೨೦೨೨- ಹೊಸ್ವರ್ಷ ಬಂತಲ್ವಾ !? ಭಾರತೀಯರು ಹೇಗೆ ಪ್ರತಿಕ್ರಿಯಿಸಬೇಕು ?
ಹೊಸ ವರ್ಷ ಬಂತಂದ್ರೆ ಅನೇಕರು ಹೊಸ ಹೊಸ ನಿರ್ಣಯಗಳ ದೊಡ್ಡ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ದೇಹಧಾರಢ್ಯದ ಗೋಲ್’ ನಿರ್ಧರಿಸುವಿಕೆಗೆ ಪರಮಾದ್ಯತೆ. ಇನ್ಕಮ್ ಟ್ಯಾಕ್ಸ್ ಉಳಿಸಲು ಮಾಡುವ ಹಲವಾರು ಹೊಸ ಬಂಡವಾಳ ಹೂಡಿಕೆಗಳು ಗುರಿಗಳು – ಇಂತಹ ಪಟ್ಟಿಗಳಿಗೆ ಕೊನೆಮೊದಲಿಲ್ಲ ; ಎಲ್ಲರೂ ತಾವು ಮಾಡಿಕೊಂಡ ರೆಸಲ್ಯೂಷನ್ ಗಳನ್ನು ನಿಭಾಯಿಸಿದ್ದಾರೆಂದು ಭಾವಿಸುವುದು ಸಾಧ್ಯವಿಲ್ಲದ ಮಾತು. ಇನ್ನೇನು ವರ್ಷ ಶುರವಾದನಂತರ ಬೇರೆ ಏನೇನೋ ತಲೆಗೆ ಹಚ್ಚಿಕೊಂಡು ಮೊದಲು ಹಾಕಿಕೊಂಡ ಆದ್ಯತೆಗಳನ್ನೆಲ್ಲವನ್ನೂ ಮರೆಯುತ್ತಾರೆ. ಯಾರೋ ಪಶ್ಚಿಮದ ಜನರು ಮಾಡುವ ಎಲ್ಲ ಕಾರ್ಯಗಳನ್ನೂ ಹೇಗಾದರೂ ಮಾಡಿ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲೇಬೇಕೆಂಬುದು ಅನಿವಾರ್ಯವೇನಲ್ಲ. ಗೆಳೆಯರ ಜೊತೆ ಮಾತಾಡುವಾಗ ತಮ್ಮ ನಿರ್ಣಯಗಳು ವಿಫಲವಾದಾಗ ಹೇಳಿಕೊಂಡು ನಗೆಯಾಡುವ ಬದಲು ಯಾಕೆ ನಾವು ಅವುಗಳಿಂದ ದೂರಸರಿದೆವು ಎನ್ನುವುದರ ಬಗ್ಗೆ ಆತ್ಮಾವಲೋಕನ ಬಹಳ ಅಗತ್ಯ. ಕಾಲಕ್ರಮೇಣ ನಾವೇನು ಅಂದುಕೊಂಡಿದ್ದೆವು ; ನಿಜವಾಗಿಯೂ ಈ ವರ್ಷ ಯಾವುದಕ್ಕೆ ಒತ್ತುಕೊಡಲು ಬಯಸಿದ್ದೆವು ? ಎನ್ನುವುದು ನೆನಪಿಗೆ ಬರದೇ ಹೋಗುವುದು ಸರ್ವೇಸಾಮಾನ್ಯ ಹಾಗೂ ದುರದೃಷ್ಟಕರ.
ಒಮ್ಮೆ ನಮ್ಮ ಹಿತೈಷಿಗಳ ಮಧ್ಯೆ ಕುಳಿತು ಆತ್ಮಾವಲೋಕನ ಮಾಡಿದಾಗ ಹೊಸದಾಗಿ ಸ್ಪರ್ಧಾತ್ಮಕ ಪರೀಕ್ಷೆಗಲ್ಲಿ ಭಾಗವಹಿಸುವುದು ಅನಿವಾರ್ಯವೆನ್ನಿಸುತ್ತದೆ. ಶಾರೀರಿಕವಾಗಿ ಮಾನಸಿಕವಾಗಿ ತಾವು ಸಮರ್ಥರೇ ಎನ್ನುವುದು ಬೆಳೆದಂತೆ ಗೊತ್ತಾಗುತ್ತಾ ಹೋಗುತ್ತದೆ. ಈ ಸ್ಪರ್ಧೆಯಲ್ಲಿ ಮುಂದೆ ಸಾಗಿ ಮೇರುಸ್ಥಾನವನ್ನು ಪಡೆದುಕೊಳ್ಳಲು ಆ ಸ್ಥಾನದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರೆ, ಹೌದು ಹೆಚ್ಚು ಹಣ ಗಳಿಸದೆ ಹೇಗೆ ಫ್ಲಾಟ್, ಕಾರ್, ಬ್ಯಾಂಕ್ ಬ್ಯಾಲೆನ್ಸ್ ಬ್ಯಾಂಕ್ ಗಳನ್ನು ಹಾಸಿಲ್ ಮಾಡಲು ಸಾಧ್ಯ ? ಬರುವ ಉತ್ತರ. ನಿಜವಾಗಿಯೂ ಅಷ್ಟು ಸಂಪಾದಿಸುವುದು ಬೇಕೇ ಬೇಕಪ್ಪ, ಆನಂದವಾಗಿ 'ಬಿಂದಾಸಾಗಿ ಜೀವನ ಕಳೆಯಬೇಡವೇ ?
ಒಟ್ಟಿನಲ್ಲಿ ಮೇಲಿನ ವಾಗ್ಝರಿಯ ತಥ್ಯವೆಂದರೆ, ಈ ಆಧುನಿಕ ಯುಗದಲ್ಲಿ ಇವೆಲ್ಲಾ ಬೇಕೇ ಬೇಕು. ನಮ್ಮ ಸಂತೋಷ/ಆನಂದಕ್ಕಾಗಿ ಎಲ್ಲದರಲ್ಲೂ ಮೇಟಿಯಾಗಿ ಸ್ಪರ್ಧಾತ್ಮಕವಾಗಿ ಇರುವುದಲ್ಲದೆ ಐಷಾರಾಮಿನ ಜೀವನ ನಡೆಸಲು ಹೆಚ್ಚು ಹೆಚ್ಚು ಧನದ ಅವಶ್ಯಕತೆಯನ್ನು ಮನಗಾಣುತ್ತೇವೆ. ಈ ತರಹದ ಮಹದಾನಂದವನ್ನು ಗಳಿಸಬೇಕಾದರೆ ಅತಿಹೆಚ್ಚು ದ್ರವ್ಯ ಸಂಪಾದಿಸಬೇಕು. ಅದಕ್ಕಾಗಿ ಕಷ್ಟಪಟ್ಟು, ನಿದ್ದೆಗೆಟ್ಟು ಮೂಗಿಗೆ ಕವಡೆಕಟ್ಟಿಕೊಂಡು ದುಡಿಯಬೇಕು. (ಇದನ್ನು ಗಳಿಸಲು ವಿಜಯ ಮಲ್ಯ, ಮೊದಲಾದವರು ಮಾಡಿದ ತರಹ ರಾಷ್ಟ್ರಕ್ಕೆ ಮೋಸಮಾಡಿ ಹಣ ಗಳಿಸುವ ಕಡೆ ಗಮನ ಹರಿಸಬಾರದು)
ಮೀಡಿಯಾಗಳಲ್ಲಿ ಬಣ್ಣವಾಗಿ ಕಾಣಿಸುವ ಸೆಲೆಬ್ರಿಟಿಗಳ ಜೀವನ ಶೈಲಿ ಫಕ್ಕನೆ ನಮ್ಮ ಮನಸ್ಸಿನಲ್ಲಿ ಮೂಡಿಬರುತ್ತದೆ. ಕಣ್ಣಿಗೆ ಕಾಣದಿರುವುದನ್ನು ಓದಿ ಮಾಹಿತಿ ಪಡೆಯುತ್ತೇವೆ. ಮನೆಯಲ್ಲಿ ಕಲಿಯಬೇಕಾದ ಭಾರತೀಯ ಮೌಲ್ಯಗಳು ಮಾಯವಾಗಿವೆ. ಸಮಯಪ್ರಜ್ಞೆ, ಇಂದ್ರಿಯ ನಿಗ್ರಹ, ಜವಾಬ್ದಾರಿಯಿಂದ ವರ್ತಿಸುವುದು ತ್ಯಾಗ, ಸಮಾಲೋಚನೆ, ಎಲ್ಲ ವರ್ಗದ ಜನರ ಜತೆ ಉತ್ತಮವಾಗಿ ನಡೆದುಕೊಳ್ಳುವುದು ಮೊದಲಾದ ಸದ್ಗುಣಗಳನ್ನು ಭಾರತೀಯತೆ ನಮಗೆ ಮನೆಯಲ್ಲೇ ಕಲಿಸುತ್ತಿತ್ತು. ಮನೆಯೇ ಒಂದು ಅತ್ಯುತ್ತಮ ಪಾಠ ಶಾಲೆಯಾಗಿದ್ದದ್ದನ್ನು ಈಗ ಕೇವಲ ನೆನೆಯಬೇಕಷ್ಟೇ. ಇದನ್ನು ನಮಗೆ ಬೋಧಿಸುತ್ತಿದ್ದವರು ನಮ್ಮ ತಂದೆತಾಯಿಗಳು. ಇಂದಿನ ದಿನಗಳಲ್ಲಿ ಹಲವಾರು ಮಂದಿ ವಿವಾಹ ವಿಚ್ಚೇದನಗಳ ಮಧ್ಯೆ ಬದುಕುತ್ತಿದ್ದಾರೆ. ತಂದೆ ಮಕ್ಕಳ ಮಧುರ ಸಂಬಂಧಗಳು ಕಾಣೆಯಾಗುತ್ತಿವೆ. ಅವರೇ ಮದ್ಯ, ಲೈಂಗಿಕ -ಮೊದಲಾದ ವ್ಯಸನಗಳಿಗೆ ಮೊರೆಹೋಗಿದ್ದಾರೆ, ಮಕ್ಕಳ ಭವಿಷ್ಯ ಮೂರಾಬಟ್ಟೆಯಾಗುವುದರಲ್ಲಿ ಸಂದೇಹವಿಲ್ಲ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಧನಾತ್ಮಕವಾಗಿ ಆಲೋಚಿಸುವುದು ಮಾನಸಿಕ ಅರೋಗ್ಯ ಪರಿಪಾಲನೆ, ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು, ಜೀವನದ ದಾರಿಯಲ್ಲಿ ಹೋಗುವಾಗ ಸೋತಾಗ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವೆಲ್ಲ ಧ್ಯಾನ, ಯೋಗ ಮೊದಲಾದವುಗಳಿಂದ ಮಾತ್ರ ಸಾಧ್ಯ.
ಈಗ ಸುಮಾರು ೨-೩ ವರ್ಷಗಳಿಂದ ಎಲ್ಲಿಂದಲೋ ದಿಢೀರನೆ ಲಗ್ಗೆ ಹಾಕಿದ 'ಕೋವಿಡ್ ಮಹಾಮಾರಿ' ನಮ್ಮೆಲ್ಲರ ನಿದ್ದೆ ಕೆಡಸಿದಂತೆ ವಿಶ್ವದ ಜನರ ನೆಮ್ಮದಿಯನ್ನೂ ಹಾಳುಮಾಡಿದೆ. ಇಷ್ಟೊಂದು ಹಣ, ಮೊದಲಾದ ಪರಿಕರಗಳಿದ್ದರೂ ಮಾನಸಿಕ ಅಶಾಂತಿ ತಾಂಡವವಾಡುತ್ತಿದೆ. ನಿದ್ದೆ ಮಾತ್ರೆಗಳಿಲ್ಲದೆ ನಮ್ಮಲ್ಲಿ ಬಹಳಷ್ಟು ಜನರಿಗೆ ನಿದ್ರೆಬರುವುದಿಲ್ಲ. ಮಾನಸಿಕ ಕ್ಲೇಶಗಳು, ವಿಪರೀತವಾಗಿ ಬೆಳೆಯುತ್ತಿವೆ. ದೇಹದಂಡಿಸಿ ಕೆಲಸಮಾಡುವ ಪ್ರಕ್ರಿಯೆ ಮಾಯವಾಗಿದೆ. ವರ್ಷದ ಮೊದಲಲ್ಲಿ ಬೇರೆಯವರನ್ನು ನೋಡಿ ನಮ್ಮ ಆಧ್ಯತೆಗಳನ್ನು ನಾವೇ ಸೆಟ್ ಮಾಡಿಕೊಂಡಿದ್ದೇವೆ. ಇವಕ್ಕೆ ತಕ್ಕ ಉಪಶಮನವೆಂದರೆ, ಮೊದಲು ಪೋಷಕರು(ತಂದೆ-ತಾಯಿಗಳು) ತಮ್ಮ ಮಕ್ಕಳ ಜತೆ ಹೆಚ್ಚು ಸಮಯ ಕಳೆದು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಸರಿಯಾಗಿ ಅಭ್ಯಾಸಮಾಡಿ ಮಕ್ಕಳಿಗೆ ಅವರ ಬಾಲ್ಯದಲ್ಲೇ ಅವುಗಳಲ್ಲಿರುವ ಮೌಲ್ಯಗಳನ್ನು ಸರಿಯಾಗಿ ಕತೆಯರೂಪದಲ್ಲಿ ಹೇಳಿ, ಅವರಲ್ಲಿ ನಮ್ಮ ಪರಂಪರೆಯ ಬಗ್ಗೆ ಸರಿಯಾದ ಜ್ಞಾನ, ಸ್ವಾಭಿಮಾನ, ಪ್ರೀತಿ, ಬೆಳಸಬೇಕು.
೧. ಮದುವೆಯಾದ ನವ-ದಂಪತಿಗಳು ತಮಗೆ ಮುಂದೆ ಹುಟ್ಟುವ ಮಕ್ಕಳು ಹೇಗಿರಬೇಕೆಂಬುದರ 'ನೀಲ ನಕ್ಷೆ'ಯನ್ನು ತಮ್ಮ ಮನಸ್ಸಿನಲ್ಲಿ ರೂಪಿಸಿಕೊಂಡು ಹುಟ್ಟಿದಮೇಲೆ ಅವರ ಆಸಕ್ತಿ, ಸಾಮರ್ಥ್ಯ ಗಳನ್ನು ಬೇಗ ಗುರುತಿಸಿ, ಅವರಿಗೆ ಅತ್ಯುತ್ತಮ ಭಾರತೀಯ ಮೌಲ್ಯಗಳನ್ನು ತಿಳಿಯಹೇಳಿ ಅದರಲ್ಲಿ ಆಸಕ್ತಿ, ಅಭಿಮಾನವನ್ನು ಮೂಡಿಸಿ ಬೆಳೆಸಬೇಕು. ದೇಹಧಾರಢ್ಯ, ಮಾನಸಿಕ ಬೆಳವಣಿಗೆಗಳನ್ನು ತಮ್ಮ ಕೈಲಾದಷ್ಟು ರೀತಿಯಲ್ಲಿ ಒದಗಿಸಿ, ಅವರಿಗೆ ನೆರವಾಗಬೇಕು. ಮಕ್ಕಳ ಭವಿಷ್ಯವನ್ನು ರೂಪಿಸಿಕೊಡುವುದು ಅತ್ಯಂತ ಜವಾಬ್ದಾರಿಯುತ, ಹಾಗು ಒಂದು ಸವಾಲಿನ ತರಹ ಭಾವಿಸಿ ಅವರ ಏಳಿಗೆಗೆ ನೆರವಾಗಬೇಕು.
೨. ಭಗವದ್ಗೀತೆಯ ಶ್ಲೋಕಗಳನ್ನು ಪೋಷಕರು/ತಂದೆತಾಯಿಗಳು ಮೊದಲು ಪಠಿಸಿ, ಅವನ್ನು ತಮ್ಮ ಮಕ್ಕಳಿಗೆ ಕತೆಯ ರೂಪದಲ್ಲಿ ಹೇಳಿ ಆಸಕ್ತಿ ಮೂಡಿಸಬೇಕು. ನಮ್ಮ ದೇಶ, ನಮ್ಮ ಸಂಸ್ಕೃತಿ, ನಮ್ಮ ಸಂಗೀತ, ಸಾಹಿತ್ಯ, ಕಲೆ, ನೃತ್ಯ, ಮೊದಲಾದ ಜೀವನ ಮೌಲ್ಯಗಳನ್ನು ಸಾಧ್ಯವಾದಷ್ಟು ಚೆನ್ನಾಗಿ ತಿಳಿದುಕೊಳ್ಳುವುದಲ್ಲದೆ ಮಕ್ಕಳಿಗೂ ಅವನ್ನು ಸರಿಯಾಗಿ ಪರಿಚಯಿಸಬೇಕು. ಸಮಯದ ಅಭಾವವೆಂದು ಗೊಣಗುವುದು ಒಳ್ಳೆಯದಲ್ಲ. ಇದಕ್ಕೆ ಒಂದು ಉದಾಹರಣೆಯೇನೆಂದರೆ, ನಮ್ಮ ದೇಶದ ವಿಖ್ಯಾತ ಉದ್ಯೋಗಪತಿ, ಘನಶ್ಯಾಮ್ ದಾಸ್ ಬಿರ್ಲಾರವರ ಜೀವನ ಶೈಲಿ ನಮಗೆಲ್ಲಾ ಮಾದರಿಯಾಗಿದೆ ; ಅವರು ತಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಹೇಗೋ ೫-೧೦ ನಿಮಿಷ ತಮ್ಮ ಮಕ್ಕಳು ಮೊಮ್ಮಕ್ಕಳ ಜತೆ ಫೋನಿನಲ್ಲಿ ಸಂಪರ್ಕಿಸಿ ಅವರು ಊಟಮಾಡಿದರೇ,ಇಲ್ಲವೇ, ಸ್ಕೂಲಿನ ವಿಷಯಗಳು, ಆಟಗಳು, ಮೊದಲಾದವುಗಳ ಬಗ್ಗೆ ಮಾತಾಡಿಸಿ ಅವರಿಗೆ ಸಾಂತ್ವನ ಹೇಳುತ್ತಿದ್ದರಂತೆ ! ಇದು ನಿಜಕ್ಕೂ ಶ್ಲಾಘನೀಯವಾದ ವಿಚಾರ.
.