೧೫೧. ಲಲಿತಾ ಸಹಸ್ರನಾಮ ೬೫೭ರಿಂದ ೬೬೨ನೇ ನಾಮಗಳ ವಿವರಣೆ

೧೫೧. ಲಲಿತಾ ಸಹಸ್ರನಾಮ ೬೫೭ರಿಂದ ೬೬೨ನೇ ನಾಮಗಳ ವಿವರಣೆ

                                                                                                    ಲಲಿತಾ ಸಹಸ್ರನಾಮ ೬೫೭ - ೬೬೨

Yugandarā युगन्दरा (657)

೬೫೭. ಯುಗಂಧರಾ

            ಯುಗವೆನ್ನುವುದು ಒಂದು ಕಾಲಘಟ್ಟ. ಈ ಪ್ರಪಂಚದ ಅಸ್ತಿತ್ತವನ್ನು ನಾಲ್ಕು ಕಾಲಮಾನಗಳಲ್ಲಿ ವಿಭಜಿಸಲಾಗಿದೆ. ಹಲವಾರು ವರ್ಷಗಳು ಸೇರಿ ಒಂದು ಯುಗವಾಗುತ್ತದೆ. ನಾಲ್ಕು ಯುಗಗಳಿವೆ -ಅವೆಂದರೆ ಸತ್ಯಯುಗ (ಇದನ್ನೇ ಕೃತ ಯುಗವೆಂದೂ ಕರೆಯುತ್ತಾರೆ), ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ. ಪ್ರತಿಯೊಂದು ಯುಗವು ಹಲವು ಲಕ್ಷ ವರ್ಷಗಳನ್ನೊಳಗೊಂಡು ಒಂದು ಚಕ್ರವನ್ನು ಪೂರೈಸುತ್ತವೆ ಮತ್ತು ಈ ಒಂದು ಚಕ್ರದಲ್ಲಿ ಎಲ್ಲಾ ಯುಗಗಳ ಮೊತ್ತವು ೪.೩೨ದಶಲಕ್ಷ ವರ್ಷಗಳು ಅಥವಾ ೪೩ ಲಕ್ಷ, ೨೦ ಸಾವಿರ ವರ್ಷಗಳನ್ನೊಳಗೊಂಡಿದೆ. ಈ ಒಂದು ಚಕ್ರ ಮುಗಿದ ಮೇಲೆ ಮಹಾ-ಪ್ರಳಯ ಕಾಲ ಅಥವಾ ಮಹಾ ವಿನಾಶವು ಉಂಟಾಗುತ್ತದೆ ತದನಂತರ ಹೊಸದೊಂದು ಸೃಷ್ಟಿಯ ಆರಂಭವಾಗುತ್ತದೆ. ದೇವಿಯು ಇಂತಹ ಯುಗ ಚಕ್ರಗಳ ನಿಯಂತ್ರಕಿಯಾಗಿದ್ದಾಳೆ. (ನಾಲ್ಕು ಯುಗಗಳ ಕುರಿತ ಹೆಚ್ಚಿನ ವಿವರಗಳಿಗೆ ’ಕಲಿ-ಕಲ್ಮಷ-ನಾಶಿನೀ’ ನಾಮ ೫೫೫ನ್ನು ನೋಡಿ).

             ‘ಯುಗ’ ಎನ್ನುವ ಶಬ್ದವು ಎರಡು ಒಂದೇ ವಿಧವಾದ ಜೋಡಿ ವಸ್ತುಗಳನ್ನು ಬೆಸೆಯುವುದನ್ನು ಸಹ ಸೂಚಿಸುತ್ತದೆ. ಈ ಸಂದರ್ಭದಲ್ಲಿ ದೇವಿಯು ಸ್ವಯಂತಾನೇ ಶಿವನೊಂದಿಗೆ ಬೆಸಗೊಂಡಿದ್ದಾಳೆ ಎಂದು ಹೇಳಬಹುದು. ಈ ಸಂಗತಿಯು ಏನನ್ನು ದೃಢಪಡಿಸುತ್ತದೆ ಎಂದರೆ; ಶಿವ ಅಥವಾ ಶಕ್ತಿಯರಿಬ್ಬರು ಸ್ವತಂತ್ರರಾಗಿದ್ದರೂ ಸಹ ಈ ಬೆಸುಗೆಯಿಲ್ಲದಿದ್ದರೆ ಕಾರ್ಯನಿರ್ವಹಿಸಲಾರರು.

Icchāśakti-jñānaśakti-kriyāśakti-svarūpiṇī इच्छाशक्ति-ज्ञानशक्ति-क्रियाशक्ति-स्वरूपिणी (658)

೬೫೮. ಇಚ್ಛಾಶಕ್ತಿ-ಜ್ಞಾನಶಕ್ತಿ-ಕ್ರಿಯಾಶಕ್ತಿ-ಸ್ವರೂಪಿಣೀ

           ದೇವಿಯು ಮೂರು ವಿಧವಾದ ಶಕ್ತಿಗಳ ರೂಪದಲ್ಲಿದ್ದಾಳೆ - ಇಚ್ಛೆಯ ಶಕ್ತಿ ಅಥವಾ ಆಸೆಯ ಶಕ್ತಿ, ಜ್ಞಾನ ಅಥವಾ ವಿವೇಕದ ಶಕ್ತಿ ಮತ್ತು ಕ್ರಿಯಾ ಅಥವಾ ಕಾರ್ಯದ ಶಕ್ತಿ. ಈ ಮೂರು ಶಕ್ತಿಗಳು ತ್ರಿಶಿಕದ ಭಾಗವಾಗಿವೆ. ತ್ರಿ+ ಇಶಿಕ=ತ್ರಿಶಿಕ; ಇಲ್ಲಿ ತ್ರಿ ಎನ್ನುವುದು ಮೂರನ್ನು ಸೂಚಿಸಿದರೆ, ಇಶಿಕ ಎನ್ನುವುದು ಈಶ್ವರಿಯನ್ನು ಅಂದರೆ, ದೈವೀ ಪ್ರಜ್ಞೆಯಲ್ಲಿ ಅಡಕವಾಗಿರುವ ಬಲ ಅಥವಾ ಶಕ್ತಿಯನ್ನು ಸೂಚಿಸುತ್ತದೆ. ದೇವಿಯು ಸೃಷ್ಟಿಯಲ್ಲಿರುವ ಎಲ್ಲಾ ವಿಧವಾದ ತ್ರಿಪುಟಿಗಳನ್ನು ನಿಯಂತ್ರಿಸುವವಳಾಗಿದ್ದಾಳೆ. ಉದಾಹರಣಗೆ, ಬ್ರಹ್ಮದ ಮೂರು ವಿಧ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯ. ದೇವಿಯನ್ನು ಸೃಷ್ಟಿಯನ್ನುಂಟು ಮಾಡುವ ಈಶ್ವರೀ ಎಂದು ಹೇಳಲಾಗಿದ್ದರೂ ಸಹ ಆಕೆಯು ಶಿವನಿಗಿಂತ ಬೇರೆಯಲ್ಲ. ದಿವ್ಯ ಪರಮಚೈತನ್ಯದ ವಿಕಾಸ(ವಿಶಾಲ)ಗೊಳ್ಳುವಿಕೆಯು ದೇವಿಯ ಹುಟ್ಟುಗುಣವಾದ ಇಚ್ಛಾ ಶಕ್ತಿಯಾಗಿದೆ. ಈ ವಿಶಾಲಗೊಳ್ಳುವಿಕೆಯ ನಿಜವಾದ ಕ್ರಿಯೆಯು ಜ್ಞಾನ ಶಕ್ತಿಯಾದರೆ, ವೈವಿಧ್ಯತೆಯನ್ನು ಉಂಟುಮಾಡಿ ತನ್ಮೂಲಕ ಪ್ರಪಂಚದ ಸೃಷ್ಟಿಗೆ ಕಾರಣವಾಗುವುದೇ ಕ್ರಿಯಾ ಶಕ್ತಿ. ಯಾರು ಈ ಎಲ್ಲಾ ಮೂರು ವಿಧವಾದ ಬಲಗಳನ್ನು ಅಥವಾ ಶಕ್ತಿಗಳನ್ನು ಹೊಂದಿದ್ದಾಳೋ ಆಕೆಯೇ ಪರಾ-ಶಕ್ತಿ ಅಥವಾ ಅತ್ಯುನ್ನತ ಶಕ್ತಿಯನ್ನು ಹೊಂದಿದವಳು. 

           ತಂತ್ರಲೋಕ ಗ್ರಂಥವು (೩.೧೧೧) ಹೀಗೆ ವಿವರಿಸುತ್ತದೆ, "ಯಾವಾಗ ಇಚ್ಛಾ ಶಕ್ತಿ ಮತ್ತು ಜ್ಞಾನಶಕ್ತಿಗಳು ಆಂತರಿಕವಾಗಿ ವಿಕಸನಗೊಂಡು ಕ್ರಿಯಾ ಶಕ್ತಿಯ ಹಂತಕ್ಕೆ ಬರುವುವೋ ಆಗ ಶಿವನ ಸಾಕ್ಷಾತ್ಕಾರವಾಗುತ್ತದೆ".

Sarvādhārā सर्वाधारा (659)

೬೫೯. ಸರ್ವಾಧಾರಾ

           ದೇವಿಯು ಎಲ್ಲದಕ್ಕೂ ಆಧಾರವಾಗಿದ್ದಾಳೆ ಅಥವಾ ಪ್ರಪಂಚದಲ್ಲಿರುವ ಎಲ್ಲವೂ ಅವಳನ್ನು ಆಧರಿಸಿದೆ. ಹಿಂದಿನ ನಾಮದಲ್ಲಿ ಚರ್ಚಿಸಿದಂತೆ ದೇವಿಯು ಈ ಪ್ರಪಂಚಕ್ಕೆ ತನ್ನ ಮೂರು ವಿಧವಾದ ಶಕ್ತಿಗಳಿಂದ ಆಧಾರವಾಗಿದ್ದಾಳೆ ಅಥವಾ ಸಹಾಯಕಳಾಗಿದ್ದಾಳೆ. ದೇವಿಯು ಸ್ಥೂಲ ಹಾಗು ಸೂಕ್ಷ್ಮ ಎರಡೂ ವಸ್ತುಗಳ ರೂಪದಲ್ಲಿದ್ದಾಳೆ (ದೇವಿಯ ಅತ್ಯಂತ ಸೂಕ್ಷ್ಮ ರೂಪವು ಕುಂಡಲಿನೀ). ಈ ಸ್ಥೂಲ ಮತ್ತು ಸೂಕ್ಷ್ಮ ಎನ್ನುವ ಎರಡು ವೈಪರೀತ್ಯ ರೂಪಗಳ ಮಧ್ಯದಲ್ಲಿರುವ ಎಲ್ಲಕ್ಕೂ ದೇವಿಯು ಆಧಾರವಾಗಿದ್ದಾಳೆ. ದೇವಿಗೆ ಸಹಾಯ ಮಾಡಬೇಕೆನ್ನುವ ಇಚ್ಛೆ ಇದೆ, ಅದಕ್ಕೆ ಬೇಕಾದ ಜ್ಞಾನವೂ ಇದೆ ಮತ್ತು ತನ್ನ ಕಾರ್ಯಗಳಿಂದ (ಸೃಷ್ಟಿ, ಸ್ಥಿತಿ ಮತ್ತು ಲಯ) ಆಕೆಯು ಸಹಾಯ ಮಾಡುತ್ತಾಳೆ.

Supratiṣṭhā सुप्रतिष्ठा (660)

೬೬೦. ಸುಪ್ರತಿಷ್ಠಾ

           ದೇವಿಯು ಎಲ್ಲಾ ಅಸ್ತಿತ್ವಕ್ಕೂ ಬುನಾದಿಯಾಗಿದ್ದಾಳೆ ಅಥವಾ ಮೂಲಾಧಾರವಾಗಿದ್ದಾಳೆ. ಈ ನಾಮವು ದೇವಿಯ ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು ಇಲ್ಲದಿದ್ದರೆ ಯಾವುದೂ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಸಂಕೇತಿಸುತ್ತದೆ. ಆಧಾರಕ್ಕಿಂತ ಬುನಾದಿಯು ಹೆಚ್ಚು ಆಳವಾಗಿರುತ್ತದೆ. ಕೃಷ್ಣನು ಭಗವದ್ಗೀತೆಯಲ್ಲಿ (ಅಧ್ಯಾಯ ೮, ಶ್ಲೋಕ ೨೦-೨೧), "ಈ ಅವ್ಯಕ್ತವಾದುದರ ಹಿಂದೆ ಮತ್ತೊಂದು ಅವ್ಯಕ್ತವಾದುದು ಅಸ್ತಿತ್ವದಲ್ಲಿದೆ, ಅದೇ ಆ ಪರಮೋನ್ನತ ದೈವೀ ಪುರುಷ; ಯಾರು ಎಲ್ಲವೂ ವಿನಾಶವಾದರೂ ಸಹ ಅವನು ವಿನಾಶ ಹೊಂದದೇ ಇರುತ್ತಾನೆ. ಹೀಗೆ ಯಾರು ರೂಪಾಂತರ ಹೊಂದದವನು, ವಿನಾಶವಿಲ್ಲದವನು ಎಂದು ಹೇಳಲ್ಪಟ್ಟಿರುವನೋ ಅವನನ್ನೇ ಅಂತಿಮ ಗುರಿ ಎಂದು ಹೇಳಲಾಗಿದೆ; ಅದುವೇ ನನ್ನ ಪರಮೋನ್ನತ ನಿವಾಸ ಸ್ಥಾನವಾಗಿದೆ, ಅದನ್ನು ಹೊಂದಿದವರು ಮತ್ತೆ ಈ ನಶ್ವರ ಜಗತ್ತಿಗೆ ಮರುಳುವುದಿಲ್ಲ" ಎಂದು ಹೇಳುತ್ತಾನೆ.

Sadasadrūpa-dhāriṇī सदसद्रूप-धारिणी (661)

೬೬೧. ಸದಸದ್ರೂಪ-ಧಾರಿಣೀ

           ದೇವಿಯು ಸತ್ ಮತ್ತು ಅಸತ್ ಎರಡೂ ರೂಪದಲ್ಲಿದ್ದಾಳೆ. ಸತ್ ಎಂದರೆ ಶಾಶ್ವತವಾದದ್ದು ಮತ್ತು ಅಸತ್ ಎಂದರೆ ಶಾಶ್ವತವಲ್ಲದ್ದು. ಬ್ರಹ್ಮವಲ್ಲದೇ ಯಾವುದೇ ಶಾಶ್ವತವಲ್ಲ ಆದ್ದರಿಂದ ಬ್ರಹ್ಮವೊಂದೇ ಸತ್ಯ. ಬ್ರಹ್ಮದ ಹೊರತಾಗಿ ಎಲ್ಲವೂ ಅಶಾಶ್ವತವಾದದ್ದು, ಆದ್ದರಿಂದ ಈ ಸಮಸ್ತ ಪ್ರಪಂಚ ಮತ್ತು ಅದರೊಂದಿಗಿನ ಸಮಸ್ತ ಅಸ್ತಿತ್ವವೂ ಅಸತ್ಯವಾದುದು. ದೇವಿಯು ಶಾಶ್ವತ ಮತ್ತು ಅಶಾಶ್ವತ ರೂಪಗಳೆರಡರಲ್ಲೂ ಇರುತ್ತಾಳೆ ಅಥವಾ ಅಸ್ತಿತ್ವವಿರುವ ಮತ್ತು ಅಸ್ತಿತ್ವವಿಲ್ಲದಿರುವ ಎರಡು ರೂಪಗಳಲ್ಲಿಯೂ ಇರುತ್ತಾಳೆ. ಅಶಾಶ್ವತತೆಯು ಶಾಶ್ವತತೆಯ ಉತ್ಪನ್ನವಾಗಿದೆ.

           ತೈತ್ತರೀಯ ಉಪನಿಷತ್ತು (೨.೭) ಹೀಗೆ ಹೇಳುತ್ತದೆ, "ಮೊದಲಿನಲ್ಲಿ ಯಾವುದೇ ಲೋಕವಿರಲಿಲ್ಲ. ಅಲ್ಲಿ ಕೇವಲ ಬ್ರಹ್ಮವೊಂದೇ ಇತ್ತು. ಆಗ ಪ್ರಪಂಚವು ಬ್ರಹ್ಮದೊಳಗೆ ವಿಕಾಸವಾಗದೇ ಇತ್ತು. ಆಮೇಲೆ ಈ ನಾಮ ರೂಪದ ಪ್ರಪಂಚವು ತನ್ನಷ್ಟಕ್ಕೆ ತಾನೇ ಆವಿರ್ಭಾವಗೊಂಡಿತು." ಉಪನಿಷತ್ತಿನ ಮೂಲ ವಾಕ್ಯವು ಹೀಗಿದೆ, "ಇದಂ ಅಗ್ರೇ ಅಸತ್ ವೈ ಆಸೀತ್"

           ಛಾಂದೋಗ್ಯ ಉಪನಿಷತ್ತು (೬.೨.೨.) "ಶೂನ್ಯದಿಂದ ಎಲ್ಲವೂ ಉದ್ಭವಿಸಿತೆಂದು ಹೇಳುವುದಕ್ಕೆ ಯಾವ ಆಧಾರವಿದೆ? ಎಂದು ಕೇಳುತ್ತಾ, "ನಿಜವಾಗಿಯೂ, ಈ ಪ್ರಪಂಚವು ಅಸ್ತಿತ್ವಕ್ಕೆ ಬರುವ ಮುನ್ನ ಅದ್ವಿತೀಯವಾದ ಒಂದೇ ಒಂದು ಅಸ್ತಿತ್ವವು ಇತ್ತು" ಎಂದು ಹೇಳುತ್ತದೆ.

           ಮಹರ್ಷಿ ಪತಂಜಲಿಯೂ ಸಹ ಹೀಗೆ ಹೇಳುತ್ತಾನೆ (ಯೋಗ ಸೂತ್ರ ೧.೯), " शब्दज्ञानानुपाती वस्तुशून्यो विकल्पः ಶಬ್ದಜ್ಞಾನಾನುಪಾತೀ ವಸ್ತುಶೂನ್ಯೋ ವಿಕಲ್ಪಃ ಅಂದರೆ ಯಾವ ಶಬ್ದಗಳಿಗೆ ಹೊಂದಿಕೊಂಡಂತೆ ವಾಸ್ತವ ಸತ್ಯಗಳು ಇರುವುದಿಲ್ಲವೋ ಅಂಥಹವುಗಳಿಂದ ಮಾತಿನ ಭ್ರಮೆಯು ಉಂಟಾಗುತ್ತದೆ"  

           ಈ ನಾಮವು ಅ-ಸತ್ ಎನ್ನುವುದು ಸತ್‌ನಿಂದ ಅಸ್ತಿತ್ವಕ್ಕೆ ಬಂತು ಅಥವಾ ಈ ಪ್ರಪಂಚವು ಪರಬ್ರಹ್ಮದಿಂದ ಅಸ್ತಿತ್ವಕ್ಕೆ ಬಂದಿತು. ಬ್ರಹ್ಮವನ್ನು ಶಿವ ಎಂದು ಕರೆಯಬಹುದಾದರೆ ಈ ಪ್ರಪಂಚವನ್ನು ಶಕ್ತಿ ಎನ್ನಬಹುದು. ವಾಸ್ತವವಾಗಿ ಶಿವ ಮತ್ತು ಶಕ್ತಿಯರಲ್ಲಿ ಭೇದವಿಲ್ಲ (ನಾಮ ೯೯೯ರಲ್ಲಿ ಇದರ ಕುರಿತು ಹೆಚ್ಚಿನ ವಿವರಣೆಯನ್ನು ನೋಡೋಣ). ಅಶಾಶ್ವತತೆಯು ಶಾಶ್ವತತೆಯನ್ನು ಅನುಸರಿಸುತ್ತದೆ ಅಥವಾ ಅಸತ್ ಎನ್ನುವುದು ಸತ್ ಅನ್ನು ಅನುಸರಿಸುತ್ತದೆ. ಸತ್ ಮತ್ತು ಅಸತ್ ಇವುಗಳು ಜೊತೆಯಾಗಿ ಇರುತ್ತವೆ. ಅವುಗಳು ಜೊತೆಯಲ್ಲಿಲ್ಲದಿದ್ದರೆ ಆಗ ಬ್ರಹವೂ ಇರದೂ ಮತ್ತು ಈ ವಿಶ್ವವೂ ಇರದು. ಸತ್ ಮತ್ತು ಅಸತ್ ಎನ್ನುವುದು ಮಾನವನ ಗ್ರಹಿಕೆಯಾಗಿದೆ ಆದರೆ ವಾಸ್ತವವಾಗಿ ಅವೆರಡೂ ಬೇರೆಯಲ್ಲ; ಏಕೆಂದರೆ ಅಸತ್ ಎನ್ನುವುದು ಸತ್‌ನ ಕನ್ನಡಿಯ ಬಿಂಬವಾಗಿದೆ.

Aṣṭamūrtiḥ अष्टमूर्तिः (662)

೬೬೨. ಅಷ್ಟಮೂರ್ತಿಃ

          ದೇವಿಯು ಎಂಟು ವಿಧದ ರೂಪವುಳ್ಳವಳಾಗಿದ್ದಾಳೆ. ಶಿವ-ಶಕ್ತಿಯರಿಬ್ಬರೂ ಸಹ ಎಂಟೆಂಟು ರೂಪವುಳ್ಳವರಾಗಿದ್ದಾರೆ. ಶಿವನ ಎಂಟು ರೂಪಗಳೆಂದರೆ, ಭುವನ, ಶರ್ವ, ಈಶಾನ, ಪಶುಪತಿ, ರುದ್ರ, ಉಗ್ರ, ಭೀಮ ಮತ್ತು ಮಹಾನ್. ಶಕ್ತಿಯ ಎಂಟು ರೂಪಗಳೆಂದರೆ ಬ್ರಾಹ್ಮೀ, ಮಾಹೇಶ್ವರೀ, ಕೌಮಾರೀ, ವೈಷ್ಣವೀ, ವಾರಾಹೀ, ಮಾಹೇಂದ್ರೀ, ಚಾಮುಂಡಾ ಮತ್ತು ಮಹಾಲಕ್ಷ್ಮೀ. ಆತ್ಮಗಳನ್ನು ಅವುಗಳ ಗುಣ ಲಕ್ಷಣಗಳಿಗನುಗುಣವಾಗಿ ಎಂಟು ವಿಭಿನ್ನ ವರ್ಗಗಳಾಗಿ ವಿಂಗಡಿಸುತ್ತಾರೆ. ಒಂದು ಆತ್ಮವು ಹೆಚ್ಚು ಕರ್ಮಗಳೊಳಗೆ ಹುದುಗಿ ಹೋಗಿದ್ದರೆ ಅದನ್ನು ಶುದ್ಧವಾದುದೆಂದು ಪರಿಗಣಿಸಲಾಗುವುದಿಲ್ಲ ಮತ್ತು ಯಾವ ಆತ್ಮಕ್ಕೆ ಅತೀ ಕನಿಷ್ಠ ಕರ್ಮ ಶೇಷವು ಇರುತ್ತದೆಯೋ ಅದನ್ನು ಅತ್ಯಂತ ಶುದ್ಧವಾದುದೆಂದು ಪರಿಗಣಿಸುತ್ತಾರೆ. ಅತ್ಯಂತ ಪರಿಶುದ್ಧವಾದ ಆತ್ಮವು ಈ ಭೂಮಿಯ ಮೇಲೆ ಮತ್ತೆ ಜನ್ಮಿಸದು, ಆದರೆ ಅವರು ದೇವತೆಗಳ ಇಲ್ಲಾ ಅತಿಮಾನವರ ರೂಪದಲ್ಲಿ ಜನಿಸುತ್ತಾರೆ. ಇವೆರಡನ್ನು ವೈಪರೀತ್ಯಗಳೆಂದು ಪರಿಗಣಿಸಿ ಎಂಟು ವಿಧವಾದ ಆತ್ಮಗಳನ್ನು ಈ ವಿಧವಾಗಿ ವಿಂಗಡಿಸಬಹುದು. ಅವುಗಳೆಂದರೆ - ೧) ಜೀವಾತ್ಮ, ೨) ಅಂತರಾತ್ಮ, ೩) ಪರಮಾತ್ಮ, ೪) ನಿರ್ಮಲಾತ್ಮ (ಅಕಳಂಕಿತ ಆತ್ಮ), ೫) ಶುದ್ಧಾತ್ಮ, ೬) ಜ್ಞಾನಾತ್ಮ, ೭) ಮಹಾತ್ಮ ಮತ್ತು ೮) ಭೂತಾತ್ಮ (ಮೂಲಭೂತಾತ್ಮ).

          ಪಂಚಭೂತಗಳು, ಸೂರ್ಯ, ಚಂದ್ರ ಮತ್ತು ಜೀವಿ ಇವುಗಳನ್ನು ಎಂಟು ವಿಧವಾದ ಶರೀರಗಳೆಂದು ಪರಿಗಣಿಸುತ್ತಾರೆ. ಈ ಸಹಸ್ರನಾಮದ ಕೃತಿಕಾರರು ಸಹ ಎಂಟು ವಾಗ್ದೇವಿಯರು ಎನ್ನುವುದನ್ನು ಗಮನಿಸಿ. 

          ಶ್ರೀಕೃಷ್ಣನು ಭಗವದ್ಗೀತೆಯಲ್ಲಿ (೭.೪ ಮತ್ತು ೫) ಇದರಲ್ಲಿ ಹೇಳುತ್ತಾನೆ, "ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ ಇವುಗಳು ನನ್ನ ಅಷ್ಟವಿಧ ರೂಪಗಳಾಗಿವೆ. ಇವು ನನ್ನ ಕೆಳಸ್ತರದ ಪ್ರಕೃತಿಯವು (ಅಪರಾ ಅಥವಾ ನಿಕೃಷ್ಟ ಪ್ರಕೃತಿ)". ಯಾವಾಗ ಕೃಷ್ಣನು ಇವುಗಳನ್ನು ಕೆಳಸ್ತರದವು ಎಂದು ಹೇಳುತ್ತಾನೆಯೋ ಆಗ ಉನ್ನತವಾದ ಮತ್ತೊಂದು ಪ್ರಕೃತಿ ಇರಲೇಬೇಕಲ್ಲವೇ ಅದುವೇ ಪರಮ ಚೈತನ್ಯ ಅಥವಾ ಪರಬ್ರಹ್ಮವಾಗಿದೆ.

        ಬ್ರಹ್ಮದ ಸರ್ವವ್ಯಾಪಕ ಸಿದ್ಧಾಂತವನ್ನು ಆಧರಿಸಿ ಯಾವುದೇ ವಿಧವಾದ ಅಸ್ತಿತ್ವವಿರಲಿ (ವಸ್ತುವಿರಲಿ) ಅದು ಬ್ರಹ್ಮವಲ್ಲದೇ ಬೇರೆ ಅಲ್ಲ. ಈ ಎಂಟು ವಿಧವಾದ ರೂಪಗಳು ಅಥವಾ ಗುಣಗಳು ಲೀನಗೊಂಡು ಬ್ರಹ್ಮವಾಗುತ್ತವೆ. ಈ ಎಂಟು ರೂಪಗಳು ಬ್ರಹ್ಮದಿಂದ ಉದ್ಭವಿಸಿ, ಶಿವ ಅಥವಾ ಶಕ್ತಿಯರ ಆ ಎಂಟು ರೂಪಗಳು ಬ್ರಹ್ಮದ ವಿವಿಧ ಅಂಶಗಳನ್ನು ವ್ಯಕ್ತಪಡಿಸುತ್ತವೆ ಎನ್ನುವುದು ವಿವೇಕದ ಮಾತಾಗುತ್ತದೆ. ಅದು ಬಹುವಿಧ ಆಕಾರಗಳನ್ನುಳ್ಳದ್ದೇ ಆಗಲಿ ಅಥವಾ ಆಕಾರ ರಹಿತವೇ ಆಗಲಿ ಈ ಪ್ರಪಂಚದ ಅಸ್ತಿತ್ವದಲ್ಲಿರುವ ಪ್ರತಿ ವಸ್ತುವೂ ದೇವಿಯ ರೂಪವೇ ಆಗಿದೆ, ಇದು ದೇವಿಯ ಸರ್ವವ್ಯಾಪಕತೆಯನ್ನು ದೃಢಪಡಿಸುತ್ತದೆ.

                                                                ******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 657 - 662 http://www.manblunder.com/2010/03/lalitha-sahasranamam-657-662.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Wed, 11/06/2013 - 04:01

ಶ್ರೀಧರರೆ, "೧೫೧. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೬೫೭ - ೬೬೨
___________________________
.
೬೫೭. ಯುಗಂಧರಾ
ಯುಗವೆನ್ನುವ ಕಾಲಘಟ್ಟ ಕೃತ, ತ್ರೇತ್ರಾ, ದ್ವಾಪರ, ಕಲಿಯುಗ ಪೂರ
ಲಕ್ಷಾಂತರ ವರ್ಷ ಚಕ್ರ, ಮಹಾ ಪ್ರಳಯ, ಮಹಾ ವಿನಾಶದ ಸಮರ
ಹೊಸತಿನ ಸೃಷ್ಟಿ ಸಮಯ, ಯುಗಚಕ್ರ ನಿಯಂತ್ರಕಿ ಲಲಿತೆ ಸಾಕಾರ
ಶಿವಶಕ್ತಿಯರ ಬೆಸೆವಯುಗ, ಜಗ ಪ್ರವರ್ತಕಳಾಗಿ ದೇವಿ ಯುಗಂಧರಾ ||
.
೬೫೮. ಇಚ್ಛಾಶಕ್ತಿ-ಜ್ಞಾನಶಕ್ತಿ-ಕ್ರಿಯಾಶಕ್ತಿ-ಸ್ವರೂಪಿಣೀ
ತ್ರಿಶಕ್ತಿ ರೂಪಿಣಿ ದೇವಿ, ತ್ರಿಶಿಕ ಈಶ್ವರಿಯಲಡಗಿದ ತ್ರಿಪುಟಿ ಶಕ್ತಿ
ಇಚ್ಛಾಶಕ್ತಿಗೆ ಪರಮಚೈತನ್ಯ ವಿಕಸನ, ನಿಜ ಪ್ರಕ್ರಿಯೆ ಜ್ಞಾನ ಶಕ್ತಿ
ವೈವಿಧ್ಯವಾಗಿಸಿ ಸೃಷ್ಟಿಗೆ ಕಾರಣ ಕ್ರಿಯಾಶಕ್ತಿ, ಪರಾಶಕ್ತಿ ತ್ರಿಗುಣಿ
ಅಂತರ್ವಿಕಸನದಿಹ ಇಚ್ಛಾಶಕ್ತಿ-ಜ್ಞಾನಶಕ್ತಿ-ಕ್ರಿಯಾಶಕ್ತಿಸ್ವರೂಪಿಣೀ ||
.
೬೫೯. ಸರ್ವಾಧಾರಾ
ಸಕಲ ಸರ್ವಕೂ ಆಧಾರವಾಗಿಹ ಇಚ್ಛೆ, ಜ್ಞಾನ, ಕಾರ್ಯಶಕ್ತಿ ಲಲಿತೆ
ಸ್ಥೂಲ ಸೂಕ್ಷ್ಮ ರೂಪದ ನಡುವಿನೆಲ್ಲಕು ತ್ರಿಶಕ್ತಿಯ ಆಧಾರ ಬಳಸುತೆ
ಸೃಷ್ಟಿ ಸ್ಥಿತಿ ಲಯಸಮೇತ ಕಾಪಿಡಲಿಚ್ಛೆ ವಿಕಸಿಸಿ ಜ್ಞಾನವಾಗಿ ವಿಸ್ತಾರ
ತ್ರಿಕಾರ್ಯರೂಪ ಕ್ರಿಯಾಶಕ್ತಿ, ಬಳಸೆಲ್ಲಕಾಧಾರ ದೇವಿ ಸರ್ವಾಧಾರಾ ||
.
೬೬೦. ಸುಪ್ರತಿಷ್ಠಾ
ಆಧಾರಕು ಮೀರಿದ ಅಳ ಬುನಾದಿ, ಲಲಿತೆ ಮೂಲಾಧಾರ
ಅವಳಿಚ್ಛೆ ಜ್ಞಾನ ಕ್ರಿಯಾಶಕ್ತಿ ವಿನಃ ಅಸ್ತಿತ್ವವೆ ಇಲ್ಲದ ವಿಚಾರ
ಅವ್ಯಕ್ತದವ್ಯಕ್ತ ಅಂತಿಮದ ಪರಮೋನ್ನತ ನಿವಾಸದ ಅದೃಷ್ಟ
ಹೊಂದಿದವರಾ ಮತ್ತೆ ನಶ್ವರ ಜಗಕೆ ಮರಳಿಸಳು ಸುಪ್ರತಿಷ್ಠಾ ||
.
೬೬೧. ಸದಸದ್ರೂಪ-ಧಾರಿಣೀ
ಶಾಶ್ವತತೆಯಿಂದ ಅಶಾಶ್ವತೆ, ಅಸ್ಥಿತ್ವ ನಿರಸ್ಥಿತ್ವವೆರಡರಲು ಇಹ ತತ್ವ
ಬ್ರಹ್ಮವೊಂದೆ ಸತ್-ಶಾಶ್ವತ, ಮಿಕ್ಕೆಲ್ಲ ಅಸತ್-ಅಶಾಶ್ವತವಿಹ ಅಸ್ಥಿತ್ವ
ಸತ್ ಪರಬ್ರಹ್ಮದಿಂದಸ್ಥಿತ್ವಕೆ ಪ್ರಪಂಚ, ಶಿವಶಕ್ತಿ ನಿರ್ಭೇಧ ಬಿಂಬ ದನಿ
ಸತ್ ಅಸತ್ ಅದ್ವೈತವಿರದೆ,ಇರದಾ ಸಮಸ್ತ ಸದಸದ್ರೂಪ-ಧಾರಿಣೀ ||
.
ಮೊದಲೆಲ್ಲಿತ್ತು ಲೋಕ, ವಿಕಸಿಸದೆ ಬ್ರಹ್ಮದೊಳಗೆ ಪ್ರಸ್ತುತ
ತಾನಾಗೆ ಪ್ರಕಟ, ನಾಮರೂಪದ ಪ್ರಪಂಚ ಆವಿರ್ಭವಿಸುತ
ಶೂನ್ಯದಿಂದ ಬರದೇನು, ಜಗದಸ್ಥಿತ್ವದ ಮೊದಲಿಹ ಅಸ್ತಿತ್ವ
ತರ್ಕಪೂರ್ಣ ಶಬ್ದ ಸಾಂಗತ್ಯ, ಭ್ರಮೆಯಾಗದ ಸತ್ಯ ವಾಸ್ತವ ||
.
೬೬೨. ಅಷ್ಟಮೂರ್ತಿಃ
ಅಷ್ಟ ವಿಧ ರೂಪ ಸಲ್ಲಾಪ, ಶಿವ-ಶಕ್ತಿಯರ ಪ್ರಕಟಿತ ಸ್ವರೂಪ ಸ್ವಭಾವ
ಭುವನ-ಶರ್ವ-ಈಶಾನ-ಪಶುಪತಿ-ರುದ್ರ-ಉಗ್ರ-ಭೀಮ-ಮಹಾನ್ ಶಿವ
ಬ್ರಾಹ್ಮೀ-ಮಾಹೇಶ್ವರೀ-ಕೌಮಾರೀ-ವೈಷ್ಣವೀ-ವಾರಾಹೀಗಳ ಜತೆ ಸ್ತುತಿಸಿ
ಮಾಹೇಂದ್ರೀ-ಚಾಮುಂಡಾ-ಮಹಾಲಕ್ಷ್ಮೀ ಸಮೇತ ಶಕ್ತಿ ಈ ಅಷ್ಟಮೂರ್ತಿಃ ||
.          
ದೇವತೆ ಅತಿ ಮಾನವ ವೈಪರೀತ್ಯದ ಹೊರತು ಅತ್ಮಗಳೆಂಟುಂಟು
ಜೀವಾತ್ಮ-ಅಂತರಾತ್ಮ-ಪರಮಾತ್ಮ-ನಿರ್ಮಲಾತ್ಮ-ಶುದ್ದಾತ್ಮ ನಂಟು
ಜ್ಞಾನಾತ್ಮ-ಮಹಾತ್ಮ-ಮಹಾಭೂತಾತ್ಮಗಳಾಗೆಂಟು, ವಾಗ್ದೇವಿ ಸಹ
ಪಂಚಭೂತ-ಸೂರ್ಯ-ಚಂದ್ರ-ಜೀವಿ ಅಷ್ಟ ಶರೀರವಾಗಿರುವ ತರಹ ||
.
ಕೆಳಸ್ತರ ಪ್ರಕೃತಿಯ ಅಪರಾ ರೂಪ ಭೂಮಿ-ನೀರು-ಅಗ್ನಿ-ವಾಯು ಜತೆ
ಆಕಾಶ-ಮನಸ್ಸು-ಬುದ್ಧಿ-ಅಹಂಕಾರ ಸೇರಿ ಬ್ರಹ್ಮದ ಅಷ್ಟ ರೂಪವಾಯ್ತೆ
ಪರಮ ಚೈತನ್ಯ ಸರ್ವವ್ಯಾಪಿ ಪರಬ್ರಹ್ಮ, ಅಸ್ಥಿತ್ವದಲಿರುವುದೆಲ್ಲ ರೂಪ
ಲೀನವಾಗಿ ಬ್ರಹ್ಮ, ಅಷ್ಟಾಂಶ ಪ್ರತಿನಿಧಿಸಿ ಮರ್ಮ ಎಲ್ಲೆಡೆಗಿಹ ಸ್ವರೂಪ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು