ಹೊಸ-ಊರು,ರೋಡು
ನೀವು ಬೆಂಗಳೂರಿನವರೇ..?
ಬೆಂಗಳೂರಿಗೆ ಹೋಗಿ ಬಂದಿರೇ?
ಹೊಸೂರು ರೋಡ್ ಗೊತ್ತಲ್ಲವೇ.?
ಐ.ಟಿ,ಬಿ.ಟಿ ಯವರಾದರಂತೂ
ಗೊತ್ತೆ ಇರಬೇಕಲ್ಲವೇ..?
ಇದು ಹೊಸೂರು ರೋಡು.
ಎಲ್ಲಿಂದ ಎಲ್ಲಿ ನೋಡಿದರೂ
ನಿಂತ ಕಾರು,ಬಸ್ಸು,ಲಾರಿ ಲೋಡು.
ಹೀಗಿರಲಿಲ್ಲವಂತೆ...!
ವರುಷಗಳ ಹಿಂದೆ,
ಇಲ್ಲಿ..
ಈ ದಟ್ಟಣೆ,ಸಂಘರ್ಷಣೆ.
ವೇಗವಾಗಿ ಓಡುತ್ತಿದ್ದವಂತೆ
ಹಲ-ಕೆಲ
ಬಸ್ಸು ಲಾರಿಗಳು.
ಹೌದೌದು,,,ಎಲ್ಲ ಹೇಳುವುದದೇ
ಐಟಿ.ಬಿಟಿ ಯ ಬೆಳವಣಿಗೆ,
ಅಪಾರವಂತೆ..!!
ಇಲ್ಲಿ ಹೀಗೆ ಒಮ್ಮೆ
ಕಾರಿನಲ್ಲಿ ಕುಳಿತಾಗ
ಓಹ್..ಮರೆತೆನೇ..?
ಇಲ್ಲಿಯ ಡ್ರೈವಿಂಗ್ ಹೆಸರು
"ಬಂಪರ್ ಟು ಬಂಪರ್".
ಭಾಗ್ಯಲಕ್ಷ್ಮಿಯಲ್ಲ !!
ಇರಕೂಡದು..
ನನ್ನ,ಹಿಂದಿನ ಮುಂದಿನ
ಅಕ್ಕ,ಪಕ್ಕದ ಗಾಡಿಗೂ
ಸೆಂಟಿಮೀಟರ್ ಜಾಗ.
"ಸಮಯಸಾಧಕರಿದ್ದಾರೆ"
ಎಚ್ಚರ.
ಒಂದು ಸಂಜೆ,
ಮುಚ್ಚಿದ ಕಿಟಕಿ,
ಅರಚುವ ಬಾನುಲಿ,
ಬೊಮ್ಮನಹಳ್ಳಿ ಜಂಕ್ಶನ್.
ಐದು,ಹತ್ತು..ಇಪ್ಪತ್ತು
ನಿಮಿಷಗಳೋ?
ಬೋಡುತಲೆಗೆ ತೊಟ್ಟಿಕ್ಕುವ
ತಣ್ಣನೆ ನೀರ ಹನಿಗಳು.
ಐದೈದು ನಿಮಿಷಕ್ಕೊಮ್ಮೆ
ಒಂದು.
ಒಂದೇ~ ಹೆಜ್ಜೆ ಇಡುತ....
ನಡೆದಿತ್ತು.
ಎಂಜಿನ್ ನಿಲ್ಲಿಸುವಂತಿಲ್ಲ,
ಮುಖದ ಗಂಟೂ ಬಿಡಿಸುವಂತಿಲ್ಲ.
ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋ
ಆಫ಼ೀಸೂ - ಬಸ್ಸು.
ಬ..ಳ..ಲಿ...ಬೆಂದು,ನಿದ್ರಿಸುವ,
ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,
ಸಾಫ಼್ಟ್-ವೇರ್ ಎಂಜಿನಿಯರ್ ಗಳು.
ನನ್ನ ಕಾರಿಗೂ,
ರಸ್ತೆ ವಿ-ಭಜಕಕ್ಕೂ..
ಇದ್ದೂದೊಂದೇ ಅಡಿ.
ಯಾವುದೋ....
ಹಾಡ ಕೇಳುತ
ಮೈಯ್ಯ ಮರೆತವನ
ಎಚ್ಚರಿಸಿದ್ದು,
ಸುಂಯ್ಯನೆ ಬಂದು,
ಗಕ್ಕನೆ ನಿಂತ
ಸ್ಚೂಟರು..
ಮೇಲೊಬ್ಬ ಜೋಕರು.
ನಕ್ಕನೊಮ್ಮೆ ನನ್ನ ನೋಡಿ
ನಾನು ನಕ್ಕೆ,
ದೇಶಾವರಿ.
ಏನು ಟ್ರಾಫ಼ಿಕ್ಕು ಸಾರ್..!
ಸರ್ಕಾರ ಅದೇನು ಮಾಡತೈತೋ..?
ಅಲ್ಲವೇ..?
ಯೋಜನಾ ಆಯೋಗದಲ್ಲಿ
ನಾನಿಲ್ಲವೇ..?
ಮತ್ತೊಮ್ಮೆ ನಕ್ಕೆ.
ನೀವೂ ಸಾಫ಼್ಟ್ ವೇರಾ..? ಸಾರ್
ಹೌದೆಂದೆ.
ಬರಿದಾಗದ ಬತ್ತಳಿಕೆ,
"ಇನ್ನ ಎಷ್ಟು ವರುಶ ಸಾರ್
ಹಿಂಗೆ..???"
ಜಯಂತಬಾಬು