ಹುಡುಗಿಯರು ಯಾಕೆ ಹೀಗೆ?

ಹುಡುಗಿಯರು ಯಾಕೆ ಹೀಗೆ?

"ಅಲ್ಲವೇ ನೋಡಿದ್ರೇನೆ ಗೊತ್ತಾಗುತ್ತೆ ಜೊಲ್ಲು ಅಂತ ಅದು ಹೇಗೆ ಮಾತಾಡ್ತೀಯಾ ಅವನ ಜೊತೆ ? ಅದೇನು ಅಷ್ಟೊಂದು ಹಲ್ಲು ಗಿಂಜತಾನೆ? irritate ಆಗಲ್ವಾ ನಿಂಗೆ?" ಅಂದೆ.
“ಯಾಕಾಗಬೇಕು? ” ತಣ್ಣಗೆ ಅಂದಳವಳು.
“He is a flirt !!” ತುಸು ಜೋರಾಗೇ ಅಂದೇ ನಾನು.
“ಛೇ! ನಿನಗೆ ಗೊತ್ತಿಲ್ವೇ ಅವ್ನು ಫ್ಲರ್ಟ್ ಅಲ್ಲ. ಅವ್ನಿಗೆ ಹುಡುಗಿಯರ ಶೋಕಿ ಇದೆ
ಅಷ್ಟೇ. ಫ್ಲರ್ಟ್ ಮಾಡೋ ಕ್ವಾಲಿಟೀಸ್ ಇಲ್ಲ!!!”
“ಫ್ಲರ್ಟ್ ಮಾಡೋಕೂ ಕ್ವಾಲಿಟೀಸ್ ಬೇಕಾ?” ಇಷ್ಟಗಲ ಬಾಯಿ ತೆರೆದು ಕೇಳಿದೆ.
“ಬೇಡ್ವ ಮತ್ತೆ? ಅದೂ ಒಂದು ಕಲೆ. ಈಗ ನೋಡು ನನಗೆ ಲೆಕ್ಕ ಹಾಕಿದಂಗೆ 33 ಜನ boy
friends ಇದಾರೆ. ಅವರನ್ನೆಲ್ಲ ಮ್ಯಾನೇಜ್ ಮಾಡೋದು ಸುಮ್ನೇ ಅಂದುಕೊಂಡ? ಒಬ್ಬನ
ಜೊತೆಲಿದ್ದಾಗ ಇನ್ನೊಬ್ಬನ ಕಾಲ್ ಬಂದ್ರೆ ಏನು ಮಾಡಬೇಕು? ಎದುರಿಗೆ ಸಿಕ್ಕಿಬಿಟ್ಟರೆ
ಹೇಗೆ ತಪ್ಪಿಸ್‌ಕೋಬೇಕು ಅನ್ನೋದು ಎಲ್ಲರಿಗೂ ಬರೋಲ್ಲ.”
“ಇಷ್ಟಕ್ಕೂ ಅಷ್ಟೊಂದು ಹುಡುಗರ ಅವಶ್ಯಕತೆ ಏನಿದೆ ನಿನಗೆ? ಯಾವನಾದ್ರೂ ಒಬ್ಬನ ಜೊತೆ
ಇರಬಾರದ permanent ಆಗಿ?”
“ಹ್ಹೆ ಹ್ಹೆ bore ಆಗಲ್ಲವೇನೆ!! ನನಗೆ ಇದೆಲ್ಲ ಇಷ್ಟ! I enjoy flirting!!” ಅಂತ
ಕಣ್ಣು ಹೊಡೆದಳು.
ಅಷ್ಟೊತ್ತಿಗಾಗಲೆ ಅವಳ ಫೋನು ಕುಣೀತೂ. ಆ ಕಡೆಯಿಂದ ಯಾರೋ ಹುಡುಗ. “ಇನ್ನೈದು ನಿಮಿಷ ಹನೀ ಅಲ್ಲಿರ್ತೀನಿ.” ಅಂದವಳೇ ನನ್ನ ಕಡೆ ತಿರುಗಿ, “ನಾನು ಬರ್ತೀನೆ ನನ್ನ boy
friend ಕಾಯ್ತಿದಾನೇ ಬೈ.” ಅಂದಳು.
“ಇವನೆಷ್ಟನೇಯವನೆ?” ತಮಾಷೆಗೆಂದೆ.
“34th ಕಣೇ!! ಹೊಸಬಾ ಪಾಪ” ಅಂದ್ಲು.
ಅವಳ ಮಾತಿನಿಂದ ಸಾವರಿಸಿ ಕೊಳ್ಳುವಷ್ಟರಲ್ಲಿ ಅವಳಾಗಲೇ ಹೊರಗಾರಿದ್ದಳು.
ಎಂಥಾ ಹುಡುಗಿ! ಯೋಚಿಸುತ್ತಿದ್ದೆ.
***

ಮನೆ ಮುಂದೇನೆ ಅವನ ಮನೆ ಕಣೇ, ನಾನು ಓಡಾಡುವಾಗ ನನ್ನೇ ನೋಡೋನು. ಹುಡುಗರು ಅಂದ್ರೇನೆ ಒಂದು ಮಾರು ದೂರ ಓಡ್ತಿದ್ದೋಳು, ಅದು ಹೇಗೆ ಅವನನ್ನ ಮಾತಾಡಿಸ್ದೆ ಅಂತ ಈಗ್ಲೂ ಅನುಮಾನ ನಂಗೆ. ವಿಪರೀತ ಇಷ್ಟ ಆಗೋಗ್ಬಿಟ್ಟಿದ್ದಾನೆ. ಸ್ಲೋಕ್ ಮಾಡ್ತಿದ್ದನಂತೆ ಗೊತ್ತಾ? ಈಗ ಬಿಟ್ಬಿಟ್ಟಿದ್ದಾನೆ, ನಂಗೋಸ್ಕರ ಅಂತ ಖುಶಿಯಿಂದ ಅವಳು ಹೇಳಿಕೊಳ್ತಿದ್ಲು. ಹುಷಾರು ಕಣೇ ಇನ್ಯಾರೋ ಸಿಕ್ರು ಅಂತ ನಿನ್ನ ಬಿಟ್ಟು ಬಿಟ್ಟಾನು ಅಂದೆ. ನನ್ನ ಮಾತು ಅವಳಿಗೆ ಇಷ್ಟವಾಗಲಿಲ್ಲ. ಸುಮ್ನಿರೆ! ನಿಂಗೆ ಯಾವಾಗ್ಲೂ ತಮಾಷೇನೇ ಅಂದು ಕೆನ್ನೆ ತಿವಿದಳು.

ಅದಾದ ಮೇಲೆ ತುಂಬಾ ದಿನಗಳವರೆಗೆ ಆಕೆ ನನಗೆ ಸಿಕ್ಕಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಮನೆಗೆ ಬಂದವಳು ತುಂಬಾ ಬೇಜಾರಲ್ಲಿದ್ದಂತೆ ಕಂಡಳು. ಯಾಕೆ ರಾಣಿ ಮಂಕಾಗಿದ್ದೀಯ ಅಂದೆ. ಒಂದು ವಾರ ಆಯ್ತು ಕಣೇ ಅವ್ನ ಮಾತಾಡ್ಸಿ ಅಂದವಳೇ ಅಳೋಕೆ ಶುರು ಮಾಡಿದ್ಲು. ಇದೊಳ್ಳೆ ಕತೆಯಾಯ್ತು,
ಅನ್ಕೊಂಡು ಸಮಾಧಾನ ಮಾಡಿ, ಏನಾಯ್ತೇ ಅಂತ ಕೇಳೋಷ್ಟರಲ್ಲಿ ಅವಳೇ ಹೇಳಿದಳು, ‘ಮೊದಮೊದಲು ತುಂಬಾ ಕೇರ್ ಮಾಡ್ತಿದ್ದ ಕಣೇ. ಸಿಗರೇಟು ಬಿಟ್ಟಿದ್ದ, ಅಪರೂಪಕ್ಕೆ ಫ್ರೆಂಡ್ಸ್ ಜೊತೆ ಸೇರಿ ಕುಡೀತಿದ್ನಂತೆ, ಅದೂ ಬಿಟ್ಟಿದೀನಿ ಅಂದ. ‘ನಾವು ವೆಜಿಟೇರಿಯನ್ಸ್ ಅಲ್ಲ, ಬೇಕಾದ್ರೆ ನಿಮ್ಮ ಜಾತಿಗೆ ಕನ್ವರ್ಟ್ ಆಗ್ತೀನಿ. ಇನ್ಮೇಲೆ ನಾನ್ ವೆಜ್ಜೂ ತಿನ್ನಲ್ಲ’ ಅಂತ ಪ್ರಾಮಿಸ್ ಮಾಡಿದ್ದ. ಆದ್ರೆ ಒಂದು ವಾರದ ಹಿಂದೆ ಮೂರ್ನಾಲ್ಕು ದಿನ ಫೋನ್ ಮಾಡಿದ್ರೂ ಸರೀಗೆ ಮಾತಾಡಿಸ್ಲಿಲ್ಲ. ಕೆಲ್ಸ ಇದೆ ಆಮೇಲೆ ಮಾಡ್ತೀನಿ ಅನ್ನೋನು, ಮತ್ತೆ ಮಾಡ್ತಲೇ ಇರ್ಲಿಲ್ಲ. ಮೊನ್ನೆ ಅವನ ಫ್ರೆಂಡ್ ಒಬ್ಬ ಸಿಕ್ಕಿದ್ದ. ಅವ್ನು ಹೇಳ್ದ, ಹೋದ ವಾರ ಮನೆಗೆ ಕುಡಿದು ಹೋಗಿದ್ನಂತೆ! ಅವ್ರಪ್ಪ ಅವ್ನಿಗೆ, ಅವ್ನ ಫ್ರೆಂಡ್ಸಿಗೆ ಬೈಯ್ದ್ರಂತೆ. ನಂಗೆ ಮೋಸ ಮಾಡ್ಬಿಟ್ಟ ಕಣೇ” ಎನ್ನುತ್ತಾ ಮತ್ತೆ ಬಿಕ್ಕಿದಳು.
ಆತ ಮೋಸ ಮಾಡೋಕೆ ಮುಂಚೆ ನೀನೇ ಮೋಸ ಹೋಗ್ಬಿಟ್ಟಿದ್ದ್ ಎಹುಡುಗಿ ಅನ್ನೋಣ ಅಂದ್ಕೊಂಡೆ, ಅವಳಿಗೆ ಹರ್ಟ್ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. “ಸರಿ ಈಗೇನ್ಮಾಡ್ತೀಯಾ ಅಂದೆ. ಗೊತ್ತಿಲ್ಲ ಅಂದ್ಲು. ನಾನು ಹೇಳೋದು ಕೇಳು. ಅವನನ್ನ ಮರೆತು ಬಿಡು. ಇಷ್ಟಕ್ಕೆ ಗೊತ್ತಾಗಿದ್ದು ಒಳ್ಳೇದಾಯ್ತು ಅಂತ ಸುಮ್ಮನಿದ್ದು ಬಿಡು. ನಿನ್ನ ಪ್ರೀತಿಸೋ ಯೋಗ್ಯತೆ ಅವನಿಗಿಲ್ಲ. ಅವನನ್ನ ನೆನೆಸಿಕೊಂಡು ಏನು ಅಳ್ತೀ, ಅವ್ನೊಬ್ಬ ಅಯೋಗ್ಯ. ನೀನು ಏನೋ ಆದೋಳ ಥರ ಕೊರಗಬೇಡ, ಆರಾಮಾಗಿರು” ಅಂತ ಬುದ್ಧಿ ಹೇಳಿದೆ. ನೀನು ಹೇಳೋದು ಸರಿ ಕಣೇ.. ಅಂತಂದು ಹೊರಟ್ಳು. ಹುಡುಗೀರು ಎಷ್ಟು ವಿಚಿತ್ರ ಅಲ್ವಾ, ಯೋಚಿಸುತ್ತಿದ್ದೆ.

***
ಅವಳದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಹೀಗೆ ಒಂದಿನ ಸಿಕ್ಕಿದ್ಲು. “ಹೇಮಾ, ನಿಂಗೆ ಯಾವುದಾದ್ರೂ ಪಿ.ಜಿ ಹೌಸ್ ಗೊತ್ತೇನೆ, ಗೊತ್ತಿದ್ರೆ ಹೇಳೆ. ನನಗೆ ನನ್ನ ಗಂಡನ ಜೊತೆಗೆ ಇರೋಕೆ ಆಗ್ತಾ ಇಲ್ಲ. ಎಲ್ಲಾದ್ರೂ ಪೇಯಿಂಗ್ ಗೆಸ್ಟ್ ಆಗಿದ್ದು ಬಿಡ್ತೀನಿ” ಅಂದ್ಲು! “ಅದ್ಯಾಕೆ ಅಕ್ಕ! ಮದುವೆಯಾಗಿ ನಾಲ್ಕು ವರ್ಷಕ್ಕೆ ಗಂಡ ಬೇಜಾರಾದ್ನೇ?” ಅಂದೆ. “ಗಂಡ ಅಲ್ವೇ, ಬದುಕೇ ಬೇಜಾರು, ಸತ್ತೋಗಣ ಅನ್ನಿಸತ್ತೆ!” ಅಂದವಳ ಕಣ್ಣಂಚಲ್ಲಿ ನೀರಿತ್ತು.
“ಛೇ! ತಮಾಷೆಗಂದೆ ಕಣೇ. ಯಾಕಷ್ಟು ಬೇಜಾರಾಗಿದ್ದೀಯ? ಏನಾಯ್ತು?”
“ದಿನಾ ಜಗಳ ಕಣೇ. ಕೆಲಸಕ್ಕೆ ಸೇರೋವಾಗ ಇವ್ರನ್ನ ಕೇಳೇ ಸೇರಿದ್ದೀನಿ. ಕೆಲಸ ಮುಗಿಸಿ ಮನೆಗೆ ಬಂದ ಮೇಲೆ ಆಫೀಸಿನಿಂದ ಒಂದು ಫೋನು ಬರೋ ಹಾಗಿಲ್ಲ. ಯಾರದು, ಯಾರವನು, ನಿಂಗೇ ಯಾಕೆ ಫೋನ್ ಮಾಡ್ದ, ಆಫೀಸಿನಲ್ಲಿ ಬೇರೆ ಯಾರೂ ಇಲ್ವಾ, ನೀನೊಬ್ಳೇ ಕೆಲಸ ಮಾಡೋದೇನು ಅಂತೆಲ್ಲಾ ಕೇಳ್ತಾನೆ. ಮನೆಗೆ ಬರೋದು ಒಂಚೂರು ಲೇಟ್ ಆಗೋ ಹಾಗಿಲ್ಲ. ಯಾವನ ಜೊತೆ ಊರು ಸುತ್ತಿ ಬರ್ತಿದ್ದೀಯ ಅಂತಾನೆ. ಪ್ರತಿ ನಿಮಿಷಾನೂ ನಾನೇನು ಮಾಡ್ಲಿಲ್ಲ, ನಿಮ್ಮಾಣೆ, ನನ್ನಾಣೆ ಅಂತ ಜಸ್ಟಿಫೈ ಮಾಡಿಕೊಂಡೇ ಬದುಕಬೇಕು. ಮೊನ್ನೆ ಜಗಳ ಆಡಿದಾಗ ಕೋಪ ಬಂದು ಅವನ ಹಣೆಗೆ ಹೊಡೆದು ಬಿಟ್ಟೆ. ಚೂರು ರಕ್ತ ಬಂತು. ನನ್ನ ಸಾಯಿಸಿ ಇನ್ನೊಬ್ಬನ ಜೊತೆ ಓಡೋಗ್ಬೇಕು ಅಂತಿದೀಯ ಅಂತಾನೆ ಕಣೇ. ಹೇಗಿರ್ಲಿ ಹೇಳು ಇಂತಹ ಮನುಷ್ಯನ ಜೊತೆ? ಹಾಳಾದ ಕೆಲಸ ಬಿಟ್ಟುಬಿಡೋಣ ಅಂದ್ರೆ ಇವನು ತರೋ ಸಂಬಳ ಊಟಕ್ಕೇ ಸಾಲ್ದು. ಇಷ್ಟು ಓದಿ, ಇಷ್ಟು ದಿನ ಕಂಫರ್ಟಬಲ್ ಆಗಿರೋ ಕೆಲ್ಸಾನ ಬಿಟ್ಬಿಡೋದಾದ್ರೂ ಹೇಗೆ ಹೇಳು? ಜೀವನಾನೆ ಬೇಜಾರಾಗ್ಬಿಟ್ಟಿದೆ ಕಣೇ”
“ನೋಡೇ, ನನಗೆ ಗೊತ್ತಿರೋ ಹಾಗೆ ನಿನ್ನ ಗಂಡನಿಗಿಂತ ಜಾಸ್ತಿ ದುಡೀತೀಯ ನೀನು. ದಿನಾ ಜಗಳ ಆಡಿಕೊಂಡು ನೆಮ್ಮದಿ ಇಲ್ದೇ ಅವನ ಜೊತೇನೇ ಯಾಕಿದೀಯಾ? ಡಿವೋರ್ಸ್ ಮಾಡಿಬಿಡು. ಒಬ್ಬಳೇ ಬದುಕೋದು ಅಷ್ಟು ಕಷ್ಟವೇನಲ್ಲ. ನೀನು ಈಗಿರೋದಕ್ಕಿಂತ ನೂರು ಪಾಲು ಚೆನ್ನಾಗಿರಬಹುದು”, ವಿವರಿಸಿ ಹೇಳಿದೆ.
“ನೀನು ಹೇಳೋದು ಸರಿ ಕಣೇ. ಆದ್ರೆ ಜನ ಏನನ್ನಲ್ಲ, ಗಂಡನ್ನ ಬಿಟ್ಟು ಬಂದ್ರೆ ಮರ್ಯಾದೆ ಇರುತ್ತಾ?” ಆತಂಕದಿಂದ ಕೇಳಿದಳು.
“ಅನ್ನೋ ಜನ ಬಂದು ನಿನ್ನ ಗಂಡನ ಕೈಲಿ ಬೈಸಿಕೊಳ್ಳೋದಿಲ್ಲ. ಅನುಭವಿಸ್ತಾ ಇರೋಳು ನೀನು, ನೋಡೋ ಜನ ಅನ್ಲಿ, ಅವ್ರಿಗೆಲ್ಲಾ ಕೇರ್ ಮಾಡಿದ್ರೆ ಬದುಕ್ಲಿಕ್ಕೆ ಆಗುತ್ತಾ? ಯೋಚನೆ ಮಾಡು.” ಯೋಚನೆ ಮಾಡುತ್ತಿರುವವಳಂತೆ ಕಂಡಳು. ಅವಳನ್ನು ಯೋಚಿಸಲು ಬಿಟ್ಟು ನಾನು ಹೊರನಡೆದೆ.
***

ಅವಳು ಆಫೀಸಿನೋರಿಗೆ ಸ್ವೀಟ್ಸ್ ಹಂಚುತ್ತಿದ್ದಳು. ಏನು ವಿಶೇಷ ಅಂತ ವಿಚಾರಿಸಿದ್ದಕ್ಕೆ, ನನ್ನ ಮದುವೆ ಫಿಕ್ಸ್ ಆಯ್ತು ಕಣೇ! ನನ್ನಪ್ಪನ ಫ್ರೆಂಡ್ ಮಗನ ಜೊತೆ. ಇನ್ನೆರಡು ತಿಂಗಳಿಗೆ ಮದುವೆ! ಅಂತ ನಾಚಿಕೊಂಡಳು. “ಅಲ್ಲಾ!! ನಿನ್ನ ಬಾಯ್ ಫ್ರೆಂಡ್‌ಗಳ ಗತಿಯೇನೆ? ೩೪ ಹೃದಯಗಳೂ ಒಂದೇ ಸಲ ಚೂರಾಗಿ ಹೋಗ್ತವಲ್ಲೇ?!” ಅಂದೆ. “ಹೇ, ನಾನೀಗ ಅದನ್ನೆಲ್ಲಾ ಬಿಟ್ಬಿಟ್ಟಿದ್ದೀನಮ್ಮ. ಐ ಆಮ್ ಎ ಗುಡ್ ಗರ್ಲ್ ನೌ ಅಂದ್ಲು.” ಇವ್ಳು ಸಿಕ್ಕಾಗಲೆಲ್ಲಾ ಸರ್‌ಪ್ರೈಸ್ ಕೊಡ್ತಾಳೆ ಅನ್ಕೊಂಡೆ.
***

ಇವಳು ಸಿಕ್ಕು ತುಂಬಾ ದಿನವಾಗಿತ್ತು. ಅಂದು ಅಕಸ್ಮಾತ್ ದಾರಿಯಲ್ಲಿ ಸಿಕ್ಕಿದಳು. ನನ್ನನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾಳೆನಿಸಿತು. ನಾನೇ ಕೂಗಿ ಕರೆದೆ. ಹೇಗಿದ್ದೀಯೇ ಅಂದೆ. ‘‘ಚೆನ್ನಾಗಿದಿದೀನೆ, ನಾನು ಬೇಗ ಹೋಗ್ಬೇಕು ಲೇಟ್ ಆಗ್ತಿದೆ. ಅವನು ಕಾಯ್ತಿರ್ತಾನೆ’’ ಅಂದ್ಲು. ‘‘ಅರೆ ನಿನ್ನ! ನೀನಿನ್ನು ಅವ್ನನ್ನ ಬಿಟ್ಟಿಲ್ವೇನೆ?”, “ಇಲೇ, ಅವತ್ತು ನಿನ್ನ ಜೊತೆ ಮಾತಾಡಿ ಬಂದ್ನಲ್ಲ, ಆ ರಾತ್ರಿ ಅವ್ನಿಗೆ ಫೋನ್ ಮಾಡಿದ್ದೆ. ಒಂದು ವಾರದಿಂದ ಮಾತಾಡಿರ್ಲಿಲ್ಲ. ಚೂರು ಮೆತ್ತಗಾಗಿದ್ದ. ಸಾರಿ ಕೇಳ್ದ. ಇನ್ಮೇಲೆ ಹಿಂಗೆ ಮಾಡಲ್ಲ ಅಂದ. ಪಾಪ ಅನ್ನಿಸ್ತು. ಹೇಗೆ ಬಿಟ್ಟು ಬಿಡೋದಕ್ಕೆ ಆಗುತ್ತೆ ಹೇಳು?” ಅಂತಂದು ನಕ್ಕಳು. ನಾನು ಏನಾದ್ರೂ ಹೇಳ್ತಿದ್ದೆನೇನೋ, ಆದ್ರೆ ಅದು ಅವಳ ತಲೆಗೆ ಹೋಗೋ ಲಕ್ಷಣ ಕಾಣಲಿಲ್ಲ ಸುಮ್ಮನಾದೆ.
***

“ಏನು ಯೋಚನೆ ಮಾಡ್ದೆ?” ಕೇಳಿದೆ. “ಯಾವ ವಿಷಯ ಕೇಳ್ತಿದ್ದೀಯ?” ಅಂದ್ಲು. “ಅಲ್ವೇ ಅವತ್ತು ಜಗಳ ಆಗಿದೆ, ಗಂಡನ ಜೊತೆ ಇರಕ್ಕಾಗಲ್ಲ. ಪಿ.ಜಿ ಹೌಸ್ ನೋಡು ಅಂದ್ಯಲ್ಲೇ, ನಮ್ಮನೆ ಹತ್ರಾನೆ ಒಂದಿದೆ, ನೋಡ್ಕಂಡು ಬರಾಣ ಅಂತ ಕೇಳಿದ್ದು.” ಆಕೆಗೆ ನೆನಪಾದಂತಾಯ್ತು, “ಅಯ್ಯೋ ಆ ವಿಷಯಾನಾ! ನನಗೆ ಮರೆತೇ ಹೋಗಿತ್ತು. ಇಲ್ವೇ, ನಮ್ಮೆಜಮಾನ್ರು ಈಗ ಪರ್ವಾಗಿಲ್ಲ. ನಾನೇ ಮನೆಗೆ ಹೋದ ಮೇಲೆ ಫೋನ್ ಸ್ವಿಚ್ ಆಫ್ ಮಾಡ್ಬಿಡ್ತೀನಿ. ಸಂಸಾರ ಅಂದಮೇಲೆ ಅಷ್ಟು ಹೊಂದಿಕೊಂಡು ಹೋಗದಿದ್ರೆ ಹ್ಯಾಗೆ ಹೇಳೂ?” ತೀರ ಆಘಾತವೇನು ಆಗಲಿಲ್ಲ ನನಗೆ. ಅವಳಿಂದ ಈ ಉತ್ತರಾನ ನಿರೀಕ್ಷಿಸಿದ್ದೆ. ನಕ್ಕು ಸುಮ್ಮನಾದೆ. ಹೆಣ್ಣೆಂದ ಮಾತ್ರಕ್ಕೆ ಎಲ್ಲಾನೂ ಸಹಿಸಿಕೊಳ್ಳಬೇಕು ಅಂತ ಏನಿಲ್ಲ. ತಾನು ಹೆಣ್ಣು ಎಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಲು ಅವಳೇ ಸಿದ್ದಳಾಗಿ ಬಿಡ್ತಾಳೆ. ಯಾಕೋ ಇವಳನ್ನು ನೋಡಿ ಹಾಗನ್ನಿಸಿತು.

ಹೆಣ್ಣು ಚಂಚಲೆಯಾ, ಫ್ಲರ್ಟಾ, ಎಮೋಶನಲ್ಲಾ, ಮೋಸಗಾರಳಾ, ಕಷ್ಟ ಸಹಿಷ್ಣುವಾ, ಏನೋ ಹೆಣ್ಣಾದ ನನಗೂ ಅರ್ಥವಾಗಲೇ ಇಲ್ಲ. ಆದರೆ ಇವರೆಲ್ಲಾ ಬದಲಾಗೇ ಬಿಡ್ತಾರೆ ಅಂತ ನಂಬಿದ್ದ ನಾನು ಮಾತ್ರ ಮೂರ್ಖಳೆಂದು ಎದೆತಟ್ಟಿ ಹೇಳಿಕೊಳ್ಳಬಲ್ಲೆ!

('ಸಡಗರ'ದಲ್ಲಿ ಪ್ರಕಟವಾದ ನನ್ನ ಬರಹ)
__________________________________

Rating
No votes yet

Comments