ಹುರುಳಿ ಕಟ್ಟಿನ ಸಾರು.

ಹುರುಳಿ ಕಟ್ಟಿನ ಸಾರು.

ಕರ್ನಾಟಕದ ಅಧ್ಬುತ ಅಡಿಗೆಗಳಲ್ಲೊಂದು ಹುರುಳಿ ಕಟ್ಟಿನ ಸಾರು.  ಯುಧ್ಧಕ್ಕೆ ಹೊರಟ ಯೋಧರ ಕುದುರೆಗಳಿಗೆ ಬೇಯಿಸಿದ ಹುರುಳಿಯನ್ನು ತಿನ್ನಿಸಿದರೆ, ಹುರುಳಿಕಟ್ಟನ್ನು ಮಸಾಲೆ ಸೇರಿಸಿ, ರುಚಿಕಟ್ಟಾದ ವಾರಗಟ್ಟಲೆ ಕೆಡದ ಹಾಗೆ ಸಾರು ಮಾಡಿ ಚಪ್ಪರಿಸಿ ಹೊಡೆಯುವುದು ಪಟುಭಟರಿಗೆ ಬಿಟ್ಟ ವಿಚಾರ.

ಇಲ್ಲಿ ಈ ಸಾರನ್ನು ಹೇಗೆ ಮಾಡಬೇಕೆಂದು ನಮ್ಮಕ್ಕ ಹೇಳಿಕೊಟ್ಟಿದ್ದನ್ನು ಬರೆದಿದ್ದೇನೆ.

ಎರಡು ಪಾವು ಹುರುಳಿ ಕಾಳಿಗೆ ಏಳೆಂಟು ಪಾವುಗಳಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಬೇಕು.  ಸೌದೆ ಒಲೆಯಲ್ಲಿ ಮಾಡುವುದಾದರೆ ಒಳ್ಳೆಯದು.  ಆ ಅವಕಾಶ ಇಲ್ಲವಾದರೆ, ಪ್ರೆಶರ್ ಕುಕರ್‌ನಲ್ಲಿ ಮೂರು ಸಿಳ್ಳೆ ಹೊಡೆಸಬೇಕು.  ಬೇಯಿಸಲು ಉಪ್ಪು ಸೇರಿಸಬಾರದು. ಇದಾದ ಮೇಲೆ ಮತ್ತೆ ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಮತ್ತೆ ಮೂರು ಸಿಳ್ಳೆ ಹೊಡೆಸಬೇಕು.

ಒಂದು ಚಮಚೆ ಉದ್ದಿನಬೇಳೆ, ಒಂದು ಚಮಚೆ ಕಡ್ಲೇಬೇಳೆ, ಧನಿಯಾ ಮೂವತ್ತು ಗ್ರಾಂಗಳಷ್ಟು, ಒಣಮೆಣಸಿನಕಾಯಿ ೬-೫, ಒಣಕೊಬ್ಬರಿ, ಕರಿಬೇವಿನ ಸೊಪ್ಪು ಚಕ್ಕೆ, ಲವಂಗ, ಜೀರಿಗೆ, ಮೆಣಸು ಇವನ್ನು ಹುರಿದುಕೊಳ್ಳಬೇಕು. ೪೦೦ ಗ್ರಾಂಗಳಷ್ಟು ಈರುಳ್ಳಿಯ ಜೊತೆಗೆ ಹುರಿದ ಮಸಾಲೆ ಸಾಮಗ್ರಿಗಳನ್ನು ಸೇರಿಸ್, ಜೊತೆಗೆ ಹುಣಸೇಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಬೇಕು.

ಬೇಯಿಸಿದ ಕಟ್ಟಿನಿಂದ ಕಾಳನ್ನು ಬೇರೆ ಮಾಡಿಕೊಳ್ಳಬೇಕು.  ಇನ್ನೊಂದು ಪಾತ್ರೆಯಲ್ಲಿ ಜೀರಿಗೆ, ಸಾಸುವೆ, ಕರಿಬೇವು ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಮಾದಿಕೊಂಡು, ಅದಕ್ಕೆ ಕಟ್ಟನ್ನು ಸೇರಿಸಿ,  ಆಡಿಸಿದ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು.  ಮೊದಲ ದಿನ ಸಾರು ತೆಳುವಾಗಿದ್ದರೆ ಅಡ್ಡಿಯಿಲ್ಲ.  ಎರಡು ದಿನಗಳ ಕಾಲ ದಿನಕ್ಕೆ ಎರದು ಹೊತ್ತು ಕುದಿಸಿ ಇಳಿಸಬೇಕು.  ಮೂರನೇ ದಿನಕ್ಕೆ, ಬಿಸಿ ಅನ್ನದ ಜೊತೆಗೆ, ತುಪ್ಪ ಹಾಕಿಕೊಂಡು ಕಟ್ಟಿನ ಸಾರಿನ ರುಚಿ ನೋಡಿ.. ಆಮೇಲೆ ಮಾತನಾಡಿ.

ಅಂದಹಾಗೆ,  ಬೇಯಿಸಿದ ಹುರಳಿ ತಿನ್ನಿಸಲು ನಮ್ಮಬಳಿ ಕುದುರೆಯಿಲ್ಲವಲ್ಲಾ..? ತೊಂದರೆಯಿಲ್ಲ.  ಅದಕ್ಕೆ ಒಗ್ಗರಣೆ ಹಾಕಿ ಪಲ್ಯ ಮಾಡಿದರೆ, ಊಟದ ಜೊತೆಗೆ ನಂಜಿಕೊಳ್ಳಬಹುದು,  ಸ್ವಲ್ಪ ಬೆಲ್ಲ, ಎಸೆನ್ಸ್ ಸೇರಿಸಿ, ನುಣ್ಣಗೆ ರುಬ್ಬಿಕೊಂಡರೆ, ಹುರುಳಿ ಸೀಕರಣೆ ಸಿದ್ದ.  ಹಾಗೇ ಸಾರು ತುಂಬಾ ತೆಳುವೆನಿಸಿದರೆ, ಸ್ವಲ್ಪ ಹುರುಳಿಯನ್ನು ರುಬ್ಬಿ, ಸಾರಿನೊಂದಿಗೆ ಸೇರಿಸಬಹುದು.


ಮತ್ತೂ ಮುಂದಿನ ವಿಷಯವೆಂದರೆ, ಮಾಂಸಾಹಾರಿ ಪ್ರಿಯ ಸ್ನೇಹಿತರಿಗೆ, ಮೊದಲನೇ ದಿನದ ಹುರುಳಿಕಟ್ಟಿನ ಸಾರಿಗೆ, ಕೈಮ-ಉಂಡೆಗಳನ್ನು ಸೇರಿಸಿ ಬೇಯಿಸಬಹುದು,  ಅದು ಖಾಲಿಯಾಗಿ ಸಾರು ಹಾಗೇ ಇದ್ದರೆ, ಮೊಟ್ಟೆಯನ್ನು ಬೇಯಿಸಿ ಸೇರಿಸಬಹುದು,  ಇನ್ನೂ ತಿಳಿಯಾದ ಸಾರು ಉಳಿದಿದ್ದರೆ, ಆಲೂಗೆಡ್ಡೆಯನ್ನು ಸೇರಿಸಬಹುದು, ಸಾರಿನ ಜೊತೆಗೆ ನಂಜಿಕೊಳ್ಳಲು ಇದು ತರಕಾರಿಯಾಗುತ್ತದೆ.


ನಿಜವಾದ ಹುರುಳಿ ಕಟ್ಟಿನ ರುಚಿ ನೋಡಬೇಕೆಂದರೆ, ತಪ್ಪಲೆ ತುಂಬಾ ಮಾಡಿದ ಸಾರು ಚೆನ್ನಾಗಿ ಕುದ್ದು, ದೊಡ್ಡ ಚಂಬಿನಷ್ಟಾದಾಗ, ಪೇಸ್ಟಿನಷ್ಟು ಗಟ್ಟಿಯಾದಾಗ ಅದನ್ನು ಬಾಟಲಿನಲ್ಲಿ ತುಂಬಿಸಿಟ್ಟುಕೊಳ್ಳಬಹುದು. ಇದು ತಿಂಗಳಾದರೂ ಕೆಡದೆ ಉಳಿಯುತ್ತದೆ. ಒಂದು ಬಟ್ಟಲು ಅನ್ನಕ್ಕೆ ಒಂದೇ ಚಮಚ ಸಾರು ಈ ಸ್ಥಿತಿಯಲ್ಲಿ ಸಾಕಾಗುತ್ತದೆ. ಅದರ ರುಚಿಯನ್ನು ಅನುಭವಿಸಿಯೇ ತಿಳಿಯಬೇಕು.

Rating
No votes yet

Comments