ಹೀಗೊಂದು ಸಂಗೀತ ಸಂಜೆ......

ಹೀಗೊಂದು ಸಂಗೀತ ಸಂಜೆ......

ನಿನ್ನೆ, ಭಾನುವಾರದ ಸಂಜೆ ಒಬ್ಬನೇ ಕೋಣೆಯಲ್ಲಿ ಕುಳಿತಿದ್ದೆ. ಮನಸ್ಸಿಗೆ ಬಹಳ ಬೇಜಾರಾಗ್ತಿತ್ತು. ಏನು ಮಾಡೋದು ಅಂತ ಯೋಚಿಸ್ತಿರೋವಾಗ, ಯಾಕೆ ಸಂಗೀತ ಕೇಳಬಾರದು ಅಂತ ಮನಸ್ಸಿಗೆ ಹೊಳೀತು. ನೋಡೋಣ ಅಂತ, "ಬಾಂಬೆ ಜಯಶ್ರೀ" ಅವರ "confluence of elements " ಆಲ್ಬಮ್ ಕೇಳ್ತಾ ಕುಳಿತೆ. ಎಂಥಾ ಅದ್ಭುತ ಅಂತೀರಾ!! ನಿಜಕ್ಕೂ ಮನಸಿಗೆ ತುಂಬಾ ಸಮಾಧಾನ ಸಿಕ್ತು. ಈಗ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಆ ಹಾಡುಗಳನ್ನ ಕೇಳಬೇಕು ಅಂತ ಅನ್ಸುತ್ತೆ. ಏನೋ ಒಂಥರಾ ಮನಸ್ಸಿಗೆ ಹಿತವಾಗಿರುತ್ತೆ. ನಿನ್ನೆಯ ಸಂಜೆ ನಿಜಕ್ಕೂ ಸಂಗೀತಮಯವಾಗಿತ್ತು. ಈ ಹಿಂದೆ ಮ್ಯೂಸಿಕ್ ಥೆರಪಿ ಬಗ್ಗೆ ಕೇಳಿದ್ದೆ, ಆದರೆ ಅದರ ಅನುಭವ ಆಗಿರಲಿಲ್ಲ. ನಿನ್ನೆ ಆ ಹಾಡುಗಳನ್ನ ಕೇಳಿದ ಮೇಲೆ ನಿಜಕ್ಕೂ ಮ್ಯೂಸಿಕ್ ಥೆರಪಿ ಒಂದು ಅದ್ಭುತವನ್ನ ಸೃಷ್ಟಿಸಬಲ್ಲದು ಅನ್ನೋ ಅನುಭವವಾಯ್ತು. ಈ ಆಲ್ಬಮ್ ಬಹಳ ಅದ್ಭುತವಾಗಿದೆ. ಈ ಆಲ್ಬಮ್ ನಲ್ಲಿ, ೧.ಮೋಕ್ಷಮುಗಲದ, ೨.ಜಗದೋದ್ಧಾರನ, ೩. ವೈಷ್ಣವ ಜನತೋ, ೪.ಶ್ರೀ ರಾಮಚಂದ್ರ ಕ್ರುಪಾಳೋ, ೫. ವೈಷ್ಣವ ಜನತೋ instrumental  ಮತ್ತು ಇನ್ನೊಂದು ತಮಿಳು ಹಾಡಿದೆ. ಆದರೆ, ಆ ಹಾಡುಗಳು ಸ್ಫುರಿಸುವ ಆ ಶಕ್ತಿ ಬಹಳ ಉತ್ಕೃಷ್ಟವಾದದ್ದು. ಧನಾತ್ಮಕ ಅಂಶಗಳ ಸಾರದಂತೆ ಈ ಆಲ್ಬಮ್ ಅನಿಸುತ್ತದೆ.

ಈ ಥೆರಪಿಯ ಬಳಿಕ ಮನಸು ಬಹಳ ಹಗುರಾದಂತೆ ಅನಿಸಿತು. ನಂತರ ಒಂದು ಸಣ್ಣ walk  ನನ್ನ ಮೂಡನ್ನು ಬದಲಾಯಿಸಿತು. ನಿಜಕ್ಕೂ ಸಂಗೀತಕ್ಕೆ ಈ ಪರಿಯ ಶಕ್ತಿ ಇದೆ ಎಂದು ನನಗೆ ಅನಿಸಿದ್ದು ನಿನ್ನೆಯೇ. ಇದಕ್ಕೂ ಮುಂಚೆ ಮಾಮೂಲಿ ಹಾಡುಗಳನ್ನು ಕೇಳುತ್ತಿದ್ದ ನನಗೆ ನಿನ್ನೆಯ ಈ ಥೆರಪಿ ಬಹಳ ರೋಮಾಂಚಕ ಅನುಭವವನ್ನು ನೀಡಿತು. ಹಾಗೆಯೇ "ರೋಣು ಮಜುಂದಾರ್" ಅವರ "Dancing Daffodils " ಮನಸ್ಸಿಗೆ ಬಹಳ ಚೇತೋಹಾರಿ ಅನಿಸಿದವು. ಈ ಹಾಡುಗಳನ್ನು ನೀಡಿದ ನನ್ನ ಗೆಳೆಯ ಶ್ರೀಕಾಂತ್ ನನ್ನು ಬಹಳವಾಗಿ ಮನಸಿನಲ್ಲೇ ಅಭಿನಂದಿಸಿದೆ. ಈ ಹಿಂದೆ, ತಾನಸೇನ ನ ಸಂಗೀತದ ಶಕ್ತಿಯ ಬಗೆಗೆ, ಶ್ರೀಯುತ ಸೂರ್ಯನಾರಾಯಣ ಅವರ ಸಂಗೀತದ ಶಕ್ತಿಯ ಬಗೆಗೆ ಕೇಳಿದ್ದ ನನಗೆ, ಈ ಅನುಭವದ ನಂತರ ಸಂಗೀತದ ಶಕ್ತಿಯ ಬಗೆಗೆ ನಿಜವಾದ ಆಸ್ಥೆ ಮೂಡಿತು.
Rating
No votes yet

Comments