ಹಿತ ವಸಂತ
ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ! ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ ಕೆಡಿಸ್ಕೊಳ್ಳೋದಕ್ಕಿಂದ ಇಬ್ಬರೋ ಮೂವರೋ ಸೇರಿದರೆ ವಾಸಿ ಅನ್ನೋದನ್ನ ನಾವೆಲ್ಲ ಕಂಡುಕೊಂಡೇ ಇರ್ತೀವಿ.
ಮೊನ್ನೆ ಹಾಗೇ ಆಯಿತು. ಯಾವುದೋ ಪುಸ್ತಕವನ್ನೋದುತ್ತಿದ್ದಾಗ ಅದರಲ್ಲಿ ಕಾಳಿದಾಸನ ಒಂದು ಪದ್ಯದ ಪ್ರಸ್ತಾಪ ಇತ್ತು. ಋತು ಸಂಹಾರದ (೬-೨) ಈ ಕೆಳಗಿನ ಪದ್ಯ ಓದಿದ ಕೂಡಲೆ ಮನಸ್ಸಿಗೆ ಒಮ್ಮೆಗೇ ನೆಟ್ಟುಬಿಟ್ಟಿತು.
ದ್ರುಮಾಃ ಸಪುಷ್ಪಾಃ ಸಲಿಲಂ ಸಪದ್ಮಂ
ಸ್ತ್ರಿಯಃ ಸಕಾಮಾಃ ಪವನಃ ಸುಗಂಧಿಃ
ಸುಖಾಃ ಪ್ರದೋಷಾ ದಿವಸಾಶ್ಚ ರಮ್ಯಾ
ಸರ್ವಂ ಪ್ರಿಯೇ ಚಾರುತರಂ ವಸಂತೇ
ಕಾಳಿದಾಸನ ಕವಿತೆ ಅಂದರೆ ಮನಸ್ಸಿಗೆ ಹಿತವನ್ನೂ ಕಿವಿಗೆ ಮುದವನ್ನೂ ನೀಡುವಂತದ್ದು. ಒಮ್ಮೆ ಓದಿದರೆ ಮನಸ್ಸಿನಲ್ಲಿಯೇ ಮೊಳಗತೊಡಗುವುದು ಸಹಜ. ಹೀಗಾದಾಗಲೆಲ್ಲ ಒಮ್ಮೊಮ್ಮೆ ನಾನು ಅಂತಹ ಪದ್ಯವನ್ನ ಕನ್ನಡಿಸುವ ಯತ್ನವನ್ನು ಮಾಡ್ತೇನೆ. ಇದನ್ನೂ ಸರಿ, ಮಾಡೋಣವೆಂದು ಅವತ್ತೂ ಹಾಗೇ ಮಾಡಹೊರಟರೆ ಹಾಳಾದ್ದು, ಕಡೆಯ ಸಾಲಿನಲ್ಲಿ ಪ್ರಾಸಕ್ಕೆ ಸರಿಯಾದ ಒಂದು ಪದ ಹೊಳೆಯಲಾರದೇ ಹೋಯ್ತು.
ಗಾದೆ ಸುಳ್ಳಾದರೂ, ವೇದ ಸುಳ್ಳಾದರೂ, ದಾಸವಾಣಿ ಸುಳ್ಳಲ್ಲ ಬಿಡಿ. ಉತ್ತಮರ ಸಂಗ*ವಿರುವ ನಾನು ಚಿಂತೆ ತಾನೇ ಯಾಕೆ ಮಾಡಲಿ? ಗೆಳೆಯ ಜೀವೆಂ ಅವರಿಗೆ ಮಿಂಚಿಸಿದೆ - ಸ್ವಲ್ಪವೇ ಹೊತ್ತಿನಲ್ಲೇ ಕಡೆಯ ಸಾಲನಲ್ಲಿ ನನಗೆ ಸಿಗದಿದ್ದ ಪದವನ್ನು ತುಂಬಿಸಿ, ಅದನ್ನ ಪೂರ್ತಿಗೊಳಿಸುವ ಒಳ್ಳೇ ಸಲಹೆ ಅವರು ಕೊಟ್ಟರು. ಅದನ್ನು ನಾನು ನನ್ನ ಮೊದಲ ಮೂರು ಸಾಲುಗಳ ಶೈಲಿಗೆ ತಕ್ಕಂತೆ ಸ್ವಲ್ಪ ಬದಲಿಸಿ ಬರೆದ ಮೇಲೆ , ಈ ಅನುವಾದ ಸಿಕ್ಕಿತು:
ಸುಮವರಳಿಹ ಮರಗಳು ಕಮಲ ತುಂಬಿದ ಕೊಳವು
ಘಮದಗಾಳಿ; ಜೊತೆ ಹಂಬಲದ ಹೆಣ್ಣುಗಳು
ರಮಣೀಯ ದಿವಸಗಳು ನಲಿವೀವ ಮುಸ್ಸಂಜೆ
ಕಮನೀಯವೈ ಕಾಂತೆ ಬಹೆ ವಸಂತ!
ಈ ಕೊನೆಯ ಪಾದದ "ಕಮನೀಯ"ವೆಂಬ ಪದ ದೊರೆಯುವುದಕ್ಕೆ ಮೊದಲೇ, ಜೀವೆಂ ಅವರು ಇದೇ ಪದ್ಯಕ್ಕೆ ಇನ್ನೊಂದು ಅನುವಾದವನ್ನೂ ಮಾಡಿಬಿಟ್ಟರು - ಅದೂ ಕೂಡ ಸೊಗಸಾಗಿದೆ:
ಅಗಿಲು ಗಿಡುಗಿಹ ಹಾಳಿ ಹೂತ ಮರ ಹೂಗೊಳವು
ಭುಗಿಲೆದ್ದ ಬೇಟದಾಸೆಯ ಪೆಣ್ಗಳು
ಸೊಗವೀವ ಮುಸ್ಸಂಜೆ ರಮಣೀಯ ದಿವಸಗಳು
ಬಗೆಗೊಳ್ವುದಲೆ ನಲ್ಲೆ ಮಧುಮಾಸವು
ಸರಿ ಎರಡಾಯ್ತಲ್ಲ - ಮೂರಕ್ಕೆ ಮುಕ್ತಾಯ ಹಾಡೋಣ ಅಂತ, ನಾನೂ ಇದೇ ಪದ್ಯದ ಇನ್ನೊಂದು ಅನುವಾದ ಹೀಗೆ ಮಾಡಿಬಿಟ್ಟೆ:
ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು
ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು
ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು
ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ!
-ಹಂಸಾನಂದಿ
ಕೊ: ಉತ್ತಮರ ಸಂಗವೆನಗಿತ್ತು ಸಲಹೋ ಅನ್ನುವುದು ಶ್ರೀಪಾದರಾಯರ ಒಂದು ಪ್ರಸಿದ್ಧ ದೇವರನಾಮ
ಕೊ.ಕೊ: ಇನ್ನೇನು ವಸಂತ ಮುಗಿದು ಗ್ರೀಷ್ಮ ಕಾಲಿಟ್ಟಿರುವಾಗ ವಸಂತವನ್ನೊಮ್ಮೆ ಬೀಳ್ಕೊಡುವುದಕ್ಕಿದು ಸರಿಯಾದ ಸಮಯವೆನ್ನಿಸಿತು.
ಕೊ.ಕೊ.ಕೊ : ಯೋಗರಾಜ್ ಭಟ್ಟರಿಗೂ ಅಥವಾ ನಟ ದಿಗಂತ್ ಗೂ, ಮತ್ತೆ ನನ್ನ ಅನುವಾದಕ್ಕೂ ಯಾವ ಸಂಬಂಧವೂ ಇಲ್ಲ ಅನ್ನೋದೊಂದು ಒಗ್ಗರಣೆ ಒಪ್ಪಿಸಿಕೊಳ್ಳಿ.
Comments
ಉ: ಹಿತ ವಸಂತ
In reply to ಉ: ಹಿತ ವಸಂತ by nanjunda
ಉ: ಹಿತ ವಸಂತ
ಉ: ಹಿತ ವಸಂತ