೪೩. ಶ್ರೀ ಲಲಿತಾ ಸಹಸ್ರನಾಮ ೧೧೨ ರಿಂದ ೧೧೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೧೧೨- ೧೧೪
Bhavānī भवानी (112)
೧೧೨. ಭವಾನೀ
ಈ ನಾಮದಿಂದ ಪ್ರಾರಂಭಗೊಂಡು ೧೩೧ನೇ ನಾಮದವರೆಗೆ ದೇವಿಯು ಭಕ್ತಿರಿಗೆ ದಯಪಾಲಿಸುವ ಆಶೀರ್ವಾದದ ಮಹತ್ವದ ಕುರಿತಾಗಿ ವಿವರಿಸಲಾಗಿದೆ.
ಭವ ಎಂದರೆ ಶಿವ ಅದರಲ್ಲೂ ಪ್ರತ್ಯೇಕವಾಗಿ ಅದು ಅವನ ಮಹಾದೇವ ರೂಪವನ್ನು ಸೂಚಿಸುತ್ತದೆ ಮತ್ತು ಅನ ಎಂದರೆ ಜೀವವನ್ನು ತುಂಬುವುದು. ದೇವಿಯು ಶಿವನ ಅರ್ಧಾಂಗಿಯಾಗಿ ಅವಳು ನಮ್ಮಲ್ಲರಿಗೆ ಶ್ರೀ ಮಾತೆಯ ರೂಪದಲ್ಲಿ ಜೀವವನ್ನು ಕೊಡುತ್ತಾಳೆ ಆದ್ದರಿಂದ ಅವಳು ಭವಾನಿ. ಮನ್ಮಥನಿಗೆ ಕೂಡಾ ಭವ ಎನ್ನುವ ಹೆಸರಿದೆ ಆದ್ದರಿಂದ ದೇವಿಯು ಅವನಿಗೆ ಪುನಃ ಜೀವವನ್ನು ಕೊಡಮಾಡಿದ್ದರಿಂದ ಅವಳನ್ನು ಭವಾನೀ ಎಂದು ಸಂಭೋದಿಸಲಾಗಿದೆ. ಶಿವನಿಗೆ ಭವ ಎನ್ನುತ್ತಾರೆ ಏಕೆಂದರೆ ಈ ವಿಶ್ವವು ಅವನಿಂದ ಆವಿರ್ಭವಿಸಿತು (ಭವ ಎಂದರೆ ಉಂಟಾಗು ಅಥವಾ ಉತ್ಪತ್ತಿಯಾಗು) ಮತ್ತು ಅವನಿಂದ ಈ ವಿಶ್ವವು ಸ್ಥಿತವಾಗಿದೆ. ವ್ಯಾಕರಣದ ಪ್ರಕಾರ ಭವ ಮತ್ತು ಭವಾನೀ ಎನ್ನುವ ಶಬ್ದಗಳು ಬೇರೆ ಬೇರೆಯಾಗಿದ್ದರೂ ಕೂಡಾ ಭವ ಮತ್ತು ಭವಾನಿ ಇವರುಗಳು ಕೈಗೊಳ್ಳುವ ಕ್ರಿಯೆಯು ಒಂದೇ ಆಗಿದೆ.
ಸೌಂದರ್ಯಲಹರಿಯ ಪ್ರಸಿದ್ಧ ಶ್ಲೋಕವು (೨೨ನೇ ಶ್ಲೋಕ) ಹೀಗೆ ಹೇಳುತ್ತದೆ; “ಭವಾನೀ ತ್ವಂ” ಅಂದರೆ ನೀನು ಭವಾನಿಯಾಗಿದ್ದೀಯ. ಈ ಶ್ಲೋಕವು ಮುಂದುವರೆಯುತ್ತಾ ಹೇಳುತ್ತದೆ, "ಯಾವಾಗ ಒಬ್ಬನು ನಿನಗೆ ಓಹ್! ‘ಭವನ ಸಂಗಾತಿ’ಯೇ ಎಂದು ಪ್ರಾರ್ಥಿಸಲು ಇಚ್ಛಿಸುತ್ತಾನೆಯೋ, ಆಗ ನಿನ್ನ ಕೃಪೆಯು ನನ್ನ ಮೇಲೆ ಉಂಟಾಗಲಿ, ನಿನ್ನ ದಾಸನಾಗಿ ನಾನು ಭವನ ಸಂಗಾತಿ (ಅಂದರೆ ಭವಾನಿ) ಎಂದು ಉಚ್ಛರಿಸಿದಾಗ ನೀನು ಆ ಕ್ಷಣದಲ್ಲಿಯೇ ಅವನಿಗೆ ಸಾಯುಜ್ಯ ಪದವಿಯನ್ನು ಕರುಣಿಸು (ನಿನ್ನಲ್ಲಿ ಐಕ್ಯವಾಗುವ ಸ್ಥಿತಿಯನ್ನು ಕರುಣಿಸು).
ಐಕ್ಯತೆ ಅಥವಾ ಸಾಯುಜ್ಯದ ಬಗ್ಗೆ ಇನ್ನಷ್ಟು ವಿವರಣೆ
ಐಕ್ಯತೆ ಅಥವಾ ಸಾಯುಜ್ಯವೆಂದರೆ ಸಂಪೂರ್ಣ ದೈವ ಪ್ರಜ್ಞೆಯಿಂದ ಕೂಡಿದ ಮಾನಸಿಕ ಸ್ಥಿತಿ. ವ್ಯಕ್ತಿಗತ ಚೈತನ್ಯವು ಪರಮ ಚೈತನ್ಯ ಅಥವಾ ಭಗವದ್ಚೈತನ್ಯದಲ್ಲಿ ಲೀನವಾದಾಗ ಅದನ್ನು ಸಾಯುಜ್ಯವೆನ್ನಬಹುದು. ಮೇಲಿನ ನಾಮದಲ್ಲಿ ‘ಭವಾನಿ’ ಎನ್ನುವುದನ್ನು ಭಕ್ತನು ದೇವಿಯ ಇನ್ನೊಂದು ಹೆಸರನ್ನು ನೇರವಾಗಿ ಅವಳನ್ನು ಉದ್ದೇಶಿಸಿ ಉಪಯೋಗಿಸಿದ್ದಾನೆ. ಆದರೆ ಒಂದು ಕ್ರಿಯಾಪದವಾಗಿ ಅದನ್ನು ವಿಶ್ಲೇಷಿಸಿದಾಗ, ಭವಾನಿ ಎನ್ನುವುದು ಆದೇಶಾತ್ಮವಾಗಿ "ಅದು ನಾನಾಗಲಿ" ಎನ್ನುವ ಅರ್ಥವನ್ನು ಕೊಡುತ್ತದೆ. ಯಾವಾಗ ಮೊದಲೆರಡು ಶಬ್ದಗಳಾದ "ಭವಾನೀ ತ್ವಮ್" ಎನ್ನುವುದನ್ನು ಉಚ್ಛರಿಸುತ್ತಾನೆಯೋ ಆಗ ದೇವಿಯು ತನ್ನ ಭಕ್ತನನ್ನು ತನ್ನೊಳಗೆ ಐಕ್ಯವಾಗಿಸಿಕೊಳ್ಳುವ ವರವನ್ನು ದಯಪಾಲಿಸಲು ಧಾವಿಸಿ ಬರುತ್ತಾಳೆ. ಆಕೆಯು ಭವನ ಸಂಗಾತಿ ಎಂದು ಕರೆಸಿಕೊಳ್ಳಲು ಎಷ್ಟು ಉದ್ವೇಗ ಮತ್ತು ಸಂತೋಷಗೊಳ್ಳುತ್ತಾಳೆಂದರೆ ಆಕೆಯು ಆ ಶ್ಲೋಕವನ್ನು ಪೂರ್ತಿಯಾಗಿ ಉಚ್ಛರಿಸುವುದಕ್ಕೂ ಕಾಯುವುದಿಲ್ಲ. ಆಕೆಯು ಭವಾನೀ ತ್ವಮ್ ಎನ್ನುವ ಎರಡು ಶಬ್ದಗಳು ಕೇಳುವುದೇ ತಡ, ತಕ್ಷಣವೇ ಆಕೆಯು "ಅದನ್ನು ನಾನು ನೀನಾಗ ಬಯಸುತ್ತೇನೆ" ಎಂದು ವಿಶ್ಲೇಷಿಸಿ ಕಾರ್ಯ ಪ್ರವೃತ್ತಗಳಾಗುತ್ತಾಳೆ. ಇದನ್ನೇ ಪ್ರಸಿದ್ಧ ವಾಕ್ಯವಾದ "ತತ್ ತ್ವಂ ಅಸಿ" ಎನ್ನುವುದಕ್ಕೆ ಪೂರಕವಾಗಿ ಅನುವಾದಿಸಬಹುದು. ಈ ಕ್ರಿಯೆಯನ್ನೇ ಸಾಯುಜ್ಯ ಎನ್ನುತ್ತಾರೆ ಮತ್ತು ಅದು ತಕ್ಷಣವೇ ಮುಕ್ತಿಯನ್ನು ಕೊಡುತ್ತದೆ. ಅವಳನ್ನು ಕುರಿತು ಜಪ ಮತ್ತು ಹೋಮಗಳನ್ನು ಕೈಗೊಳ್ಳುವುದಕ್ಕಿಂತ ಈ ರೀತಿಯಾಗಿ ದೇವಿಯ ಧ್ಯಾನವನ್ನು ಮಾಡುವುದು ಅತ್ಯಂತ ಹೆಚ್ಚು ಪರಿಣಾಮಕಾರಿಯಾದದ್ದು. ಮುಕ್ತಿಯು ನಾಲ್ಕು ವಿಧವಾದದ್ದು: ಸಾಲೋಕ್ಯ - ದೇವರೊಂದಿಗೆ ಅವನ ಪ್ರಪಂಚದಲ್ಲಿ ಇರುವುದು. ಸಾರೂಪ್ಯ - ದೇವರ ರೂಪಕ್ಕೆ ಸಮಾನವಾದ ರೂಪವನ್ನು ಹೊಂದುವುದು. ಸಾಮೀಪ್ಯ - ದೇವರ ಸಮೀಪದಲ್ಲಿ ಇರುವುದು. ಸಾಯುಜ್ಯ - ದೇವರೊಳಗೆ ಐಕ್ಯವಾಗುವುದು ಅಥವಾ ಒಂದಾಗುವುದು. ಮೊದಲನೆಯದು ಹಂತ ಹಂತವಾಗಿ ಅಂತಿಮ ಹಂತಕ್ಕೆ ಕೊಂಡೊಯ್ಯುತ್ತದೆ. ದೇವರೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ಅಥವಾ ಸಾಯುಜ್ಯ ಪಡೆಯಬೇಕೆನ್ನುವ ಆಲೋಚನೆಯು ಮುಕ್ತಿಯ ದಾರಿಯನ್ನು ತ್ವರಿತಗೊಳಿಸುತ್ತದೆ.
Bhāvanāgamyā भावनागम्या (113)
೧೧೩. ಭಾವನಾಗಮ್ಯಾ
ದೇವಿಯನ್ನು ಮನಸ್ಸಿನ ಮೂಲಕವೇ ಸಾಕ್ಷಾತ್ಕಾರಿಸಿಕೊಳ್ಳಬೇಕು. ಇಲ್ಲಿ ಆಂತರಿಕ ಪೂಜೆ ಅಥವಾ ಮಾನಸಿಕ ಪೂಜೆ ಎಂದು ಕರೆಯಲ್ಪಡುವ ಧ್ಯಾನದ ಕುರಿತಾಗಿ ಹೇಳಲಾಗಿದೆ. ಈ ವಿಶ್ಲೇಷಣೆ ಸರಿಯಾಗಿದೆ ಎಂದು ಕೊಂಡರೆ, ೮೭೦ನೇ ನಾಮವಾದ "ಅಂತರ್ಮುಖ ಸಮಾರಾಧ್ಯ" ಇದೇ ಅರ್ಥವನ್ನು ಕೊಡುತ್ತದೆ. ಬಹುಶಃ ಈ ನಾಮವು ಭಾವನಾ ಉಪನಿಷತ್ತನ್ನು ಕುರಿತಾಗಿ ಹೇಳುತ್ತದೆ; ಅದರಲ್ಲಿ ಕುಂಡಲಿನಿಯ ಮೂಲಕ ಮಾಡುವ ಆಂತರಿಕ ಪೂಜೆಯ ವಿವರಣೆಯಿದೆ. ’ಶ್ರೀ ವಿದ್ಯ”ಯ ಉನ್ನತ ಹಂತಗಳಲ್ಲಿ ನವಾವರಣ ಪೂಜಾ (ಶ್ರೀ ಚಕ್ರದ ಪೂಜೆ) ಮೊದಲಾದ ಬಾಹ್ಯಾಚರಣೆಗಳೆಲ್ಲಾ ಒಂದೊಂದಾಗಿ ಕಳಚಿ ಬಿದ್ದು ಇದು ಸಾಧಕನನ್ನು ಧ್ಯಾನದ ಮೂಲಕ ಆಂತರಿಕ ಪೂಜೆಯೆಡೆಗೆ ಕೊಂಡೊಯ್ಯುತ್ತದೆ; ಇದನ್ನೇ ಭಾವನಾ ಉಪನಿಷತ್ತು ಅಂತರ್ಮಥನ ಎಂದು ಕರೆಯುತ್ತದೆ.
ಈ ನಾಮಕ್ಕೆ ಇನ್ನೊಂದು ರೀತಿಯಾದ ವ್ಯಾಖ್ಯಾನವೂ ಇದೆ. ಅದು ಧ್ಯಾನವು ಎರಡು ವಿಧವಾದದ್ದೆಂದು ಹೇಳುತ್ತದೆ. ಅದರಲ್ಲಿ ಮೊದಲನೆಯದು ಮಂತ್ರದ ಸಹಾಯದಿಂದ ಧ್ಯಾನ ಮಾಡುವುದು ಹಾಗೂ ಮತ್ತೊಂದು ವಿಧ ಮಂತ್ರದ ಅರ್ಥದೊಂದಿಗೆ ಧ್ಯಾನಿಸುವುದು. ಉದಾಹರಣೆಗೆ ಒಬ್ಬರು ಪಂಚದಶೀ ಮಂತ್ರವನ್ನು ಮಾನಸಿಕವಾಗಿ ಉಚ್ಛರಿಸುತ್ತಾ ಧ್ಯಾನಿಸುವುದು. ಇನ್ನೊಂದು ವಿಧವೆಂದರೆ, ಆ ಮಂತ್ರದ ಅರ್ಥವನ್ನು ತಿಳಿದುಕೊಂಡು ಆ ಮಂತ್ರಾರ್ಥದ ಮೇಲೆ ಧ್ಯಾನಿಸುವುದು. ಇದರಲ್ಲಿ ಎರಡೆನೆಯ ವಿಧಾನವೇ ಹೆಚ್ಚು ಶಕ್ತಿಯುತವಾದದ್ದು. ಶ್ರೀ ವಿದ್ಯಾ ಉಪಾಸನೆಯ ಪದ್ಧತಿಯು ಗುರುವಿಗೆ ಬಹಳಷ್ಟು ಮಹತ್ವವನ್ನು ಕೊಡುತ್ತದೆ ಆದ್ದರಿಂದ ತನ್ನ ಗುರುವಿನ ಆಣತಿಯಂತೆ ನಡೆದುಕೊಳ್ಳುವುದು ಒಳ್ಳೆಯದು.
ಆದರೆ ಬಾಹ್ಯಾಚರಣೆಗಳಿಂದ ಆಂತರಿಕ ಪೂಜೆಯೆಡೆಗೆ ಮಾರ್ಪಾಡು ಹೊಂದುವುದು ಬಹಳ ಮಹತ್ವದ ವಿಷಯ, ಅದಿಲ್ಲದಿದ್ದರೆ ದೇವಿಯನ್ನು ಅರಿಯುವುದು ಸಾಧ್ಯವಾಗುವುದಿಲ್ಲ. ಈ ನಾಮವು, ನಿಷ್ಕಳಂಕ ಪ್ರಜ್ಞೆಯಿಂದ ಮಾತ್ರವೇ ದೇವಿಯನ್ನು ಅರಿಯುವುದು ಸಾಧ್ಯವಾಗುತ್ತದೆ ಎಂದು ಹೇಳುತ್ತದೆ.
Bhavāraṇya-kuṭhārikā भवारण्य-कुठारिका (114)
೧೧೪. ಭವಾರಣ್ಯ-ಕುಟಾರಿಕಾ
ದೇವಿಯು ಸಂಸಾರವೆಂಬ ಅಡವಿಯನ್ನು ಕತ್ತರಿಸುತ್ತಾಳೆ. ಸಂಸಾರವೆಂದರೆ ನಿರಂತರ ಜನನ ಮರಣಗಳ ಚಕ್ರ; ಇದು ಪ್ರಾಪಂಚಿಕ ಚಟುವಟಿಕೆಗಳಲ್ಲಿ ಮಗ್ನರಾಗಿ ಆಸೆ, ಮೋಹ, ಪ್ರೇಮ ಮತ್ತು ಪ್ರೀತಿ ಮೊದಲಾದವುಗಳಿಂದ ಉಂಟಾಗುವ ಬಂಧನ. ಸಂಸಾರವನ್ನು ಅಡವಿಗೆ ಹೋಲಿಸಲಾಗಿದೆ. ಅರಣ್ಯದಲ್ಲಿ ಅನೇಕ ವಿಧವಾದ ಮರಗಳಿರುತ್ತವೆ. ಒಬ್ಬರು ಅಡವಿಯನ್ನು ಸ್ವಚ್ಛಗೊಳಿಸಬೇಕೆಂದು ಕೊಂಡರೆ ಅವರು ಅಲ್ಲಿರುವ ಎಲ್ಲಾ ವಿಧವಾದ ಮರಗಳನ್ನು ಕತ್ತರಿಸಬೇಕಾಗುತ್ತದೆ. ಆದರೆ ಕೇವಲ ಮರಗಳನ್ನು ಕತ್ತರಿಸಿದರಷ್ಟೇ ಸಾಲದು, ಅದರ ಬೇರುಗಳನ್ನೂ ತೆಗೆಯಬೇಕು ಇಲ್ಲದಿದ್ದರೆ ಅವುಗಳ ಮೂಲಕ ಮರಗಳು ಮತ್ತೆ ಚಿಗುರೊಡೆಯುತ್ತವೆ. ಸಂಸಾರ ಎನ್ನುವುದಕ್ಕೆ ಸಂಭಂದಿಸಿದ ಎಲ್ಲಾ ವಿಷಯಗಳನ್ನೂ ಬೇರು ಸಮೇತ ನಿರ್ಮೂಲಿಸಬೇಕು ಇಲ್ಲದಿದ್ದರೆ ಆ ಬಂಧನಗಳು ತಮ್ಮ ವಿಕೃತ ರೂಪವನ್ನು ಮತ್ತೆ ತಾಳಿ ಸಂಸಾರ ಚಕ್ರಕ್ಕೆ ನಮ್ಮನ್ನು ಮತ್ತೆ ತಳ್ಳುತ್ತವೆ. ಆದರೆ ದೇವಿಯು ಸಂಸಾರವನ್ನು ಎಲ್ಲರಿಗೂ ಕತ್ತರಿಸುವುದಿಲ್ಲ, ಆಕೆಯು ಇದನ್ನು ಯಾರು ತನ್ನನ್ನು ಭವಾನೀ ಎಂದು ಸಂಭೋದಿಸುತ್ತಾರೆಯೋ ಮತ್ತು ಯಾರು ಭಾವನಾ ಉಪನಿಷತ್ತಿನಂತೆ ನಡೆದುಕೊಳ್ಳುತ್ತಾರೋ ಅವರಿಗೆ ಮಾತ್ರ ಆಕೆ ಹಾಗೆ ಮಾಡುತ್ತಾಳೆ. ಇಲ್ಲಿ ಅರ್ಥ ಮಾಡಿಕೊಳ್ಳ ಬೇಕಿರುವುದೇನೆಂದರೆ ಯಾರು ತಾಯಿಯನ್ನು ಕೇವಲ ’ಭಾವನಾ’ ಉಪನಿಷತ್ತಿನ ಪ್ರಕಾರ ಪೂಜಿಸಿ ಆಕೆಯನ್ನು ಭವಾನೀ ಎಂದು ಸಂಭೋದಿಸುತ್ತಾರೋ ಅವರು ಮಾತ್ರ ಸತ್ಫಲಗಳನ್ನು ಹೊಂದುತ್ತಾರೆ.
******
Comments
ಶ್ರೀಧರರೆ, 112 ರಿಂದ 114 ರ ಸಾರದ
ಶ್ರೀಧರರೆ, 112 ರಿಂದ 114 ರ ಸಾರದ ಪ್ರಯತ್ನ ಕೆಳಗಿದೆ:
- ನಾಗೇಶ ಮೈಸೂರು, ಸಿಂಗಪುರದಿಂದ
112.ಭವಾನೀ
'ಭವ'ವೆ ಶಿವ ಮಹದೇವ ರೂಪ 'ಅನ' ತುಂಬೆ ಜೀವ
ಮಾತಾ ಅರ್ಧಾಂಗಿರೂಪೆ ಜೀವದಾಯಿ ಭವಾನಿ ಶಿವ
ಭಸ್ಮಾಂಗಜ ಪುನರ್ಜೀವ ಭವಾನಿ ಸಂಭೋಧಿತಭಾವ
ವಿಶ್ವೋತ್ಪತ್ತಿ ಸ್ಥಿತಿಭುಕ್ತಿ ಭವ ಸಂಗಾತಿ ಭಕ್ತಿ ಅವಿರ್ಭವ!
ಐಕ್ಯತೆ / ಸಾಯುಜ್ಯ
ಐಕ್ಯತೆ ಸಾಯುಜ್ಯ ಗತಿ ದೈವಪ್ರಜ್ಣೆ ಮಾನಸಿಕ ಸ್ಥಿತಿ
ಚೈತನ್ಯ ಲೀನ ಪರಮಚೈತನ್ಯ ಸಾಯುಜ್ಯದ ಮುಕ್ತಿ
ಧಾವಿಸಿ ವರವೀವವಳೆ ಉಚ್ಚರಿಸೆ 'ಅದು ನಾನಾಗಲಿ'
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಐಕ್ಯಸಾಯುಜ್ಯದಲಿ!
113. ಭಾವನಾಗಮ್ಯ
ದೇವಿ ಸಾಕ್ಷಾತ್ಕಾರಕೆ ಮಾರ್ಗ ಮಾನಸಿಕ ಪೂಜೆ
ಅಂತರ್ಮಥನ ಅನಾವರಣ ನೆಪ ಬಾಹ್ಯ ಪೂಜೆ
ಧ್ಯಾನಾ ಮಂತ್ರ ಮುಖೇನ ಉತ್ತಮ ಮಂತ್ರಾರ್ಥ
ಅರಿ ದೇವಿಯ ಗುರುಜತೆಗೆ ನಿಷ್ಕಳಂಕ ಪ್ರಜ್ಞಾರ್ಥ!
114. ಭವಾರಣ್ಯ-ಕುಟಾರಿಕ
ಸಂಸಾರದ ಅಡವಿ ನಿರಂತರ ಜನನಾಮರಣ ಚಕ್ರ
ಐಹಿಕ ಬಂಧನ ಅರಿಷಡ್ವರ್ಗ ಕಾನನ ವೃಕ್ಷಾ ಪಾತ್ರ
ನಿವಾರಿಸಲಡವಿ ಮೂಲೋತ್ಪಾಟನೆ ಮಮಕಾರದಾ
ವಿಕೃತಿಗೆಲ್ಲ ತರ್ಪಣ ದೇವಿ ಸಮರ್ಪಣಭಾವ ಸದಾ!
ಶ್ರೀಧರ ಭಂಡ್ರಿಯವರೆ ನಮಸ್ಕಾರ ,
ಶ್ರೀಧರ ಭಂಡ್ರಿಯವರೆ ನಮಸ್ಕಾರ , ಇನ್ನು ಸಾವಿರ ನಾಮದವರೆಗು ನಡೆಯಬೇಕಿದೆ, ಆದರೆ ಇಲ್ಲಿಯೆ ನಿಂತುಬಿಟ್ಟಿದ್ದೀರಲ್ಲ... ಎಲ್ಲಿ ರಜವ ಅಥವ ಊರಲ್ಲಿ ಇಲ್ಲವ ?.... ಏನು ಸಮಾಚಾರ ?
In reply to ಶ್ರೀಧರ ಭಂಡ್ರಿಯವರೆ ನಮಸ್ಕಾರ , by partha1059
ಪಾರ್ಥಾ ಸಾರ್, ನನಗು ಅದೆ ಯಕ್ಷ
ಪಾರ್ಥಾ ಸಾರ್, ನನಗು ಅದೆ ಯಕ್ಷ ಪ್ರಶ್ನೆ....
- ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರ ಭಂಡ್ರಿಯವರೆ ನಮಸ್ಕಾರ , by partha1059
ಸೆಂಚುರಿ ಆದುದಕ್ಕೆ ಸ್ವಲ್ಪ
ಸೆಂಚುರಿ ಆದುದಕ್ಕೆ ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತಿರಬಹುದು. ಪುನಃ ಹೊಸದಾಗಿ ಗಾರ್ಡ್ ತೆಗೆದುಕೊಂಡು ಹೊಸ ಉತ್ಸಾಹದಿಂದ ಉಳಿದ ರನ್ ಸೇರಿಸಲಿದ್ದಾರೆ. :) ನಾಗೇಶರೆ, ತಮ್ಮ ಕವನದಲ್ಲಿ >>> 114. ಭವಾರಣ್ಯ-ಕುಟಾರಿಕ ---"ಕುಠಾರಿಕಾ" ಎಂದಾಗಬೇಕು. (ಶ್ರೀಧರ್ಜಿಯವರು ಹಿಂದಿಯಲ್ಲಿ ಸರಿಯಾಗಿ ಬರೆದಿದ್ದಾರೆ.)
In reply to ಸೆಂಚುರಿ ಆದುದಕ್ಕೆ ಸ್ವಲ್ಪ by ಗಣೇಶ
ಗಣೇಶ್ ಜಿ, 'ಕುಠಾರಿಕ' ಸರಿಪಡಿಸಿದ
ಗಣೇಶ್ ಜಿ, 'ಕುಠಾರಿಕ' ಸರಿಪಡಿಸಿದ ಪ್ಯಾರ ಇಲ್ಲಿ ಹಾಕಿದ್ದೇನೆ, - ನಾಗೇಶ ಮೈಸೂರು, ಸಿಂಗಪುರದಿಂದ :-)
114. ಭವಾರಣ್ಯ-ಕುಠಾರಿಕ
ಸಂಸಾರದ ಅಡವಿ ನಿರಂತರ ಜನನಾಮರಣ ಚಕ್ರ
ಐಹಿಕ ಬಂಧನ ಅರಿಷಡ್ವರ್ಗ ಕಾನನ ವೃಕ್ಷಾ ಪಾತ್ರ
ನಿವಾರಿಸಲಡವಿ ಮೂಲೋತ್ಪಾಟನೆ ಮಮಕಾರದಾ
ವಿಕೃತಿಗೆಲ್ಲ ತರ್ಪಣ ದೇವಿ ಸಮರ್ಪಣಭಾವ ಸದಾ!
In reply to ಗಣೇಶ್ ಜಿ, 'ಕುಠಾರಿಕ' ಸರಿಪಡಿಸಿದ by nageshamysore
'ಕುಠಾರಿಕಾ' - ಕುಠಾರಿಕ -ಅಲ್ಲ :-
'ಕುಠಾರಿಕಾ' - ಕುಠಾರಿಕ -ಅಲ್ಲ :-) - ನಾಗೇಶ ಮೈಸೂರು, ಸಿಂಗಪುರದಿಂದ
114. ಭವಾರಣ್ಯ-ಕುಠಾರಿಕಾ
ಸಂಸಾರದ ಅಡವಿ ನಿರಂತರ ಜನನಾಮರಣ ಚಕ್ರ
ಐಹಿಕ ಬಂಧನ ಅರಿಷಡ್ವರ್ಗ ಕಾನನ ವೃಕ್ಷಾ ಪಾತ್ರ
ನಿವಾರಿಸಲಡವಿ ಮೂಲೋತ್ಪಾಟನೆ ಮಮಕಾರದಾ
ವಿಕೃತಿಗೆಲ್ಲ ತರ್ಪಣ ದೇವಿ ಸಮರ್ಪಣಭಾವ ಸದಾ!
@ಗಣೇಶ್. ಜಿ; ಪಾರ್ಥ ಸರ್ ಮತ್ತು
@ಗಣೇಶ್. ಜಿ; ಪಾರ್ಥ ಸರ್ ಮತ್ತು ನಾಗೇಶ್ ಮೈಸೂರು
ಮೊದಲನೆದಾಗಿ ಎರಡು ವಾರ ಕ್ಲಾಸುಗಳು ನಿಂತದ್ದಕ್ಕೆ ಕ್ಷಮೆಯಿರಲಿ. ಅದಕ್ಕಿರುವ ಕಾರಣಗಳನ್ನು ಸಂಕ್ಷಿಪ್ತವಾಗಿ (?) ಇಲ್ಲಿ ಹೇಳಿದ್ದೇನೆ; ಅದಕ್ಕೂ ಕ್ಷಮೆಯಿರಲಿ :)
ನನ್ನ ಮಕ್ಕಳ ಶಾಲೆ ಜೂನ್, ೯ ರಂದು ಪ್ರಾರಂಭವಾಗುತ್ತದೆಂದು ಶಾಲೆಯವರು ಮೊದಲೇ ಪ್ರಕಟಿಸಿದ್ದರಿಂದ ನಾಲ್ಕನೇ ತಾರೀಕು ಊರಿಗೆ ಹೋಗಿ ಎರಡು ದಿನವಿದ್ದು ೬ ಅಥವಾ ೭ನೇ ತಾರೀಕು ವಾಪಸ್ ಬಂದು ಮತ್ತೆ ನನ್ನ ಕೆಲಸದಲ್ಲಿ ನಿರತವಾಗೋಣವೆಂದುಕೊಂಡಿದ್ದೆ. ಆದರೆ ನನ್ನ ಮಕ್ಕಳ ಅದೃಷ್ಟಕ್ಕೆ ಆಂಧ್ರ ಸರ್ಕಾರದವರು ಜೂನ್ ಹನ್ನೆರಡರಂದು ಎಲ್ಲಾ ಶಾಲೆಗಳನ್ನು ತೆರೆಯಬೇಕೆಂದು ಆದೇಶ ಹೊರಡಿಸಿದ್ದರಿಂದ ನನ್ನ ಸ್ವಂತ ಊರಿನ ಕಾರ್ಯಕ್ರಮ ಮತ್ತೆರಡು ದಿನ ಮುಂದೆ ಹೋಯಿತು. ರಿಸರ್ವೇಶನ್ನಿನ ಉಪಟಳದಿಂದ ೧೪ನೇ ತಾರೀಕು ಸಿಕ್ಕು ಅಂತೂ ಇಂತೂ ಹೈದರಾಬಾದನ್ನು ೧೫ನೇ ತಾರೀಕು ಬೆಳಿಗ್ಗೆ ಸೇರುವಂತಾಯಿತು. ಇಲ್ಲಿ ನೋಡಿದರೆ ಮತ್ತೆ ತೆಲಂಗಾಣ ಬಂದ್ ಮತ್ತು ಶಾಲೆ ಬಂದ್. ಇರಲಿ ಬಿಡಿ ಮಕ್ಕಳ ಪುಸ್ತಕ ಮೊದಲಾದವುಗಳನ್ನು ಹೊಂದಿಸಲು ಸಂಡೇ ಸರಿಹೋಯಿತು. ಮತ್ತು ಇಂದಿನಿಂದ ಡ್ಯೂಟಿಗೆ ಹಾಜರ್ ಮತ್ತು ಸಂಪದದ ಡ್ಯೂಟಿಗೂ ಸಹ :)) ರಜದಲ್ಲಿ ಮಿಸ್ ಆಗಿರುವ ಪೋರ್ಷನ್ನನ್ನು ಸರಿಪಡಿಸಲು ಇನ್ನು ಎಂಟು ಹತ್ತು ದಿವಸ ಸ್ಪೆಷಲ್ ಕ್ಲಾಸ್ ಅಂದರೆ ದಿನಕ್ಕೆ ಎರಡು ಕಂತುಗಳನ್ನು ಪ್ರಕಟಿಸುತ್ತೇನೆ. ಪದ್ಯವನ್ನು ಸುಂದರವಾಗಿ ರಚಿಸಿರುವ ನಾಗೇಶರಿಗೆ ಮತ್ತು ಅದನ್ನು ಸೂಕ್ಷ್ಮವಾಗಿ ಗಮನಿಸಿ ಕಾಗುಣಿತ ದೋಷಗಳನ್ನು ಸರಿಪಡಿಸಿರುವ ಗಣೇಶರಿಗೆ ಮತ್ತು ಇನ್ನೂ ೯ ಸೆಂಚುರಿಗಳನ್ನು ಮುಟ್ಟಬೇಕೆನ್ನುವುದನ್ನು ಜ್ಞಾಪಿಸಿರುವ ಪಾರ್ಥರಿಗೆ ನನ್ನ ವಿಶೇಷ ನಮನಗಳು.
In reply to @ಗಣೇಶ್. ಜಿ; ಪಾರ್ಥ ಸರ್ ಮತ್ತು by makara
ಹುರ್ರೆರ್ರ್ರ್ರ್ರ್! :-) - ನಾಗೇಶ
ಹುರ್ರೆರ್ರ್ರ್ರ್ರ್! :-) - ನಾಗೇಶ ಮೈಸೂರು
In reply to ಹುರ್ರೆರ್ರ್ರ್ರ್ರ್! :-) - ನಾಗೇಶ by nageshamysore
:))
:))