Hell- mate ಕಡ್ಡಾಯ !
(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಜೂ.17- ಬೊಗಳಿಗರ ಸಹಾಯಕ್ಕೆ ಧುತ್ತನೆ ಧಾವಿಸಿ ಬಂದಿರುವ ಕರ್-ನಾಟಕ ಸರಕಾರ ಕೂಡ ಬೊಗಳಿಗರ ತಲೆ-ಮಂಡೆ ರಕ್ಷಣೆಗಾಗಿ "hell- mate" ಕಡ್ಡಾಯಗೊಳಿಸುವ ಚಿಂತನೆಗೆ ಕೈಹಚ್ಚಿರುವುದು ಇಡೀ ಬೊಗಳೆ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.
ದ್ವಿಚಕ್ರ ಸವಾರರಿಗೆ hell- mate ಕಡ್ಡಾಯಗೊಳಿಸುವ ಸರಕಾರದ ನಿರ್ಧಾರದ ಹಿಂದೆ ನ್ಯಾಯಾಲಯದ ಆದೇಶದ ನೆರಳಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಕೆಡಿಸಿಕೊಳ್ಳದಿದ್ದರೂ ಬೊಗಳಿಗರ- ಅದಕ್ಕಿಂತಲೂ ಮಿಗಿಲಾಗಿ hell- mate ತಯಾರಿಕಾ ಕಂಪನಿಗಳ ತಲೆ ಕಾಯ್ದುಕೊಳ್ಳುವುದು ಸರಕು-ಕಾರದ ಆದ್ಯ ಕರ್ತವ್ಯವಲ್ಲವೆ ಎಂದು ರಾಜ್ಯದ ಅಮುಖ್ಯ ಮಂತ್ರಿ ಮರಿಗೌಡರು ಕೇಳಿದ್ದಾರೆ.
ದ್ವಿಚಕ್ರ ಸವಾರರೆಲ್ಲರೂ ತಾವು ನರಕದಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಳೆಯುತ್ತಿದ್ದಾಗ ಜೊತೆಗಾರರಾಗಿದ್ದ ನರಕ-ಮೇಟ್ (class-mate, school-mate ಥರಾ)ಗಳನ್ನು ಜೊತೆಗೇ ಕರೆದೊಯ್ಯಬೇಕು. ಹೇಗಿದ್ದರೂ ಬೆಂಗಳೂರು ಉದ್ಯಾನ-ನಗರ ಎಂದಿದ್ದದ್ದು ಕಾಂಕ್ರೀಟ್-ನರಕ ಎಂದಾಗುತ್ತಿದೆ. ಇಂಥ ಸಣ್ಣಪುಟ್ಟ ಕಾರ್ಯಗಳಿಂದಲೇ ಬೆಂಗಳೂರಿನ ಸಮಗ್ರ ಬದಲಾವಣೆ ಸಾಧ್ಯ. ಹನಿ ಕೂಡಿದರೆ ಹಳ್ಳ ಎಂಬ ಇದುವರೆಗೆ ಯಾರಿಗೂ ಗೊತ್ತಿರದ ನಾಣ್ನುಡಿಯೊಂದನ್ನು ಅವರು ತಮ್ಮ ಬಾಯಿಂದ ಉದುರಿಸಿದರು.
-Asatyanveshi@
BogaleRagale.blogspot.com