೨೧೦. ಲಲಿತಾ ಸಹಸ್ರನಾಮ ೯೯೯ನೇ ನಾಮದ ವಿವರಣೆ

೨೧೦. ಲಲಿತಾ ಸಹಸ್ರನಾಮ ೯೯೯ನೇ ನಾಮದ ವಿವರಣೆ

                                                                     ಲಲಿತಾ ಸಹಸ್ರನಾಮ ೯೯೯

Śiva-śakty-aikya-rūpiṇī शिव-शक्त्यैक्य-रूपिणी (999)

೯೯೯. ಶಿವ-ಶಕ್ತೈಕ್ಯ-ರೂಪಿಣೀ

            ದೈವೀ ದಂಪತಿಗಳಾದ, ಶಿವ-ಶಕ್ತಿಯರ ಸಮಾಗಮವಾದ ‘ಶಿವ-ಶಕ್ತೈಕ್ಯ-ರೂಪಿಣೀ’ ಅತ್ಯಂತ ಪೂಜನೀಯ ಭಾವದಿಂದ ಗೌರವಿಸಲ್ಪಡುವ, ಮೆಚ್ಚಲ್ಪಡುವ, ವಿಸ್ಮಯವನ್ನುಂಟು ಮಾಡುವ, ಕಲ್ಪನೆಗೆ ನಿಲುಕದ ಮತ್ತು ರಹಸ್ಯಾತ್ಮಕವಾದ ರೂಪವಾಗಿದೆ. ಈ ಬ್ರಹ್ಮಾಂಡವು ಅವರ ಇಚ್ಛೆಗನುಸಾರವಾಗಿ ಮತ್ತು ಕರ್ಮನಿಯಮಗಳಿಗೆ ಒಳಪಟ್ಟು ಸೃಷ್ಟಿ, ಸ್ಥಿತಿ, ಲಯ, ಮತ್ತು ಪುನಃಸೃಷ್ಟಿಯು ಆಗುತ್ತದೆ.  

            ಸೌಂದರ್ಯ ಲಹರಿಯ ಮೊದಲನೇ ಸ್ತೋತ್ರವು ಹೀಗೆ ಹೇಳುತ್ತದೆ, " ಶಿವನು ಈ ಪ್ರಪಂಚವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದುವುದು ಕೇವಲ ಅವನು ಶಕ್ತಿಯೊಂದಿಗೆ ಜೊತೆಗೂಡಿದಾಗ, ಇಲ್ಲದಿದ್ದರೆ ಅವನು ಸಣ್ಣ ಕದಲಿಕೆಯನ್ನೂ (ಸ್ಪಂದನೆಯನ್ನೂ) ಮಾಡಲಾರ". ಶಿವನು ಪರಬ್ರಹ್ಮನೆಂದು ಕರೆಯಲ್ಪಟ್ಟರೆ, ಶಕ್ತಿಯು ಪರಾಶಕ್ತಿ ಎನಿಸಿದ್ದಾಳೆ. ಪರಬ್ರಹ್ಮವು ಅಚರ ಶಕ್ತಿ ಮತ್ತದು ನಿಷ್ಕಾಮ (ಆಶಾರಹಿತ, ಆಸಕ್ತಿರಹಿತ ಮತ್ತು ಸ್ವಾರ್ಥರಹಿತ) ಸ್ವಭಾವವುಳ್ಳದ್ದು. ಶಿವನ ಸ್ವಭಾವವನ್ನು ಕುರಿತು ಮಾಂಡೂಕ್ಯ ಉಪನಿಷತ್ತು (೭) ವಿವರಿಸುತ್ತದೆ, ಅದು ಹೀಗೆ ಹೇಳುತ್ತದೆ, "ಅವನು ಅಂತಃಪ್ರಜ್ಞನಲ್ಲ, ಬಹಿಃಪ್ರಜ್ಞನಲ್ಲ, ಅಥವಾ ಉಭಯ ಪ್ರಜ್ಞನಲ್ಲ, ಅದು ಎಲ್ಲ ವಸ್ತುಗಳ ಕುರಿತಾದ ಪ್ರಜ್ಞೆಯೂ ಅಲ್ಲ (ಪ್ರಜ್ಞಾನಘನನಲ್ಲ) ಅಥವಾ ಅಪ್ರಜ್ಞೆಯೂ ಅಲ್ಲ. ಅವನು ಅದೃಶ್ಯನೂ ಮತ್ತು ಅವ್ಯವಹಾರ್ಯನು (ಇಂದ್ರಿಯಗಳಿಗೆ ನಿಲುಕಲಾರದವನು); ಮತ್ತು ಮನಸ್ಸು ಹಾಗು ಶಬ್ದಗಳಿಗೆ ನಿಲುಕದವನು. ಅವನಲ್ಲಿ ಕೇವಲ ಆತ್ಮಪ್ರಜ್ಞೆಯೊಂದೇ ಇರುತ್ತದೆ ಮತ್ತು ಪ್ರಪಂಚದಿಂದ ಸಂಪೂರ್ಣ ಬಿಡುಗಡೆ ಹೊಂದಿರುತ್ತಾನೆ. ಅವನು ಶಾಂತಿಯ ಮತ್ತು ಎಲ್ಲಾ ಶುಭ ವಸ್ತುಗಳ ಮೂರ್ತರೂಪ. ಅವನು ಅದ್ವೀತಿಯನು". ಇದು ಅಸಹಜವಾದ (ಸಾಮಾನ್ಯವಾಗಿ ನಾವು ಕಾಣದ) ಮತ್ತು ಸರ್ವಾಂತರ್ಯಾಮಿಯಾದ ಬ್ರಹ್ಮದ ಅತ್ಯಂತ ಸೂಕ್ತವಾದ ವಿವರಣೆಯಾಗಿದೆ.

           ಶಕ್ತಿಯು ಶಿವನ ಮೂಲಭೂತ ಸುಪ್ತ ಶಕ್ತಿಯಾಗಿದ್ದು ಅದು ಪ್ರಪಂಚವಾಗಿ ಆವಿರ್ಭವಿಸುತ್ತದೆ, ಅದನ್ನು ಸುಸ್ಥಿತಿಯಲ್ಲಿಡುತ್ತದೆ ಮತ್ತು ಅದನ್ನು ಲಯವಾಗಿಸಿ ಅದನ್ನು ಪುನರ್ರಚಿಸುತ್ತದೆ. ಮಾಂಡೂಕ್ಯ ಉಪನಿಷತ್ತಿನಲ್ಲಿ ಪ್ರಸ್ತಾಪಿಸಿರುವ ಪ್ರಜ್ಞೆಯು ಶಕ್ತಿಯ ಪರಿಧಿಯೊಳಗೆ ಬರುತ್ತದೆ. ಆದ್ದರಿಂದ ’ಶಕ್ತಿ’ಯನ್ನು ಶಿವನ ಮೂಲಭೂತ ಮತ್ತು ಸುಪ್ತ ಶಕ್ತಿಯೆಂದು ಕರೆಯಲಾಗಿದೆ. ದೇವಿಯು ಯಾವಾಗಲೂ ಶಿವನೊಂದಿಗೆ ಇರುತ್ತಾಳೆ ಮತ್ತಾಕೆಯನ್ನು ಬೇರ್ಪಡಿಸಲಾಗದು. ಒಂದು ವೇಳೆ ಬ್ರಹ್ಮ ಮತ್ತು ಪ್ರಜ್ಞೆಗಳಲ್ಲಿ ಅಜ್ಞಾನದಿಂದಾಗಿ ಭೇದವನ್ನೆಣಿಸಿದರೆ, ಸೃಷ್ಟಿಯ ಮತ್ತು ಅಸ್ತಿತ್ವದ ಪ್ರಶ್ನೆಯೇ ಉದ್ಭವಿಸದು. ವಾಸ್ತವವಾಗಿ ಹಾಗೆ ಬೇರ್ಪಟ್ಟ ಅಸ್ತಿತ್ವವು ಎಲ್ಲಿಯೂ ಇಲ್ಲ. ಆದರೆ ಸೃಷ್ಟಿಯ ಸಂಕೀರ್ಣವಾದ ವಿಷಯವನ್ನು ಸುಲಭವಾಗಿ ಅರಿತುಕೊಳ್ಳಲು, ಶಿವ ಮತ್ತು ಶಕ್ತಿಯರನ್ನು ಎರಡು ವಿಭಿನ್ನವಾದ ವಸ್ತುಗಳೆಂದು ಗ್ರಹಿಸಲಾಗಿದೆ. ಬೆಂಕಿಯಿಂದುಂಟಾಗುವ ಉಷ್ಣವನ್ನು ಬೆಂಕಿಯಿಂದ ಬೇರ್ಪಡಿಸಲಾಗದು. ಬೆಂಕಿಯ ಉಷ್ಣತೆಯು ಮೂಲಭೂತವಾಗಿ ಬೆಂಕಿಯೊಳಗೆ ಅಂತರ್ಗತವಾಗಿರುತ್ತದೆ. ಕೇವಲ ಉಷ್ಣತೆ ಅಥವಾ ಬೆಂಕಿಗಳೆರಡರಿಂದಲೂ ಯಾವುದೇ ಪ್ರಯೋಜನವಿಲ್ಲ; ಅವೆರಡೂ ಒಟ್ಟಿಗೇ ಇಲ್ಲದಿದ್ದರೆ. ಇದು ಶಿವ ಶಕ್ತಿಯರನ್ನು ವಿವರಿಸುವ ಅತ್ಯಂತ ಸೂಕ್ತವಾದ ಉದಾಹರಣೆಯೆನಿಸಿದೆ, ಏಕೆಂದರೆ ಒಂದರ ಹೊರತಾಗಿ ಮತ್ತೊಂದು ಜಡವಾಗಿ (ನಿಷ್ಕ್ರಿಯವಾಗಿ) ಉಳಿಯುತ್ತವೆ. 

            ಶಿವನು ಸ್ವಯಂಪ್ರಕಾಶನು, ಅವನಿಲ್ಲದಿದ್ದರೆ ಈ ಪ್ರಪಂಚವು ಕತ್ತಲೆಯಲ್ಲಿ ಮುಳುಗಿಹೋಗುತ್ತದೆ. ಶಿವನು ಪ್ರಕಾಶ ರೂಪದಲ್ಲಿರುತ್ತಾನೆ. ಪ್ರಕಾಶಕ್ಕೆ ಕಣ್ಣಿಗೆ ಕಾಣುವ, ಹೊಳೆಯುವ, ಎಲ್ಲರಿಗೂ ತಿಳಿದ, ಬೆಳಕು, ಹೊಳಪು, ಕಂಗೊಳಿಸುವ, ಮೊದಲಾದ ಅರ್ಥಗಳಿವೆ. ಪ್ರಕಾಶ ಎನ್ನುವುದು ಶಿವ ಮತ್ತು ಬ್ರಹ್ಮವನ್ನು ಸೂಚಿಸುತ್ತದೆ. ಶಕ್ತಿಯು ಶಿವನ ಅಥವಾ ಬ್ರಹ್ಮದ ವಿಮರ್ಶ ರೂಪವಾಗಿದೆ. ವಿಮರ್ಶವನ್ನು ಕಾರಣ, ಜ್ಞಾನ, ಪರಿಗಣನೆ, ಪ್ರತಿಫಲಿಸುವ, ಮೊದಲಾದವುಗಳಾಗಿ ವಿವರಿಸಬಹುದು. ಶಿವನು ಅರಿವಿಗೆ ಬರುವ ಸಮಸ್ತ ಅಸ್ತಿತ್ವದಲ್ಲಿ ಅತ್ಯಂತ ವೈಭವದಿಂದ ಕೂಡಿದವನಾಗಿದ್ದರೂ ಸಹ ಯಾವುದಾದರೂ ಪ್ರತಿಫಲಿಸುವ ವಸ್ತುವಿಲ್ಲದಿದ್ದರೆ ಅವನು ತನ್ನ ಕಂಗೊಳಿಸುವ ವೈಭವವನ್ನು ನೋಡಲಾರ. ಇದು ಒಬ್ಬ ಮನುಷ್ಯನು ಹೇಗೆ ತನ್ನ ಬಿಂಬವನ್ನು ಪ್ರತಿಬಿಂಬಿಸುವ ವಸ್ತುವೊಂದು ಇಲ್ಲದೇ ಹೇಗೆ ತನ್ನನ್ನು ತಾನು ನೋಡಿಕೊಳ್ಳಲಾರನೋ ಹಾಗಿದೆ. ಶಕ್ತಿಯು ಶಿವನನ್ನು ಪ್ರತಿಫಲಿಸುವ ಕನ್ನಡಿಯಂತಿದ್ದು ಅದರಲ್ಲಿ ಅವನು ತನ್ನ ಸ್ವರೂಪವನ್ನು ಅರಿಯಲು ಸಮರ್ಥನಾಗುತ್ತಾನೆ; ಯಾವ ವಿಧದಲ್ಲಿ ಒಂದು ಕನ್ನಡಿಯು ಅದರ ಎದುರು ನಿಂತ ವ್ಯಕ್ತಿಯ ಬಿಂಬವನ್ನು ಪ್ರತಿಫಲಿಸುತ್ತದೆಯೋ ಹಾಗೆ. ಶಿವನು ಪರಿಶುದ್ಧ ಪ್ರಜ್ಞೆಯಾಗಿದ್ದಾನೆ ಮತ್ತು ಈ ಪರಿಶುದ್ಧ ಪ್ರಜ್ಞೆಯ ಅರಿಯುವಿಕೆಯು ಶಕ್ತಿಯಾಗಿದೆ. ಒಂದು ವೇಳೆ ಶಿವನಿಲ್ಲದಿದ್ದರೆ, ಪ್ರಜ್ಞೆಯೇ ಇರುತ್ತಿರಲಿಲ್ಲ. ಒಂದು ವೇಳೆ ಶಕ್ತಿಯಿಲ್ಲದೇ ಇರುತ್ತಿದ್ದರೆ, ಈ ಪ್ರಜ್ಞೆಯ ಅರಿವು ಉಂಟಾಗುತ್ತಿರಲಿಲ್ಲ. ಪ್ರಕಾಶ ಸ್ಥಿತಿಯಲ್ಲಿ, ’ನಾನು’ ಮತ್ತು ’ಇದು’ ಎರಡೂ ಒಟ್ಟಾಗಿರುತ್ತವೆ ಮತ್ತು ವಿಮರ್ಶ ಸ್ಥಿತಿಯಲ್ಲಿ ’ಇದು’ ಮತ್ತು ’ನಾನು’ ಪ್ರತ್ಯೇಕವಾಗಿರುತ್ತವೆ. ಆದ್ದರಿಂದ ಪ್ರಕಾಶ ಸ್ಥಿತಿಯು ’ನಾನು’+’ಇದು’ ಮತ್ತು ವಿಮರ್ಶ ಸ್ಥಿತಿಯು ಕೇವಲ ’ಇದು’ ಮಾತ್ರವೇ ಆಗಿದೆ. ’ನಾನು’ ಎನ್ನುವುದು ಈ ಪ್ರಪಂಚದ ಮೂಲವಾಗಿದೆ ಮತ್ತು ’ಇದು’ ಎನ್ನುವುದು ಅದರ ಅನಾವರಣವಾಗಿದೆ. ಶಿವನು ’ಚಿತ್’ ಮತ್ತು ಶಕ್ತಿಯು ’ಚಿತಿ’ಯಾಗಿದ್ದಾಳೆ. ಚಿತ್ ಎಂದರೆ ಮೂಲಭೂತ ಪ್ರಜ್ಞೆ ಮತ್ತು ಚಿತಿ ಎಂದರೆ ಗ್ರಹಿಕೆಗೆ ನಿಲುಕುವ ಕಾರ್ಯಗಳನ್ನು ಉಂಟುಮಾಡುವ ಪ್ರಜ್ಞೆಯಾಗಿದೆ. ಶಕ್ತಿಯು ’ನಾನು’ ಮತ್ತು ’ಇದು’ಗಳನ್ನು ಬೇರ್ಪಡಿಸುತ್ತದೆ. ಶಕ್ತಿಯಿಲ್ಲದಿದ್ದರೆ ಈ ಮಹತ್ವದ ಬೇರ್ಪಡುವಿಕೆಯು ಸಾಧ್ಯವಾಗದು. ಶಿವನು ಸೃಷ್ಟಿಯ ಆರಂಭಿಕ ಸ್ಪಂದನವನ್ನು ಉಂಟು ಮಾಡುತ್ತಾನೆ ಮತ್ತು ಶಕ್ತಿಯು ಅದನ್ನು ಮುಂದುವರೆಸಿಕೊಂಡು ಹೋಗುತ್ತಾಳೆ.

         ಶಕ್ತಿಯು ಶಿವನಿಂದ ಉಂಟುಮಾಡಲ್ಪಟ್ಟ ಸ್ಪಂದನವನ್ನು ವಿವಿಧ ತತ್ವಗಳ (ಮೂವತ್ತಾರು ತತ್ವಗಳು) ಮೂಲಕ ಮುಂದೆ ತಳ್ಳುತ್ತಾ ಅದನ್ನು ತನ್ನ ಮಾಯೆಯ ಮೂಲಕ ಸುಸ್ಥಿತಿಯಲ್ಲಿಡುತ್ತಾಳೆ. ಮಾಯೆಯು, ಬ್ರಹ್ಮದಿಂದ ಆತ್ಮವನ್ನು ಪ್ರತ್ಯೇಕಗೊಳಿಸುವ ಏಕೈಕ ಕಾರಣವಾಗಿದೆ. ಶಕ್ತಿಯು ಶಿವ-ಶಕ್ತಿಯರ ಐಕ್ಯರೂಪದ ರೂಪಾಂತರವಾಗಿರುವುದರಿಂದ ಆಕೆಯೇ ಬೀಜ ಮತ್ತು ಮೊಳಕೆ ಎರಡೂ ಆಗಿದ್ದಾಳೆ. ಇದರಿಂದ ವ್ಯಕ್ತವಾಗುವ ಅಂಶವೇನೆಂದರೆ, ಸೃಷ್ಟಿಗೆ ಎರಡು ವಸ್ತುಗಳ ಅವಶ್ಯಕತೆಯಿದೆ. ಉದಾಹರಣೆಗೆ, ಒಂದು ಆತ್ಮವು ತನ್ನಷ್ಟಕ್ಕೆ ತಾನೇ ಜನಿಸಲಾರದು. ಅದು ಅವತಾರ ತೆಳೆಯಲು ಅದು ಪ್ರಕೃತಿಯ ಜೊತೆ ಸಂಪರ್ಕವನ್ನು ಹೊಂದಲೇ ಬೇಕು. ಪುಂ ಶಕ್ತಿ ಮತ್ತು ಸ್ತ್ರೀ ಶಕ್ತಿಗಳ ಸಮ್ಮಿಲನವಾಗದ ಹೊರತು ಸೃಷ್ಟಿಯ ಅಂಕುರವು ಸಾಧ್ಯವಿಲ್ಲ.

         ಗ್ರಾಹ್ಯವಾದುದರಿಂದ (ಸ್ಥೂಲವಾದುದರಿಂದ) ಸೂಕ್ಷ್ಮದೆಡೆಗೆ ಸರಿಯುತ್ತಾ ಸೂಕ್ಷ್ಮವಾದ ಸಮಾಗಮದ ಕುರಿತು ಬಹಳಷ್ಟನ್ನು ಹೇಳಲಾಗಿದೆ. ಅವನ್ನು ಎರಡು ಬಿಂದುಗಳೆಂದು ಉಲ್ಲೇಖಿಸಲಾಗಿದೆ, ಬಿಳಿ ಮತ್ತು ಕೆಂಪು; ಶಿವ ಮತ್ತು ಶಕ್ತಿಯರನ್ನು ಇವು ಅನುಕ್ರಮವಾಗಿ ಸೂಚಿಸುತ್ತವೆ. ಈ ಎರಡು ಬಿಂದುಗಳು ಒಂದಕ್ಕೊಂದು ಬೆಸಗೊಂಡಾಗ ವಿಕಾಸಗೊಂಡು (ಅರಳಿಕೊಂಡು) ಪುನಃ ಸಂಕುಚನಗೊಳ್ಳುತ್ತವೆ. ಯಾವಾಗ ಅವು ವಿಕಾಸಗೊಳ್ಳುತ್ತವೆಯೋ ಆಗ ಸೃಷ್ಟಿಯು ’ವಾಕ್’ (ಶಬ್ದ) ಮತ್ತು ’ಅರ್ಥ’ಗಳ (ಶಬ್ದದ ಅರ್ಥ) ಮೂಲಕ ಉಂಟಾಗುತ್ತದೆ. ಇಲ್ಲಿ ’ವಾಕ್’ ಎನ್ನುವುದು ಶಬ್ದ ಬ್ರಹ್ಮವಾದರೆ ’ಅರ್ಥ’ ಎನ್ನುವುದು ಮೂವತ್ತಾರು ತತ್ವಗಳನ್ನು ಸೂಚಿಸುತ್ತದೆ. ಒಂದರೊಳಗೊಂದು ಪ್ರವೇಶಿಸುವ ಈ ಎರಡು ಬಿಂದುಗಳನ್ನು ಕಾಮ-ಕಾಮೇಶ್ವರೀ ಎಂದು ಕರೆಯಲಾಗುತ್ತದೆ. ಪರಮೋನ್ನತನಾದ ಶಿವನು ಸಂಸ್ಕೃತದ ಮೊದಲ ಅಕ್ಷರವಾದ ’ಅ’(अ) ರೂಪದಲ್ಲಿರುತ್ತಾನೆ; ಮತ್ತು ಅ ಅಕ್ಷರವು ವೇದಗಳ ಎಲ್ಲ ಶಬ್ದಗಳಿಗೆ ಮೂಲವಾಗಿದೆ. ತನ್ನದೇ ಆದ ವಿಮರ್ಶ ರೂಪವಾದ ಶಕ್ತಿಯ ಒಳಹೊಕ್ಕ ನಂತರ ಸಮಸ್ತ ವಿಶ್ವವು ಶಿವನೊಳಗೆ ಲೀನವಾಗಿ ಅವನು ಬಿಂದುರೂಪವನ್ನು ಧರಿಸುತ್ತಾನೆ. ಪ್ರಕಾಶ ಬಿಂದುವು ವಿಮರ್ಶ ಬಿಂದುವಿನೊಳಗೆ ಪ್ರವೇಶಿಸಿದಂತೆ, ಇದುವರೆಗಾಗಲೇ ಪ್ರಕಾಶ ಬಿಂದುವಿನೊಳಗಿರುವ ವಿಮರ್ಶ ಬಿಂದುವೂ ಸಹ ಪ್ರಕಾಶ ಬಿಂದುವಿನೊಳಗೆ ಪ್ರವೇಶಿಸುತ್ತದೆ. ಈ ವಿಧವಾಗಿ ಒಂದಾಗುವಿಕೆಯ ಪರಿಣಾಮವಾಗಿ ಮಿಶ್ರ ಬಿಂದುವೆಂದು ಕರೆಯಲ್ಪಡುವ ಮತ್ತೊಂದು ಬಿಂದುವು ಉದ್ಭವವಾಗುತ್ತದೆ. ಹೀಗೆ ಒಟ್ಟು ಮೂರು ಬಿಂದುಗಳಿರುತ್ತವೆ, ಅವು ಬಿಳಿ, ಕೆಂಪು ಮತ್ತು ಮಿಶ್ರ. ಈ ಮೂರು ಬಿಂದುಗಳು ಒಂದು ತ್ರಿಕೋಣವನ್ನುಂಟು ಮಾಡುತ್ತವೆ; ಕೆಂಪು ಹಾಗು ಮಿಶ್ರ ಬಿಂದುಗಳು ಕೆಳಗಡೆ ಇದ್ದರೆ ಬಿಳಿಯ ಬಿಂದುವು ಅವರೆಡರ ಮೇಲೆ ಇರಿಸಲ್ಪಟ್ಟು ಪೂರ್ಣವಾದ ತ್ರಿಕೋಣವನ್ನು ಉಂಟು ಮಾಡುತ್ತವೆ. ಮಿಶ್ರಬಿಂದುವಿನೊಳಗೆ ಎಲ್ಲಾ ತತ್ವಗಳು ಅಡಕಗೊಂಡಿದ್ದು ಅದು ಮುಂದಿನ ಸೃಷ್ಟಿಗೆ ಕಾರಣವಾಗುತ್ತದೆ. ಇದುವೇ ಶ್ರೀ ಚಕ್ರದ ಅತ್ಯಂತ ಒಳಗಿನ ಚಕ್ರವಾಗಿದೆ. ಯಾವಾಗ ಈ ಮೂರು ಬಿಂದುಗಳನ್ನು ಸೇರಿಸಲಾಗುತ್ತದೆಯೋ, ಆಗ ಅವುಗಳನ್ನು ಸೇರಿಸುವ ಮೂರು ರೇಖೆಗಳು ಎಲ್ಲಾ ವಿಧವಾದ ತ್ರಿಪುಟಿಗಳನ್ನು ಪ್ರತಿನಿಧಿಸುತ್ತವೆ, ಉದಾಹರಣೆಗೆ ತ್ರಿಗುಣಗಳು, ಪ್ರಜ್ಞೆಯ ಮೂರು ಹಂತಗಳು, ಇಚ್ಛಾ, ಜ್ಞಾನ ಮತ್ತು ಕ್ರಿಯಾ ಶಕ್ತಿಗಳು, ಮೊದಲಾದವು. ಈ ತ್ರಿಕೋಣವು ಸೃಷ್ಟಿಗೆ ಕಾರಣವಾಗಿ, ಅದರ ಆರಂಭವು ಬ್ರಹ್ಮ, ವಿಷ್ಣು, ರುದ್ರರನ್ನು ಒಳಗೊಳ್ಳುತ್ತದೆ. ಈ ಮೂರು ಬಿಂದುಗಳನ್ನು ಸೂರ್ಯ (ಮೇಲೆ ಇರುವುದು); ಚಂದ್ರ (ಬಲಗಡೆ ಇರುವುದು) ಮತ್ತು ಅಗ್ನಿ (ಎಡಗಡೆ ಇರುವುದು) ಎಂದೂ ಸಹ ಉಲ್ಲೇಖಿಸಲಾಗುತ್ತದೆ. ಈ ಮೂರು ಬಿಂದುಗಳ ಕೆಳಗೆ ಕೆಳಮುಖವಾದ ಒಂದು ತ್ರಿಕೋಣವಿರುತ್ತದೆ. ಈ ತ್ರಿಕೋಣದ ಮೂರು ಭುಜಗಳು ಪಂಚದಶೀ ಮಂತ್ರದ (ನಾಮ ೮೯) ಮೂರು ಕೂಟಗಳನ್ನು ಪ್ರತಿನಿಧಿಸುತ್ತವೆ. ಮೇಲಿನ ತ್ರಿಕೋಣದ ಮೇಲಿರುವ ಬಿಂದುವು ಶಕ್ತಿಯ ಮುಖವಾಗಿದೆ (ಮೂರನೆಯ ಕಣ್ಣನ್ನು ಪ್ರತಿನಿಧಿಸುವ ಇದು ಲಯವನ್ನು ಸೂಚಿಸುತ್ತದೆ), ಕೆಳಗಿನ ಎರಡು ಬಿಂದುಗಳು ದೇವಿಯ ಸ್ತನಗಳನ್ನು ಪ್ರತಿನಿಧಿಸುತ್ತವೆ (ಸ್ತನಗಳು ಪೋಷಣೆ ಅಥವಾ ಪಾಲನೆಯನ್ನು ಸೂಚಿಸುತ್ತವೆ) ಮತ್ತು ಕೆಳಗೆ ಇರುವ ಕೆಳಮುಖವಾಗಿರುವ ತ್ರಿಕೋಣವು ದೇವಿಯ ಯೋನಿಯನ್ನು ಪ್ರತಿನಿಧಿಸುತ್ತದೆ (ಯೋನಿಯು ಸೃಷ್ಟಿಯನ್ನು ಸೂಚಿಸುತ್ತದೆ). ಇದನ್ನೇ ’ಕಾಮಕಲಾ’ ಎನ್ನುತ್ತಾರೆ ಮತ್ತು ಈ ಅಂಶವನ್ನು ಶಿವ-ಶಕ್ತಿಯರ ಸಮಾಗಮದ ಅತ್ಯಂತ ನಿಗೂಢವಾದ ತತ್ವವೆಂದು ಕರೆಯುತ್ತಾರೆ.

            ಪಂಚದಶೀ ಮಂತ್ರವನ್ನು ಕುರಿತ ಕೃತಿಯಾದ ‘ವರಿವಶ್ಯಾ ರಹಸ್ಯ’ದಲ್ಲಿ ನಿರೂಪಿತವಾಗಿರುವ ವಿಷಯವು ಶ್ರಿ ವಿದ್ಯೋಪಾಸನೆಯ ಕುರಿತ ಗ್ರಂಥವಾದ ‘ಕಾಮಕಲಾ ವಿಲಾಸ’ದಲ್ಲಿ ಹೇಳಿರುವ ವಿಷಯಗಳಿಗೆ ಪೂರಕವಾಗಿವೆ. ವರಿವಶ್ಯಾ ರಹಸ್ಯವು (೬೯ರಿಂದ ೭೨ನೇ ಶ್ಲೋಕಗಳು) ಹೀಗೆ ಹೇಳುತ್ತದೆ, "ಶಿವ ಮತ್ತು ಶಕ್ತಿಯರು ಪರಸ್ಪರರನ್ನು ತಬ್ಬಿಕೊಳ್ಳುತ್ತಾರೆ. ಆಗ ಪರಬ್ರಹ್ಮವು (ಶಿವನು) ಸೃಷ್ಟಿಸುವ ಇಚ್ಛೆಯುಳ್ಳವನಾಗಿ ತನ್ನ ಅರ್ಧಾಂಗಿಯಾದ ಸಂಗಾತಿಯೆಡೆಗೆ ಕುಡಿನೋಟವನ್ನು ಬೀರಿದ, ಆಗ ಅವನು ಒಂದು ಬಿಂದು ರೂಪವನ್ನು ತೆಳೆದು (ಪುಂ ಜನನ ರಸಗಳನ್ನು ಸೂಚಿಸುತ್ತದೆ) ಮತ್ತು ಅದರೊಳಗೆ ಶಕ್ತಿಯು ಮತ್ತೊಂದು ಬಿಂದು ರೂಪವನ್ನು ತೆಳೆದು (ಸ್ತ್ರೀ ಜನನ ರಸಗಳನ್ನು ಸೂಚಿಸುತ್ತದೆ) ಅದರೊಳಗೆ ಪ್ರವೇಶಿಸುತ್ತಾಳೆ. ಇವರ ಒಂದುಗೂಡುವಿಕೆಯಿಂದ ಉಂಟಾದ ಮಿಶ್ರಣವನ್ನು ’ಅಹಂ’ ಎಂದು ಕರೆಯಲಾಗುತ್ತದೆ. ಇದು ಶಿವ-ಶಕ್ತಿಯರ ಒಂದುಗೂಡುವಿಕೆಯ ಸೂಕ್ಷ್ಮರೂಪವಾಗಿದೆ.

          ಸಹಸ್ರನಾಮದ ಅತ್ಯಂತ ನಿಗೂಢವಾದ ಈ ನಾಮಕ್ಕೆ ಮತ್ತೊಂದು ವಿಧವಾದ ವಿಶ್ಲೇಷಣೆಯೂ ಸಾಧ್ಯವಿದೆ. ಆ ದೃಶ್ಯವು ಹೀಗಿದೆ, ಶಿವನು ತನ್ನ ಎಂದಿನ ಭಂಗಿಯಲ್ಲಿ ಏಕಾಂತ ತಪಸ್ಸಿನಲ್ಲಿ ನಿರತನಾಗಿರುತ್ತಾನೆ. ಆಗ ಶಕ್ತಿಯು ಶಿವನಿರುವ ಸ್ಥಳಕ್ಕೆ ಬರುತ್ತಾಳೆ, ಆಗ ಶಿವನು ಎಚ್ಚರಗೊಳ್ಳುತ್ತಾನೆ. ಮೊದಲು ಶಕ್ತಿಯು ಶಿವನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ, ಆಮೇಲೆ ಆಕೆಯು ಅವನ ಎಡತೊಡೆಯ ಕುಳಿತುಕೊಳ್ಳುತ್ತಾಳೆ ಮತ್ತು ಅಂತಿಮವಾಗಿ ಆಕೆಯು ಅವನ ಸಂಪೂರ್ಣ ಎಡಪಾರ್ಶ್ವವನ್ನು ಆಕ್ರಮಿಸುತ್ತಾಳೆ; ತನ್ಮೂಲಕ ಅವರು ಈ ಸಮಸ್ತ ಪ್ರಪಂಚವನ್ನು ತಮ್ಮ ಅರ್ಧನಾರೀಶ್ವರ ರೂಪದಿಂದ ಆಶೀರ್ವದಿಸುತ್ತಾ ಇದರ ಸೃಷ್ಟಿ ಮತ್ತು ಸ್ಥಿತಿಗೆ ಕಾರಣರಾಗಿದ್ದಾರೆ. ಯಾವಾಗ ಶಕ್ತಿಯು ಶಿವನಿಂದ ದೂರ ಸರಿಯುತ್ತಾಳೆಯೋ ಆಗ ಅವನ ತನ್ನ ಪ್ರಳಯಕಾರಕವಾದ ತಾಂಡವ ನೃತ್ಯವನ್ನು ಆರಂಭಿಸುತ್ತಾನೆ. ಶಕ್ತಿಯು ಈ ಬ್ರಹ್ಮಾಂಡ ನೃತ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ (ನಾಮ ೨೩೨ ಮತ್ತು ೫೭೧ನೇ ನಾಮಗಳು).

           ಸೌಂದರ್ಯ ಲಹರಿಯು (ಸ್ತೋತ್ರ ೩೪) ಹೀಗೆ ಹೇಳುತ್ತದೆ, "ನಾನು ನಿನ್ನ ಪರಿಶುದ್ಧ ದೇಹಾಕೃತಿಯನ್ನು ಶಿವವೆಂದು ಪರಿಗಣಿಸುತ್ತೇನೆ. ಆದ್ದರಿಂದ ಪ್ರಧಾನ ಮತ್ತು ಅದರ ಅವರ ಅವಯವಗಳ ಭಾಗಗಳು ನಿಮ್ಮಿಬ್ಬರಲ್ಲಿಯೂ ಸಮಾನವಾಗಿವೆ ಮತ್ತು ನೀವೀರ್ವರೂ ಸಮತೋಲನ ಹೊಂದಿ ಅಂತರ್ಗತವಾಗಿರುವ ಪರಮಾನಂದ ಮತ್ತು ಚೈತನ್ಯವಾಗಿದ್ದೀರಿ".

           'ಶಿವ-ಶಕ್ತೈಕ್ಯ-ರೂಪಿಣೀ' ನಾಮವು ಶಿವನಿಂದ ಭಿನ್ನವಲ್ಲದ ಮತ್ತು ಬಾಹ್ಯವಾಗಿ ಪ್ರತ್ಯೇಕಗೊಳಿಸಲಾಗದ ದೇವಿಯ ರೂಪಕ್ಕೆ ಗೌರವವನ್ನು ಸೂಚಿಸುತ್ತದೆ. ಇವರಿಬ್ಬರ ಒಂದುಗೂಡುವಿಕೆಯನ್ನು ಶಿವ-ಶಕ್ತಿ ಸಾಮರಸ್ಯ; ಪ್ರಜ್ಞೆಯ ಗುರುತು ಎನ್ನಲಾಗುತ್ತದೆ. ಈ ಹಂತದಲ್ಲಿ ಅವರಿಬ್ಬರ ನಡುವೆ ಭಿನ್ನವಲ್ಲದ (ಒಂದೇ ವಿಧವಾದ) ಸ್ಥಿತಿಯಿದ್ದು ಅದರಲ್ಲಿ ಎಲ್ಲಾ ವಿಧವಾದ ಭೇದಗಳು ನಾಶವಾಗಿರುತ್ತವೆ.

                                                                            ******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 999 http://www.manblunder.com/2010/07/lalitha-sahasranamam-999.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Tue, 01/21/2014 - 03:04

ಶ್ರೀಧರರೆ, "೨೧೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ" ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ ಸಿದ್ದ:)
.
ಲಲಿತಾ ಸಹಸ್ರನಾಮ ೯೯೯
___________________________________________
.
೯೯೯. ಶಿವ-ಶಕ್ತೈಕ್ಯ-ರೂಪಿಣೀ
ದೈವೀದಂಪತಿ ಅದ್ಭುತ ಸಂಗಮ, ಸ್ವೇಚ್ಛಾಸೃಷ್ಟಿ ಕರ್ಮನಿಯಮ ಸ್ಪಂದನ
ನಿರಂತರ ಅದ್ವೈತ ಶಿವ ಶಕ್ತಿ ಸಂಯುಕ್ತ ರೂಪ, ದ್ವೈತವಾಗಿಸುವ ಅಜ್ಞಾನ
ಶಿವ-ಶಕ್ತಿ-ಐಕ್ಯ-ರೂಪಿಣೀ ಸ್ವರೂಪ ಏಕತ್ವದೆ, ವ್ಯತ್ಯಾಸವೆಲ್ಲ ಮರೆಯಾಗುತ
ಅತಿಪೂಜಿತ-ಶ್ಲಾಘ್ಯ-ಗ್ರಾಹ್ಯಾತೀತ-ರಹಸ್ಯಮಯ-ದಿಗ್ಭ್ರಾಂತಿ ಸಮಷ್ಟಿಸುತ ||
.
ಶಕ್ತಿ ಸಂಗಮಿಸದೆ ಕದಲದ ಶಿವ, ಬೆರೆಯೆ ಬ್ರಹ್ಮಾಂಡ ಸೃಷ್ಟಿ ಭಾಷ್ಯ ಬರೆವ
ನಿಷ್ಕಾಮ ಸ್ಥಿರಶಕ್ತಿ ಪರಬ್ರಹ್ಮ ಶಿವ, ಚರಶಕ್ತಿ ಆಕರ ದೇವಿ ಪರಾಶಕ್ತಿ ತರುವ
ಶಿವ ಸುಪ್ತಶಕ್ತಿ ಆದಿಶಕ್ತಿ, ಬ್ರಹ್ಮಾಂಡದಳಿವುಳಿವು ಸೃಷ್ಟಿಚಕ್ರದಲಿ ಸ್ಥಿತ್ಯಂತರ
ಅಗ್ನಿಯಲಿಹ ಶಾಖ ಶಿವ-ಶಕ್ತಿ ಗ್ರಹಿಕೆಗಷ್ಟೆ ದ್ವೈತ, ಅದ್ವೈತವಿರದೆ ಜಡ ಸಾರ ||
.
ಪ್ರಕಾಶ ರೂಪಿ ಶಿವ ಸ್ವಯಂಪ್ರಕಾಶ, ಇರದೆ ಬ್ರಹ್ಮಾಂಡ ಕತ್ತಲಕೂಪ
ಪ್ರಕಾಶ ಪ್ರತಿಫಲಿಸುವ ವಿಮರ್ಶಾರೂಪ ಶಕ್ತಿ, ದರ್ಪಣವಾಗಿ ಸ್ವರೂಪ
ಪರಿಶುದ್ಧ ಪ್ರಜ್ಞೆ ಪ್ರಕಾಶ 'ನಾನು-ಇದು', ಅದನರಿಸೆ ವಿಮರ್ಶೆ 'ಇದು'
ಚಿತ್ ಶಿವಪ್ರಜ್ಞೆ ಪ್ರಸ್ತುತಿ ಚಿತಿ ಶಕ್ತಿ, ಶಿವನಾದಿಸ್ಪಂದನ ಶಕ್ತಿ ಸೃಷ್ಟಿ ತಿದ್ದು || 
.
ಶಿವ ಸೃಷ್ಟಿಮೂಲ ಕಂಪನ ವೃಷ್ಟಿ, ಶಕ್ತಿ ಮುವ್ವತ್ತಾರು ತತ್ವ ತಿದಿಯೊತ್ತಿ ಸೃಷ್ಟಿ
ಮಾಯಾ ಭ್ರಮೆಯ ಮುಸುಕಲಿರಿಸುತ ಲಲಿತೆ ಸುಸ್ಥಿಯಲಿಡುವಳು ಸಮಷ್ಟಿ
ಮಾಯೆ ತೊರೆದಾತ್ಮವೆ ಬ್ರಹ್ಮ, ಬೀಜ ಮೊಳೆತಂತೆ ಶಿವಶಕ್ತಿಸ್ವರೂಪ ಯಮಳ
ಪ್ರಕೃತಿ ಮಿಲನಕಷ್ಟೆ ಆತ್ಮ ಜನ್ಮ, ಪುರುಷ ಪ್ರಕೃತಿ ಶಕ್ತಿ ಸಂಗಮವೆ ಸೃಷ್ಟಿ ಬಲ ||
.
ಸ್ಥೂಲದಿಂದ ಸೂಕ್ಷ್ಮ ಐಕ್ಯರೂಪ, ಬಿಂದುಗಳಾಗಿ ಶ್ವೇತ ಶಿವ ರೋಹಿತ ಶಕ್ತಿ
ಸಂಯೋಗ ಬಿಂದು ಹಿಗ್ಗೆ ಶಬ್ದಾರ್ಥ ಸೃಷ್ಟಿ, ಶಬ್ದ-ಬ್ರಹ್ಮ ಅರ್ಥ-ತತ್ವ ದೃಷ್ಟಿ
ಶ್ವೇತ-ರಕ್ತ ಬಿಂದು ಸೇರೆ ಕಾಮ-ಕಾಮೇಶ್ವರೀ, ಅ-ಶಿವ ವಿಮರ್ಶದೆ ಬಿಂದು
ವಿಮರ್ಶಾಬಿಂದು ಕಲೆತು ಪ್ರಕಾಶದೆ ಮಿಶ್ರಬಿಂದು, ತ್ರಿಕೋಣದ ಸರಹದ್ದು ||
.
ಶ್ವೇತ ಬಿಂದುವಾಗಿ ತ್ರಿಭುಜ ಶೃಂಗ, ಕೆಂಪು-ಮಿಶ್ರ ದೈವೀ ತ್ರಿಕೋಣದ ಪಾದ
ಸಕಲತತ್ವಗಳಂತರ್ಗತ ಮಿಶ್ರಬಿಂದು, ಸೃಷ್ಟಿ ಪುನರಾವರ್ತಿಸೆ ಕಾರಣ ಸಿದ್ಧ
ಶ್ರೀ ಚಕ್ರದೊಳಗಣ ತ್ರಿಕೋಣ, ಭುಜ ಪ್ರತಿನಿಧಿ ತ್ರಿಶಕ್ತಿ, ತ್ರಿಗುಣಾದಿ ತ್ರಿಪುಟಿ
ತ್ರಿಕೋಣ ಶೃಂಗದಲಿ ಸೂರ್ಯ ಪಾದದೆಡಕೆ ಅಗ್ನಿ ಬಲಕೆ ಚಂದ್ರನಿಹ ಸ್ಪೂರ್ತಿ ||
.
ತ್ರಿಬಿಂದು ತಳದೆ ಸಂವಾದಿ ಶೀರ್ಷಾಸನ ತ್ರಿಭುಜ, ಭುಜ ಪಂಚದಶೀ ತ್ರಿಕೂಟ
ಮೇಲಣ ತ್ರಿಭುಜ ಶೃಂಗ ಬಿಂದು, ದೇವೀ ವದನ ಮೂರನೆ ಕಣ್ಣ ಲಯ ನೋಟ
ಮಿಕ್ಕೆರಡು ವಕ್ಷರೂಪ ಆರೈಕೆ-ಪಾಲನೆಗೆ, ಕೆಳಗಿನ ತ್ರಿಭುಜ ಯೋನಿ -ಸೃಷ್ಟಿಗೆ
ರಹಸ್ಯಾತ್ಮಕ ಕಾಮಕಲಾ ಶಿವ-ಶಕ್ತಿ ವಿಲೀನ ತತ್ವ, ದ್ವೈತಾದ್ವೈತವೆ ಸಂಯೋಗೆ ||
.
ತಪೋನಿರತ ಶಿವಧ್ಯಾನದೇಕಾಂತ ತಾಣ, ಅರಸಿ ಬರೆ ಶಕ್ತಿ ಎಚ್ಚರ ಮನ
ಆಲಿಂಗನ ಶಿವ-ಶಕ್ತಿ ಸೃಷ್ಟಿಗೆ ಇಂಗಿತ, ಪತಿ ಶ್ವೇತ ಬಿಂದುರೂಪ ತಾಳುತ
ಕೆಂಪು ಬಿಂದು ಸತಿ ಶ್ವೇತದೆ ನುಸುಳಿ ವಿಲೀನ, ಸಂಕಲಿಸೆ ಸೂಕ್ಷ್ಮ 'ಅಹಂ'
ಎಡತೊಡೆಯಿಂದ ಶಕ್ತಿಯಂತರ್ಧಾನ ಶಿವನಲಿ, ಅರ್ಧನಾರೀಶ್ವರ ರೂಪಂ ||
.
ಶಿವ ಶಕ್ತಿ ಸಂಯೋಗ ಐಕ್ಯತೆಯ ಸೂಕ್ಷ್ಮ ರೂಪ, ಬಿಂದು ವಿಲೀನ ಸ್ವರೂಪ
ಶಿವನೆಡಪಾರ್ಶ್ವ ಆಕ್ರಮಿಸಿ ಶಕ್ತಿ ಏಕತ್ವದ ಪ್ರೀತಿ, ಸೃಷ್ಟಿ-ಸ್ಥಿತಿ ಚಾಲನೆ ತಪ
ನಿರ್ಗಮಿಸೆ ಶಕ್ತಿ ಶಿವನರ್ಧದಿಂದ, ಪ್ರಳಯತಾಂಡವನೃತ್ಯ ವಿನಾಶ ನಾಂದಿ
ಸಾಕ್ಷೀಭೂತಳಾಗಿ ದೇವಿ ಶ್ರದ್ದೆ, ಆವೇಶಾಪೋಶನಕೆ ಮೋಹಕನಗೆ ಹೊಂದಿ ||
.
ಶುದ್ಧ ಲಲಿತಾಕಾರವೆ ಶಿವ, ಪ್ರಧಾನ-ಪೂರಕಗುಣ ಸಮಸಮ ಶಿವಶಕ್ತಿ
ಅತಿಶಯ ಪರಮಾನಂದ ಚೈತನ್ಯ ಸಮತೆ, ಅವಿಭಾಜ್ಯ ಬ್ರಹ್ಮ ಅದಿಶಕ್ತಿ
ಮಾಯೆ ಅಜ್ಞಾನವನಳಿಸಲಷ್ಟೆ ವಿಭಜಿತ ರೂಪ, ಪ್ರಕಾಶ ವಿಮರ್ಶ ಬ್ರಹ್ಮ
ತೇಜೋಗೋಚರಮಾನ್ಯಮಿನುಗುವುಜ್ವಲಕಾಂತಿ, ವಿಮರ್ಶಾ ಪ್ರತಿಫಲನ ||
.
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by makara Tue, 01/21/2014 - 10:00

In reply to by nageshamysore

ನಾಗೇಶರೆ,
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅತ್ಯದ್ಭುತವಾಗಿ ವಿವರಣೆಯನ್ನು ಕಾವ್ಯ ರೂಪದಲ್ಲಿ ಸೆರೆಹಿಡಿದಿದ್ದೀರ. ನಿಮ್ಮ ತಾಳ್ಮೆ ಮತ್ತು ಸಂಯಮ ಹಾಗೂ ಕವಿತಾ ಸಂಯೋಜನೆಗೆ ನಮನಗಳು.