೧೩೩. ಲಲಿತಾ ಸಹಸ್ರನಾಮ ೫೬೩ರಿಂದ ೫೭೧ನೇ ನಾಮಗಳ ವಿವರಣೆ

೧೩೩. ಲಲಿತಾ ಸಹಸ್ರನಾಮ ೫೬೩ರಿಂದ ೫೭೧ನೇ ನಾಮಗಳ ವಿವರಣೆ

ಚಿತ್ರ

ಶಿವ ತಾಂಡವ ಚಿತ್ರಕೃಪೆ: ಗೂಗಲ್ 

                                                                                          ಲಲಿತಾ ಸಹಸ್ರನಾಮ ೫೬೩ - ೫೭೧

Mukhyā मुख्या (563)

೫೬೩. ಮುಖ್ಯಾ

           ದೇವಿಯು ಈ ಪ್ರಪಂಚದ ಮೊದಲಿಗಳಾಗಿದ್ದಾಳೆ. ಮುಖ್ಯಾ ಎಂದರೆ ಪ್ರಮುಖವಾದದ್ದು. ಆಕೆಯು ಎಲ್ಲಾ ದೇವ-ದೇವಿಯರಿಗಿಂತ ಅಧಿಕಾರಯುತವಾಗಿರುವವಳು. ತೈತ್ತರೀಯ ಉಪನಿಷತ್ತು (೩.೧೦.೬),  "ನಾನು ಏನಾದರೂ ಹುಟ್ಟುವುದಕ್ಕೆ ಮುಂಚೆ ಜನಿಸಿದವನು. ನಾನು ಎಲ್ಲಾ ದೇವ ಮತ್ತು ದೇವಿಯರಿಗಿಂತ ಮುಂಚೆ ಜನಿಸಿದವನು", ಎಂದು ಹೇಳುತ್ತದೆ. ಈ ನಾಮವು ದೇವಿಯು ಎಲ್ಲಾ ಸೃಷ್ಟಿಗಳಲ್ಲಿ ಪ್ರಥಮಳೆನ್ನುವುದಷ್ಟೇ ಅಲ್ಲ, ಆಕೆಯು ಸೃಷ್ಟಿಯ ಭಾಗವಾಗಿಯೂ ಇದ್ದಾಳೆ ಮತ್ತು ಆಕೆಯು ಎಲ್ಲಾ ದೇವ-ದೇವಿಯರಿಗೆ ಹೋಲಿಸಿದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಾಳೆ. 

Mṛḍānī मृडानी (564)

೫೬೪. ಮೃಡಾನೀ

           ಮೃಡ ಎಂದರೆ ಶಿವ ಮತ್ತು ಮೃಡನ ಸಂಗಾತಿಯು ಮೃಡಾನೀ ಆಗಿದ್ದಾಳೆ. ಮೃಡಾನೀ ಅಂದರೆ ಸಂತೋಷವನ್ನು ಉಂಟು ಮಾಡುವವಳು ಎನ್ನುವ ಅರ್ಥವನ್ನೂ ಕೊಡುತ್ತದೆ, ಆ ಸಂತೋಷವು ಶಿವನ ರೂಪವಾದ ವಿಮರ್ಶ ಅಂದರೆ ಶಕ್ತಿ ರೂಪವು ಕೊಡುತ್ತದೆ. ನಾಮ ೨೧೧ ‘ಮೃಡಪ್ರಿಯಾ’ ಆಗಿದೆ.

Mitra-rūpiṇī मित्र-रूपिणी (565)

೫೬೫. ಮಿತ್ರ-ರೂಪಿಣೀ

          ಮಿತ್ರ ಎಂದರೆ ಸ್ನೇಹಿತ. ಸೂರ್ಯನನ್ನು ಈ ವಿಶ್ವದ ಸ್ನೇಹಿತನೆಂದು ಪರಿಗಣಿಸುತ್ತಾರೆ, ಏಕೆಂದರೆ ಅವನು ವಿಶ್ವದ ಸುಸ್ಥಿರತೆಗೆ ಕಾರಣನಾಗಿದ್ದಾನೆ. ದೇವಿಯು ಈ ಸೂರ್ಯನ ರೂಪದಲ್ಲಿದ್ದಾಳೆ. ಸೂರ್ಯನು ಎಲ್ಲಾ ಜೀವರಾಶಿಗಳ ಪರಮಾಪ್ತ ಸ್ನೇಹಿತ. ಶ್ರೀ ವಿದ್ಯಾ ಪೂಜಾ ಪದ್ಧತಿಯಲ್ಲಿ ಶಿವನು ಅಗ್ನಿಯಿಂದ ಪ್ರತಿನಿಧಿಸಲ್ಪಟ್ಟರೆ, ಶಕ್ತಿಯು ಚಂದ್ರನ ಮೂಲಕ ಪ್ರತಿನಿಧಿಸಲ್ಪಡುತ್ತಾಳೆ ಮತ್ತು ಶಿವ-ಶಕ್ತಿಯರ ಐಕ್ಯ ಸ್ವರೂಪವು ಸೂರ್ಯನಿಂದ ಪ್ರತಿನಿಧಿಸಲ್ಪಡುತ್ತದೆ. ಈ ನಾಮದ ಇನ್ನೊಂದು ಅರ್ಥವು ದೇವಿಯು ಎಲ್ಲರಿಗೂ ಸ್ನೇಹಿತಳಂತೆ ಆಪ್ತಳಾಗಿದ್ದಾಳೆ ಮತ್ತು ಯಾರು ಅವಳಿಗಾಗಿ ಹಾತೊರೆಯುತ್ತಾರೆಯೋ ಅವರೆಲ್ಲರಿಗೂ ಆಕೆಯು ಸುಲಭವಾಗಿ ಸಿಗುತ್ತಾಳೆ, ಎನ್ನುವುದಾಗಿದೆ.

Nitya-tṛptā नित्य-तृप्ता (566)

೫೬೬. ನಿತ್ಯ-ತೃಪ್ತಾ

          ದೇವಿಯು ನಿರಂತರವಾಗಿ ತೃಪ್ತಿಯಿಂದಿರುತ್ತಾಳೆ, ಏಕೆಂದರೆ ಅವಳಿಗೆ ಯಾವುದೇ ವಿಧವಾದ ಅವಶ್ಯಕತೆಗಳಿಲ್ಲ. ಅವಶ್ಯಕತೆಯ ಇಲ್ಲದಿರುವಿಕೆಯು ಪರಬ್ರಹ್ಮದ ಒಂದು ಗುಣವಾಗಿದೆ. ಅದನ್ನು ಹೀಗೆ ಹೇಳಲಾಗುತ್ತದೆ, "ಅದು ಅನಂತವಾದದ್ದು ಮತ್ತು ಇದು ಅನಂತವಾದದ್ದು. ಅನಂತವು ಅನಂತದಿಂದಲೇ ಹೊರಹೊಮ್ಮುತ್ತದೆ, ಅನಂತದಿಂದ ಅನಂತವನ್ನು ಕಳೆದರೆ, ಅದು ಅನಂತವಾಗಿಯೇ ಉಳಿಯುತ್ತದೆ." ದೇವಿಯು ಅನಂತಳಾಗಿರುವುದರಿಂದ, ಆಕೆಯು ನಿತ್ಯ ತೃಪ್ತಳಾಗಿದ್ದಾಳೆ.

          ೮೧೫ನೇ ನಾಮವು ಅನಿತ್ಯ-ತೃಪ್ತಾ (ಇದು ಎರಡು ಋಣಾತ್ಮಕ ಅಂಶಗಳು ಒಂದು ಧನಾತ್ಮಕ ಅಂಶವನ್ನು ಸೂಚಿಸುತ್ತವೆ ಎನ್ನುವುದಕ್ಕೆ ಮಾದರಿ ಉದಾಹರಣೆಯಾಗಿದೆ), ಅಂದರೆ ಆಕೆಯು ಅನಿತ್ಯ ವಸ್ತುಗಳನ್ನು ಅರ್ಪಿಸಿದರೂ ಸಹ ತೃಪ್ತಿಯನ್ನು ಹೊಂದುತ್ತಾಳೆ. ಈ ವಿಶ್ಲೇಷಣೆಯಿಂದ ಈಗಿನ ನಾಮವನ್ನು ಹೀಗೆ ವಿವರಿಸಬಹುದು, ’ದೇವಿಯು ನಿತ್ಯವಾದ ವಿನಾಶವಿಲ್ಲದ ಆಹುತಿಗಳಿಂದ ಅಂದರೆ ಆತ್ಮ ಸಮರ್ಪಣೆಯಿಂದ ತೃಪ್ತಿಯನ್ನು ಹೊಂದುತ್ತಾಳೆ.’

Bhakta-nidhiḥ भक्त-निधिः (567)

೫೬೭. ಭಕ್ತ-ನಿಧಿಃ

          ದೇವಿಯು ತನ್ನ ಭಕ್ತರಿಗೆ ನಿಧಿಯಿರುವ ಸ್ಥಳವಾಗಿದ್ದಾಳೆ. ಯಾವಾಗ ತನ್ನ ಭಕ್ತರು ನಿಧಿಯನ್ನು ಕೋರುತ್ತಾರೆಯೋ (ವಾಂಛಿತಾರ್ಥ ಪ್ರದಾಯನೀ ನಾಮ ೯೮೯) ಆಗ ಅವರೊಂದಿಗೆ ಆಕೆಯು ತನ್ನ ಈ ಸಂಪತ್ತನ್ನು ಹಂಚಿಕೊಳ್ಳುತ್ತಾಳೆ. 

Niyantrī नियन्त्री (568)

೫೬೮. ನಿಯಂತ್ರೀ

           ದೇವಿಯು ಈ ಪ್ರಪಂಚಕ್ಕೆ ಮಾರ್ಗದರ್ಶಿಯಾಗಿದ್ದಾಳೆ. ದೇವಿಯು ಈ ಪ್ರಪಂಚವನ್ನು ಪಾಲಿಸುವುದರಿಂದ, ಆಕೆಯನ್ನು ಮಾರ್ಗದರ್ಶಕಳೆಂದು ಈ ನಾಮದಲ್ಲಿ ಸಂಭೋದಿಸಲಾಗಿದೆ.

Nikhileśvarī निखिलेश्वरी (569)

೫೬೯. ನಿಖಿಲೇಶ್ವರೀ

          ಇದು ಹಿಂದಿನ ನಾಮದ ವಿಸ್ತರಣೆಯಾಗಿದೆ, ಏಕೆಂದರೆ ಈ ವಿಶ್ವದ ಏಕೈಕ ಮಾರ್ಗದರ್ಶಿಯಾಗಿರುವ ಬ್ರಹ್ಮದ ಗುಣವನ್ನು ಹೊಂದಿರುವ ದೇವಿಯು ಪರಮೋನ್ನತ ಪರಿಪಾಲಕಿಯ ಸ್ಥಾನವನ್ನು ಅಲಂಕರಿಸಿದ್ದಾಳೆ ಎನ್ನುವುದನ್ನು ಈ ನಾಮದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ನಿಖಿಲ ಎಂದರೆ ಸಂಪೂರ್ಣ ಅಥವಾ ಸರ್ವವೂ ಎಂದರ್ಥ.

Maitryadi-vāsanā-labhyā मैत्र्यदि-वासना-लभ्या (570)

೫೭೦. ಮೈತ್ರ್ಯಾದಿ-ವಾಸನಾ-ಲಭ್ಯಾ

          ದೇವಿಯು ಸ್ನೇಹ, ಕರುಣೆ ಮುಂತಾದ ಗುಣಗಳಿಂದ ಹೊಂದಲ್ಪಡುತ್ತಾಳೆ.

          ಪಾತಂಜಲಿಯ ಯೋಗಸೂತ್ರವು (೧.೩೩) ಹೀಗೆ ಹೇಳುತ್ತದೆ, "ಸುಖಿಗಳಲ್ಲಿ ಮೈತ್ರಿಯನ್ನೂ, ದುಃಖಿಗಳಲ್ಲಿ ಕರುಣೆಯನ್ನೂ, ಪುಣ್ಯವಂತರಲ್ಲಿ ಹರ್ಷವನ್ನೂ, ಪಾಪಿಗಳಲ್ಲಿ ಉಪೇಕ್ಷೆಯನ್ನೂ ಹೊಂದುವುದರ ಮೂಲಕ ಚಿತ್ತಶಾಂತಿಯನ್ನು ಹೊಂದಬಹುದು." ಪರಿಪೂರ್ಣತೆಯನ್ನು ಹೊಂದಲು ಒಬ್ಬನು ಕೆಟ್ಟ ಆಲೋಚನೆಗಳನ್ನು ಬಿಡಬೇಕು. ಒಬ್ಬರು ಇನ್ನೊಬ್ಬನ ದುಃಖವನ್ನು ತಿಳಿದುಕೊಂಡು ತಾನು ಅದೃಷ್ಟವಂತನೆಂದು ಭಾವಿಸಬಾರದು. ಇನ್ನೊಬ್ಬನ ಐಶ್ವರ್ಯವನ್ನು ನೋಡಿ ಒಬ್ಬನು ಹೊಟ್ಟೆಕಿಚ್ಚು ಪಡಬಾರದು. ಯಾರಾದರೂ ದುಃಖ ಅಥವಾ ನೋವುಗಳನ್ನು ಅನುಭವಿಸುತ್ತಿದ್ದರೆ ಅದರಿಂದ ಹೊರಬರಲು ಅವರಿಗೆ ಸಹಾಯವನ್ನು ಒದಗಿಸಬೇಕು. ದ್ವೇಷವನ್ನು ಪ್ರೇಮವಾಗಿ ಮಾರ್ಪಡಿಸಿಕೊಳ್ಳುವುದು, ದುಃಖವನ್ನು ಸಂತೋಷವಾಗಿಸುವುದು, ಮುಂತಾದವುಗಳು ಪರಿಪೂರ್ಣರಾಗುವಲ್ಲಿನ ಕೆಲವೊಂದು ವಿಧಾನಗಳು. ಋಣಾತ್ಮಕ ಪರಿಣಾಮಗಳಿಗೆ ವ್ಯತಿರಿಕ್ತವಾಗಿ ಧನಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರ ಮೂಲಕ ಮನಸ್ಸು ಪರಿಪೂರ್ಣತೆಯನ್ನು ಹೊಂದುತ್ತದೆ ಮತ್ತು ಇದು ನಮ್ಮನ್ನು ಸಮಾಧಿ ಸ್ಥಿತಿಯೆಡೆಗೆ ಕರೆದೊಯ್ಯುತ್ತದೆ. ಅಂತಹ ಭಕ್ತರು ಸುಲಭವಾಗಿ ಪರಮಾನಂದ ಸ್ಥಿತಿಯನ್ನು ತಲುಪಬಹುದು ಮತ್ತು ಅವರು ಬ್ರಹ್ಮದೊಂದಿಗೆ ಸಾಯುಜ್ಯ ಹೊಂದಬಹುದು ಅಥವಾ ಕೈವಲ್ಯವನ್ನು ಪಡೆಯಬಹುದು. ಈ ನಾಮವು ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ದೇವಿಯನ್ನು ಹೊಂದಬಹುದು ಎಂದು ಹೇಳುತ್ತದೆ. ಆಕೆಯು ಧನಾತ್ಮಕ ವಾಸನೆಗಳು ಅಥವಾ ಗುರುತುಗಳ ಮೂಲಕ ಹೊಂದಲ್ಪಡುತ್ತಾಳೆ.

Mahā-pralaya-sakṣiṇī महा-प्रलय-सक्षिणी (571)

೫೭೧. ಮಹಾ-ಪ್ರಲಯ-ಸಾಕ್ಷಿಣೀ

            ಮಹಾ-ಪ್ರಳಯವು ಸಂಪೂರ್ಣ ವಿನಾಶವಾಗಿದೆ; ಇದನ್ನಾಗಲೇ ಮಹೇಶ್ವರ-ಮಹಾಕಲ್ಪ-ಮಹಾ-ತಾಂಡವ-ಸಾಕ್ಷಿಣೀ ಎನ್ನುವ ೨೩೨ನೇ ನಾಮದಲ್ಲಿ ಚರ್ಚಿಸಲಾಗಿದೆ. ಯಾವಾಗ ವಿನಾಶವು ಮೊದಲಾಗುತ್ತದೆಯೋ ಆಗ ಸಂಪೂರ್ಣ ವಿಶ್ವವು ಶಿವನೊಳಗೆ ಲಯವಾಗುತ್ತದೆ. ಇದು ಸೃಷ್ಟಿಕ್ರಿಯೆಯ ನೇರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ. ಸೃಷ್ಟಿ ಕ್ರಿಯೆಯ ಸಮಯದಲ್ಲಿ ಆಕಾಶವು ಬ್ರಹ್ಮದಿಂದ ಆವಿರ್ಭಾವ ಹೊಂದಿತು, ಆಕಾಶದ ಮೂಲಕ ವಾಯುವು ಆವಿರ್ಭವಿಸಿತು, ಹೀಗೆ ಸಾಗುತ್ತದೆ. ಅದೇ ವಿನಾಶಕಾಲದಲ್ಲಿ, ವಾಯುವು ಆಕಾಶದಲ್ಲಿ ಲಯವಾಗಿ ಹೋಗುತ್ತದೆ ಮತ್ತು ಆಕಾಶವು ಶಿವನೊಳಗೆ ಕರಗಿ ಹೋಗುತ್ತದೆ. ಈ ಪ್ರಕ್ರಿಯೆಯನ್ನು ‘ಸಂಕುಚನ’ ಎನ್ನುತ್ತಾರೆ ಸೃಷ್ಟಿಯ ಸಮಯದಲ್ಲಿ ಜರುಗುವ ‘ವಿಕಸನ’ ಕ್ರಿಯೆಗೆ ವಿರೋಧವಾಗಿ.

           ಈ ನಾಮವು ದೇವಿಯು ಇಂತಹ ಮಹಾಪ್ರಳಯಕ್ಕೆ ಏಕೈಕ ಸಾಕ್ಷೀಭೂತಳಾಗಿದ್ದಾಳೆ ಎನ್ನುತ್ತದೆ. ಇಂತಹ ಮಹಾವಿನಾಶವು ಪರಶಿವನ ಆಜ್ಞೆಯನ್ನು ಅನಾವರಣಗೊಳಿಸುತ್ತದೆ. ಆ ಸಮಯದಲ್ಲಿ ಶಿವನು ತನ್ನ ಪ್ರಸಿದ್ಧವಾದ ಪ್ರಳಯ ತಾಂಡವ ನೃತ್ಯವನ್ನು ಆರಂಭಿಸುತ್ತಾನೆ. ಸ್ಥೂಲ ಪ್ರಪಂಚವು ಶಿವನೊಳಗೆ ಲಯವಾಗುತ್ತದೆ ಆ ಸಮಯದಲ್ಲಿ ಕೇವಲ ದೇವಿಯು ಮಾತ್ರವೇ ಆ ಮನ ಕಲುಕುವ ದೃಶ್ಯಕ್ಕೆ ಏಕೈಕ ಸಾಕ್ಷಿಯಾಗಿ ನಿಲ್ಲುತ್ತಾಳೆ.

           ಸೌಂದರ್ಯ ಲಹರಿಯು (ಸ್ತೋತ್ರ ೨೬) ಈ ಪ್ರಸಂಗವನ್ನು ವಿವರಿಸುತ್ತದೆ, "ಬ್ರಹ್ಮ, ವಿಷ್ಣು, ಯಮ, ಕುಬೇರ ಮತ್ತು ಇಂದ್ರ ಇವರೆಲ್ಲರೂ ವಿನಾಶವಾಗುತ್ತಾರೆ. ಆದರೆ ನಿನ್ನ ಸಂಗಾತಿಯಾದ ಶಿವನು ನಿನ್ನ ಸುತ್ತಲೂ ವಿಹರಿಸುತ್ತಾನೆ."

                                                                                                                          ******

        ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 563 - 571 http://www.manblunder.com/2010/01/lalitha-sahasranamam-meaning-563-571.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)

Comments

Submitted by nageshamysore Mon, 10/14/2013 - 19:37

ಶ್ರೀಧರರೆ, ೧೩೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆಯ ಕಾವ್ಯಸಾರ ಪರಿಷ್ಕರಣೆಗೆ ಸಿದ್ಧ :-) (ಫಾರ್ಮ್ಮಟಿಂಗ್ ಸರಿ ಹೋದರೂ, ಯಾಕೊ ಪಂಕ್ತಿ ನಡುವಿನ ಸಾಲುಗಳನ್ನು ಗುರುತಿಸುತ್ತಿಲ್ಲ. ಆ ಬೇರ್ಪಡಿಕೆಯೂ ಸೇರಿದರೆ ಪ್ರತಿ ಪಂಕ್ತಿ ಗ್ರಹಿಸಲು ಇನ್ನು ಸುಲಭವಾಗುತ್ತದೆ. ಆದರೂ, ಈ ರೂಪದಲ್ಲಿಯೂ ಈಗ ಓದಿ ಗ್ರಹಿಸಲು ಯಾವ ಅಡೆತಡೆಯೂ ಆಗುವುದಿಲ್ಲ)
ಲಲಿತಾ ಸಹಸ್ರನಾಮ ೫೬೩ - ೫೭೧
____________________________________
೫೬೩. ಮುಖ್ಯಾ
ಸೃಷ್ಟಿಗೆಲ್ಲಾ ಪ್ರಥಮಾ ಪ್ರಮುಖಳು, ದೇವಿಯದರಲಿ ಭಾಗವಾಗಿಹಳು
ಬ್ರಹ್ಮವಾಗೆಲ್ಲಕೂ ಮುನ್ನ - ದೇವದೇವಿಯರಿಗು ಮುಂಚೆ ಜನಿಸಿದವಳು
ಜಗಕೆ ಮೊದಲಿಗಳಾಗಿ ದೇವಿ ಲಲಿತೆ, ಅಧಿಕಾರಯುತವಾಗೆಲ್ಲರ ಸಖ್ಯ
ಸಕಲಕು ಮೂಲವಾಗಿ ಬ್ರಹ್ಮವಾಗಿಹ ಜೇಷ್ಠಾ, ಬ್ರಹ್ಮಾಂಡಕವಳೆ ಮುಖ್ಯಾ ||
೫೬೪. ಮೃಡಾನೀ 
ಪ್ರಕಾಶ ರೂಪಿ ಶಿವ, ಪ್ರದಾಯಿಸೊ ಸಂತೋಷವೆ ಮೃಡಾ
ಮೃಡ ಸಂಗಾತಿ ಮೃಡಾನೀ, ಸ್ಪುರಿಸುತಾ ಹರ್ಷದ ಕೊಡ
ಶಿವವಿಮರ್ಶಾರೂಪದಲಿಹ ಶಕ್ತಿ, ಲಲಿತೆಯಾಗಿ ಮೃಡಾನೀ
ಶಿವಶಕ್ತಿ ಸಂಯುಕ್ತ ರೂಪ, ದ್ವೈತದಲೇಕತ್ವ ಸುಖದಾಯಿನಿ ||
೫೬೫. ಮಿತ್ರ-ರೂಪಿಣೀ 
ಜೀವರಾಶಿಗಳೆಲ್ಲರ ಪರಮಾಪ್ತ ಮಿತ್ರ ಸೂರ್ಯ, ಶಿವಶಕ್ತಿ ಐಕ್ಯ ಸ್ವರೂಪ
ಸ್ನೇಹಿತನ ರೂಪದಲಿ ಸುಸ್ಥಿತಿಯಲಿಡುತ ವಿಶ್ವ, ದೇವಿಯಾಗವನ ರೂಪ
ಅಗ್ನಿ ಶಿವನಾದಂತೆ ಚಂದ್ರ ಶಕ್ತಿಯ ಪ್ರತಿನಿಧಿ, ಮಾತೆ ಆಪ್ತಳಾಗಿಹ ನೀತಿ 
ಹಾತೊರೆದವರೆಲ್ಲರಿಗು ಸಿಗುವಳು ಸುಲಭದಲಿ, ಮಿತ್ರ ರೂಪಿಣೀ ಗೆಳತಿ ||
೫೬೬. ನಿತ್ಯ-ತೃಪ್ತಾ
ವಿನಾಶವಿರದ ನಿತ್ಯಾಹುತಿ - ಆತ್ಮ ಸಮರ್ಪಣೆಯೆ ದೇವಿಗೆ ತೃಪ್ತಿ
ಅನಂತ ಬ್ರಹ್ಮವೆ ದೇವಿ, ಕೂಡಿ ಕಳೆ ಗುಣಿಸಿ ಭಾಗಿಸೂ ಅಷ್ಟೆ ಶಕ್ತಿ
ಅನಂತದಾನಂತದಿಂದ ಹೊರಹೊಮ್ಮಿದ ಅನಂತವಾಗಿಹ ಲಲಿತ
ಅನಂತಕೆಲ್ಲಿದೆ ಅಗತ್ಯ, ಅವಶ್ಯಕತೆಗಳಿಲ್ಲದ ದೇವಿಯೆ ನಿತ್ಯತೃಪ್ತಾ ||
೫೬೭. ಭಕ್ತ-ನಿಧಿಃ 
ಭಕ್ತರ ಪಾಲಿನಿ ನಿಜ ನಿಧಿ, ಲಲಿತಾಂಬಿಕೆ ದಿವ್ಯ ಸನ್ನಿಧಿ
ವಾಂಛೆಗಳರುಹುವ ಭಕ್ತರಿಗೆ, ಹಂಚೆ ಕಾಪಿಟ್ಟ ನಿಕ್ಷೇಪದಿ
ಕೋರುವಾ ಭಕ್ತರಾ ಯಥಾರ್ಥರ್ಹತಾನುಸಾರ ಸಮೃದ್ಧಿ
ದಯಪಾಲಿಸುವಾ ತಾಯ್ದೇವಿ, ಅವಳಾಗುತಾ ಭಕ್ತ ನಿಧಿಃ ||
೫೬೮. ನಿಯಂತ್ರೀ 
ವಿಸ್ತಾರ ಬ್ರಹ್ಮಾಂಡವೀ ಪ್ರಪಂಚ, ಪಾಲನೆಯೆ ಕುಂಚ ಕೌಶಲ
ಚಾಕಚಕ್ಯತೆ, ಕಲಾನೈಪುಣ್ಯತೆಯ ಮಾರ್ಗದರ್ಶನವೇ ಸಕಲ
ಲೋಕಪಾಲಕಿ ಲಲಿತಾಂಬಿಕೆ ತಾನೆ, ಈ ಜಗಕವಳೆ ನಿಯಂತ್ರೀ
ದಾರಿದೀಪವಾಗಿ ನಡೆಸುತಾ ಚರಾಚರ, ಸೃಷ್ಟಿಗವಳೆ ಗಾಯತ್ರಿ ||
೫೬೯. ನಿಖಿಲೇಶ್ವರೀ
ಸಕಲಕೂ ಮಾರ್ಗದರ್ಶಕಿಯಾಗಿ ಲಲಿತಾ ಬ್ರಹ್ಮ ಗುಣ
ಪರಮೋನ್ನತ ಪರಿಪಾಲಕಿಯಾಗಿ ಸ್ಥಾನಾ ಅಲಂಕರಣ
ನಿಖಿಲವೆಂದರೆ ಸಕಲ, ಸರ್ವ ಸಂಪೂರ್ಣ ಪರಮೇಶ್ವರಿ
ಪರಮೋಚ್ಛ ಪಾಲಕಿಯಾಗಿ ಆಳುತಿಹಳು ನಿಖಿಲೇಶ್ವರೀ ||
೫೭೦. ಮೈತ್ರ್ಯಾದಿ-ವಾಸನಾ-ಲಭ್ಯಾ 
ಪರಿಪೂರ್ಣರಾಗುವ ಬಗೆ ಹತ್ತುಹಲವುಂಟು ಸುವಿಧಾ ಅಪೇಕ್ಷೆ
ಸುಖಿ-ಮೈತ್ರಿ ದುಃಖಿ-ಕರುಣೆ ಪುಣ್ಯಕೆ-ಹರ್ಷ ಪಾಪಕೆ-ಉಪೇಕ್ಷೆ
ಐಶ್ವರ್ಯಕೆ-ಈರ್ಷೆ ದ್ವೇಷಕೆ-ಪ್ರೇಮ ದುಃಖಕೆ-ಹರ್ಷ ಧನಾತ್ಮಕ
ಸ್ನೇಹ ಕರುಣೆ ಗುಣಕೆ,ಮೈತ್ರ್ಯಾದಿ-ವಾಸನಾ-ಲಭ್ಯಾ, ಸರಳಲೆಕ್ಕ ||
೫೭೧. ಮಹಾ-ಪ್ರಲಯ-ಸಾಕ್ಷಿಣೀ 
ಸಂಪೂರ್ಣ ವಿನಾಶವೆ ಮಹಾಪ್ರಳಯ, ವಿಶ್ವವಾಗಿ ಶಿವನಲ್ಲಿ ಲಯ
ಸೃಷ್ಟಿ ವಿಲೋಮ ಚಕ್ರ ಪ್ರಕ್ರಿಯೆ, ಇಳೆ-ಜಲ-ಅಗ್ನಿ-ವಾಯು-ಆಕಾಶ
ಶಿವದೆ ಕರಗಿ ಆಕಾಶ ಬ್ರಹ್ಮೈಕ್ಯ, ಸಂಕುಚನವಾಗೊ ನೋಟ ಸರಣಿ
ತಾಂಡವನೃತ್ಯ ಸ್ಥೂಲಜಗ ಶಿವ ಲಯದೆ ಮಹಾ-ಪ್ರಲಯ-ಸಾಕ್ಷಿಣೀ ||
- ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು