯಾನದಲ್ಲಿ ನಿರತರಾಗಿರಿ, ಆಗ ದೇಹಾತೀತವಾಗಿ ಗೋಚರವಾಗುವುದು ಯಾವುದು?  ಆ ಪರಿಯ ಅರಿವು, ಜ್ಞಾನ ಉಂಟಾಗುವುದಾದರೂ ಎಲ್ಲಿಂದ? ಕೇವಲ ದೈಹಿಕ ಮಿದುಳಿನ ಗ್ರಂಥಿಗಳಿಂದ ಎನ್ನಲಾಗದು.  ಆದರೆ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತೇನೆಂದು ನಿರ್ಭಾವುಕ ಯಂತ್ರವಾಗುವುದು, ಯಂತ್ರದಂತೆ ವರ್ತಿಸುವುದು, ಕೇವಲ ಸುಖೋಪಭೋಗಗಳಲ್ಲಿ ಮಾತ್ರ ತಾನೊಂದು “ಬುದ್ಧಿವಂತ ಪ್ರಾಣಿ” ತನಗೆ ಯಾವುದು ಖುಷಿ ಕೊಡುವುದೋ ಅದನ್ನೇ ಅರಸುವುದು, ಮತ್ತೆ ಮತ್ತೆ ಸುಖಿಸುತ್ತ ಖುಷಿಪಡುತ್ತಲೆ ಇರುವುದು, ಯಾವ ಮನುಷ್ಯನ ಲಕ್ಷಣ? ಅಪರಿಮಿತ ಕಾಮನೆಯಲ್ಲೂ ದೈಹಿಕ ಸೌಖ್ಯ ಆರೋಗ್ಯ, ಕಾಪಾಡಿಕೊಳ್ಳಲಾದೀತೇ..  ಅಂತಹ ಅತಿ ಕಾಮನೆಯಲ್ಲಿ ಪರಸ್ಪರ ಸಂಬಂಧಗಳು ವಿಹಿತವಾಗಿರುತ್ತವೆಯೆ..?  ಈ ನಮ್ಮ ಬದುಕಿಗೆ ಅರ್ಥ ಇದೆಯೆ? ಈ ಪ್ರಶ್ನೆಗೆ ಉತ್ತರ ಹುಡುಕಬೇಡ.  ಬದುಕಿನ ಅರ್ಥದ ಬಗ್ಗೆ ತಲೆಕಡಿಸಿಕೊಳ್ಳದಿರುವವರೇ ಹೆಚ್ಚು ಸುಖಿಗಳಾಗಿರುತ್ತಾರೆ.  ಇಲ್ಲಿ ಅರ್ಥ ಹುಡುಕುವವನು ಆಯುಷ್ಯವೆಲ್ಲ ಹುಡುಕುತ್ತಲೆ ಇರಬೇಕಾ ಗುತ್ತದೆ. ಸುಖ ಹುಡುಕಿಕೋ ಬೇಗನೆ ಸಿಗುತ್ತದೆ, ಎಲ್ಲವನ್ನೂ “ಕೂಲ್-ಲೈಟ್ ಆಗಿ ತೆಗೆದುಕೋ ಸಮಾಧಾನ ಲಭಿಸುತ್ತದೆ.”ಹೀಗೆ ಪ್ರೀತಿ ಗೆ ಹೊಸ ವ್ಯಾಖ್ಯೆಯೆ ಮೂಡಿಬರುತ್ತಿದೆಯಲ್ಲ....

ಆದರೇನು! ಆತ್ಮ ಇಲ್ಲವೆಂದು ಚಿಂತಿಸುವ ಮನಸ್ಸಿಗೆ, “ತನ್ನ ಪ್ರೀತಿ”ಯ ಆಯ್ಕೆ ತನಗೆ ಮಾತ್ರವಲ್ಲದೆ ಮುಖ್ಯವಾಗಿ ಹೆತ್ತವರಿಗೆ, ಒಡಹುಟ್ಟಿದವರಿಗೆ ಆಪ್ಯಾಯಮಾನವೆನಿಸುವಂತಿದ್ದು, ಇಲ್ಲೇ ಬದುಕ ಬೇಕಾಗಿರುವವರ ನಡುವೆ ಮೆಚ್ಚುಗೆ, ಗೌರವ ತಂದುಕೊಡುವಂತಿರಬೇಕಲ್ಲವೇ.... ಪ್ರೀತಿ ಎಂಬುದು ಹೆಂಡತಿಗೆ ಹಾಗೂ ಇತರರಿಗೆ ಅನ್ವಯವಾಗುವುದಾದರೆ, “ಪ್ರೇಮ’’ ಎಂಬುದು ಮಮತೆಯ ತಾಯಿಗೆ, ಚಿಕ್ಕಂದಿನಿಂದ ಕೈ ಹಿಡಿದು ನಡೆಸಿದ ತಂದೆಗೆ ಪೂಜನೀಯವೆನಿಸುವುದು.  ಆದ್ದರಿಂದ, ಹರೆಯದ ಹುಮ್ಮಸ್ಸಿನಲ್ಲಿ ಹುಡುಗ/ಹುಡುಗಿಯರ “ಪ್ರೀತಿ” ಖಂಡಿತ ಕುರುಡಾಗಬಾರದು.  ಅಂತೆಯೆ, ಈಗಾಗಲೇ ಜಗತ್ತಿನ ಪ್ರೀತಿ ಮತ್ತು ವ್ಯವಹಾರ ಕಂಡಿರುವ ಹೆತ್ತವರೂ ಪ್ರೀತಿ ವಿಷಯದಲ್ಲಿ ತೋರುವ ಮಾರ್ಗದರ್ಶನ ನಿಜಕ್ಕೂ ಹರೆಯದ ಹಾಡಿಗೆ, ಬದುಕು-ಭವಿಷ್ಯದ ತಾಳಕ್ಕೆ ಲಯ ತಂದು ಕೊಡುತ್ತದೆ; ಕೊಡು ವಂತಿರಲೇಬೇಕು.

ಯುವಕ/ಯವತಿಯರಿಗೆ ಅವರ ಭವಿಷ್ಯ ಅವರೇ ರೂಪಿಸಿಕೊಳ್ಳುವ ಸ್ವಾತಂತ್ರ ಬೇಡವೆನ್ನುವರಾರೂ ಹಿರಿಯರು ಈ ದಿನಗಳಲ್ಲಿ  ಇಲ್ಲ...  ಅದು ಸು-ಸಮ್ಮತವಾಗಿರಬೇಕಷ್ಟೇ... ಅವರ ಅವರ  ಆತ್ಮವಿಮರ್ಶೆಗೆ ಬಂದಿರಬೇಕು, ಆತ್ಮ ಇಲ್ಲ ಎನ್ನುವುದು ಸುಲಭ.  ತನ್ನ ಆಯ್ಕೆ ಹಾಗೂ ದಾರಿ ತನಗೆ ವಿಹಿತವಾಗಿದೆಯೇ, ನಿಜಕ್ಕೂ ತನಗೆ ಪರಮಾಪ್ತವಾಗಿಯೆ ಸರ್ವ ಮಾನ್ಯವೆನಿಸುವಂತಿದೆಯೇ ಎಂಬದೇ “ಯಾರೇ ಕೂಗಾಡಲಿ.”.ಅಂದುಕೊಂಡರೂ ಅದೇ ಕಠೋರ ಸತ್ಯ.

ಅಷ್ಟೇಅಲ್ಲ; ದೈವಿಕ ಶಕ್ತಿಯಲ್ಲಿ ನಂಬಿಕೆಯೂ ಇದ್ದರೆ, ಅದೂ ಅಗೋಚರವಾಗಿಯೆ ಹೇಗೆ ನಮ್ಮನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆಂಬುದು ಅರಿವಿಗೆ ಬಂದಾಗ ನಿರ್ಲಕ್ಷಿಸಬಾರದು. ದೇವರಿಲ್ಲ, ತಾನೇ ಮೇಲು ತನಗೆ ಯಾರ ಹಿತವಚನ ಬೇಡ ಎನ್ನುವವನಿಗೆ ದೇವರೇ ಗತಿ ಅಲ್ಲಲ್ಲ; ಅವನಿ(ಳಿ)ಗೆ ಅವನೇ ಗತಿ!
-ಎಚ್.ಶಿವರಾಂ ,  5 ಆಗಸ್ಟ್, 2006
 
ನನ್ನ ಇತರೆ ಲೇಖನಗಳಿಗೆ ಇಲ್ಲಿ ನೋಡಿ-

[http://youthtimes.blogspot.com|ಲೈಫ್ ಟೈಮ್ಸ್-ಬರಹಗಾರನ ಸಾಲುಗಳು]

Rating
No votes yet