೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೫೪೧ - ೫೪೫
Anuttamā अनुत्तमा (541)
೫೪೧. ಅನುತ್ತಮಾ
ದೇವಿಗಿಂತ ಉತ್ತಮರಾದವರು ಯಾರೂ ಇಲ್ಲಾ; ಇದು ಬ್ರಹ್ಮದ ವಿಶಿಷ್ಠ ಲಕ್ಷಣವಾಗಿದೆ.
ಈ ಪ್ರಸಂಗವನ್ನು ಶ್ವೇತಾಶ್ವತರ ಉಪನಿಷತ್ತು (೬.೮) ಬಹಳ ಚೆನ್ನಾಗಿ ವಿವರಿಸುತ್ತದೆ, "ಯಾರೂ ಅವನ ಸಮಾನರಿಲ್ಲ, ಯಾರೂ ಅವನಿಗಿಂತ ಶ್ರೇಷ್ಠರೂ ಇಲ್ಲ. ಅವನಿಗೆ ಅತೀ ಉನ್ನತ ಸ್ತರದ ಅನೇಕ ವಿಧವಾದ ಶಕ್ತಿಗಳಿವೆ".
ಭಗವದ್ಗೀತೆಯಲ್ಲಿಯೂ (೧೧.೪೩) ಈ ಪ್ರಸಂಗವನ್ನು ನಾವು ಕಾಣಬಹುದು, "ತ್ರಿಜಗದಲ್ಲಿಯೂ ಅವನ ಸಮಾನರಾರಿಲ್ಲ, ಯಾರು ಅವನನ್ನು ಅಧಿಗಮಿಸಿದವರಿಲ್ಲ, ಶಕ್ತಿಯುತವಾದ ಭಗವಂತನನ್ನು ಹೋಲುವವರಿಲ್ಲ."
ಅನುತ್ತಮಾ ಎಂದರೂ ಸಹ ಬುದ್ಧಿಶಕ್ತಿಯನ್ನು ಇತರರಿಂದ ಪಡೆಯದೇ ಇರುವುದು. ದೇವಿಯು ಬುದ್ಧಿಶಕ್ತಿಯ ಸ್ವರೂಪವೇ ಆಗಿದ್ದಾಳೆ.
Puṇyakīrtiḥ पुण्यकीर्तिः (542)
೫೪೨. ಪುಣ್ಯಕೀರ್ತಿಃ
ದೇವಿಯು ತನ್ನ ಸದ್ಗುಣಗಳಿಗೆ ಹೆಸರಾಗಿದ್ದಾಳೆ. ಆಕೆಯು ತನ್ನ ಭಕ್ತರಿಗೆ ಪ್ರಸಿದ್ಧಿಯನ್ನು ತಂದು ಕೊಡುತ್ತಾಳೆ. ಆಕೆಯ ಸ್ಮರಣೆ ಮಾತ್ರದಿಂದಲೇ ವ್ಯಕ್ತಿಯೊಬ್ಬನು ಪವಿತ್ರನಾಗುತ್ತಾನೆ.
ವಿಷ್ಣು ಸಹಸ್ರನಾಮದ ೬೮೮ನೇ ನಾಮವು ಪುಣ್ಯಕೀರ್ತಿ ಆಗಿದೆ ಅದರ ಅರ್ಥವೇನೆಂದರೆ ಅವನು ತನ್ನ ಭಕ್ತರ ಪಾಪಗಳನ್ನು ಪರಿಹರಿಸುವ ಸಾಮರ್ಥ್ಯವುಳ್ಳವನಾಗಿದ್ದಾನೆ.
Puṇyalabhyā पुण्यलभ्या (543)
೫೪೩. ಪುಣ್ಯಲಭ್ಯಾ
ದೇವಿಯು ಸತ್ಕಾರ್ಯಗಳ ಮೂಲಕ ಹೊಂದಬಲ್ಲವಳಾಗಿದ್ದಾಳೆ. ಸತ್ಕಾರ್ಯಗಳು ಪುಣ್ಯಗಳಾಗಿವೆ. ಯಾರು ಸದ್ಗುಣಿಗಳೋ ಮತ್ತು ಯಾರಿಗೆ ವೇದಗಳ ಜ್ಞಾನವು ಇದೆಯೋ ಅವರು ದೇವಿಯನ್ನು ಹೊಂದಬಲ್ಲರು ಮತ್ತು ಯಾರು ಬಯಕೆಗಳಿಂದ (ಆಸೆಗಳಿಂದ) ಕೂಡಿರುತ್ತಾರೆಯೋ ಅವರು ಆಕೆಯನ್ನು ನೋಡಲಾರರು, ಎಂದು ಹೇಳಲಾಗುತ್ತದೆ.
ಸೌಂದರ್ಯ ಲಹರಿಯ ಮೊದಲನೇ ಶ್ಲೋಕವು ಇದನ್ನು ಹೀಗೆ ವಿವರಿಸುತ್ತದೆ, ನೀನು ಬ್ರಹ್ಮ, ವಿಷ್ಣು ಮತ್ತು ರುದ್ರರಿಂದ ಪೂಜಿಸಲ್ಪಡುತ್ತೀಯ. ಒಬ್ಬನು ಹಿಂದಿನ ಜನ್ಮಗಳಲ್ಲಿ ಸತ್ಕರ್ಮಗಳನ್ನು ಮಾಡಿ ಪುಣ್ಯವನ್ನು ಸಂಪಾದಿಸದ ಹೊರತು ಅವನು ಅದು ಹೇಗೆ ತಾನೇ ನಿನ್ನನ್ನು ಸ್ತುತಿಸಲು ಅಥವಾ ನಮಸ್ಕರಿಸಲು ಯೋಗ್ಯನಾದಾನು?
Puṇya-śravaṇa-kīrtanā पुण्य-श्रवण-कीर्तना (544)
೫೪೪. ಪುಣ್ಯ-ಶ್ರವಣ-ಕೀರ್ತನಾ
ದೇವಿಯನ್ನು ಸ್ತುತಿಸುವ ಲಲಿತಾ ಸಹಸ್ರನಾಮದಂತಹ ಶ್ಲೋಕಗಳನ್ನು ಪಠಿಸುವುದು ಅಥವಾ ಇಂತಹ ಸ್ತುತಿಗಳನ್ನು ಕೇಳುವುದು ಪುಣ್ಯದ ಕೆಲಸಗಳಾಗಿವೆ.
ವಿಷ್ಣು ಸಹಸ್ರನಾಮದ ೯೨೨ನೇ ನಾಮವೂ ಸಹ ಇದೇ ಅರ್ಥವನ್ನು ಕೊಡುತ್ತದೆ. ವಿಷ್ಣು ಸಹಸ್ರನಾಮದ ಉತ್ತರಭಾಗದ (ನಿರ್ಣಾಯಕ ಭಾಗದ) ಎರಡನೇ ಶ್ಲೋಕ ಮತ್ತು ಲಲಿತಾ ಸಹಸ್ರನಾಮದ ಅಂತಿಮ ಭಾಗವು (ಫಲಶ್ರುತಿಯು) ಸಹ ಇದೇ ಅರ್ಥವನ್ನು ಹೊರಹೊಮ್ಮಿಸುತ್ತದೆ.
Pulomajārcitā पुलोमजार्चिता (545)
೫೪೫. ಪುಲೋಮಜಾರ್ಚಿತಾ
ಇಂದ್ರಾಣಿಯು ಇಂದ್ರನ ಹೆಂಡತಿ ಮತ್ತು ಆಕೆಯ ತಂದೆಯ ಹೆಸರು ಪುಲೋಮ. ಇಂದ್ರಾಣಿಯು ಲಲಿತಾಂಬಿಕೆಯ ಮಹಾನ್ ಭಕ್ತಳು. ನೀತಿಯ ಮಹತ್ವ ಮತ್ತು ಲಲಿತಾಂಬಿಕೆಯನ್ನು ಪೂಜಿಸುವ ಮೂಲಕ ಹೊಂದುವ ಫಲಗಳನ್ನು ಕುರಿತು ಒತ್ತಿ ಹೇಳುವುದಕ್ಕಾಗಿ ಈ ನಾಮವನ್ನು ಲಲಿತಾ ಸಹಸ್ರನಾಮದಲ್ಲಿ ಸೇರಿಸಲಾಗಿದೆ. ಈ ನಾಮವು ಪುಲೋಮಜಾ ಅಂದರೆ ಪುಲೋಮನ ಮಗಳಿಂದ (ಇಂದ್ರಾಣಿಯಿಂದ) ದೇವಿಯು ಪೂಜಿಸಲ್ಪಡುತ್ತಾಳೆ ಎನ್ನುವ ಅರ್ಥವನ್ನು ಕೊಡುತ್ತದೆ.
ಭಾಗವತದಲ್ಲಿ (ಅಧ್ಯಾಯ ೬) ಒಂದು ಕಥೆಯಿದೆ, ಅದು ಹೀಗೆ ಸಾಗುತ್ತದೆ. ಪುಲೋಮನೆನ್ನುವ ಒಬ್ಬ ರಾಕ್ಷಸನಿದ್ದ. ಅವನಿಗೆ ಶಚಿ ಎನ್ನುವ ಒಬ್ಬಳು ಮಗಳಿದ್ದಳು. ಇಂದ್ರನು ಪುಲೋಮನನ್ನು ಜಯಿಸಿ ಅವನ ಮಗಳಾದ ಶಚಿಯನ್ನು ಮದುವೆಯಾದ. ಹೀಗೆ ಶಚಿಯು ಇಂದ್ರಾಣಿಯಾದಳು. ಇಂದ್ರನು ಇನ್ನೊಬ್ಬ ರಾಕ್ಷಸನಾದ ವೃದ್ದಾಸುರನ ಸ್ನೇಹವನ್ನು ಸಂಪಾದಿಸಿದ. ವೃದ್ಧಾಸುರನ ತಂದೆಯಾದ ದ್ವಷ್ಟನು ತನ್ನ ಮಗನಿಗೆ ಇಂದ್ರನ ಸಹವಾಸ ಒಳ್ಳೆಯದಲ್ಲವೆಂದು ಎಚ್ಚರಿಸಿದ. ಆದರೆ ದುರ್ದೈವ ವಶಾತ್ ತನ್ನ ತಂದೆಯ ಸಲಹೆಯನ್ನು ವೃದ್ಧಾಸುರನು ಕೇಳಲಿಲ್ಲ. ಒಂದು ಸೂಕ್ತ ಸಮಯದಲ್ಲಿ ಇಂದ್ರನು ಲಲಿತಾಂಬಿಕೆ, ವಿಷ್ಣು ಮತ್ತು ಇತರರ ಸಹಾಯದೊಂದಿಗೆ ವೃದ್ಧಾಸುರನನ್ನು ಹತ್ಯೆಗೈದ. ಇಂದ್ರನು ತನ್ನ ಸ್ನೇಹಿತನನ್ನು ಮೋಸದಿಂದ ಕೊಂದಿದ್ದರಿಂದ ದ್ವಷ್ಟನ ಶಾಪದ ಫಲವಾಗಿ ಅವನಿಗೆ ಬ್ರಹ್ಮಹತ್ಯಾದೋಷವು ಉಂಟಾಯಿತು. ಈ ದೋಷದಿಂದ ಮುಕ್ತವಾಗಲು ಇಂದ್ರನ ಸಹಾಯಕ್ಕೆ ಯಾರೂ ಬರಲಿಲ್ಲ. ಯಾವಾಗ ಲಲಿತಾಂಬಿಕೆ ಮತ್ತು ವಿಷ್ಣು ಇವರುಗಳು ಇಂದ್ರನಿಗೆ ಸಹಾಯಕ್ಕೆ ನಿಂತಿದ್ದರೋ ಆವಾಗ ಎಲ್ಲರೂ ಅವನ ಸಹಾಯಕ್ಕೆ ಬಂದಿದ್ದರು ಆದರೆ ಯಾವಾಗ ಇವರಿಬ್ಬರೂ ಇಂದ್ರನಿಗೆ ಸಹಾಯ ಮಾಡಲು ನಿರಾಕರಿಸಿದರೋ ಆಗ ಯಾರೂ ಇಂದ್ರನ ಸಹಾಯಕ್ಕಾಗಿ ಮುಂದೆ ಬರಲಿಲ್ಲ. ಇದರ ಪರಿಣಾಮವಾಗಿ ಇಂದ್ರನು ತನ್ನ ಸಾಮ್ರಾಜ್ಯವನ್ನು ಬಿಟ್ಟು ಭೂಲೋಕಕ್ಕೆ ಬಂದು ಒಂದು ತಾವರೆಯ ಕಾಂಡದಲ್ಲಿ ವಾಸಿಸಲು ಪ್ರಾರಂಭಿಸಿದ. ಅವನು ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಇಂದ್ರನ ಇಲ್ಲದಿರುವಿಕೆಯಿಂದ ಪ್ರಪಂಚದಲ್ಲಿ ಅಲ್ಲೋಲಕಲ್ಲೋಲವುಂಟಾಯಿತು. ಮಳೆಗಳು ಇಲ್ಲವಾಗಿ ತಕ್ಷಣವೇ ಭೀಕರವಾದ ಕ್ಷಾಮವುಂಟಾಯಿತು. ಎಲ್ಲಾ ದೇವಾನು ದೇವತೆಗಳು, ಋಷಿಗಳು ಸೇರಿಕೊಂಡು ಕ್ಷಾಮವನ್ನು ಹೋಗಲಾಡಿಸಲು ನಹುಷನೆಂಬ ಒಬ್ಬ ರಾಕ್ಷಸನನ್ನು ಇಂದ್ರನ ಸ್ಥಾನದಲ್ಲಿ ಕುಳ್ಳಿರಿಸಿದರು. ಇಂದ್ರಾಣಿಯ ಸೌಂದರ್ಯಕ್ಕೆ ಮರುಳಾದ ನಹುಷನು ಅವಳನ್ನು ಪಡೆಯ ಬಯಸಿದ. ಇದನ್ನು ಅರಿತ ಇಂದ್ರಾಣಿಯ ಬ್ರಹ್ಮನಲ್ಲಿಗೆ ಹೋದಳು, ಅವನು ಇವಳ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕೊಡದಾದ. ಆಮೇಲೆ ದೇವತೆಗಳ ಸಮೂಹದೊಂದಿಗೆ ಇಂದ್ರಾಣಿಯು ಅದರ ಪರಿಹಾರಕ್ಕಾಗಿ ವಿಷ್ಣುವಿನ ಬಳಿಗೆ ಹೋದಳು. ಆಗ ವಿಷ್ಣುವು ಅವಳಿಗೆ ಪರಾಶಕ್ತಿಯನ್ನು ಪೂಜಿಸುವಂತೆ ಸಲಹೆಯನ್ನಿತ್ತ. ಆಕೆಯ ಕೃಪೆಯಿಂದ ಇಂದ್ರಾಣಿಗೆ ಇಂದ್ರನು ಸಿಕ್ಕನು. ಇಂದ್ರನ ಸ್ಥಾನವನ್ನಲಂಕರಿಸಿರುವ ನಹುಷನಿಂದಾಗಿ ತನ್ನ ಪಾತಿವ್ರತ್ಯಕ್ಕೆ ಭಂಗವುಂಟಾಗಬಹುದೆಂದು ಇಂದ್ರಾಣಿಯು ತನ್ನ ಕಷ್ಟವನ್ನು ಇಂದ್ರನಲ್ಲಿ ಭಿನ್ನವಿಸಿಕೊಂಡಳು. ಆಗ ಇಂದ್ರನು ಈಗ ಸಮಯವು ಪ್ರಶಸ್ತವಾಗದೇ ಅವಳೊಬ್ಬಳನ್ನೇ ದೇವಲೋಕಕ್ಕೆ ಹಿಂದಿರುಗೆಂದು ತಿಳಿಸಿದ. ಮತ್ತು ಇಂದ್ರನು ಅವಳಿಗೆ ಒಬ್ಬ ಸ್ತ್ರೀಯು ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಳ್ಳಬೇಕಾದರೆ ಬೇರೆ ಯಾರೂ ಅವಳಿಗೆ ಸಹಾಯ ಮಾಡಲಾರರು ಆದರೆ ಅದು ಆಕೆಯ ಸ್ವಂತ ಸಂಕಲ್ಪ ಶಕ್ತಿ ಮತ್ತು ದೃಢ ನಿರ್ಧಾರಗಳಿಂದ ಮಾತ್ರವೇ ಅದು ಸಾಧ್ಯ ಎಂದು ಹೇಳುತ್ತಾನೆ. ಶಚೀದೇವಿಯು ಇಂದ್ರಲೋಕಕ್ಕೆ ಹಿಂದಿರುಗಿ ನಹುಷನಿಗೆ, ಅವನು ಸಪ್ತರ್ಷಿಗಳಿಂದ ಹೊರಲ್ಪಟ್ಟ ಮೇನೆಯೊಳಗೆ ಕುಳಿತುಕೊಂಡು ಬಂದರೆ ಮಾತ್ರವೇ ಅವನ ಬಯಕೆಯನ್ನು ಈಡೇರಿಸುವುದಾಗಿ ಹೇಳಿದಳು. ಅದರಂತೆ ನಹುಷನು ಸಪ್ತ ಋಷಿಗಳಿಗೆ ಹೇಳಿಕಳುಹಿಸಿದ. ಸಪ್ತರ್ಷಿಗಳು ಅವನ ಪಲ್ಲಕ್ಕಿಯನ್ನು ಹೊರಲು ಒಪ್ಪಿದರು ಏಕೆಂದರೆ ಅವರಿಗೆ ನಹುಷನಿಗೆ ಏನು ಕಾದಿದೆ ಎನ್ನುವುದು ತಿಳಿದಿತ್ತು. ಆ ಏಳು ಋಷಿಗಳಲ್ಲಿ ಅಗಸ್ತ್ಯ ಮಹರ್ಷಿಯು ಎಲ್ಲರಿಗಿಂತಲೂ ಕುಳ್ಳನಾಗಿದ್ದ ಮತ್ತು ಅವನು ಪಲ್ಲಕ್ಕಿಯನ್ನು ಹೊತ್ತು ಸಾಗಿದಾಗ ಅದು ಕುಲುಕುವುದಲ್ಲದೆ ಅವನೆಡೆಗೆ ಬಾಗುತ್ತಿತ್ತು. ಇದರಿಂದ ಕುಪಿತಗೊಂಡ ನಹುಷನು ಅಗಸ್ತ್ಯನನ್ನು ಹೊಡೆದದ್ದಲ್ಲದೆ ಅವನ ತಲೆಯ ಮೇಲೆ ತನ್ನ ಕಾಲನ್ನಿರಿಸಿದ. ಅಗಸ್ತ್ಯರು ಬಹಳ ಶಕ್ತಿಶಾಲಿಗಳಾದ ಋಷಿಗಳು, ಅವರು ಒಮ್ಮೆ ಎಲ್ಲಾ ಸಾಗರಗಳಲ್ಲಿನ ನೀರನ್ನು ಆಪೋಶನ ತೆಗೆದುಕೊಂಡಿದ್ದರು. ಅಗಸ್ತ್ಯರು ನಹುಷನನ್ನು ಸರ್ಪದ ರೂಪವನ್ನು ಪಡೆ ಎಂದು ಶಪಿಸಿದರು, ಕೂಡಲೇ ನಹುಷನು ಸರ್ಪದ ದೇಹದೊಂದಿಗೆ ಕೆಳಗೆ ಒಂದು ಅಡವಿಯಲ್ಲಿ ಬಿದ್ದನು. ಇದನ್ನು ತಿಳಿದ ಇಂದ್ರನು ತನ್ನ ರಾಜಧಾನಿಗೆ ಹಿಂದಿರುಗಿದ. ಹೀಗೆ, ಇಂದ್ರನು ತನ್ನ ಸಿಂಹಾಸನವನ್ನು ಲಲಿತಾಂಬಿಕೆಯ ಕೃಪೆಯಿಂದ ಮತ್ತೆ ಪಡೆದನು.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 541-545 http://www.manblunder.com/2010/01/lalitha-sahasranamam-meaning-541-545.htmlಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ
ಶ್ರೀಧರರೆ, "೧೨೮. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ದ. ಹೊಸದಾಗಿ ಏನೂ ಫಾರ್ಮಾಟ್ ತೊಂದರೆ ಆಗಲಾರದೆಂಬ ಭರವಸೆಯೊಂದಿಗೆ ಹಾಕುತ್ತಿದ್ದೇನೆ - ನೋಡೋಣ :-)
ಲಲಿತಾ ಸಹಸ್ರನಾಮ ೫೪೧ - ೫೪೫
_________________________________________
೫೪೧. ಅನುತ್ತಮಾ
ಬುದ್ಧಿಶಕ್ತಿ ಸ್ವರೂಪವೆ ಲಲಿತೆ, ದೇವಿಯಿಂದಲೆ ಜನ್ಮ ಪಡೆಯುತೆ
ಬ್ರಹ್ಮ ಮೀರಿದ ಸರ್ವೋತ್ತಮರು, ಬೇರಾರಿಲ್ಲ ಸತ್ಯವ ಸಾರುತೆ
ಸಮಾನರಿರದ ಮೀರಲಾಗದ, ಉನ್ನತ ಸ್ತರ ಅನುತ್ತಮಾ ಕೀರ್ತಿ
ತ್ರಿಜಗದೆ ಹೋಲಿಕೆಗತೀತ, ಭಗವಂತನನಧಿಗಮಿಸಲಾಗದ ಶಕ್ತಿ ||
೫೪೨. ಪುಣ್ಯಕೀರ್ತಿಃ
ಭಕ್ತರ ಪಾಪ ಪರಿಹರಿಸೊ ಸಮರ್ಥೆ, ದೇವಿ ಲಲಿತಾ ಮೂರ್ತಿ
ಸದ್ಗುಣಗಳಿಗೆ ಹೆಸರಾಂತ ಮಾತೆ, ಪ್ರಿಯ ಭಕ್ತಗೆ ಪುಣ್ಯಕೀರ್ತಿಃ
ಸ್ಮರಣೆ ಮಾತ್ರದಿಂದಲೆ ಪವಿತ್ರನಾಗಿಸುತ ಸಾಧಕನಿಗೆ ಕರುಣೆ
ಸಿದ್ದಿ, ಪ್ರಸಿದ್ದಿ, ಸಮೃದ್ಧಿಗಳ ಪ್ರಧಾಯಿಸಿಹ ಜಗನ್ಮಾತೆ ಹೊಣೆ!
೫೪೩. ಪುಣ್ಯಲಭ್ಯಾ
ನಿನ್ನ ಸ್ತುತಿಸಿ ನಮಿಸುವ ಯೋಗ್ಯತೆ, ದೇವಿ ಜನ್ಮಾಂತರ ಸತ್ಕರ್ಮ ಪುಣ್ಯ
ಬ್ರಹ್ಮ ವಿಷ್ಣು ರುದ್ರರುಗಳಿಂದಲು ಪೂಜಿತೆ, ನಿನ್ನ ಮೀರಿ ಯಾರಿಹರು ಗಣ್ಯ
ಬರಿ ಬಯಕೆ ಕಾಮನೆಯಿಂದಿಹ ಜೀವಿ, ಕಾಣಲಸಾಧ್ಯಾ ನಿನ್ನ ಪುಣ್ಯಲಭ್ಯಾ
ಸದ್ಗುಣ ವೇದಜ್ಞಾನ ಪುಣ್ಯ ಸತ್ಕಾರ್ಯ ನಿರತರಿಗಷ್ಟೆ, ದೊರಕುವ ಸೌಭಾಗ್ಯ ||
೫೪೪. ಪುಣ್ಯ-ಶ್ರವಣ-ಕೀರ್ತನಾ
ಪುಣ್ಯವ ಗಳಿಸಲದೆಷ್ಟೆಲ್ಲಾ ದಾರಿ, ಲಲಿತಾ ನಾಮ ಸದಾ ಶ್ರವಣಾ
ಸ್ತುತಿ ಮಾತ್ರದಲೆ ಗಳಿಸುತೆ ಕೃಪೆ, ಗಳಿಸೆ ಪುಣ್ಯ ಶ್ರವಣ ಕೀರ್ತನಾ
ಪಠನ, ಸ್ಮರಣದಿಂದಲೆ ಪಡೆಯುತ ಭಾಗ್ಯಾ, ದೇವಿ ಕೃಪೆಗೆ ಭಾಜನ
ಸಹಸ್ರ ನಾಮ ನಿರ್ಣಾಯಕ ಫಲಶೃತಿ, ಅಂತಿಮ ಫಲ ಸುಖೀಜನ ||
೫೪೫. ಪುಲೋಮಜಾರ್ಚಿತಾ
ಪುಲೋಮ ಪುತ್ರಿ ಶಚಿ ಇಂದ್ರಾಣಿ, ಲಲಿತಾಂಬಿಕೆ ಆರಾಧಕಿ ಮುಕ್ತ
ಬ್ರಹ್ಮಹತ್ಯಾದೋಷ ಬಳಲಿದ ಪತಿ, ಕಮಲಕಾಂಡದೆ ಅವಿತಹೊತ್ತ
ಕಾಮ ಪಿಪಾಸು ನಹುಷನ, ನಿವಾರಿಸೆ ಸಪ್ತರ್ಷಿ ಪಲ್ಲಕ್ಕಿ ಹೊರಿಸುತ
ಸರ್ಪ ರೂಪ ಶಾಪಪ್ರಧಾನ, ಅಗಸ್ತ್ಯ ಮುಖೇನ ಪುಲೋಮಜಾರ್ಚಿತ ||
- ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
In reply to ಉ: ೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ by nageshamysore
ಉ: ೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ
ನಾಗೇಶರೆ,
ನಿಮ್ಮ ನಿರಂತರ ಕಾವ್ಯ ಸೇವೆಗೆ ನನ್ನ ನಮನಗಳು. ಬೇರೆ ಕಾರ್ಯಗಳಲ್ಲಿ ನಿರತನಾದುದರಿಂದ ನಿಮ್ಮ ಕವನಗಳನ್ನು ಓದಿ ಪ್ರತಿಕ್ರಿಯಿಸಲಾಗಿಲ್ಲ. ಒಂದೆರಡು ದಿನಗಳಲ್ಲಿ ಇವುಗಳನ್ನು ಓದಿ ಪರಿಷ್ಕರಿಸುತ್ತೇನೆ. ಸಿಂಗಪುರದಲ್ಲಿದ್ದೂ ನಮ್ಮ ಹಬ್ಬ ಹರಿದಿನಗಳಿಗೆ ಸೂಕ್ತವಾದ ಕವನಗಳನ್ನು ಹೊಸೆದು ಪ್ರಕಟಿಸುತ್ತಿರುವ ನಿಮಗೆ ಅಭಿನಂದನೆಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ by makara
ಉ: ೧೨೮. ಲಲಿತಾ ಸಹಸ್ರನಾಮ ೫೪೧ರಿಂದ ೫೪೫ನೇ ನಾಮಗಳ ವಿವರಣೆ
ಶ್ರೀಧರರೆ, ನಿಮ್ಮ ಬರಹದ ಓಘ ಗೊತ್ತಿರುವವರಿಗೆ, ನಿಮ್ಮ ಬಿಡುವಿಲ್ಲದ ಅಡಚಣೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಬಿಡಿ - ಅಷ್ಟೊಂದು ಸತ್ವಪೂರ್ಣ ಅನುವಾದಕ್ಕೆ ಸಮಯ ಹೇಗೆ ಮಾಡಿಕೊಳ್ಳುವಿರೊ, ಅದೆ ಸೋಜಿಗ. ನೀವು ತುಸು ವಿರಾಮದಲಿದ್ದಾ ಹೊತ್ತಿನಲ್ಲಿ ಪಾರ್ಥರ ರಸಗವಳ ವೇಗವಾಗಿ ಓಡುತ್ತಿತ್ತು. ನೀವು ನಿಮ್ಮೆಲ್ಲ ಕೆಲಸ ಮುಗಿಸಿ ನಿಧಾನವಾಗಿ ಲಹರಿ ಹಿಡಿಯಬಹುದು - ಆ ಚಿಂತೆ ಬಿಡಿ. ನನ್ನ ಕವನಕ್ಕೂ ನಿಮ್ಮ ಬರಹಗಳೆ ಮೂಲ ಸರಕಲ್ಲವೆ :-)
ಅಂದ ಹಾಗೆ ನಿಮ್ಮ ಪ್ರತಿಕ್ರಿಯೆ ನೋಡಲೆಂದು ತೆರೆದರೆ ಪ್ರತಿಕ್ರಿಯೆಯ ಫಾರ್ಮಾಟಿಂಗ್ ಕೂಡ ಸರಿ ಹೋಗಿದೆ ! ಸಂಪದ ಕಾರ್ಯನಿರ್ವಾಹಕ ತಂಡಕ್ಕೆ ಧನ್ಯವಾದಗಳು !