೧೪೩. ಲಲಿತಾ ಸಹಸ್ರನಾಮ ೬೧೫ರಿಂದ ೬೧೮ನೇ ನಾಮಗಳ ವಿವರಣೆ

೧೪೩. ಲಲಿತಾ ಸಹಸ್ರನಾಮ ೬೧೫ರಿಂದ ೬೧೮ನೇ ನಾಮಗಳ ವಿವರಣೆ

                                                                                     ಲಲಿತಾ ಸಹಸ್ರನಾಮ ೬೧೫ - ೬೧೮

Ādiśaktiḥ आदिशक्तिः (615)

೬೧೫. ಆದಿ ಶಕ್ತಿಃ

          ದೇವಿಯು ಸೃಷ್ಟಿಯ ಮೂಲ/ಪ್ರಾಥಮಿಕ ಶಕ್ತಿಯಾಗಿದ್ದಾಳೆ. ಶಿವನನ್ನು ಯಾರೂ ಸೃಷ್ಟಿಸಲಿಲ್ಲ. ಆದರೆ ಶಿವನ ಏಕೈಕ ಸೃಷ್ಟಿಯಾದ ಶಕ್ತಿಯು ಈ ಪ್ರಪಂಚವನ್ನು ಸೃಷ್ಟಿಸಿದಳು. ಆದ್ದರಿಂದ ಆಕೆಯನ್ನು ಆದಿ (ಪ್ರಥಮ) ಶಕ್ತಿ ಎಂದು ಕರೆಯಲಾಗಿದೆ. ವಾಸ್ತವವಾಗಿ, ಶಕ್ತಿಯು ಶಿವನ ಸೃಷ್ಟಿ ತರಂಗವಾಗಿದ್ದಾಳೆ. ಈ ಶಕ್ತಿಯಿಂದಾಗಿ ಆತ್ಮಸಾಕ್ಷಾತ್ಕಾರವನ್ನು ಹೊಂದಬಯಸುವ ವ್ಯಕ್ತಿಯು ತನ್ನ ದೈವೀ ಸ್ವರೂಪವನ್ನು ಕಂಡುಕೊಳ್ಳುತ್ತಾನೆ.

          ಇನ್ನಷ್ಟು ವಿವರಗಳು: ಶಕ್ತಿಯು ಶಿವನಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಶಕ್ತಿಯು ಕೇಳಿದ ಪ್ರಶ್ನೆಗಳಿಗೆ ಶಿವನು ಕೊಟ್ಟ ಉತ್ತರಗಳು ಹಲವಾರು ತಂತ್ರ ಶಾಸ್ತ್ರಗಳ ರೂಪದಲ್ಲಿವೆ. ಶಕ್ತಿಯು ಮೂರು ಭಂಗಿಗಳಲ್ಲಿ ಕುಳಿತು ಶಿವನಿಗೆ ಪ್ರಶ್ನೆಗಳನ್ನು ಕೇಳುತ್ತಾಳೆ. ಮೊದಲನೆಯದು ಶಿವನ ಪಕ್ಕದಲ್ಲಿ ಕುಳಿತು ಶಕ್ತಿಯು ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಭಂಗಿಯಲ್ಲಿ ಕೇಳಿದ ಪ್ರಶ್ನೆಗಳು ಕೇವಲ ಪ್ರಾಥಮಿಕ ಹಂತದವು. ಮುಂದಿನ ಭಂಗಿಯಲ್ಲಿ ಶಕ್ತಿಯು ಶಿವನ ತೊಡೆಯ ಮೇಲೆ ಕುಳಿತು ಕೇಳಿದವುಗಳಾಗಿವೆ. ಈ ಭಂಗಿಯಲ್ಲಿ ಕುಳಿತು ಕೇಳಿದ ಪ್ರಶ್ನೆಗಳು ಶಿವನನ್ನು ಹೊಂದುವುದರ ಕುರಿತಾಗಿದೆ. ಯಾವಾಗ ಈ ಪ್ರಶ್ನೋತ್ತರಗಳ ಅವಧಿಯಲ್ಲಿ ದೇವಿಯ ಪ್ರಶ್ನೆಗಳಿಗೆ ಪರಿಷ್ಕಾರವು ದೊರೆತು ಜ್ಞನೋದಯವುಂಟಾಗುತ್ತದೆಯೋ ಆಗ ದೇವಿಯು ಶಿವನಲ್ಲಿ ಐಕ್ಯಳಾಗಿ ಅವನ ಒಂದು ಭಾಗವಾಗುತ್ತಾಳೆ - ಅರ್ಧನಾರೀಶ್ವರ ರೂಪವನ್ನು ತಾಳುತ್ತಾಳೆ. ಈ ರೂಪವು ಅಂತಿಮ ಸತ್ಯವಾದ ಲಿಂಗರೂಪದೆಡೆಗೆ ಕರೆದೊಯ್ಯುತ್ತದೆ. ಇದು ಸಾಕ್ಷಾತ್ಕಾರದ ವಿಶಿಷ್ಠ ಉದಾಹರಣೆ. ಯಾವಾಗ ಒಬ್ಬನು ಆಧ್ಯಾತ್ಮಿಕ ಪಥದ ಪ್ರಾರಂಭಿಕ ಹಂತಗಳಲ್ಲಿರುತ್ತಾನೆಯೋ ಆಗ ಪರಬ್ರಹ್ಮಕ್ಕೆ ಮತ್ತು ಸಾಧಕನಿಗೆ ಅಂತರವಿರುತ್ತದೆ. ಯಾವಾಗ ಅವನಿಗೆ ಅದ್ವೈತದ ಜ್ಞಾನವುಂಟಾಗುತ್ತದೆಯೋ ಆಗ ಅವನು ಪರಬ್ರಹ್ಮನ ಹತ್ತಿರಕ್ಕೆ ಸಾಗುತ್ತಾನೆ. ಯಾವಾಗ ಅವನು ಪರಬ್ರಹ್ಮವನ್ನು ಅರಿಯುತ್ತಾನೆಯೋ ಆಗ ಅವನು ಅದರೊಳಗೆ ಲೀನವಾಗಿ ಅವನ ಪ್ರಜ್ಞೆಯು ದ್ವೈತ್ವವನ್ನು ಕಳೆದುಕೊಳ್ಳುತ್ತದೆ. ಅಂತಿಮವಾಗಿ ಅವನು "ತತ್ತ್ವಮಸಿ" - ಅದು ನಾನೇ ಆಗಿ ಪರಿವರ್ತನೆಗೊಳ್ಳುತ್ತಾನೆ.

Ameyā अमेया (616)

೬೧೬. ಅಮೇಯ

           ದೇವಿಯು ಅಳತೆಗೆ ನಿಲುಕದವಳು (ಅಳೆಯಲಾಗದವಳು). ಮರ್ತ್ಯರು ಅಳತೆಗೆ ಸಿಗುತ್ತಾರೆ, ನಿತ್ಯರು ಅಳತೆಗೆ ನಿಲುಕಲಾರರು.  ಕಠೋಪನಿಷತ್ತು (೧.೨.೨೦) ಈ ತತ್ವವನ್ನು ವಿವರಿಸುತ್ತದೆ. ಅದು ಹೇಳುತ್ತದೆ, " ಅತ್ಯಂತ ಚಿಕ್ಕದಕ್ಕಿಂತ ಚಿಕ್ಕದಾದ ಮತ್ತು ಅತ್ಯಂತ ದೊಡ್ಡದಕ್ಕಿಂತ ದೊಡ್ಡದಾದ". ಇದು  ಉಪನಿಷತ್ತುಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧ ಶ್ಲೋಕವಾಗಿದೆ.  ಮೂಲ ಸಂಸ್ಕೃತದ ಹೇಳಿಕೆಯು ಈ ವಿಧವಾಗಿ ಸಾಗುತ್ತದೆ, "ಅಣೋರಣೀಯಾನ್ ಮಹತೋ ಮಹೀಯಾನ್ ಆತ್ಮಾ ...... अणोरणीयान् महतो महीयान् आत्मा ......". ಇದು ಬ್ರಹ್ಮದ ಅದ್ವಿತೀಯ ಲಕ್ಷಣವಾಗಿದೆ.

Ātmā आत्मा (617)

೬೧೭. ಆತ್ಮಾ

          ಆತ್ಮವು ವ್ಯಕ್ತಿಗತ ಜೀವಿಗಳನ್ನು ಸೂಚಿಸಿದರೆ, ಪರಮಾತ್ಮವು ಪರಬ್ರಹ್ಮವನ್ನು ಸೂಚಿಸುತ್ತದೆ. ಯಾವಾಗ ಈ ಅತ್ಮವು ತಾನು ಪರಮಾತ್ಮವೆಂದು ಅರಿಯುತ್ತದೆಯೋ ಆಗ ಅದನ್ನೇ ಆತ್ಮಸಾಕ್ಷಾತ್ಕಾರವೆನ್ನಲಾಗುತ್ತದೆ. ಈ ನಾಮವು ಆತ್ಮ ಅಥವಾ ಜೀವಿಯನ್ನು ಸೂಚಿಸುತ್ತದೆ ಏಕೆಂದರೆ ಮುಂದಿನ ನಾಮದಲ್ಲಿ ಪರಬ್ರಹ್ಮದ ಉಲ್ಲೇಖವಿದೆ. ಆತ್ಮವನ್ನು ಜೀವಿ ಎಂದು ಕರೆಯುತ್ತಾರೆ; ಯಾವಾಗ ಆತ್ಮವು ಶರೀರದಿಂದ ಆವರಿಸಲ್ಪಟ್ಟಿರುತ್ತದೆಯೋ ಆಗ ಅದು ಜೀವಿ ಎನಿಸಿಕೊಳ್ಳುತ್ತದೆ.

          ಜೀವಿಯನ್ನು ಪುರುಷ ಎಂದೂ ಸಹ ಕರೆಯಲಾಗುತ್ತದೆ. ಜೀವಿಯು ಆತ್ಮವನ್ನು ಧ್ಯಾನದ ಮೂಲಕ ಪೂಜಿಸುತ್ತದೆ. ನಿಖರವಾದ ಆಕಾರ ಮತ್ತು ರೂಪದಿಂದಿರುವ ಜೀವಿಯನ್ನು ಯಜಮಾನ ಅಥವಾ ಒಡೆಯ ಎಂದು ಕರೆಯಲಾಗುತ್ತದೆ. ಧ್ಯಾನದ ಗುರಿಯು ಪರಮಾತ್ಮವಾಗಿದ್ದು, ಆತ್ಮವು ಪರಮಾತ್ಮವನ್ನು ಮನಸ್ಸಿನ ಮಾರ್ಪಾಟಿನ ಮೂಲಕ ಅರಸುವುದಕ್ಕೆ ಧ್ಯಾನವು ಒಂದು ವಿಧಾನವಾಗಿದೆ. ವಾಸ್ತವವಾಗಿ ಪರಮಾತ್ಮವು ಆತ್ಮದಲ್ಲಿಯೇ ಪ್ರಾಥಮಿಕ ಹಂತದಿಂದಲೂ ಅಸ್ತಿತ್ವದಲ್ಲಿದ್ದರೂ ಸಹ, ಮಾಯೆ ಮತ್ತು ಅವಿದ್ಯೆಗಳಿಂದಾಗಿ ಅದರ ಅರಿವುಂಟಾಗುವುದಿಲ್ಲ. ಧ್ಯಾನದ ಫಲವು ಪರಮಾನಂದವಾಗಿದ್ದು ಇದು ಪರಮಾತ್ಮದೊಂದಿಗೆ ಆತ್ಮದ ಐಕ್ಯತೆಯನ್ನುಂಟು ಮಾಡುತ್ತದೆ. ಪರಮಾತ್ಮ ಎಂದರೆ ಶಿವನಾಗಿದ್ದು, ಆತ್ಮ ಎಂದರೆ ಶಕ್ತಿಯಾಗಿದೆ ಮತ್ತು ಇವರೆಡರ ಒಂದುಗೂಡುವಿಕೆಯನ್ನು ಶಿವ-ಶಕ್ತಿ ಐಕ್ಯವೆನ್ನಲಾಗುತ್ತದೆ (ಐಕ್ಯದ ಕುರಿತಾಗಿ ಹೆಚ್ಚಿನ ವಿವರಗಳನ್ನು ೯೯೯ನೇ ನಾಮದಲ್ಲಿ ನೋಡೋಣ). ಈ ಪ್ರಕ್ರಿಯೆಯು ಸಹಸ್ರಾರದಲ್ಲಿ ಜರುಗುತ್ತದೆ.

Paramā परमा (618)

೬೧೮. ಪರಮಾ

          ಹಿಂದಿನ ನಾಮವು ದೇವಿಯನ್ನು ಆತ್ಮವೆಂದು ಸಂಭೋದಿಸಿದರೆ ಈ ನಾಮವು ಆಕೆಯನ್ನು ಪರಮಾತ್ಮ ಅಥವಾ ಪರಬ್ರಹ್ಮವೆಂದು ಸಂಭೋದಿಸುತ್ತದೆ. ಈ ಎರಡೂ ನಾಮಗಳಿಂದ ಒಬ್ಬರು ತಿಳಿಯಬಹುದಾದ್ದೇನೆಂದರೆ ಆಕೆಯು ಸಗುಣ ಹಾಗು ನಿರ್ಗುಣ ಬ್ರಹ್ಮಗಳೆರಡೂ ಆಗಿದ್ದಾಳೆ. ಇದು ಆಕೆಯ ಪರಮೋನ್ನತ ಸ್ಥಾನವನ್ನು ದೃಢಪಡಿಸುತ್ತದೆ.

          ಪರ+ಅಸ್ಯ+ಮಾ ಎನ್ನುವುದರಿಂದ ಪರಮಾ ಆಗಿದೆ. ಪರಾ ಎಂದರೆ ವಿಶ್ವಾತ್ಮ ಅಥವಾ ಪರಬ್ರಹ್ಮವಾಗಿದೆ; ಅಸ್ಯ ಎಂದರೆ ಇದು; ಮತ್ತು ಮಾ ಎಂದರೆ ನಾನು. ಆದ್ದರಿಂದ ಪರಮಾ ಎಂದರೆ "ನಾನೇ ಈ ವಿಶ್ವಾತ್ಮ" ಎಂದಾಗುತ್ತದೆ, ಇದು ಆತ್ಮಸಾಕ್ಷಾತ್ಕಾರದ ಹಿಂದಿರುವ ತತ್ವವಾಗಿದೆ. ಇದನ್ನು ಪರಸ್ಯ+ಮಾ ಎಂದು ಸಹ ವಿಶ್ಲೇಷಿಸಬಹುದು ಇದರರ್ಥ ಆಕೆಯು ಶಿವನ ಪತ್ನಿಯಾಗಿದ್ದಾಳೆ (ಶಿವ ಎಂದರೆ ಪರಸ್ - ಅತೀತನಾಗಿರುವುದು). ದೇವಿಯು ಶಿವನ ಹೆಂಡತಿಯಾಗಿರುವುದರಿಂದ ಆಕೆಯು ಆಧ್ಯಾತ್ಮಿಕ ಮಾರ್ಗದಲ್ಲಿರುವವರಿಗೆ ಶಿವನನ್ನು ಅರಿಯಲು ಸಹಾಯ ಮಾಡುತ್ತಾಳೆ.

          ಲಿಂಗ ಪುರಾಣವು (ಅಧ್ಯಾಯ ೮೬, ಶ್ಲೋಕ ೯೭ -೯೯) ಹೇಳುತ್ತದೆ, "ಆತ್ಮಕ್ಕೆ ಮೇಧೋ ಜ್ಞಾನವು ಒಳಗಾಗಲಿ ಅಥವಾ ಹೊರಗಾಗಲಿ ಅಥವಾ ಎರಡರಲ್ಲಾಗಲೀ ಇಲ್ಲ. ಅದು ಪರಿಪೂರ್ಣ ಜ್ಞಾನವನ್ನಾಗಲಿ ಅಥವಾ ಬುದ್ಧಿವಂತಿಕೆಯನ್ನಾಗಲಿ ಅಥವಾ ಅಜ್ಞಾನವನ್ನಾಗಲಿ ಹೊಂದಿಲ್ಲ. ಬ್ರಹ್ಮವು ಅರಿತವನಾಗಲಿ ಅಥವಾ ಅರಿಯ ಬೇಕಾದವನಾಗಲೀ ಅಲ್ಲ. ವಾಸ್ತವವಾಗಿ ಅವನು ಅವ್ಯಯನು, ಯಾತನೆಗಳಿಲ್ಲದವನು, ಸಾವಿಲ್ಲದವನು, ನಾಶವಿಲ್ಲದವನು, ಅತ್ಯುನ್ನತವಾದ ಅಥವಾ ಪರಮೋನ್ನತವಾದ ಆತ್ಮನು/ಪರಬ್ರಹ್ಮನು, ಪರಾತ್ಪರನು (ಪರಮೋನ್ನತವಾದುದಕ್ಕಿಂತಲೂ ಉನ್ನತವಾದವನು), ಅನುಮಾನದಿಂದೊಡಗೂಡಿದ ಪರ್ಯಾಯಗಳಿಲ್ಲದವನು, ಮೋಸಪೂರಿತ ವೇಷವನ್ನು ಧಾರಣೆ ಮಾಡದೇ ಇರುವವನು, ಜ್ಞಾನವು. ಇವೆಲ್ಲವುಗಳು ಪರ್ಯಾಯ ಪದಗಳಾಗಿವೆ". ದೇವಿಯು ಈ ರೂಪದಲ್ಲಿರುತ್ತಾಳೆ.

         ಪರಬ್ರಹ್ಮಕ್ಕೆ (ಅತ್ಯುನ್ನತವಾದ ಬ್ರಹ್ಮ, ಶಿವ-ಶಕ್ತಿ ಐಕ್ಯ ರೂಪ) ನಾಲ್ಕು ರೂಪಗಳಿವೆ. ಅವೆಂದರೆ ಪುರುಷ (ಜೀವಿ), ಅವ್ಯಕ್ತ (ರೂಪಾಂತರ ರಹಿತವಾದದ್ದು), ವ್ಯಕ್ತ (ರೂಪಾಂತರಗೊಂಡದ್ದು) ಮತ್ತು ಕಾಲ. ದೇವಿಯು ಈ ನಾಲ್ಕೂ ರೂಪಗಳನ್ನು ಅಧಿಗಮಿಸಿ ಸ್ಥಿರವಾಗಿ ಪರಮೋನ್ನತ ಸ್ಥಾನದಲ್ಲಿದ್ದಾಳೆ. 

                                                                                                                        ******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 615 - 618 http://www.manblunder.com/2010/02/lalitha-sahasranamam-615-618.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Fri, 10/25/2013 - 18:13

ಶ್ರೀಧರರೆ, '೧೪೩. ಶ್ರೀ ಲಲಿತಾ ಸಹಸ್ರನಾಮದ ವಿವರಣೆ'ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೧೫ - ೬೧೮
_____________________________________
.
೬೧೫. ಆದಿ ಶಕ್ತಿಃ
ಸ್ವಯಂಭು ಶಿವನೇಕೈಕ ಸೃಷ್ಟಿ, ಲಲಿತೆ ಸೃಷ್ಟಿಯ ಮೂಲ ಶಕ್ತಿ
ಶಿವನ ಸೃಷ್ಟಿ ತರಂಗ, ಆತ್ಮಸಾಕ್ಷಾತ್ಕಾರಾರ್ಥಿಗೆ ಛವಿ ಆದಿಶಕ್ತಿಃ
ಶಿವನ ಬದಿ-ತೊಡೆ ಮೇಲೆ-ಐಕ್ಯ ನಾರೀಶ್ವರೀ ಭಂಗಿಯಲಿ ಪ್ರಶ್ನೆ
ಶಕ್ತಿ ಕೇಳಿ ಪ್ರಾಥಮಿಕ-ಶಿವ ಸ್ವಾಧೀನ-ತತ್ತ್ವಮಸಿ ಜ್ಞಾನದಗೊನೆ ||
.
೬೧೬. ಅಮೇಯ
ಅಳತೆಗೆ ಸಿಗುವಂತೆ ಮರ್ತ್ಯರು, ನಿಲುಕದವರಳತೆಗೆ ನಿತ್ಯರು
ಅಳೆಯಲಾಗದ ಅಮೇಯ ಲಲಿತೆ, ಅಳತೆಗೆ ನಿಲುಕದವಳು
ಕಿರಿಯದೆಲ್ಲದಕುಕಿರಿದು, ಹಿರಿಯದೆಲ್ಲದಕುಹಿರಿದು ಪರಬ್ರಹ್ಮ
ಬ್ರಹ್ಮದದ್ವಿತೀಯ ಲಕ್ಷಣ, ಊಹಾತೀತ ರೂಪಾಕಾರದ ಮರ್ಮ ||
.
೬೧೭. ಆತ್ಮಾ
ವ್ಯಕ್ತಿಗತ ಜೀವಾತ್ಮ, ಆತ್ಮಸಾಕ್ಷಾತ್ಕಾರ ತಾನರಿತಾಗ ತಾನೆ ಪರಮಾತ್ಮ
ದೇಹದ ವಸ್ತ್ರವ ಹೊದ್ದ ಆತ್ಮ, ಪುರುಷಜೀವಿಯಾಗಿ ಧ್ಯಾನದೆ ಸತ್ಕಾಮ
ಮಾಯೆಅವಿದ್ಯೆಯ ಮುಸುಕಲಡಗಿದ ಪರಮಾತ್ಮನನಾವರಣ ಧ್ಯಾನದೆ
ಅತ್ಮ ಪರಮಾತ್ಮದ ಐಕ್ಯತೆ ಪರಮಾನಂದ, ಶಿವಶಕ್ತಿ ಏಕತೆಯಾ ತತ್ವದೆ ||
.
೬೧೮. ಪರಮಾ
ಆತ್ಮವು ಅವಳೆ ಪರಮಾತ್ಮವು ಅವಳೆ, ಸಗುಣ ನಿರ್ಗುಣ ಬ್ರಹ್ಮ
ಪರ-ಅಸ್ಯ-ಮಾ 'ತಾನೆ ವಿಶ್ವಾತ್ಮ', ಪರಸ್ಯ-ಮಾ ಶಿವಸತಿ ಪರಮ
ಪುರುಷ-ಅವ್ಯಕ್ತ-ವ್ಯಕ್ತ-ಕಾಲ ಪರಬ್ರಹ್ಮದ ನಾಲ್ಕು ರೂಪಾಗಿ ಘನ
ನಾಲ್ಕು ರೂಪಗಳನಧಿಗಮಿಸಿ ಲಲಿತೆ ಸ್ಥಿರದೆ ಪರಮೋನ್ನತ ಸ್ಥಾನ ||
.
ಒಳಗಿಲ್ಲ ಹೊರಗಿಲ್ಲ ಒಳಗ್ಹೊರಗಿಲ್ಲ ಮೇಧೊಜ್ಞಾನ, ಜ್ಞಾನ-ಅಜ್ಞಾನವನೂ ಹೊಂದಿಲ್ಲ
ಅರಿತವನಲ್ಲ ಅರಿಯಬೇಕಾದವನಲ್ಲ, ವಾಸ್ತವದೆ ಅವ್ಯಯನು-ಯಾತನಾರಹಿತನು
ಸಾವಿಲ್ಲದ-ನಶಿಸದ-ಅತ್ಯುನ್ನತ-ಪರಮೋನ್ನತ-ಪರಾತ್ಪರನು ಈ ಆತ್ಮ-ಪರಮಾತ್ಮನು
ಅನುಮಾನಾಸ್ಪದ-ಪರ್ಯಾಯರಹಿತನು, ಮೋಸ ವೇಷ ಧರಿಸನೆಲ್ಲ ದೇವೀ ರೂಪಗಣ ||
.
.
- ಧನ್ಯವಾದಗಳೊಂದಿಗೆ
   ನಾಗೇಶ ಮೈಸೂರು