೨೦೨. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ

೨೦೨. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ

                                                               ಲಲಿತಾ ಸಹಸ್ರನಾಮ ೯೬೦ - ೯೬೭

Lōkātītā लोकातीता (960)

೯೬೦. ಲೋಕಾತೀತಾ

              ದೇವಿಯು ಎಲ್ಲ ಲೋಕಗಳಿಗೂ ಅತೀತಳಾಗಿದ್ದಾಳೆ. ಲೋಕಗಳೆಂದರೆ ಇಲ್ಲಿ ಇಂದ್ರ ಲೋಕ, ಬ್ರಹ್ಮ ಲೋಕ, ವಿಷ್ಣು ಲೋಕ, ಮೊದಲಾದವು. ಈ ಲೋಕಗಳು ವ್ಯಕ್ತಿಯೊಬ್ಬನ ಪ್ರಜ್ಞೆಯ ಹಂತಗಳಾಗಿವೆ. ದೇವಿಯು ಶಿವನೊಂದಿಗೆ ಪರಾ ಕೈಲಾಸವೆಂದೂ ಕರೆಯಲ್ಪಡುವ ಮಹಾ ಕೈಲಾಸದಲ್ಲಿ ನಿವಸಿಸುತ್ತಾಳೆ. ದೇವಿಯು ಇತರೆಲ್ಲಾ ಲೋಕಗಳನ್ನು (ಕೆಳಸ್ತರದ ಪ್ರಜ್ಞೆಯ ಹಂತಗಳನ್ನು) ಅಧಿಗಮಿಸಿ ಮಹಾ ಕೈಲಾಸದಲ್ಲಿ (ಶುದ್ಧ ಪ್ರಜ್ಞೆಯ ಅತ್ಯುನ್ನತ ಸ್ತರ, ಇಲ್ಲಿ ಆತ್ಮಸಾಕ್ಷಾತ್ಕಾರವು ಉಂಟಾಗುತ್ತದೆ) ನಿವಸಿಸುತ್ತಾಳೆ.

              ಶಿವನಿರುವ ಸ್ಥಳವನ್ನು ಅಪದ ಅಂದರೆ ನಿರ್ವಾತ ಅಥವಾ ನಿವಾಸವಲ್ಲದ್ದು ಎಂದೂ ಹೇಳಲಾಗುತ್ತದೆ. ವಿಜ್ಞಾನಭೈರವ ತಂತ್ರದಲ್ಲಿ ಚರ್ಚಿಸಲಾಗಿರುವ ಅನೇಕ ವಿಧಾನಗಳಲ್ಲಿ ಹಲವು ವಿಧಾನಗಳು ನಿರ್ವಾತದ ಮೇಲೆ ಧ್ಯಾನಿಸುವುದರ ಕುರಿತಾಗಿ ಚರ್ಚಿಸುತ್ತವೆ. ಅಪದ ಎನ್ನುವುದು ಐದು ಹಂತಗಳ ಸಮಷ್ಟಿ ಸ್ಥಿತಿ ಮತ್ತು ಪಂಚಭೂತಗಳಾದ ಭೂಮಿ, ವಾಯು, ಅಗ್ನಿ, ನೀರು ಮತ್ತು ಆಕಾಶಗಳ ಸಮಷ್ಟಿ ಸ್ಥಿತಿಯೊಳಗೆ ಲೀನವಾಗುವುದು ಅಂದರೆ ಮರಣ ಹೊಂದುವುದೇ ಅಪದದ ಸ್ಥಿತಿಯಾಗಿದೆ. ಅಪದ ಸ್ಥಳವು ಆಚರಣೆಗಳೊಂದಿಗೆ ಸಂಭಂದ ಹೊಂದಿದ ಆತ್ಮಗಳಿಂದ ತುಂಬಿದೆ, ಇಲ್ಲಿಗೆ ಬಂದು ಸೇರುವ ಆತ್ಮಗಳು ಭೂಲೋಕಕ್ಕೆ ಹಿಂದಿರುಗುತ್ತವೆ. ಅಪದದ ಸ್ಥಳಕ್ಕಿಂತಲೂ ಪರಮೋಚ್ಛವಾದ ನಿರಂತರ ಶುದ್ಧವಾದ ಮೂರು ಪೀಠಗಳಿದ್ದು ಅವುಗಳಲ್ಲಿ ಸ್ಕಂದ, ಉಮಾ ಮತ್ತು ಶಿವ ಇವರುಗಳು ನಿವಸಿಸುತ್ತಾರೆ. ಈ ಪೀಠಗಳು ಧ್ಯಾನದ ಮೂಲಕ ಪರಬ್ರಹ್ಮಕ್ಕೆ ನಿಷ್ಠರಾಗಿರುವವರಿಂದ ನಿರ್ವಹಿಸಲ್ಪಡುತ್ತವೆ. ಇಲ್ಲಿ ಇರುವ ಆತ್ಮಗಳು ಭೂಲೋಕಕ್ಕೆ ಹಿಂದಿರುಗುವುದಿಲ್ಲ. ಅವುಗಳು ಅಂತಿಮವಾಗಿ ಶಿವನೊಳಗೇ ಲೀನವಾಗಿ ಪುನರ್ಜನ್ಮವನ್ನು ಹೊಂದುವುದಿಲ್ಲ.

.Guṇātītā गुणातीता (961)

೯೬೧. ಗುಣಾತೀತಾ

            ದೇವಿಯು ಗುಣ ಲಕ್ಷಣಗಳನ್ನು ಅಧಿಗಮಿಸುತ್ತಾಳೆ. ದೇವಿಯು ಗುಣರಹಿತ ಬ್ರಹ್ಮವಾಗಿದ್ದು ನಿರ್ಗುಣ ಬ್ರಹ್ಮವೆಂದು ಕರೆಯಲ್ಪಟ್ಟಿದ್ದಾಳೆ. ಗುಣಗಳು ಮೂರು, ಅವೆಂದರೆ ಸತ್ವ, ರಜಸ್ ಮತ್ತು ತಮಸ್. ಎಲ್ಲಿಯವರೆಗೆ ಈ ತ್ರಿಗುಣಗಳು ಚಲನರಹಿತ ಸ್ಥಿತಿಯಲ್ಲಿ ವಿಚಲಿತಗೊಳ್ಳದೇ ಇರುತ್ತವೆಯೋ (ನಾಮ ೩೯೭ - ಮೂಲಪ್ರಕೃತಿಯಲ್ಲಿ ಚರ್ಚಿಸಿದಂತೆ) ಅಲ್ಲಿಯವರೆಗೆ ಈ ಸಮಸ್ತ ವಿಶ್ವವು ಪ್ರಕೃತಿಯೊಳಗೆ ಸುಪ್ತ ಸ್ಥಿತಿಯಲ್ಲಿ ಇರುತ್ತವೆ. ಈ ನಾಮವು ದೇವಿಯು ಮೂಲಪ್ರಕೃತಿಗೆ ಅತೀತಳಾಗಿದ್ದಾಳೆಂದು ಹೇಳುತ್ತದೆ.

Sarvātītā सर्वातीता (962)

೯೬೨. ಸರ್ವಾತೀತಾ

            ದೇವಿಯು ಎಲ್ಲವನ್ನೂ ಅಧಿಗಮಿಸುತ್ತಾಳೆ. ೯೬೦ನೇ ನಾಮವು ದೇವಿಯು ಸಕಲ ಲೋಕಗಳನ್ನು ಅಧಿಗಮಿಸುತ್ತಾಳೆಂದು ಹೇಳಿದರೆ, ೯೬೧ನೇ ನಾಮವು ಆಕೆಯು ಗುಣಗಳನ್ನು ಅಧಿಗಮಿಸುತ್ತಾಳೆಂದು ಹೇಳಿತು, ಆದರೆ ಈ ನಾಮವು ಆಕೆಯು ಎಲ್ಲವನ್ನೂ ಅಧಿಗಮಿಸುತ್ತಾಳೆ ಅಂದರೆ ಆಕೆಯೇ ಸರ್ವಶ್ರೇಷ್ಠಳು ಎನ್ನುವುದನ್ನು ಹೇಳುತ್ತದೆ. ದೇವಿಗೆ ಬ್ರಹ್ಮಾಂಡದ ಕುರಿತಾಗಿ ತಿಳಿದಿದೆ ಮತ್ತು ಆ ಬ್ರಹ್ಮಾಂಡಕ್ಕೆ ದೇವಿಯ ಕುರಿತಾಗಿ ತಿಳಿದಿದೆ. ಶಿವನು ಈ ಪ್ರಪಂಚದ ವ್ಯವಹಾರಗಳಲ್ಲಿ ನಡುವೆ ಬರುವುದಿಲ್ಲ. ಶಿವನು ಸರ್ವೋನ್ನತನಾಗಿದ್ದು ಅವನು ಮಾನವ ಬುದ್ಧಿಮತ್ತೆಗೆ ನಿಲುಕದವನಾಗಿದ್ದಾನೆ. ಕೇವಲ ದೇವಿಯಿಂದ ಮಾತ್ರವೇ ಶಿವನನ್ನು ಹೊಂದಬಹುದು.

            ಇಲ್ಲಿ ಲೋಕಗಳು ಮತ್ತು ಗುಣಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸುವ ಹಿಂದಿರುವ ಉದ್ದೇಶವೇನೆಂದರೆ ಆತ್ಮ ಸಾಕ್ಷಾತ್ಕಾರವು ಪರಿಶುದ್ಧವಾದ ಪ್ರಜ್ಞೆಯ (ನಾಮ ೯೬೦ ಉಲ್ಲೇಖಿಸಲ್ಪಟ್ಟಂತಹ) ಮೂಲಕವಷ್ಟೇ ಹೊಂದಬಹುದೆನ್ನುವ ವಾಸ್ತವ ಸಂಗತಿಯನ್ನು ಆಧರಿಸಿದೆ ಮತ್ತು ಗುಣಗಳನ್ನು ಅಧಿಗಮಿಸುವುದರಿಂದ ಅಂದರೆ ತಮಸ್ಸಿನಿಂದ ಸಾತ್ವಿಕದೆಡೆಗೆ ಮತ್ತು ಅದರಾಚಗೆ ಹೋಗುವುದರಿಂದ ಆತ್ಮಸಾಕ್ಷಾತ್ಕಾರವು ಸಾಧ್ಯವಾಗುತ್ತದೆ. ಪ್ರಜ್ಞೆ ಮತ್ತು ಗುಣಗಳು ಆತ್ಮಸಾಕ್ಷಾತ್ಕಾರದಲ್ಲಿ ಪ್ರಮುಖವಾದ ಉಪಕರಣಗಳಾಗಿವೆ.

Śamātmikā शमात्मिका (963)

೯೬೩. ಶಮಾತ್ಮಿಕಾ

           ಶಮ ಎಂದರೆ ಪರಮಶಾಂತಿ (ಪರಮಾನಂದ); ಇದು ದೀರ್ಘವಾದ ಧ್ಯಾನದಿಂದ ಹೊಂದಲ್ಪಡುತ್ತದೆ ಅಥವಾ ಅಸ್ತಿತ್ವದ ಎಲ್ಲಾ ವಿಧವಾದ ಭ್ರಮೆಗಳಿಂದ ಮುಕ್ತನಾದಾಗ ಹೊಂದಲ್ಪಡುತ್ತದೆ.

           ಮಾಂಡೂಕ್ಯ ಉಪನಿಷತ್ತಿನಲ್ಲಿ (ಶ್ಲೋಕ ೭) ಇದನ್ನು ಬಹಳ ಚೆನ್ನಾಗಿ ವಿವಿರಿಸಲಾಗಿದೆ. "ಅದು ಏಕಕಾಲಕ್ಕೆ ಎಲ್ಲಾ ವಸ್ತುಗಳ ಪ್ರಜ್ಞೆಯೂ ಅಲ್ಲ ಅಥವಾ ಅಪ್ರಜ್ಞೆಯೂ ಅಲ್ಲ. ಅದು ಅಗೋಚರವಾದದ್ದು, ಅದು ಉಪಯೋಗ ಅಥವಾ ವ್ಯವಹಾರಕ್ಕೆ ನಿಲುಕುವಂತಹದ್ದಲ್ಲ ಹಾಗು ಯಾವುದೇ ವಿಧವಾದ ಕರ್ಮೇಂದ್ರಿಯಕ್ಕೆ ನಿಲುಕುವಂತಹದ್ದಲ್ಲ. ಅದು ಯಾವುದೇ ಜ್ಞಾನೇಂದ್ರಿಯಗಳಿಂದ ಗ್ರಹಿಸಲ್ಪಡದು, ಅದು ಆಲೋಚನೆಗೆ ನಿಲುಕದ್ದು ಮತ್ತು ಅದನ್ನು ಶಬ್ದದಿಂದ ವಿವರಿಸಲಾಗದು. ಅಲ್ಲಿ ಕೇವಲ ಆತ್ಮ ಪ್ರಜ್ಞೆಯೊಂದೇ  (ಏಕಾತ್ಮಪ್ರತ್ಯಯಸಾರ) ಇರುತ್ತದೆ ಮತ್ತು ಅಲ್ಲಿ ಹಾಗೆಯೇ ಪ್ರಪಂಚದಿಂದ ಬಿಡುಗಡೆಯು (ಪ್ರಪಂಚೋಪಶಮನ) ಹೊಂದಲ್ಪಟ್ಟಿರುತ್ತದೆ. ಅದು ಶಾಂತಿಯ ಮತ್ತು ಎಲ್ಲಾ ವಿಧವಾದ ಒಳ್ಳೆಯದರ (ಶಿವನ) ಮೂರ್ತರೂಪ. ಅದು ಅದ್ವಿತೀಯವಾದುದು".

         ‘ಶಮ’ ಶಬ್ದವು ವೇದಕಾಲದಲ್ಲಿ ಪದೇ ಪದೇ ಬಳಸಲಾಗಿದ್ದು ಅದಕ್ಕೆ ಶುಭಕರವಾದದ್ದು, ಸಂತೋಷ ಮತ್ತು ಸೌಭಾಗ್ಯವಂತಿಕೆ ಎನ್ನುವ ಅರ್ಥಗಳಿವೆ. ಆದರೆ ವೇದೋತ್ತರ ಕಾಲದಲ್ಲಿ ಈ ಶಬ್ದವು ಮೇಲಿನ ಅರ್ಥಗಳನ್ನು ಸೂಚಿಸುವುದು ಗಣನೆಗೆ ಬಾರದಷ್ಟು ಕಡಿಮೆ.

         ಈ ನಾಮವು ದೇವಿಯು ಶುಭಕರ, ಸಂತೋಷ, ಮತ್ತು ಸೌಭಾಗ್ಯದ ಗುಣಗಳ ಸ್ವರೂಪವಾಗಿದ್ದಾಳೆ ಎಂದು ಹೇಳುತ್ತದೆ.

Bandhūka-kusuma-prakkhyā बन्धूक-कुसुम-प्रक्ख्या (964)

೯೬೪. ಬಂಧೂಕ-ಕುಸುಮ-ಪ್ರಖ್ಯಾ

          ಬಂಧೂಕವು ಒಂದು ಗಿಡವಾಗಿದ್ದು (Pentapetes Phoenicea) ಅದರ ಹೂವುಗಳು ಹಳದಿ ಮಿಶ್ರಿತ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಈ ಹೂವುಗಳು ಬಹಳಷ್ಟು ಹೊಳಪಿನಿಂದ ಕೂಡಿದ್ದು ಸುಕೋಮಲವಾಗಿರತ್ತದೆ. ದೇವಿಯನ್ನು ಈ ಹೂವಿನೊಂದಿಗೆ ಹೋಲಿಸಲಾಗಿದೆ.

Bālā बाला (965)

೯೬೫. ಬಾಲಾ

           ದೇವಿಯ ಒಂಬತ್ತು ವರ್ಷದ ಹುಡುಗಿಯ ಅವತಾರದಲ್ಲಿ ಆಕೆಯನ್ನು ಬಾಲಾ ಎಂದು ಕರೆಯಲಾಗುತ್ತದೆ. ನಾಮ ೭೪ರಲ್ಲಿ ಉಲ್ಲೇಖಿಸಲಾಗಿರುವ ಬಾಲಾ ಶಬ್ದವು ಲಲಿತಾಂಬಿಕೆಯ ಮಗುವನ್ನು ಸೂಚಿಸುತ್ತದೆ.

          ಸಾಮಾನ್ಯವಾಗಿ, ಶ್ರೀ ವಿದ್ಯಾ ಉಪಾಸನೆಯನ್ನು ಕೈಗೊಳ್ಳುವವರಿಗೆ ಮೊದಲು ಬಾಲಾ ಮಂತ್ರವನ್ನು ಉಪದೇಶಿಸಲಾಗುತ್ತದೆ. ಬಾಲಾ ಮಂತ್ರವು ಐಂ-ಕ್ಲೀಂ-ಸೌಃ ऐं-क्लीं-सौः ಆಗಿದೆ. ಬಾಲಾ ಎಂದರೆ ಯಾರು ಕೆಂಪು ವಸ್ತ್ರಗಳಿಂದ ಭೂಷಿತರಾಗಿದ್ದಾರೋ, ಯಾರು ಮೂರು ಕಣ್ಣುಗಳನ್ನು ಹೊಂದಿದ್ದು, ಹಣೆಯು ಬಾಲಚಂದ್ರನಿಂದ (ವಕ್ರ ಚಂದ್ರನಿಂದ) ಅಲಂಕರಿಸಲ್ಪಟ್ಟಿದೆಯೋ, ಯಾರ ಪ್ರಕಾಶವು ಉದಯಿಸುವ ಸೂರ್ಯನಂತಿದೆಯೋ, ಯಾರು ಕೆಂಪುದಳದ ಪದ್ಮದಲ್ಲಿ ಆಸೀನರಾಗಿದ್ದು, ತನ್ನ ನಾಲ್ಕು ಕೈಗಳಲ್ಲಿ, ಪುಸ್ತಕ, ಜಪಮಾಲೆ, ಅಭಯ ಮತ್ತು ವರದ ಮುದ್ರೆಗಳನ್ನು ಧರಿಸುತ್ತಾರೆಯೋ ಅವರು ಎಂದು ವಿವರಿಸಬಹುದು. ತ್ರಿಪುರ ಭೈರವಿ ಶಾಪವಿಮೋಚನ ಮಂತ್ರವನ್ನು ಒಂದು ನೂರು ಬಾರಿ ಜಪಿಸದೇ ಇದ್ದರೆ ಬಾಲಾ ಮಂತ್ರವು ಸಿದ್ಧಿಸಿವುದಿಲ್ಲ. (ಸಾಮಾನ್ಯವಾಗಿ ಮಂತ್ರಗಳಿಗೆ ಋಷಿ ಮತ್ತು ದೇವತೆಗಳಿಂದ ಶಾಪಗಳಿರುತ್ತವೆ. ಒಬ್ಬರು ಈ ಶಾಪಗಳನ್ನು ಸೂಕ್ತವಾದ ಶಾಪ ವಿಮೋಚನ ಮಂತ್ರಗಳನ್ನು ಪಠಿಸುವುದರ ಮೂಲಕ ಮುಕ್ತಗೊಳಿಸಿಕೊಳ್ಳಬೇಕು ಆಗ ಮಾತ್ರವೇ ಮಂತ್ರಗಳ ಸಿದ್ಧಿಯಾಗುತ್ತದೆ).

         ಶ್ವೇತಾಶ್ವತರ ಉಪನಿಷತ್ತು (೪.೩) ಪರಬ್ರಹ್ಮವನ್ನು ಹೀಗೆ ವಿವರಿಸುತ್ತದೆ, "ನೀನು ಸ್ತ್ರೀಯಾಗಿದ್ದೀಯ, ನೀನು ಪುರುಷನಾಗಿದ್ದೀಯ, ನೀನು ಬಾಲ ಮತ್ತು ಬಾಲಾ ಆಗಿದ್ದೀಯ".

Līlā-vinodinī लीला-विनोदिनी (966)

೯೬೫. ಲೀಲಾ-ವಿನೋದಿನೀ

           ಲೀಲಾ ಎಂದರೆ ಯಾವುದೇ ಕಾರ್ಯವನ್ನು ಮಾಡುವಾಗ ಇರುವ ಸೌಲಭ್ಯ. ಈ ಸಂದರ್ಭದಲ್ಲಿ ಲೀಲಾ ಎಂದರೆ ದೇವಿಯ ಮೂರು ಪ್ರಾಥಮಿಕ ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳು. ಮನು ಸ್ಮೃತಿ (೧.೮೦) ಹೀಗೆ ಹೇಳುತ್ತದೆ, "ಬ್ರಹ್ಮವು ವಿವಿಧ ಮನುಗಳ ಕಾಲಮಾನಗಳನ್ನು ಸೃಷ್ಟಿಸಿ ಅವುಗಳನ್ನು ಲೀಲಾಜಾಲವಾಗಿ ಲಯವಾಗಿಸುತ್ತವೆ". ಬ್ರಹ್ಮಸೂತ್ರ (೨.೧.೩೩) ಹೀಗೆ ಹೇಳುತ್ತದೆ, "ಸೃಷ್ಟಿಯು ಬ್ರಹ್ಮಕ್ಕೆ ಒಂದು ಆಟವಾಗಿದೆ". ಸೃಷ್ಟಿ ಕ್ರಿಯೆಯನ್ನು ಬ್ರಹ್ಮಕ್ಕೆ ಆಟವಾಗಿದೆ ಎಂದು ಕರೆಯುವುದು ತರ್ಕವನ್ನು ಆಧರಿಸಿದೆ. ಬ್ರಹ್ಮವು ಯಾವುದೇ ವಿಧವಾದ ಬಾಹ್ಯ ಪ್ರಚೋದನೆ ಅಥವಾ ಉದ್ದೇಶವಿಲ್ಲದೆ ತಕ್ಷಣವೇ ಕಾರ್ಯವೆಸಗುತ್ತದೆ. ನಾಮ ರೂಪಗಳಿಂದ ಉಂಟಾಗುವ ಭೇದಗಳು ಅಜ್ಞಾನದಿಂದ ಉಂಟಾಗುತ್ತವೆ ಮತ್ತು ಅವೆಲ್ಲವೂ ಬ್ರಹ್ಮವೇ ಎಂದು ಪರೋಕ್ಷವಾಗಿ ಸೂಚಿಸುತ್ತವೆ. ಬ್ರಹ್ಮವು ಮಾನವರೊಂದಿಗೆ ಕಣ್ಣು-ಮುಚ್ಚಾಲೆಯಾಟವನ್ನು ತನ್ನ ಸುಪ್ತವಾದ ಉಪಕರಣವಾದ ಮಾಯೆಯ ಮೂಲಕ ಆಡುತ್ತದೆ.

         ಲೀಲಾ ಎನ್ನುವುದು ಲಕ್ಷ್ಮೀ ದೇವಿಯನ್ನೂ ಸೂಚಿಸುತ್ತದೆ.

Sumaṅgalī सुमङ्गली (967)

೯೬೭. ಸುಮಂಗಲೀ

            ಮಂಗಲ ಎಂದರೆ ಎಲ್ಲಾ ಶುಭಕರವಾದುದು. ನಿಷ್ಠೆಯಿಂದಿರುವ ಸತಿಯನ್ನೂ ಸಹ ಮಂಗಳಾ ಎಂದು ಕರೆಯುತ್ತಾರೆ. ಶಿವನ ಸಂಗಾತಿಯಾಗಿರುವ ಉಮೆಯನ್ನೂ ಸಹ ಮಂಗಳಾ ಎಂದು ಕರೆಯಲಾಗುತ್ತದೆ. ಸು ಎಂದರೆ ಶ್ರೇಷ್ಠತೆಯನ್ನು ಹೊಂದಿದ್ದು. ಸು ಎನ್ನುವುದಕ್ಕೆ ಉತ್ತಮವಾದದ್ದು, ಸರ್ವೋತ್ತಮವಾದದ್ದು, ಸೂಕ್ತವಾದದ್ದು, ಸದ್ಗುಣದಿಂದ ಕೂಡಿದ್ದು, ಸುಂದರವಾದದ್ದು, ಮೊದಲಾದ ಅರ್ಥಗಳೂ ಇವೆ. ಆದ್ದರಿಂದ ಈ ನಾಮವು ದೇವಿಯು ಸರ್ವಶ್ರೇಷ್ಠವಾದ ಮಂಗಳಕರ ಗುಣಗಳ ಸ್ವರೂಪವೆಂದು ಹೇಳುತ್ತದೆ. ಯಾವುದು ದುಷ್ಟ ಶಕ್ತಿಗಳನ್ನು ದೂರ ಮಾಡುತ್ತದೆಯೋ ಅದನ್ನೂ ಸಹ ಮಂಗಲವೆಂದು ಹೇಳಲಾಗುತ್ತದೆ.

           ಬ್ರಹ್ಮವು ನಿತ್ಯ ನಿರಂತರವಾಗಿ ಮಂಗಳಕರವಾದದ್ದು.

          ವಿಷ್ಣು ಸಹಸ್ರನಾಮದ ೧೫ನೇ ನಾಮವು ಮಂಗಲಾನಾಂ ಚ ಮಂಗಲಂ ಎಂದು ಕೊನೆಗೊಳ್ಳುತ್ತದೆ. ಮಂಗಲ ಎಂದರೆ ಕೇವಲ ಶುಭಕರವಾದುದು ಎನ್ನುವ ಅರ್ಥವನ್ನು ಹೊಂದಿರುವುದಷ್ಟೇ ಅಲ್ಲ ಅದು ಶುಭಕರವಾದುದನ್ನೂ ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.

ಮಂಗಲದ ಕುರಿತು ಇನ್ನಷ್ಟು ವಿವರಗಳು:

           ಅನೇಕ ಪ್ರಾಂತ್ಯಗಳಲ್ಲಿ ಮಂಗಳವಾರವನ್ನು ಅಶುಭ ದಿನವೆನ್ನುವ ನಂಬಿಕೆಯು ಪ್ರಚಲಿತದಲ್ಲಿದೆ. ಇದು ಏಕೆಂದರೆ ಮಂಗಳವಾರದ ಅಧಿಪತಿಯಾಗಿರುವ ಮಂಗಳನನ್ನು ಅಮಂಗಳನೆಂದು ಪರಿಗಣಿಸಲಾಗಿರುವುದರಿಂದ. ಆದರೆ ಮಂಗಳವಾರವನ್ನು ಅಶುಭ ದಿನವೆಂದು ಕರೆಯಲು ಬಲವಾದ ಕಾರಣವು ಕಂಡು ಬರುವುದಿಲ್ಲ. ಸಂಸ್ಕೃತದಲ್ಲಿ ಮಂಗಳ ಗ್ರಹವನ್ನು ಕುಜನೆಂದೂ ಕರೆಯಲಾಗುತ್ತದೆ. ಮತ್ತೊಂದು ಬಾಧಕರವಾದ ವಿಷಯವೆಂದರೆ ಜಾತಕಗಳ ಹೊಂದಾಣಿಕೆಯನ್ನು ಪರಿಶೀಲಿಸುವಾಗ ನೋಡಲಾಗುವ ಕುಜ ದೋಷ. ಕುಜ ದೋಷಕ್ಕೆ ಹಲವಾರು ಅಪವಾದಗಳಿವೆ, ಅವೆಲ್ಲವನ್ನೂ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಯಾರು ದೇವಿಯನ್ನು ನಿಜವಾಗಿ ನಂಬುತ್ತಾರೋ ಅವರು ಗ್ರಹಗಳ ಕುರಿತಾಗಿ ಚಿಂತಿಸುವುದಿಲ್ಲ ಏಕೆಂದರೆ ಸಕಲ ಗ್ರಹಗಳೂ ಆಕೆಯ ನಿಯಂತ್ರಣದಲ್ಲಿವೆಯಾದ್ದರಿಂದ. ತಮಿಳಿನ ಗಾದೆಯೊಂದು, “ಯಾರು ಪರಶಿವನಲ್ಲಿ ದೃಢವಾದ ನಂಬಿಕೆಯನ್ನಿರಿಸಿಕೊಳ್ಳುತ್ತಾರೋ ಅವರಿಗೆ ತಿಥಿ, ವಾರ, ಗ್ರಹ, ನಕ್ಷತ್ರಗಳು ಹಾನಿಯುಂಟು ಮಾಡುವುದಿಲ್ಲ”, ಎಂದು ಹೇಳುತ್ತದೆ. 

           ಕೆಳಗಿನದು ಮೂಕಪಂಚಶತಿಯ – ಪಾದಾರವಿಂದ ಶತಕದ ೫೯ನೇ ಸ್ತೋತ್ರವಾಗಿದೆ. ಈ ಸ್ತೋತ್ರವು ಎಲ್ಲಾ ನವಗ್ರಹಗಳು ದೇವಿಯ ಪಾದಪದ್ಮಗಳಲ್ಲಿ ಇವೆ ಎಂದು ಸಾರುತ್ತದೆ. ಈ ಸ್ತೋತ್ರವನ್ನು ಪಠಿಸುವುದರೊಂದಿಗೆ ದೇವಿಯ ಪಾದಕಮಲಗಳ ಮೇಲೆ ಧ್ಯಾನವನ್ನು ಕೇಂದ್ರೀಕರಿಸಿದಲ್ಲಿ ಗ್ರಹಗಳಿಂದ ಉಂಟಾಗುವ ಸರ್ವ ದೋಷಗಳು ಲಯವಾಗುತ್ತವೆ.

                        दधानो भास्वत्ताममृतनिलयो लोहितवपुः

                        विन्म्राणां सौम्यो गुरुरपि कवित्वं च कलयन् ।

                        गतौ मन्दो गङ्गाधरमहिषि कामाक्षि भ्जतां

                        तमः केतुमार्तस्तव चरण्पद्मो विज्यते ॥

                        ದಧಾನೋ ಭಾಸ್ವತ್ತಾಮಮೃತನಿಲಯೋ ಲೋಹಿತವಪುಃ

                       ವಿಮಂತ್ರಾಣಾಂ ಸೌಮ್ಯೋ ಗುರುರಪಿ ಕವಿತ್ವಂ ಚ ಕಲಯನ್ |

                       ಗತೌ ಮಂದೋ ಗಙ್ಗಾಧರಮಹಿಷಿ ಕಾಮಾಕ್ಷಿ ಭಜತಾಂ

                      ತಮಃ ಕೇತುಮಾರ್ತಸ್ತವ ಚರಣಪದ್ಮೋ ವಿಜ್ಯತೇ ||

                                                                                     *******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM MEANING 960 - 967 http://www.manblunder.com/2010/07/lalitha-sahasranamam-meaning-960-967.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

 

Rating
Average: 5 (1 vote)

Comments

Submitted by nageshamysore Fri, 01/03/2014 - 20:55

ಶ್ರೀಧರರೆ, "೨೦೨. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ:-)
.
ಲಲಿತಾ ಸಹಸ್ರನಾಮ ೯೬೦ - ೯೬೭
_______________________________________
.
.
೯೬೦. ಲೋಕಾತೀತಾ
ವ್ಯಕ್ತಿಯ ಪ್ರಜ್ಞಾಹಂತ ಬ್ರಹ್ಮ-ವಿಷ್ಣು-ಇಂದ್ರಾದಿಲೋಕ, ದೇವಿಗೆ ಪರಾಕೈಲಾಸ
ಕೆಳಸ್ತರ ಪ್ರಜ್ಞಾಲೋಕಗಳಿಗೆಲ್ಲ ಅತೀತೆ, ಅತ್ಯುನ್ನತ ಶುದ್ಧ ಪ್ರಜ್ಞಾಸ್ತರದೆ ವಾಸ
ಪಂಚಭೂತ ಸಮಷ್ಟಿ ಲೀನ ಮರಣಸ್ಥಿತಿ ಅಪದ, ಆತ್ಮ ಭುವಿಗೆ ಹಿಂದಿರುಗುತ
ಪರಮೋಚ್ಛ ಶುದ್ಧ ಪುನರ್ಜನ್ಮರಹಿತ ತ್ರಿಪೀಠ ಶಿವಸ್ಕಂದ ಜತೆ ಲೋಕಾತೀತಾ ||
.
೯೬೧. ಗುಣಾತೀತಾ
ಗುಣಲಕ್ಷಣಗಳ ಹಡೆದವಳಲ್ಲವೆ ಲಲಿತೆ, ತ್ರಿಗುಣ ರೂಪಿಣಿ ನಿರ್ಗುಣ ಬ್ರಹ್ಮ
ತ್ರಿಗುಣಗಳ ಅವಿಚಲಿತ ಸ್ಥಿತಿ, ಸಮಸ್ತ ವಿಶ್ವ ಪ್ರಕೃತಿಯಲಿ ಸುಪ್ತವಾಗಿ ಗೌಣ
ಮೂಲಪ್ರಕೃತಿಗೆ ಕಾರಣೀಭೂತ ತ್ರಿಗುಣ, ಮಾಯೆಯಾಗಿ ಕಾಡುವ ಸತತಾ
ಗುಣಲಕ್ಷಣಗಳಿಗತೀತಳಾಗಿಹ ದೇವಿ, ಅಧಿಗಮಿಸಿ ತಾನಾಗಿಹೆ ಗುಣಾತೀತ ||
೯೬೨. ಸರ್ವಾತೀತಾ
ಲೋಕಾದಿಗುಣಗಳೆಲ್ಲವನಧಿಗಮಿಸುತ ದೇವಿ, ಸರ್ವಶ್ರೇಷ್ಠಳು ಸರ್ವಾತೀತೆ
ಬ್ರಹ್ಮಾಂಡವೆ ತಾನಾಗಿ ಲಲಿತೆ, ಪರಸ್ಪರದೆ ಅರಿತು ತ್ರಿಕಾರ್ಯದಲಿ ನಿರತೆ
ಸರ್ವೋನ್ನತ ಶಿವನ ಹೊಂದೆ, ದೇವಿ ತಾನೆ ಅಧ್ಯಾತ್ಮಿಕ ಮೆಟ್ಟಿಲಾಗಿ ಸೂಕ್ತಾ
ಪರಿಶುದ್ಧ ಪ್ರಜ್ಞೆಯಲಧಿಗಮಿಸೆ ತ್ರಿಗುಣ, ಸಾಕ್ಷಾತ್ಕಾರಕೆ ನಡೆಸೆ ಲೋಕಾತೀತ ||
.
೯೬೩. ಶಮಾತ್ಮಿಕಾ
ಪರಮಶಾಂತಿ ಪರಮಾನಂದ ಶಮ, ಭ್ರಮಾಮುಕ್ತ ದೀರ್ಘಧ್ಯಾನಕೆ ಸಿಕ್ಕುತ
ಶುಭಕರ ಸಂತೋಷ ಸೌಭಾಗ್ಯದ ಗುಣಗಳ ಪ್ರತಿರೂಪದೆ ಶಮಾತ್ಮಿಕಾ ವ್ಯಕ್ತ
ಅಗೋಚರದ, ಪ್ರಜ್ಞೆ-ಅಪ್ರಜ್ಞೆಯಾಗಿರದ, ಬಳಕೆ-ವ್ಯವಹಾರಕೆಟುಗದ ಸುಖ
ಇಂದ್ರಿಯಾಲೋಚನೆ,ಶಬ್ದಾತೀತ ಪ್ರಜ್ಞೆಯ ಮೂರ್ತರೂಪಾಗಿಹ ಶಮಾತ್ಮಿಕಾ ||
.
೯೬೪. ಬಂಧೂಕ- ಕುಸುಮ-ಪ್ರಖ್ಯಾ
ಸೃಷ್ಟಿ ಸೌಂದರ್ಯದ ಕಿರೀಟ, ದೇವಿ ಸೃಷ್ಟಿಗಿಟ್ಟ ಹೂಗಳ ಮುಕುಟ
ಹಳದಿ ಕೆಂಪ ಮಿಶ್ರ ಬಂಧೂಕದ ಹೂ ಅರಿಶಿನಕುಂಕುಮ ಕಲಸಿಟ್ಟ
ಹೊಳಪಿನ ಸುಕೋಮಲತೆಗೆ ಹೆಸರಾದ ಹೂ ದೇವಿಗ್ಹೋಲಿಸಿ ಸಖ್ಯ
ಸ್ವಯಂ ಸೃಷ್ಟಿ ನವಿರಿಗೆ ಲಲಿತೆ ಸಾಟಿ, ಬಂಧೂಕ ಕುಸುಮ ಪ್ರಖ್ಯಾ ||
.
೯೬೫. ಬಾಲಾ
ಶ್ರೀ ವಿದ್ಯಾ ಉಪಾಸನೆಯರಸೆ ಐಂ-ಕ್ಲೀಂ-ಸೌಃ ಬಾಲಾಮಂತ್ರದೆ ಆರಂಭ
ದೇವಿ ನವ ವರ್ಷದ ಬಾಲೆಯವತಾರದಿ, ಕೆಂಪು ವಸ್ತ್ರ ಭೂಷಿತ ಪ್ರಭಾ
ಬಾಲಚಂದ್ರ ಲಲಾಟಾಲಂಕಾರಕೆ, ತ್ರಿನೇತ್ರದೆ ಪ್ರಕಾಶಿತ ಅರುಣರಾಗ
ಪುಸ್ತಕ-ಜಪಮಾಲೆ-ಅಭಯ-ವರದ ಮುದ್ರೆ, ಕೆಂದಾವರೆ ಸಿಂಹಾಸನ ||
.
೯೬೬. ಲೀಲಾ-ವಿನೋದಿನೀ
ಕಣ್ಣುಮುಚ್ಚಾಲೆಯಾಟವಾಡುವ ಬ್ರಹ್ಮ, ಮಾಯೆಯಾಗಿ ಉಪಕರಣ
ಪ್ರಚೋದನೆ ಉದ್ದೇಶವಿರದ ತಕ್ಷಣದ ಕಾರ್ಯ, ಸೃಷ್ಟಿಯಾಟ ಗೌಣ
ಸೃಷ್ಟಿಸಿ ವಿವಿಧ ಮನು ಕಾಲಮಾನ, ಲೀಲಾಜಾಲ ತ್ರಿಕಾರ್ಯ ದನಿ
ಸೃಷ್ಟಿ-ಸ್ಥಿತಿ-ಲಯ ಕ್ರಿಯೆ ವಿನೋದದೆ, ಲಲಿತೆ ಲೀಲಾ ವಿನೋದಿನೀ ||
.
೯೬೭. ಸುಮಂಗಲೀ
ನಿತ್ಯ ನಿರಂತರ ಮಂಗಳಕರ ಬ್ರಹ್ಮ, ಶುಭಕರ ಶುಭ ಪ್ರದಾಯಕ
ದೂರಾಗಿ ದುಷ್ಟಶಕ್ತಿ, ಸರ್ವಶ್ರೇಷ್ಠ ಮಂಗಳಕರ ಗುಣಸ್ವರೂಪ ಸಖ
ಸು - ಸೂಕ್ತ,ಸದ್ಗುಣ,ಸರ್ವೋತ್ತಮ,ಸುಂದರ,ಉತ್ತಮ ಅರ್ಥದಲಿ
ನಿಷ್ಟಾಸತಿ-ಶಿವಸಂಗಾತಿ ಮಂಗಳಾ ಹೆಸರಲಿ, ದೇವಿ ಸುಮಂಗಲೀ ||
.
ಮಂಗಲದ ಕುರಿತು ಇನ್ಬಷ್ಟು ವಿವರಗಳು
___________________________________
.
ಮಂಗಳನ ಅಮಂಗಳವೆಂದು, ಮಂಗಳವಾರವಾಗಿ ಅಶುಭಕರ
ಜಾತಕಗಳ ಹೊಂದಾಣಿಸೆ, ಕುಜದೋಷವಾಗಿ ಜತೆಗೆ ಅಪಚಾರ
ಲಲಿತೆಯೆ ಗ್ರಹಗಳೊಡತಿ, ದೇವಿ ಪಾದ ನಂಬಿದರೆಲ್ಲ ವಿನಾಯ್ತಿ
ತಿಥಿ ವಾರ ಗ್ರಹ ನಕ್ಷತ್ರಾದಿ ಗತಿ, ಹಾನಿ ಮಾಡದು, ಭಕ್ತಿಯಶಕ್ತಿ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು