೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೭೮೬ - ೭೮೯
Mantriṇī-nyasta-rājyadhūḥ मन्त्रिणी-न्यस्त-राज्यधूः (786)
೭೮೬. ಮಂತ್ರಿಣೀ-ನ್ಯಸ್ತ-ರಾಜ್ಯಧೂಃ
ದೇವಿಯು ಈ ಸಮಸ್ತ ವಿಶ್ವದ ಆಡಳಿತಾತ್ಮಕ ಜವಾಬ್ದಾರಿಗಳನ್ನು ಮಂತ್ರಿಣೀ ದೇವಿಗೆ ವಹಿಸಿದ್ದಾಳೆ. ಮಂತ್ರಿಣೀ ಎನ್ನುವುದು ಮಂತ್ರಿ ಶಬ್ದದ ಸ್ತ್ರೀಲಿಂಗ ರೂಪವಾಗಿದೆ. ಆಕೆಯ ಮಂತ್ರಿಯು ಶ್ಯಾಮಲಾ ದೇವಿ ಆಗಿದ್ದಾಳೆ. ಮಂತ್ರಿಣೀ ದೇವಿಯ ಕುರಿತ ಪ್ರಸ್ತಾವನೆ ಇದುವರೆಗಾಗಲೇ ನಾಮ ೬೯ ಹಾಗು ೭೫ರಲ್ಲಿ ಬಂದಿದೆ. ಶ್ಯಾಮಲಾ ದೇವಿಯನ್ನು ರಾಜ ಮಾತಂಗಿ ಮತ್ತು ರಾಜ ಶ್ಯಾಮಲಾ ಎನ್ನುವ ಹೆಸರುಗಳಿಂದಲೂ ಕರೆಯುತ್ತಾರೆ.
ಯಾರು ದೇವಿಯನ್ನು ಮಂತ್ರಗಳ ಮೂಲಕ ಪೂಜಿಸುತ್ತಾರೋ ಅವರಿಗೂ ಸಹ ಮಂತ್ರಿಣೀ ಶಬ್ದವನ್ನು ಬಳಸುತ್ತಾರೆಂದು ಹೇಳಲಾಗುತ್ತದೆ. ಇಲ್ಲಿ ಮಂತ್ರಗಳೆಂದರೆ ಕೇವಲ ಪಂಚದಶೀ ಮತ್ತು ಷೋಡಶೀ ಮಾತ್ರವಲ್ಲ. ಇಲ್ಲಿ ಮಂತ್ರಗಳೆಂದು ಹೇಳಿರುವುದು ಅತ್ಯಂತ ಶ್ರೇಷ್ಠ ಶ್ರೇಣಿಗೆ ಸೇರಿದವುಗಳು. ದೇವಿಯು ’ಮಾತೃಕಾ ವರ್ಣ ರೂಪಿಣೀ” (ನಾಮ ೫೭೭) ಆಗಿರುವುದರಿಂದ ಎಲ್ಲಾ ಅಕ್ಷರಗಳು ಅವಳಿಗೆ ಸೇರಿವೆ ಮತ್ತು ಎಲ್ಲಾ ಅಕ್ಷರಗಳೂ ಅವಳಿಂದಲೇ ಉದ್ಭವಿಸಿವೆ. ಆದ್ದರಿಂದ ದೇವಿಗೆ ಮತ್ತು ಮಂತ್ರಗಳಿಗೆ ಯಾವುದೇ ವ್ಯತ್ಯಾಸವಿಲ್ಲ. ಈ ವಿಷಯವನ್ನು ’ಸರ್ವ ಮಂತ್ರ ಸ್ವರೂಪಿಣೀ’ ಎನ್ನುವ ೨೦೪ನೇ ನಾಮವು ದೃಢ ಪಡಿಸುತ್ತದೆ. ಮಂತ್ರ ಎನ್ನುವುದನ್ನು, ’ಸಂಯೋಜಿಸಲ್ಪಟ್ಟ ಮತ್ತು ಅಭಿವ್ಯಕ್ತಗೊಳಿಸಲ್ಪಟ್ಟ ಆಲೋಚನೆಯ ಶಕ್ತಿ ರೂಪ’ ಎಂದು ನಿರ್ವಚಿಸಲಾಗುತ್ತದೆ. ಆಳವಾದ ಅರ್ಥಗಳನ್ನು ತಿಳಿದುಕೊಂಡಿದ್ದರೆ ಮಾತ್ರ ಮಂತ್ರಗಳು ಉಪಯೋಗಕ್ಕೆ ಬರುತ್ತವೆ. ಧ್ಯಾನದೊಂದಿಗೆ ಪಠಿಸಿದ ಮಂತ್ರಗಳು ತ್ವರಿತವಾಗಿ ಫಲಗಳನ್ನು ಕೊಡುತ್ತವೆ. ಜಪ ಮಂತ್ರಗಳು ನಿಜವಾದ ಮಹತ್ವವನ್ನು ಅರಿತು ಜಪಿಸದ ಹೊರತು ನಿರೀಕ್ಷಿತ ಫಲಗಳನ್ನು ನೀಡುವುದಿಲ್ಲ. ಮಂತ್ರಗಳು ಬೀಜಾಕ್ಷರಗಳ (ಸಂಯುಕ್ತಾಕ್ಷರಗಳ) ಹೊರತು ಮತ್ತೇನೂ ಅಲ್ಲ. ಬೀಜಾಕ್ಷರವೆಂದರೆ ಏಕಾಕ್ಷರವನ್ನು ಹೊಂದಿದ್ದು ಅದು ಒಂದು ಅಥವಾ ಹೆಚ್ಚಿನ ವ್ಯಂಜನಗಳು ಮತ್ತು ಒಂದು ಸ್ವರಾಕ್ಷರವನ್ನು ಒಳಗೊಂಡು ಬಿಂದುವಿನೊಂದಿಗೆ ಕೊನೆಗೊಳ್ಳುತ್ತದೆ. ವಾಮಕೇಶ್ವರ ತಂತ್ರವು ಮಂತ್ರಗಳ ಕುರಿತಾದ ಹೆಚ್ಚಿನ ವಿವರಣೆಗಳನ್ನು ಕೊಡುತ್ತದೆ (ವಿವರಗಳಿಗೆ ನಾಮ ೩೫೧ ಮತ್ತು ೯೪೫ನ್ನು ಸಹ ನೋಡಿ).
ಶಿವ ಸೂತ್ರವು (೨.೧) ಚಿತ್ತಮ್ ಮಂತ್ರಃ चित्तम् मन्त्रः ಎಂದು ಹೇಳುತ್ತದೆ. ಚಿತ್ತಮ್ ಎಂದರೆ ಅತ್ಯುನ್ನತ ಪ್ರಜ್ಞೆಯನ್ನು ವ್ಯಕ್ತಿಗತ ಜೀವಿಯೊಳಗೆ ಪರಿಮಿತಗೊಳಿಸುವುದಾಗಿದೆ. ಇದನ್ನೇ, ಒಂದು ಆತ್ಮಕ್ಕೆ (ವ್ಯಕ್ತಿಯೊಬ್ಬನಿಗೆ) ಪರಿಮಿತವಾಗಿರುವ ಬ್ರಹ್ಮಾಂಡ ಪ್ರಜ್ಞೆ ಎಂದು ವ್ಯಾಖ್ಯಾನಿಸಬಹುದು. ಹೀಗೆ ಚಿತ್ತವೇ ಮಂತ್ರವೆಂದು ಹೇಳಿದ ನಂತರ ಮುಂದಿನ ಸೂತ್ರವು (೨.೨) ನಿರಂತರ ಸಾಧನೆಯು ಗುರಿಯೆಡೆಗೆ (ಮಂತ್ರ ಸಿದ್ಧಿ ಅಥವಾ ಮಂತ್ರಫಲದೆಡೆಗೆ) ಕೊಂಡೊಯ್ಯುತ್ತದೆ ಎಂದು ಹೇಳುತ್ತದೆ. ಮೂರನೆಯ ಸೂತ್ರವು (೨.೩) ಮಂತ್ರಗಳ ಫಲವೆಂದರೆ ಅದ್ವೈತ ಅಥವಾ ಬ್ರಹ್ಮದೊಂದಿಗೆ ತಾದಾತ್ಯ್ಮ (ಸಾಕ್ಷಾತ್ಕಾರ) ಹೊಂದುವುದಾಗಿದೆ. ಮಂತ್ರವು ಸಾಧಕನ ಕೈಯ್ಯಲ್ಲಿರುವ ರಹಸ್ಯ ಸಲಕರಣೆಯಾಗಿದ್ದು ಅದು ಅವನನ್ನು ಪರಬ್ರಹ್ಮದೊಂದಿಗೆ ಸಂಪರ್ಕವೇಡಿಸಿಕೊಳ್ಳಲು ಸಹಾಯ ಮಾಡುವುದರೊಂದಿಗೆ ಅಂತಿಮವಾಗಿ ಅವನು ಬ್ರಹ್ಮದಲ್ಲಿಯೇ ಲೀನವಾಗುವಂತೆ ಮಾಡುತ್ತದೆ. ಯಾವಾಗ ಮನಸ್ಸು ಮತ್ತು ಮಂತ್ರಕ್ಕೆ ಸೂಕ್ತವಾದ ಸಂವಹನವೇರ್ಪಡುತ್ತದೆಯೋ ಆಗ ಬ್ರಹ್ಮಸಾಕ್ಷಾತ್ಕಾರವಾಗುತ್ತದೆ.
ಈ ನಾಮವು ದೇವಿಯು ಅಂತಹ ಗಹನವಾದ ಮತ್ತು ಬಲಿಷ್ಠವಾದ ಮಂತ್ರಗಳ ರೂಪದಲ್ಲಿದ್ದಾಳೆನ್ನುವುದನ್ನು ಸೂಚಿಸುತ್ತದೆ. ದೇವಿಯು ಸಮಸ್ತ ಮಂತ್ರಗಳ ಒಟ್ಟು ಮೊತ್ತವಾಗಿದ್ದಾಳೆ.
Tripureśī त्रिपुरेशी (787)
೭೮೭. ತ್ರಿಪುರೇಶೀ
ಶಿವನು ಬಂಗಾರ, ಬೆಳ್ಳಿ ಮತ್ತು ಕಬ್ಬಿಣದ ಮೂರು ಕೋಟೆಗಳಿಂದ ರಚಿಸಲ್ಪಟ್ಟ ತ್ರಿಪುರವೆಂಬ ಅಸುರರ ಪಟ್ಟಣವನ್ನು ಭಸ್ಮ ಮಾಡಿದ್ದನು. ಈ ಮೂರು ಕೋಟೆಗಳು ಅಜ್ಞಾನದ ವಿವಿಧ ಹಂತಗಳಲ್ಲದೆ ಬೇರೇನೂ ಅಲ್ಲ. ಶಿವನು ತ್ರಿಪುರವನ್ನು ಸುಟ್ಟದ್ದರಿಂದ ಅವನು ತ್ರಿಪುರೇಶನೆನಿಸಿದರೆ ಅವನು ಅರ್ಧಾಂಗಿಯು ತ್ರಿಪುರೇಶಿಯಾಗಿದ್ದಾಳೆ. ತ್ರಿಪುರೇಶಿ ಎನ್ನುವುದು ತಂತ್ರ ಶಾಸ್ತ್ರಗಳ ಅಧಿದೇವತೆಯಾದ ಭೈರವಿಯನ್ನೂ ಸೂಚಿಸಬಹುದು. ಭೈರವೀ ದೇವಿಯನ್ನು ಎಲ್ಲಾ ವಿಧವಾದ ತಂತ್ರ ಶಾಸ್ತ್ರಗಳ ಅನುಯಾಯಿಗಳು ಪೂಜಿಸುತ್ತಾರೆ.
ಅಥವಾ ಈ ನಾಮವನ್ನು ದೇವಿಯು ತ್ರಿಪುರಾಧಿಪತಿ ಅಂದರೆ ತ್ರಿಲೋಕಗಳಾದ ಬ್ರಹ್ಮ, ವಿಷ್ಣು ಮತ್ತು ಶಿವ ಲೋಕಗಳ ಒಡತಿ ಎಂದೂ ಅರ್ಥೈಸಬಹುದು. ಈ ಮೂರೂ ಲೋಕಗಳು ದೇವಿಯು ನಿವಾಸವಾಗಿರುವ ಮೇರು ಪರ್ವತದ ಬಳಿ ಇವೆ (೭೭೫ನೇ ನಾಮ ಮೇರು-ನಿಲಯಾವನ್ನು ನೋಡಿ).
Jayatsenā जयत्सेना (788)
೭೮೮. ಜಯತ್ಸೇನಾ
ದೇವಿಯು ವಿಜಯೀ ಸೇನೆಯನ್ನು ಹೊಂದಿದ್ದಾಳೆ. ಆಕೆಯು ರಾಕ್ಷಸರು ಅಥವಾ ಅಸುರೀ ಕೃತ್ಯಗಳ ಮೇಲೆ ಜಯವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಹಿಂದೂ ಪುರಾಣಗಳು ಬಹಳಷ್ಟು ಬಾರಿ ರಾಕ್ಷಸರ ಉಲ್ಲೇಖವನ್ನು ಮಾಡುತ್ತವೆ. ಈ ರಾಕ್ಷಸರು ದುಷ್ಟತನದ ಮೂರ್ತ ರೂಪವಾಗಿದ್ದಾರೆ ಮತ್ತು ಅವರ ಮೇಲೆ ವಿಜಯವನ್ನು ಸಾಧಿಸುವ ದೇವತೆಗಳು ಸದ್ಗುಣಗಳನ್ನು ಪ್ರತಿನಿಧಿಸುತ್ತಾರೆ. ಸದ್ಗುಣಗಳು ಶಾಶ್ವತವಾಗಿರುತ್ತವೆ.
Nistraiguṇyā निस्त्रैगुण्या (789)
೭೮೯. ನಿಸ್ತ್ರೈಗುಣ್ಯಾ
ದೇವಿಯು ತ್ರಿಗುಣ ರಹಿತಳಾಗಿದ್ದಾಳೆ. ಈ ಮೂರು ಗುಣಗಳು ಪ್ರಕೃತಿಯ ಸಹಯೋಗದೊಂದಿಗೆ ಸೃಷ್ಟಿಗೆ ಕಾರಣವಾಗಿವೆ. ಹೆಚ್ಚಿನ ವಿವರಗಳಿಗೆ ದಯಮಾಡಿ ನಾಮ ೧೩೯, ೩೯೭, ೩೯೮ ಮತ್ತು ೩೯೯ ಇವುಗಳನ್ನು ನೋಡಿ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 786 - 789 http://www.manblunder.com/2010/05/lalitha-sahasranamam-786-789.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಶ್ರೀದರ ಭಂಡ್ರಿಯವರೆ
ಈ ದಿನ ಒಟ್ಟಿಗೆ 'ಕ್ಷರಾಕ್ಷರಾತ್ಮಿಕಾ' ದಿಂದ ಮುಂದುವರೆದು ಪೂರ್ಣ ಓದಿದೆ.
ಶ್ರೀಯುತ ವಿ. ರವಿಯವರ ವಿಷಯ ಸಂಗ್ರಹಣವಂತು ಅದ್ವೀತಿಯ. ಅತಿ ಕಷ್ಟಕರವಾದ ಕೆಲಸವದು
ಹಾಗೆ ನಿಮ್ಮ ಶ್ರಮ ಹಾಗು ಆಳವಾದ ಬಾಷಾ ಜ್ಞಾನವು ಎದ್ದು ಕಾಣುತ್ತಿದೆ.
ನಿಮಗೆ ಸಾಥ್ ಆಗಿ ನಾಗೇಶರು ಮುಂದುವರೆದಿದ್ದಾರೆ
ಅತಿ ಉತ್ತಮ ಕಾರ್ಯವಿದು. ಯಾರ ಮೆಚ್ಚುಗೆಗಿಂತ ಸಿಗುವ ಆತ್ಮತೃಪ್ತಿ ಅಮೋಘ ಇಂತಹ ಕಾರ್ಯಗಳಲ್ಲಿ
ತಮ್ಮೆಲ್ಲರಿಗೆ ಅಭಿನಂದನೆಗಳು
ದಯಮಾಡಿ ಮುಂದುವರೆಸಿ...
In reply to ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ by partha1059
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಪಾರ್ಥ ಸಾರ್,
ಶ್ರೀಧರರು ಉತ್ತರಿಸುವ ಮೊದಲೆ ಒಂದು ಮಾತು - ಈ ಕಾರ್ಯದಲ್ಲಿ ಪ್ರಚಾರಕ್ಕಿಂತ ಆತ್ಮ ತೃಪ್ತಿ ಮತ್ತು ಸೀಮಿತವಾದರೂ ಸಹೃದಯ ಪೂರ್ಣ ಓದುಗ ಬಳಗದ ಪ್ರೋತ್ಸಾಹವೆ ಪ್ರೇರಕ ಶಕ್ತಿ. ನೀವು ಹೇಳಿದ ಅಂಶದ ಜತೆಗೆ ಶ್ರೀಧರರ ಈ ಕಾರ್ಯದಿಂದಾಗುತ್ತಿರುವ ಮತ್ತೊಂದು ಮಹದನುಕೂಲವೆಂದರೆ, ನಮಗೆ ಪರಿಚಯವೆ ಇರದಿದ್ದ ಎಷ್ಟೋ ಆಧ್ಯಾತ್ಮಿಕ ಸಿದ್ದಾಂತಗಳು, ಹೊಸ ಪದಗಳು, ಗೊತ್ತಿದ್ದರೂ ಅರ್ಥವಾಗದಿದ್ದ ಪದದ-ಅರ್ಥಗಳು - ಹೀಗೆ ಎಷ್ಟೊಂದು ರೀತಿಯಲ್ಲಿ ಜ್ಞಾನಾರ್ಜನೆಯಾಗುತ್ತಿದೆ. ನನಗಂತೂ ನನ್ನರಿವಿಲ್ಲದೆ ಆ ಪದಗಳು, ಸಿದ್ದಾಂತಗಳು, ವಿವರಗಳು ಕವನದಲ್ಲೊ, ಬರಹದಲ್ಲೊ ನುಸುಳಿಬಿಡುತ್ತಿವೆ - ಅಷ್ಟರ ಮಟ್ಟಿಗೆ ಚೆನ್ನಾಗಿ ಕಲಿಸುತ್ತಿದ್ದಾರೆ ಶ್ರೀಧರರು. ಅದಕ್ಕೆ ಅವರಿಗೆ ಮತ್ತು ಅವರ ಹಿನ್ನಲೆಯ ಸ್ಪೂರ್ತಿ ಶಕ್ತಿಯಾದ ಶ್ರೀಯುತ ರವಿಯವರಿಗೆ ನಮನಗಳು. ಒಮ್ಮೆ ಹಿಂದೆ ತಿರುಗಿ ನೋಡಿದರೆ ಆಗಲೆ ಯಾನದ ಮುಕ್ಕಾಲು ಪಾಲು ಕ್ರಮಿಸಿ ಬಂದಾಗಿದೆ. ಅದಕ್ಕೂ ಶ್ರೀಧರರು ಅಭಿನಂದನಾರ್ಹರು!
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ by nageshamysore
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಪಾರ್ಥ ಸರ್,
ನಾಗೇಶರೆಂದಂತೆ ಉತ್ತಮ ಅಭಿರುಚಿಯುಳ್ಳ ಓದುಗರೂ ಬರವಣಿಗೆಗೆ ಸಹಕಾರಿಯಾಗುತ್ತಾರೆ. ಅಂತಹ ಓದುಗರ ಸಾಲಿನಲ್ಲಿ ನೀವು ಪ್ರಥಮರೆಂದು ಹೇಳಬಹುದು.
ಇರಲಿ, ನೀವು ಹೇಳಿದ ಹಾಗೆ ನಾಗೇಶ್ ಅವರ ಕವನಗಳು ಈ ಸರಣಿಯೊಂದಿಗೆ ಜೋಡಣೆಗೊಳ್ಳದಿದ್ದರೆ, ಈ ಸರಣಿಗೆ ಪ್ರತಿಕ್ರಿಯೆಗಳೇ ಇಲ್ಲಾ ಎಂದು ಬೇಸರದಿಂದ ಅರ್ಧಕ್ಕೇ ನಿಲ್ಲಿಸುತ್ತಿದ್ದೆನೋ ಏನೋ? ಅದಕ್ಕೇ ಒಮ್ಮೆ ನಾಗೇಶರಿಗೆ ಹೇಳಿದ್ದು ಇದು ಖಂಡಿತಾ ದೇವಿಯ ಕೃಪೆ ಎಂದು ಇಲ್ಲದಿದ್ದರೆ, ಇಷ್ಟು ದೀರ್ಘ ಸರಣಿಯನ್ನು ಒಂಟಿಯಾಗಿ ಕ್ರಮಿಸುವುದು ದುಸ್ತರವಾಗುತ್ತಿತ್ತು. ಅವರೂ ಸಹ ಖಂಡಿತಾ ಅಭಿನಂದನಾರ್ಹರು.
ಇನ್ನು ಶ್ರೀಯುತ ವಿ.ರವಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಈ ಮಾಲಿಕೆಯಲ್ಲಿ ಅವರು ಹೆಸರಿಸಿರುವ ಪುಸ್ತಕಗಳನ್ನು ನಾವು ನೆನಪಿನಲ್ಲಿಟ್ಟರೆ ಸಾಕು ನಮ್ಮ ಜೀವನ ಧನ್ಯವಾದಂತೆ, ಉಳಿದಂತೆ ಅವರ ಹಾಗೆ ಎಲ್ಲಾ ಪುಸ್ತಕಗಳನ್ನು ಅರಿದು ಕುಡಿಯುವುದು ನಿಜಕ್ಕೂ ಸಾಮಾನ್ಯ ಮನುಜರಿಗೆ ತಲುಪಲು ಕಷ್ಟಸಾಧ್ಯವಾದ ಸ್ಥಿತಿ. ನಾನು ಈ ಸರಣಿಯನ್ನು ಬರೆಯುವಲ್ಲಿನ ಅವರ ಪ್ರೋತ್ಸಾಹವು ಎಣೆಯಿಲ್ಲದ್ದು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ by makara
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಶ್ರೀಧರ್ಜಿ, ನೀವು "ಲಲಿತಾ ಸಹಸ್ರನಾಮ"ದ ಅನುವಾದ ಪ್ರಾರಂಭಿಸಿದಾಗ, ನೀವು ಹಿಡಿದ ಕಾರ್ಯ ಪೂರ್ತಿ ಮಾಡುವಿರಿ-ಇದರ ಬಗ್ಗೆ ಸಂಶಯವಿರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ನಾಗೇಶರು, ಅದೂ ಕವನದ ಸಾಥ್ ನೀಡಿದ್ದು ಬಹಳ ಆಶ್ಚರ್ಯ. ಸಹಸ್ರನಾಮವನ್ನು ಕವಿತೆಯಲ್ಲಿ ಬರೆಯುವೆ ಎಂದು ಹೊರಟರಲ್ಲಾ..!
ದೇವಿಯ ಆದೇಶವೇ ಇರಬಹುದು. ನಿಮ್ಮಿಬ್ಬರಿಗೂ ಜೈ.
(ಪಾರ್ಥರಂತೆ) ಬಾಕಿ ಇದ್ದ ಸಹಸ್ರನಾಮಗಳನ್ನು ಈ ದಿನ ಓದಿದೆ- ಒಂದು ಕಡೆ ನಿಮ್ಮ ಮಗಳು ಅಂದಂತೆ ಒಂದೊಂದೇ ಶ್ಲೋಕದ ವಿವರಣೆಯ ನಂತರ ನಾಗೇಶರ ಕವನ ಸೇರಿದರೆ "ಸೋನೇ ಪೆ ಸುಹಾಗ".
In reply to ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ by ಗಣೇಶ
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಗಣೇಶ್ಜಿ,
ಈ ಸತ್ಕಾರ್ಯದಲ್ಲಿ ನಿಮ್ಮ ಕೊಡುಗೆಯೂ ಕಡಿಮೆಯೇನಿಲ್ಲ. ಏಕೆಂದರೆ ಅನೇಕ ಬಾರಿ ನೀವು ಇದರಲ್ಲಿ ನುಸುಳಿದ ತಪ್ಪುಗಳನ್ನು ಸೂಚ್ಯವಾಗಿ ತೋರಿಸುವುದರ ಮೂಲಕ ಅಂತಹ ತಪ್ಪುಗಳು ಪುನರಾವೃತವಾಗದಂತೆ ಎಚ್ಚರಿಕೆಯಿಂದಿರಲು ಸಾಧ್ಯವಾಯಿತು. ಜೊತೆಗೆ ನೀವು ಕೊಟ್ಟ ಅನೇಕ ಕೊಂಡಿಗಳು ವಿಷಯವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾದವು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ, ಸತ್ಕಾರ್ಯಗಳನ್ನು ಮಾಡುವವರಿಗೂ, ಮಾಡಿಸುವವರಿಗೂ, ನೋಡಿ ಮತ್ತು ಕೇಳಿ ಆನಂದಿಸುವವರಿಗೂ ಸಮಾನ ಫಲವುಂಟೆಂದು ಹೇಳಿದ್ದಾನಲ್ಲವೇ? ಹಾಗಾಗಿ ಸಂಪದದ ವಾಚಕರೂ ಸಹ ಈ ಮಹತ್ಕಾರ್ಯದಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಸಕಲರಿಗೂ ದೇವಿಯು ಸನ್ಮಂಗಳವನ್ನುಂಟು ಮಾಡಲಿ.
ಧನ್ಯವಾದಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೧೭೪. ಲಲಿತಾ ಸಹಸ್ರನಾಮ ೭೮೬ರಿಂದ ೭೮೯ನೇ ನಾಮಗಳ ವಿವರಣೆ
ಶ್ರೀಧರರೆ, "೧೭೪. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ಪರಿಷ್ಕರಣೆಗೆ ಸಿದ್ದ :-)
.
ಲಲಿತಾ ಸಹಸ್ರನಾಮ ೭೮೬ - ೭೮೯
______________________________________
.
೭೮೬. ಮಂತ್ರಿಣೀ-ನ್ಯಸ್ತ-ರಾಜ್ಯಧೂಃ
ರಾಜ ಶ್ಯಾಮಲಾ ರಾಜ ಮಾತಂಗೀ ಮಂತ್ರಿಣೀ ದೇವಿಗೆ ಸಮಸ್ತ
ವಿಶ್ವಾಡಳಿತ ಹೊಣೆಗಾರಿಕೆ ಹೊರಿಸಿ ಶ್ಯಾಮಲಾ ದೇವಿಗೆ ಲಲಿತ
ಅಭಿವ್ಯಕ್ತಿಸಿದಾಲೋಚನೆಯ ಶಕ್ತಿರೂಪ ಮಂತ್ರ, ದೇವಿಯೆ ಸ್ವತಃ
ಜಪಧ್ಯಾನದೆ ಫಲಿಸೊ ಬೀಜಾಕ್ಷರ, ಮಂತ್ರಿಣೀ-ನ್ಯಸ್ತ-ರಾಜ್ಯಧೂಃ ||
.
ಸಮಸ್ತ ಮಂತ್ರ ಸಮಷ್ಟಿ ದೇವಿ, ಬಲಿಷ್ಠ ಗಹನ ಮಂತ್ರದಾ ಸೂತ್ರ
ಬ್ರಹ್ಮಾಂಡ ಪ್ರಜ್ಞೆಯ ಮಿತರೂಪಿ ವ್ಯಕ್ತಿಗತಾತ್ಮ, ಚಿತ್ತ ತಾನೆ ಮಂತ್ರ
ನಿರಂತರ ಸಾಧನೆ ಗುರಿ ಮಂತ್ರ ಸಿದ್ಧಿಗೊಯ್ದು, ಬ್ರಹ್ಮದ ತಾದಾತ್ಮ್ಯ
ಅದ್ವೈತಕೆ ಗೂಢ ಸಲಕರಣೆ ಮಂತ್ರ, ವಿಲೀನಕೆ ಸಾಕ್ಷಾತ್ಕಾರಬ್ರಹ್ಮ |
.
೭೮೭. ತ್ರಿಪುರೇಶೀ
ಮೇರು ಪರ್ವತ ಸಮೀಪ, ತ್ರಿಮೂರ್ತಿಗಳ ತ್ರಿಲೋಕದೊಡತಿ
ತ್ರಿಪುರಾಧಿಪತಿ ಶ್ರೀಲಲಿತೆ, ತಂತ್ರದಧಿದೇವತೆ ಭೈರವಿ ಸ್ತುತಿ
ಬಂಗಾರ ಬೆಳ್ಳಿ ಕಬ್ಬಿಣ ಕೋಟೆ ತ್ರಿಪುರ, ಅಜ್ಞಾನ ಸ್ತರ ಅಸುರ
ಸುಟ್ಟ ಶಿವ ತ್ರಿಪುರೇಶ, ಅರ್ಧಾಂಗಿ ತ್ರಿಪುರೇಶೀ ಲಲಿತಾ ಸಾರ ||
.
೭೮೮. ಜಯತ್ಸೇನಾ
ದುಷ್ಟತನದ ಮೂರ್ತ ರೂಪ ರಾಕ್ಷಸತ್ವ, ದಮನಿಸುವ ದೇವತ್ವವೆ ಸದ್ಗುಣ
ಶಾಶ್ವತವಾಗುಳಿಯುವ ಸದ್ಗುಣ, ಅಸುರೀ ಕೃತ್ಯಗಳ ಜಯಿಸಿ ನಿಯಂತ್ರಣ
ಮರುಕಳಿಸುವ ರಾಕ್ಷಸೀ ಪ್ರವೃತ್ತಿ, ಹಣಿಯಲು ಸದಾಸಿದ್ದ ಲಲಿತಾ ಸೇನಾ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗೆ ಸದಾ ಜಾಗೃತ, ವಿಜಯಸಮರ್ಥೆ ಜಯತ್ಸೇನಾ ||
.
೭೮೯. ನಿಸ್ತ್ರೈಗುಣ್ಯಾ
ಸಾತ್ವಿಕ ತಾಮಸ ರಜೋ ತ್ರಿಗುಣಾ, ಸೂಕ್ಷ್ಮ ವ್ಯಕ್ತಿಗತಾತ್ಮದ ಧಾತು
ಪ್ರಕೃತಿ ಸಹಯೋಗದಲಿ ತ್ರಿಗುಣ, ಸೃಷ್ಟಿಗೆ ಕಾರಣವಾಗುವ ವಸ್ತು
ಸಗುಣ ನಿರ್ಗುಣ ಬ್ರಹ್ಮ ಲಲಿತೆ, ಸ್ಥೂಲರೂಪಿ ಬ್ರಹ್ಮಾಂಡಾತ್ಮ ಗಣ್ಯಾ
ನಿರ್ಗುಣಕೆಲ್ಲಿ ತ್ರಿಗುಣ, ಅದರಲೆ ಜಗವ ಕಟ್ಟುತ ಲಲಿತೆ ನಿಸ್ತೈಗುಣ್ಯಾ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು